‘ನಾವು ತುಂಬಾ ಒಳ್ಳೆಯವರು’ ಚಿತ್ರದ ಹಾಡುಗಳ ಲೋಕಾರ್ಪಣೆ

Spread the love

‘ಪಪ್ಪಿ’ ಚಿತ್ರದ ಮೂಲಕ ಸಿನಿಪ್ರಿಯರನ್ನು ಉತ್ತರ ಕರ್ನಾಟಕದತ್ತ ಸೆಳೆದಿದ್ದ ನಿರ್ದೇಶಕ ಆಯುಷ್ ಮಲ್ಲಿ, ಇದೀಗ ಮತ್ತೊಂದು ವಿಭಿನ್ನ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ಪಪ್ಪಿ’ ಖ್ಯಾತಿಯ ಬಾಲನಟ ಜಗದೀಶ್ ಆದಿತ್ಯ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ನೂತನ ಚಿತ್ರಕ್ಕೆ ‘ನಾವು ತುಂಬಾ ಒಳ್ಳೆಯವರು’ ಎಂಬ ಕುತೂಹಲಕಾರಿ ಶೀರ್ಷಿಕೆ ಇಡಲಾಗಿದೆ. ಮಕ್ಕಳನ್ನೇ ಪ್ರಧಾನವಾಗಿಟ್ಟುಕೊಂಡು ನಿರ್ಮಿಸಿರುವ ಈ ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.

ವಿಶೇಷವೆಂದರೆ, ಚಿತ್ರದ ಬಾಲಕಲಾವಿದರ ಕೈಯಿಂದಲೇ ಚಿತ್ರದ ಗೀತೆಗಳನ್ನು ಲೋಕಾರ್ಪಣೆಗೊಳಿಸಲಾಯಿತು. ಇದೇ ವೇಳೆ ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿ, ಅನುರಾಧಾ ಭಟ್ ಹಾಡಿರುವ ಗೀತೆಯ ಮೇಕಿಂಗ್ ವಿಡಿಯೋವನ್ನು ಕೂಡ ಪ್ರದರ್ಶಿಸಲಾಯಿತು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ಚಿತ್ರದ ನಾಯಕ ಆಯುಷ್ ಮಲ್ಲಿ, “‘ಪಪ್ಪಿ’ ಸಿನಿಮಾ ಬಿಡುಗಡೆಯಾದ ತಕ್ಷಣವೇ ನಾನು ಈ ಹೊಸ ಚಿತ್ರವನ್ನು ಕೈಗೆತ್ತಿಕೊಂಡೆ. ಮೊದಲ ಚಿತ್ರವನ್ನು ವೀಕ್ಷಿಸಿದ ಶಿವರಾಜ್ ಕುಮಾರ್, ಧ್ರುವ ಸರ್ಜಾ, ರಮ್ಯಾ ಸೇರಿದಂತೆ ಚಿತ್ರರಂಗದ ಗಣ್ಯರು ಖುದ್ದಾಗಿ ಪ್ರೋತ್ಸಾಹ ನೀಡಿದ್ದು ನನಗೆ ಮತ್ತಷ್ಟು ಧೈರ್ಯ ತುಂಬಿತು. ಈ ಬಾರಿಯೂ ಉತ್ತರ ಕರ್ನಾಟಕದ ಸಂಸ್ಕೃತಿಯನ್ನು ತೆರೆಯ ಮೇಲೆ ತರಬೇಕೆಂಬುದು ನನ್ನ ಉದ್ದೇಶವಾಗಿತ್ತು.

ಆರಂಭದಲ್ಲಿ ಚಿತ್ರಕ್ಕೆ ಹೆಸರಿಟ್ಟಿರಲಿಲ್ಲ; ಯಾರೇ ಹೆಸರು ಕೇಳಿದರೂ ‘ನಾವು ತುಂಬಾ ಒಳ್ಳೆಯವರು’ ಎನ್ನುತ್ತಿದ್ದೆ. ಅದಕ್ಕೆ ಅವರು ‘ಮತ್ತೆ ನಾವೇನು ಕೆಟ್ಟವರಾ?’ ಎಂದು ಮರುಪ್ರಶ್ನಿಸುತ್ತಿದ್ದರು. ಕೇಳಿದ ತಕ್ಷಣ ಪ್ರಶ್ನೆ ಮೂಡಿಸುವ ಈ ಶೀರ್ಷಿಕೆಯೇ ಸೂಕ್ತವೆನಿಸಿ ಇದನ್ನೇ ಅಂತಿಮಗೊಳಿಸಿದೆ. ಶಂಕರ್ ನಾಗ್ ಅವರ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’ ಚಿತ್ರವೇ ನನಗೆ ದೊಡ್ಡ ಸ್ಫೂರ್ತಿ” ಎಂದು ಹೇಳಿಕೊಂಡರು.

ಚಿತ್ರದ ಕಥಾಹಂದರದ ಬಗ್ಗೆ ಮಾಹಿತಿ ಹಂಚಿಕೊಂಡ ನಿರ್ದೇಶಕರು, ವಠಾರದ ಅಜ್ಜಿಯ ಮನೆಯಲ್ಲಿ ಬಾಡಿಗೆಗೆ ಇರುವವರು ಹಾಗೂ ಆ ಅಜ್ಜಿಯ ನಡುವೆ ನಡೆಯುವ ಹಾಸ್ಯಭರಿತ ಸನ್ನಿವೇಶಗಳೇ ಚಿತ್ರದ ಜೀವಾಳ ಎಂದರು. ಆರಂಭದಿಂದ ಅಂತ್ಯದವರೆಗೂ ನಗುವಿನ ಹೊಳೆ ಹರಿಸುವ ಈ ಕಥೆ, ಕ್ಲೈಮ್ಯಾಕ್ಸ್ ಹಂತದಲ್ಲಿ ಭಾವನಾತ್ಮಕ ತಿರುವು ಪಡೆಯುತ್ತದೆ. ಬಿಜಾಪುರ ಭಾಗದ ಮನೆದಾಳು ವಾಡೆಯಲ್ಲಿ ಚಿತ್ರೀಕರಣ ನಡೆಸಲಾಗಿದ್ದು, ಉತ್ತರ ಕರ್ನಾಟಕದ ಸ್ಥಳೀಯ ರಂಗಭೂಮಿ ಕಲಾವಿದರನ್ನು ಹೆಚ್ಚಾಗಿ ಬಳಸಿಕೊಳ್ಳಲಾಗಿದೆ ಎಂದು ಆಯುಷ್ ಮಲ್ಲಿ ವಿವರಿಸಿದರು.

ಚಿತ್ರದ ನಾಯಕಿ ಸಹನಾ ಪ್ರಕಾಶ್ ಮಾತನಾಡಿ, “ಇದು ನನ್ನ ಎರಡನೇ ಸಿನಿಮಾ. ಇದರಲ್ಲಿ ನಾನು ‘ಪೂರ್ಣಿ’ ಎಂಬ ಚುರುಕು ಹಾಗೂ ಬಬ್ಲಿ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಮ್ಮ ಕುಟುಂಬದಲ್ಲಿ ಯಾರಿಗೂ ಸಿನಿಮಾ ಹಿನ್ನೆಲೆಯಿಲ್ಲ, ಹೀಗಾಗಿ ನಟಿಯಾಗಿ ಇದೊಂದು ಹೊಸ ಮತ್ತು ಸುಂದರ ಅನುಭವ” ಎಂದರು. ಮತ್ತೋರ್ವ ನಟಿ ಸಂಜನಾ ಮೂಲಿ ಮಾತನಾಡಿ, “ನಾನು ಮೂಲತಃ ಗದಗಿನವಳು. ಚಿತ್ರದಲ್ಲಿ ನನ್ನ ನಿಜವಾದ ಹೆಸರನ್ನೇ ಪಾತ್ರಕ್ಕೂ ಇಡಲಾಗಿದ್ದು, ಶಿಕ್ಷಕಿಯಾಗಿ ಅಭಿನಯಿಸಿದ್ದೇನೆ.

ನಿಜಜೀವನದಂತೆ ಇಲ್ಲಿಯೂ ನನ್ನದು ಹೆಚ್ಚು ಮೌನವಾಗಿರುವ ಪಾತ್ರವಾದ್ದರಿಂದ ನನಗೆ ಬಹಳ ಆಪ್ತವೆನಿಸಿತು” ಎಂದು ಸಂತಸ ಹಂಚಿಕೊಂಡರು. ಅಲ್ಲದೆ, ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿರುವ ಏಳನೇ ತರಗತಿ ವಿದ್ಯಾರ್ಥಿನಿ ಸಾಹಿತಿ ಈ ಚಿತ್ರದ ಮೂಲಕ ಬಾಲನಟಿಯಾಗಿ ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ.

ಚಿತ್ರದ ಸಂಗೀತ ನಿರ್ದೇಶಕ ರೋಹಿತ್ ಸೊವೆರ್ ಮಾತನಾಡುತ್ತಾ, “ಈವರೆಗೆ 150ಕ್ಕೂ ಹೆಚ್ಚು ಕಿರುಚಿತ್ರಗಳು ಹಾಗೂ ಧನಂಜಯ್ ನಿರ್ಮಾಣದ ‘ಜೆ.ಸಿ’ ಸೇರಿದಂತೆ ಹತ್ತು ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ಆದರೆ, ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ನೀಡುವಾಗ ದೃಶ್ಯಗಳನ್ನು ನೋಡಿದಾಗಲೆಲ್ಲಾ ನಗು ತಡೆಯಲಾಗುತ್ತಿರಲಿಲ್ಲ” ಎಂದರು. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಆಕಾಶ್ ಮನಗೂಳಿ ಮತ್ತು ಹರೀಶ್ ಶೃಂಗ ಸಾಹಿತ್ಯ ರಚಿಸಿದ್ದಾರೆ. ಬಿ. ಸುರೇಶ್ ಬಾಬು ಛಾಯಾಗ್ರಹಣದ ಜೊತೆಗೆ ಸಣ್ಣ ಪಾತ್ರವೊಂದಕ್ಕೂ ಬಣ್ಣ ಹಚ್ಚಿದ್ದಾರೆ. ಎಂ.ಎನ್. ವಿಶ್ವ ಸಂಕಲನವಿರುವ ಈ ಚಿತ್ರವನ್ನು ಬಿ.ಬಿ. ಸಂಕನೂರು ಬ್ಯಾನರ್ ಅಡಿಯಲ್ಲಿ ಅಂದಪ್ಪ ಸಂಕನೂರ್ ನಿರ್ಮಿಸಿದ್ದು, ಇದೇ ಡಿಸೆಂಬರ್ 18ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.

Visited 1 times, 1 visit(s) today
error: Content is protected !!