‘ಸಮುದ್ರ ಮಂಥನ’ ಚಿತ್ರದ ಆಡಿಯೋ ಹಕ್ಕು ‘ರಿಷಬ್ ಶೆಟ್ಟಿ ಮ್ಯೂಸಿಕ್’ ತೆಕ್ಕೆಗೆ
ಈ ಹಿಂದೆ ‘ಒಂದು ಶಿಕಾರಿಯ ಕಥೆ’ ಎಂಬ ವಿಭಿನ್ನ ಚಿತ್ರದ ಮೂಲಕ ಸಿನಿಪ್ರಿಯರ ಗಮನ ಸೆಳೆದಿದ್ದ ನಿರ್ದೇಶಕ ಸಚಿನ್ ಶೆಟ್ಟಿ, ಈಗ ಮತ್ತೊಂದು ಕುತೂಹಲಕಾರಿ ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಸಚಿನ್ ಶೆಟ್ಟಿ ರಚಿಸಿ, ನಿರ್ದೇಶಿಸುತ್ತಿರುವ ಬಹುನಿರೀಕ್ಷಿತ ‘ಸಮುದ್ರ ಮಂಥನ’ ಚಿತ್ರದ ಆಡಿಯೋ ಹಕ್ಕುಗಳನ್ನು ಜನಪ್ರಿಯ ‘ರಿಷಬ್ ಶೆಟ್ಟಿ ಮ್ಯೂಸಿಕ್’ ಸಂಸ್ಥೆ ಪ್ರತಿಷ್ಠಿತ ಮೊತ್ತಕ್ಕೆ ಖರೀದಿಸಿದೆ.
ಸದಭಿರುಚಿಯ ಸಿನಿಮಾಗಳು ಮತ್ತು ಉತ್ತಮ ಸಂಗೀತಕ್ಕೆ ಸದಾ ಬೆನ್ನೆಲುಬಾಗಿ ನಿಲ್ಲುವ ರಿಷಬ್ ಶೆಟ್ಟಿ ಅವರ ಸಂಸ್ಥೆಯು ಈ ಚಿತ್ರದ ಹಾಡುಗಳನ್ನು ಪ್ರೇಕ್ಷಕರಿಗೆ ತಲುಪಿಸುವ ಜವಾಬ್ದಾರಿ ಹೊತ್ತುಕೊಂಡಿರುವುದು ಚಿತ್ರತಂಡಕ್ಕೆ ದೊಡ್ಡ ಬಲ ತಂದಿದೆ.
ನಿಶಾಂತ್ ಮಧುಗಿರಿ ಮತ್ತು ಮನೋಜ್ ಚಂದ್ರಕಾಂತ್ ಜಂಟಿಯಾಗಿ ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದ ಆಲ್ಬಮ್ನಲ್ಲಿ ಒಟ್ಟು ಐದು ವಿಭಿನ್ನ ಶೈಲಿಯ ಹಾಡುಗಳಿದ್ದು, ಈ ಎಲ್ಲಾ ಗೀತೆಗಳಿಗೆ ಖ್ಯಾತ ಗೀತರಚನೆಕಾರ ತ್ರಿಲೋಕ್ ತ್ರಿವಿಕ್ರಮ್ ಸಾಹಿತ್ಯದ ಸ್ಪರ್ಶ ನೀಡಿದ್ದಾರೆ. ವಿಶೇಷವೆಂದರೆ, ಸಿದ್ದಾರ್ಥ್ ಬೆಳ್ಮಣ್ಣು, ಅನಿರುದ್ಧ್ ಶಾಸ್ತ್ರಿ, ಮೈಮ್ ರಾಮದಾಸ್, ಐರಾ ಉಡುಪಿ ಹಾಗೂ ಕರಿಬಸವ ತಡಕಲ್ ಅವರಂತಹ ಪ್ರತಿಭಾವಂತ ಗಾಯಕರು ಈ ಹಾಡುಗಳಿಗೆ ತಮ್ಮ ಕಂಠಸಿರಿ ನೀಡಿದ್ದು, ಸದ್ಯದಲ್ಲೇ ಈ ಗೀತೆಗಳು ರಿಲೀಸ್ ಆಗಲಿವೆ.
ಚಿತ್ರದ ತಾರಾಗಣದಲ್ಲಿ ಯುವ ನಟ ಯಶ್ವಂತ್ ಕುಮಾರ್ ನಾಯಕನಾಗಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ‘ಬ್ಲಿಂಕ್’ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದಿರುವ ನಟಿ ಮಂದಾರ ಬಟ್ಟಲಹಳ್ಳಿ ನಾಯಕಿಯಾಗಿ ಅಭಿನಯಿಸಿದ್ದಾರೆ. ರಫ್ ಕಟ್ ಪ್ರೊಡಕ್ಷನ್ಸ್, ಎ ಸ್ಕ್ವೇರ್ ಮತ್ತು ಆರುಷ್ ಪಿಕ್ಚರ್ಸ್ ಬ್ಯಾನರ್ಗಳ ಅಡಿಯಲ್ಲಿ ಈ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗಿದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವು ಪ್ರೇಕ್ಷಕರನ್ನು ಸೀಟಿನ ತುದಿಯಲ್ಲಿ ಕೂರಿಸುವ ಭರವಸೆ ಮೂಡಿಸಿದೆ.
ಸದ್ಯ ‘ಸಮುದ್ರ ಮಂಥನ’ ಚಿತ್ರದ ಸಂಪೂರ್ಣ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿವೆ. ಅಷ್ಟೇ ಅಲ್ಲದೆ, ಸಿನಿಮಾ ಈಗಾಗಲೇ ಸೆನ್ಸಾರ್ ಮಂಡಳಿಯ ಅಂಗಳದಲ್ಲಿದ್ದು, ಪ್ರಮಾಣಪತ್ರ ಸಿಕ್ಕ ಕೂಡಲೇ ಬಿಡುಗಡೆಯ ದಿನಾಂಕವನ್ನು ಚಿತ್ರತಂಡ ಅಧಿಕೃತವಾಗಿ ಘೋಷಿಸಲಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಈ ವಿಭಿನ್ನ ಪ್ರಯತ್ನದ ಸಿನಿಮಾ ಬೆಳ್ಳಿಪರದೆಯ ಮೇಲೆ ಮೂಡಿಬರಲಿದೆ.
