ರಿಯಾಲಿಟಿ ಶೋ ನಲ್ಲಿ ಸಂಬಂಧಗಳ ಕೋಟೆ “ಬೃಂದಾವಿಹಾರಿ” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಬೃಂದಾವಿಹಾರಿ
ನಿರ್ದೇಶಕ : ಶ್ರೀನಿವಾಸರಾಜು
ನಿರ್ಮಾಪಕ : ಸಮೃದ್ಧಿ ಮಂಜುನಾಥ್
ಸಂಗೀತ : ಹೆಷಮ್ ಅಬ್ದುಲ್
ಛಾಯಾಗ್ರಹಣ : ವೆಂಕಟ್ ಆರ್ ಪ್ರಸಾದ್
ತಾರಾಗಣ : ಗಣೇಶ್ , ಮಾಳವಿಕಾ ಶರ್ಮಾ, ದೇವಿಕಾ ಭಟ್, ಹಿರಿಯ ನಟಿ ಲಕ್ಷ್ಮಿ , ರಂಗಾಯಣ ರಘು, ಸಾಧುಕೋಕಿಲ, ಅಚ್ಚುತ್ ಕುಮಾರ್, ಅವಿನಾಶ್, ರಾಮ್ ಕುಮಾರ್ ಹಾಗೂ ಮುಂತಾದವರು…
ಜೀವನದಲ್ಲಿ ಎಲ್ಲಿಯವರೆಗೂ ನಂಬುವವರು ಇರುತ್ತಾರೋ.. ಅಲ್ಲಿಯವರೆಗೂ ನಂಬುಸುವವರು ಇರುತ್ತಾರೆ.. ಇದು ಕೆಲವರಿಗೆ ಅಸ್ತ್ರವಾಗಿಯೂ ಉಪಯೋಗಕ್ಕೆ ಬರುತ್ತದೆ. ಇಲ್ಲೊಂದು ಟಿವಿ ವಾಹಿನಿ ತನ್ನ ರಿಯಾಲಿಟಿ ಶೋ ಮೂಲಕ ಟಿಆರ್ಪಿಯನ್ನು ಪಡೆದು ಅಗ್ರಸ್ಥಾನದಲ್ಲಿ ಉಳಿವ ಉದ್ದೇಶದೊಂದಿಗೆ ಜನರ ಮನಸ್ಸನ್ನು ಸೆಳೆಯಲು ಒಂದು ಕಾಲಘಟ್ಟವನ್ನೇ ಸೃಷ್ಟಿಸಿ, ಸಂಬಂಧಗಳ ಕೋಟೆಗಳ ನಡುವೆ ನಿಷ್ಕಲ್ಮಶ ಸ್ನೇಹ ಪ್ರೀತಿ , ಒಡನಾಟದ ಸುಳಿಯಲ್ಲಿ ಬೃಂದಾವಿಹಾರಿಯ ವಿಹಂಗಮ ನೋಟವನ್ನ ಪ್ರೇಕ್ಷಕರ ಮುಂದೆ ಈ ವಾರ ತೆರೆದಿಟ್ಟಿದೆ.
ಅಜ್ಜಿ (ಲಕ್ಷ್ಮಿ) ತಾತ (ಅಶೋಕ್) ನ ಪ್ರೀತಿಯ ಮೊಮ್ಮಗನಾಗಿ ಬೆಳೆಯುವ ಮಾಧವ (ಗಣೇಶ್). ತನ್ನೂರಿನ ಕೋಟೆಯ ಒಳಾಂಗಣವೇ ಆತನ ಬದುಕು. ವರ್ಷಕ್ಕೊಮ್ಮೆ ಬರುವ ಸಂಬಂಧಿಕರು, ಅವರ ಪ್ರೀತಿ, ವಿಶ್ವಾಸ, ವಾತ್ಸಲ್ಯದ ಜೊತೆ ಗೆಳೆಯರು , ವ್ಯವಸಾಯದ ನಡುವೆ ಕೊಳಲಿನ ಸುಮಧುರ ಸಂಗೀತವೇ ಜೀವ.
ಸ್ವತಂತ್ರ ಪೂರ್ವದ ಬ್ರಿಟಿಷರ ದೌರ್ಜನ್ಯ , ದಬ್ಬಾಳಿಕೆಗೆ ಸೆಡ್ಡು ಹೊಡೆದು ನಿಲ್ಲುವಷ್ಟು ಆಕ್ರೋಶ. ಒಮ್ಮೆ ದೇವಸ್ಥಾನದಲ್ಲಿ ಜಮೀನ್ದಾರ್ ಸುಪುತ್ರಿ ರಾಧಾ (ದೇವಿಕಾ ಭಟ್)ಳ ನಡೆ, ನೋಡಿ , ಭಕ್ತಿಗೆ ಮನಸೋಲುವ ಮಾಧವ. ಸ್ನೇಹ , ಸಲುಗೆ, ಪ್ರೀತಿ ಕೈಗೂಡುವಷ್ಟರಲ್ಲಿ ರಾಧೆಯನ್ನು ಕಾಣೆ ಆಗುತ್ತಾಳೆ. ಇದರ ನಡುವೆ ಮೀರಾ (ಮಾಳವಿಕಾ ಶರಣ) ತನ್ನ ಭವ್ಯ ಅರಮನೆಯಲ್ಲಿ ಶೃಂಗಾರದೊಂದಿಗೆ ಎಲ್ಲರ ಕಣ್ಣು ತನ್ನತ್ತ ಅರಿಸುವ ಹಾಗೆ ನೃತ್ಯ ಮಾಡುತ್ತಾ ಮನಸೆಳೆಯುತ್ತಾಳೆ. ಸೌಂದರ್ಯ ರಾಶಿ ಮೀರಾ ಗೆ ಮಾಧವನ ಮೇಲೆ ಕಣ್ಣು.
ರಾಧಾಳ ಬರುವಿಕೆಗಾಗಿ ಕಾಯುವ ಮಾಧವನ ಮನಸ್ಥಿತಿ ಬದಲಿಸಲು ವೀರ ಇನ್ನಿಲ್ಲದ ಪ್ರಯತ್ನ ಮಾಡುತ್ತಾಳೆ. ಮುಂದೇನು ಅನ್ನುವಷ್ಟರಲ್ಲಿ ಮತ್ತೊಂದು ಹೊಸ ಪ್ರಪಂಚವೇ ತೆರೆದುಕೊಳ್ಳುತ್ತದೆ. ವಾಹಿನಿಯ ಮುಖ್ಯಸ್ಥ ದೇವ್ (ರಾಮಕುಮಾರ್) 25 ವರ್ಷಗಳ ರೋಚಕ ಆಟವನ್ನು ಆರಂಭಿಸಿರುತ್ತಾರೆ. ಅದಕ್ಕೆ ಬೆನ್ನೆಲುಬಾಗಿ ನಿಲ್ಲುವ ಕಾಣದ ಕೈಗಳು… ಹಾಗೆಯೇ ಎದುರಾಳಿಗಳ ಸವಾಲು ಎಲ್ಲವೂ ಮುಂದೇನು ಎಂಬಂತೆ ಮಾಡುತ್ತದೆ.
ನಾವು ನೋಡುತ್ತಿರುವುದು ಏನು… ಯಾವುದು ಸತ್ಯ… ಯಾವುದು ಸುಳ್ಳು… ಮಾಧವ ಯಾರು…
ಸಂಬಂಧಿಕರು , ಪ್ರೇಯಸಿಯರು ಏನಾದರೂ…
ವಾಸ್ತವತೆ ಏನು ಎಂಬುದನ್ನು ಕ್ಲೈಮ್ಯಾಕ್ಸ್ ನಲ್ಲಿ ತೆರೆದಿಟ್ಟಿದ್ದಾರೆ.
ನಿರ್ದೇಶಕ ಶ್ರೀನಿವಾಸ ರಾಜು ಹೇಳಲು ಹೊರಟಿರುವ ಕಥಾವಸ್ತು ವಿಭಿನ್ನವಾಗಿದ್ದು , ಟಿವಿ ವಾಹಿನಿಗಳ ಅಬ್ಬರಕ್ಕೆ ಮುಗ್ಧರು , ಹಣದ ಅವಶ್ಯಕತೆ ಇರುವವರು ಹೇಗೆ ಸಿಲ್ಕುತ್ತಾರೆ. ಮಮತೆ , ಪ್ರೀತಿ , ಸಂಬಂಧಗಳ ನಡುವಿನ ಒದ್ದಾಟದ ಏರಿಳಿತಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ ಚಿತ್ರಕಥೆಯಲ್ಲಿ ವೇಗ ಕಳೆದುಕೊಂಡು ಇದ್ದಲ್ಲಿ ಗಿರಿಕಿ ಹೊಡೆದು ನೋಡುಗರಿಗೆ ಗೊಂದಲವನ್ನ ಸೃಷ್ಟಿ ಮಾಡಿದಂತಿದೆ. ಕೊನೆಯ ಕ್ಲೈಮ್ಯಾಕ್ಸ್ ಸನ್ನಿವೇಶ ಎಲ್ಲರ ಗಮನ ಸೆಳೆಯುತ್ತಿದೆ. ನಿರ್ಮಾಪಕ ಸಮೃದ್ಧಿ ಮಂಜುನಾಥ್ ಚಿತ್ರಕ್ಕೆ ಹಾಕಿರುವ ಹಣದ ಖರ್ಚು ತೆರೆಯ ಮೇಲೆ ಅದ್ದೂರಿಯಾಗಿ ಕಾಣುತ್ತದೆ.
ಇನ್ನು ಇಡೀ ಚಿತ್ರದ ಹೈಲೈಟ್ ಅಂದರೆ ಸಂಗೀತ , ಸಾಹಿತ್ಯ , ಸಂದರ್ಭಕ್ಕೆ ತಕ್ಕನಾಗಿ ಮೂಡಿಬಂದಿದೆ. ಅದೇ ರೀತಿ ಛಾಯಾಗ್ರಹಕರ ಕೈಚಳಕ ಅದ್ಭುತವಾಗಿದ್ದು , ಸಂಕಲನ ಕೂಡ ಉತ್ತಮವಾಗಿದೆ. ನಾಯಕನಟನಾಗಿ ಗಣೇಶ್ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ , ಪ್ರೇಮಿಯಾಗಿ , ಗೆಳೆಯನಾಗಿ , ಬಂಧುಗಳ ಪ್ರೀತಿಯ ಮಗನಾಗಿ ತೆರೆಯ ಮೇಲೆ ಮಿಂಚಿದ್ದಾರೆ. ಇನ್ನು ಕ್ಲೈಮ್ಯಾಕ್ಸ್ ಸಂದರ್ಭವನ್ನು ಆವರಿಸಿಕೊಂಡು ಎಲ್ಲರಿಗೂ ಇಷ್ಟವಾಗುತ್ತಾರೆ.
ಇನ್ನು ಮಾಳವಿಕಾ ಶರ್ಮ ಹಾಗೂ ದೈವಿಕ ಭಟ್ ಇಬ್ಬರು ನಾಯಕಿಯರು ಮುದ್ದು ಮುದ್ದಾಗಿ ತೆರೆಯ ಮೇಲೆ ಮಿಂಚಿದ್ದು , ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಹಿರಿಯ ನಟಿ ಲಕ್ಷ್ಮಿ ಹಾಗೂ ಅಶೋಕ್ ರವರ ಪಾತ್ರವನ್ನು ಇನ್ನು ಉತ್ತಮವಾಗಿ ಬಳಸಿಕೊಳ್ಳಬಹುದಿತ್ತು. ವಿಶೇಷವಾಗಿ ಹಿರಿಯ ನಟ ರಾಮಕುಮಾರ್ ವಾಹಿನಿಯ ಮುಖ್ಯಸ್ಥನಾಗಿ ಪ್ರಮುಖ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಮನೋರಂಜನೆಯ ದೃಷ್ಟಿಯಿಂದ ಒಮ್ಮೆ ನೋಡಬಹುದು.
