Cini NewsMovie Review

‘ಶಾಖಾಹಾರಿ’ಯಲ್ಲಿ ಮಾರಣ ಹೋಮ (ಚಿತ್ರವಿಮರ್ಶೆ-ರೇಟಿಂಗ್ : 4/5)

ರೇಟಿಂಗ್ : 4/5

ಚಿತ್ರ : ಶಾಖಾಹಾರಿ
ನಿರ್ದೇಶಕ : ಸಂದೀಪ್ ಸುಂಕದ್
ನಿರ್ಮಾಪಕರು : ರಾಜೇಶ್ ಕೀಳಂಬಿ, ರಂಜಿನಿ ಪ್ರಸನ್ನ
ಸಂಗೀತ : ಮಯೂರ್
ಛಾಯಾಗ್ರಾಹಕ :
ತಾರಾಗಣ : ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಸುಜಯ್ ಶಾಸ್ತ್ರಿ, ಪ್ರತಿಮಾ ನಾಯಕ್, ಹರಿಣಿ, ವಿನಯ್ ಯು.ಜೆ., ಶ್ರೀಹರ್ಷ ಗೋಭಟ್ಟ, ನಿಧಿ ಹೆಗ್ಡೆ ಹಾಗೂ ಮುಂತಾದವರು…

ಬಹು ಚಿತ್ರಗಳ ಸಂಗಮದ ನಡುವೆ ಕುತೂಹಲ ಮೂಡಿಸುವ ಆಕಸ್ಮಿಕ ಸಾವುಗಳ ಸುತ್ತ ಹೆಣೆದಿರುವ ವಿಭಿನ್ನ ಕಥಾಹಂದರದ ಚಿತ್ರವಾಗಿ ಈ ವಾರ ತೆರೆಯ ಮೇಲೆ ಬಂದಿದೆ “ಶಾಖಹಾರಿ”. ಮಲೆನಾಡಿನ ಸುಂದರ ಪರಿಸರದ ನಡುವೆ ಶಿವಮೊಗ್ಗ ಸಮೀಪದ ಒಂದು ಊರಿನಲ್ಲಿ ಸುಬ್ರಹ್ಮಣ್ಯ (ರಂಗಾಯಣ ರಘು) ನ ಶ್ರೀ ದುರ್ಗಾ ಪ್ರಸಾದ್ ಶಾಖಾಹಾರಿ ಹೋಟೆಲ್ ಮಾಲೀಕ ಹಾಗೂ ಭಟ್ಟ ತಿಂಡಿ , ಊಟಕ್ಕೆ ಬಹಳ ಫೇಮಸ್.

ಅದೇ ಊರಿನ ಪೊಲೀಸ್ ಸ್ಟೇಷನ್ ಗೆ ಒಂದು ಮರ್ಡರ್ ಕೇಸ್ ದಾಖಲು. ಆದರೆ ಪೋಲಿಸ್ ಇನ್ಸ್ಪೆಕ್ಟರ್ (ಗೋಪಾಲಕೃಷ್ಣ ದೇಶಪಾಂಡೆ) ತನ್ನ ಹೆಂಡತಿಯ ಅನಾರೋಗ್ಯದ ನಿಮಿತ್ತ ತನ್ನೂರಿಗೆ ಟ್ರಾನ್ಸ್ಫರ್ ಕೇಳಿರುತ್ತಾನೆ. ಹಿರಿಯ ಅಧಿಕಾರಿಗಳ ಒತ್ತಡದ ನಡುವೆ ಈ ಕೇಸ್ ಮುಗಿಸಿ ಹೊರಡುವಂತೆ ಸೂಚನೆ. ಇದರ ನಡುವೆ ಸೆಲ್ ನಲ್ಲಿ ಇದ್ದ ವಿಜಯ್ (ವಿನಯ್ ಜರಿಮಲಿ) ಪರಾರಿ ಆಗುವ ಸಂದರ್ಭದಲ್ಲಿ ಪೊಲೀಸರಿಂದ ಗುಂಡೇಟು ಬೀಳುತ್ತದೆ. ಕಾಡಿನಲ್ಲಿ ನುಸುಳಿರುವ ವಿಜಯ್ ಗಾಗಿ ಪೊಲೀಸರ ಹಗಲಿರಲು ಹುಡುಕಾಟ. ತನ್ನ ಪ್ರಾಣ ರಕ್ಷಣೆಗಾಗಿ ಸುಬ್ಬಣ್ಣನ ಹೋಟೆಲ್ ಸೇರುವ ವಿಜಯ್.

ಅನಾಥ ಹುಡುಗ ವಿಜಯ್ ತನ್ನ ಗೆಳೆಯ( ಶ್ರೀ ಹರ್ಷ) ನ ಸಹಕಾರದಿಂದ ಬಿಎಸ್ಎಫ್ ಯೋಧನಾಗಿ ಸೈನ್ಯಕ್ಕೆ ಸೇರುವ ಅವಕಾಶ ಬರುತ್ತದೆ. ಇದರ ನಡುವೆ ಗೆಳೆಯನ ಮಾತಿನಂತೆ ಮದುವೆ ಆಗುತ್ತಾನೆ. ಗಂಡನಿಂದ ದೂರ ಉಳಿದ ಸೌಗಂಧಿಕಾ ( ನಿಧಿ ಹೆಗಡೆ) ಪರಪುರುಷನ ಸಂಪರ್ಕ ಮಾಡುತ್ತಾಳೆ. ಗೆಳೆಯರ ಮೂಲಕ ವಿಚಾರ ತಿಳಿಯುವ ವಿಜಯ್ ಹೆಂಡತಿಯ ಬಳಿ ಕೇಳಿದಾಗ ಸತ್ಯ ಒಪ್ಪಿಕೊಳ್ಳುತ್ತಾಳೆ. ಇದಕ್ಕೆ ತಕ್ಕ ಶಾಸ್ತಿ ಮಾಡಬೇಕೆಂದು ನಿರ್ಧರಿಸಿ ಕುಡಿದು ಮನೆಗೆ ಬರುವ ಗಂಡ. ಮರುದಿನ ಹೆಂಡತಿಯ ಕೊಲೆ , ನಾನು ಮಾಡದ ಕೊಲೆಗೆ ಯಾಕೆ ಶಿಕ್ಷೆ ಎಂದು ಕಣ್ಣೀರುಡುತ್ತಾ ಸುಬ್ಬಣ್ಣ ನಮ್ಮ ಮುಂದೆ ನೋವು ತೋಡಿಕೊಳ್ಳುತ್ತಾನೆ.

ಇದರ ನಡುವೆ ಹೋಟೆಲ್ ಗೆ ತಿಂಡಿ , ಊಟಕ್ಕೆ ಬರುವ ಗ್ರಾಹಕರು, ಹಾಗೆಯೇ ಪೊಲೀಸರ ದಂಡು ಇನ್ವೆಸ್ಟಿಗೇಷನ್ ಹಾದಿಯಲ್ಲಿ ಬಂದು ಹೋಗುತ್ತಾರೆ. ಹೋಟೆಲ್ ಹಿಂಬದಿಯಲ್ಲಿ ಬರುವ ಬಸ್ನಲ್ಲಿ ತನ್ನ ಪ್ರೀತಿಯ ಗೆಳತಿಯ ಆಕರ್ಷಣೆ ಆಗಾಗ ನೋಡುವ ಹಾಗೆ ಮಾಡುತ್ತಿರುತ್ತದೆ. ಸುಬ್ಬಣ್ಣನ ಮಲತಾಯಿಯ ಮಗ ಆಗಾಗ ಹಣಕ್ಕಾಗಿ ಪೀಡಿಸುತ್ತಾ ಕೊಂಚ ದೂರ ಉಳಿದಿರುತ್ತಾನೆ. ಇದರ ಹೊರತಾಗಿ ಸುಬ್ಬಣ್ಣ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ವಿಜಯ್ ನನ್ನ ರಕ್ಷಿಸಿ ಸಮಯ ನೋಡಿ ಬೆಂಗಳೂರಿಗೆ ಕಳಿಸುವ ಆಲೋಚನೆ ಹೊಂದಿರುತ್ತಾನೆ.

ಆದರೆ ವಿಧಿಯ ಆಟವೇ ಬೇರೆ ಆಗಿದ್ದು ವಿಜಯ್ ಹೋಟೆಲ್ ನಲ್ಲಿ ಸಾಯುತ್ತಾನೆ. ಮುಂದೆ ಸುಬ್ಬಣ್ಣನ ಬದುಕಿನಲ್ಲಿ ಎಲ್ಲವೂ ಆಯೋಮಯವಾಗಿ ಹಲವು ಅನಿರೀಕ್ಷಿತ ಘಟನೆಗಳು ಎದುರಾಗಿ ಮೂರು ಸಾವು ಸಂಭವಿಸುವ ಹಂತಕ್ಕೆ ಬಂದು ನಿಲ್ಲುತ್ತದೆ.
ಕೊಲೆ ಮಾಡಿದು ಯಾರು…
ಮೂರು ಮಂದಿ ಯಾತಕ್ಕೆ…
ಪೊಲೀಸರ ಹುಡುಕಾಟ ಏನು…
ಶಾಖಾಹಾರಿ ಎಂದರೇನು… ಇದೆಲ್ಲದಕ್ಕೂ ಉತ್ತರ ಬೇಕೆಂದರೆ ಒಮ್ಮೆ ಚಿತ್ರ ನೋಡಬೇಕು.

ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ ನಟ ರಂಗಾಯಣ ರಘು , ಒಬ್ಬ ಭಟ್ಟನಾಗಿ ಹೋಟೆಲಿಗೆ ಬರುವ ಗ್ರಾಹಕರು , ತನಿಖೆಗೆ ಬರುವ ಪೊಲೀಸ್ ಅಧಿಕಾರಿಗಳು , ಸಹಾಯ ಬೇಡಿ ಬಂದ ಹುಡುಗನನ್ನು ರಕ್ಷಿಸುವ ಪರಿ ಹಾಗೂ ತನ್ನದಲ್ಲದ ತಪ್ಪಿಗೆ ಪರದಾಡುವ ವ್ಯಕ್ತಿಯಾಗಿ ಮನೋಜ್ಞವಾಗಿ ಅಭಿನಯಿಸಿ ಮತ್ತೊಮ್ಮೆ ತಮ್ಮ ನಟನಾ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇನ್ನು ಅಷ್ಟೇ ಅದ್ಭುತವಾಗಿ ಮತ್ತೊಬ್ಬ ನಟ ಗೋಪಾಲಕೃಷ್ಣ ದೇಶಪಾಂಡೆ ಕೂಡ ಪೊಲೀಸ್ ಅಧಿಕಾರಿಯಾಗಿ, ಅನಾರೋಗ್ಯ ಹೆಂಡತಿಯನ್ನು ಕಾಪಾಡಿಕೊಳ್ಳಲು ಪರದಾಡುವ ರೀತಿ ಅದ್ಭುತವಾಗಿದೆ.

ಇನ್ನು ಯುವ ಪ್ರತಿಭೆ ವಿನಯ್ ಕೂಡ ಸಿಕ್ಕ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ನಾಯಕಿಯಾಗಿ ನಿಧಿ ಹೆಗಡೆ , ಗೆಳೆಯನಾಗಿ ಶ್ರೀಹರ್ಷ , ಮಾತಿನ ಭರಾಟೆಯಲ್ಲಿ ಮಿಂಚಿದ ಸುಜಯ್ ಶಾಸ್ತ್ರಿ , ಮಹಿಳಾ ಪೇದೆಯಾಗಿ ಪ್ರತಿಮಾ ನಾಯಕ್, ರಂಗಣ್ಣ ರಘು ಪ್ರೇಯಸಿಯಾಗಿ ಹರಣಿ ಶ್ರೀಕಾಂತ್ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇಂತಹ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು.

ನಿರ್ದೇಶಕ ಸಂದೀಪ್ ಒಂದು ಗಟ್ಟಿ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ಚಿತ್ರಕಥೆಯನ್ನು ಬೆಸೆಯುವ ಮೂಲಕ ರೋಚಕ ತಿರುವುಗಳ ನಡುವೆ ಕುತೂಹಲದೊಂದಿಗೆ ಕ್ಲೈಮಾಕ್ಸ್ ಹಂತಕ್ಕೆ ತೆಗೆದುಕೊಂಡಿರುವ ಹಾದಿ ಉತ್ತಮವಾಗಿದೆ. ಶಾಖಾಹಾರಿ ಹೋಟೆಲ್ ನಲ್ಲಿ ರಕ್ತದೊಕುಳಿ ಮಾರಣಹೋಮ ಮಾಡಿರುವುದು ಕೊಂಚ ಅತಿ ಅನಿಸಿದರೂ, ಸಮಯ ಸಂದರ್ಭಕ್ಕೆ ಪೂರಕವಾಗಿದೆ. ಸ್ನೇಹ ,ಪ್ರೀತಿ ,ಗೆಳೆತನ , ಮೋಸ ಕ್ಕೆ ತಕ್ಕ ಶಾಸ್ತಿ ಇದ್ದೇ ಇರುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ಹೇಳಿರುವ ರೀತಿ ಗಮನ ಸೆಳೆಯುತ್ತದೆ. ಸಂಗೀತ ಕೂಡ ಪೂರಕವಾಗಿ ಹಾದು ಹೋಗಿದೆ. ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಒಟ್ಟಾರೆ ಕಥೆ ಹಾಗೂ ತಾಂತ್ರಿಕವಾಗಿ ಗಮನ ಸೆಳೆಯಲಿರುವ ಈ ಚಿತ್ರವು ಸಸ್ಪೆನ್ಸ್ , ಥ್ರಿಲ್ಲರ್ ಪ್ರಿಯರಿಗೆ ಮೆಚ್ಚುಗೆಯಾಗಲಿದ್ದು, ಒಮ್ಮೆ ಎಲ್ಲರೂ ನೋಡುವಂತಿದೆ.

error: Content is protected !!