`A date’ ಚಿತ್ರದ ಟ್ರೈಲರ್ ಬಿಡುಗಡೆ

Spread the love

ಹೊಸತನದ ಕಥನದ ಸುಳಿವಿನೊಂದಿಗೆ ಕಳೆದ ಒಂದಷ್ಟು ದಿನಗಳಿಂದ ಸುದ್ದಿಯಲ್ಲಿರುವ ಚಿತ್ರ `A date’. ಈಗಾಗಲೇ ಸಾಕಷ್ಟು ಕಿರುಚಿತ್ರಗಳ ಮೂಲಕ ತನ್ನದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿರುವ ವಿಮಲ್ ರಾಜ್ ಎನ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಇದೇ ಸೆಪ್ಟೆಂಬರ್ 4ರಂದು ತೆರೆಗಾಣಲಿದೆ. ಹೀಗೆ ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ ಚಿತ್ರತಂಡ ಟ್ರೈಲರ್ ಅನ್ನು ಬಿಡುಗಡೆಗೊಳಿಸಿದೆ. ಈ ಕುರಿತಾಗಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿನಿಮಾ ಕಥನದ ಬಗೆಗಿನ ಒಂದಷ್ಟು ಕುತೂಹಲಕರ ವಿಚಾರಗಳನ್ನು ಹಂಚಿಕೊಂಡಿದೆ.

ಈ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ವಿಮಲ್ ರಾಜ್ ಎನ್, ದೇವೇಂದ್ರ ರೆಡ್ಡಿ, ಸುಜನಿತ್ ಶೆಟ್ಟಿ ಹಾಗೂ ಅಶ್ವಿನಿ ಶೆಣೈ ಹಾಜರಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು `೨೦೨೦ರಲ್ಲಿ ಅ ಡೇಟ್ ಹೆಸರಿನಲ್ಲಿಯೇ ಇಂಗ್ಲಿಶ್ ಭಾಷೆಯಲ್ಲಿ ಒಂದು ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದೆ. ಅದರ ಹಿಂದಿದ್ದದ್ದು ನಿರ್ಮಾಪಕರನ್ನು ಹುಡುಕುವ ಉದ್ದೇಶವಾಗಿತ್ತು. ಆದರೆ, ನಿರ್ಮಾಪಕರು ಸಿಗದಿದ್ದದ್ದರಿಂದಾಗಿ ಅದನ್ನು ಯೂಟ್ಯೂಬ್ ಮೂಲಕ ಬಿಡುಗಡೆಗೊಳಿಸಿದ್ದೆವು. ಆ ಕಿರುಚಿತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಭಾರೀ ಮೆಚ್ಚುಗೆ ಸಿಕ್ಕಿತ್ತು. ಎಪ್ಪತ್ತೆರಡು ಲಕ್ಷ ವೀಕ್ಷಣೆ ಸಿಗುವ ಮೂಲಕ ನಿರ್ದೇಶಕನಾಗಿ ಆತ್ಮವಿಶ್ವಾಸ ಮೂಡಿಕೊಂಡಿತ್ತು. ಆ ನಂತರ ಸುಜನೀತ್ ಶೆಟ್ಟಿ ಮತ್ತು ಅಶ್ವಿನಿ ಶೆಣೈರನ್ನು ನಾಯಕ ನಾಯಕಿಯರನ್ನಾಗಿಟ್ಟುಕೊಂಡು ಈ ಸಿನಿಮಾ ಮಾಡಿದ್ದೇನೆ’ ಎಂದು ವಿವರಣೆ ನೀಡಿದರು.

ಇದು ಬೆಂಗಳೂರು ಹುಡುಗ ದೆಹಲಿ ಮೂಲದ ಹುಡುಗಿಯನ್ನು ಸಂಧಿಸುವ, ಅವರಿಬ್ಬರ ಸುತ್ತ ಒಂದು ದಿನದಲ್ಲಿ ಘಟಿಸುವ ಕಥೆ ಹೊಂದಿರುವ ಸಿನಿಮಾ ಎಂಬ ವಿಚರವನ್ನೂ ವಿಮಲ್ ರಾಜ್ ಎನ್ ತೆರೆದಿಟ್ಟರು. 2016ರಿಂದೀಚೆಗೆ ಕಿರುಚಿತ್ರಗಳನ್ನು ನಿರ್ದೇಶನ ಮಾಡುತ್ತಾ ಬಂದಿದ್ದ ವಿಮಲ್ ರಾಜ್ ಎನ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಹೋಪ್, ಲಾಫಿಂಗ್ ಬುದ್ಧ, ಬಾಸ್ ಥರದ ಚಿತ್ರಗಳಲ್ಲಿ ನಟಿಸಿದ್ದ ಸುಜನೀತ್ ಶೆಟ್ಟಿ ಅ ಡೇಟ್ ಮೂಲಕ ಪೂರ್ಣ ಪ್ರಮಾಣದ ನಾತಯಕನಾಗಿದ್ದಾರೆ.

ನವ ಪ್ರತಿಭೆ ಅಶ್ವಿನಿ ಶೆಣೈ ಆಡಿಷನ್ ಮೂಲಕ ಆಯ್ಕೆಯಾಗಿ, ಈ ಚಿತ್ರದ ನಾಯಕಿಯಾಗೋ ಅವಕಾಶ ಪಡೆದುಕೊಂಡಿದ್ದಾರೆ. ಪಿವಿಆರ್ ಐನಾಕ್ಸ್ ಸಂಸ್ಥೆ ಅರ್ಪಿಸಿ, ವಿತರಣಾ ಜವಾಬ್ದಾರಿಯನ್ನೂ ಹೊತ್ತುಕೊಂಡಿದೆ. ವೀಕೆಂಡ್ ಶಾರ್ಟ್ಸ್ ಸ್ಟುಡಿಯೋ ಬ್ಯಾನರ್ನಡಿ ಸಮಾನ ಮನಸ್ಕರ ತಂಡ ಈ ಚಿತ್ರವನ್ನು ನಿರ್ಮಿಸಿದೆ. ಚಿತ್ರಕ್ಕೆ ಮೋಕ್ಷ ಬೀಟ್ಸ್ ಸಂಗೀತ, ವಡ್ಡೆ ದೇವೇಂದ್ರ ರೆಡ್ಡಿ ಛಾಯಾಗ್ರಹಣ, ವಿಮಲ್ ರಾಜ್ ಎನ್ ಸಂಕಲನ ಹಾಗೂ ಸುಜನಿತ್ ಶೆಟ್ಟಿ ಮತ್ತು ವಿಮಲ್ ರಾಜ್ ಎನ್ ಸಾಹಿತ್ಯವಿದೆ.

Visited 1 times, 1 visit(s) today
error: Content is protected !!