ಚಟದ ಸುಳಿಯಲ್ಲಿ ಮುದ್ದಾದ ಹೂ…’ತಪಸ್ಸಿ’ (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ತಪಸ್ಸಿ
ನಿರ್ದೇಶಕ, ನಿರ್ಮಾಪಕ : ಸ್ಪೆನ್ಸರ್ ಮ್ಯಾಥ್ಯೂ
ಸಂಗೀತ : ಅರವ್
ಛಾಯಾಗ್ರಹಣ :
ತಾರಾಗಣ : ವಿ. ರವಿಚಂದ್ರನ್ , ಅಮ್ಮಯ್ರ, ಅನುಷಾ ಕಿಣಿ, ಸಚಿನ್ ವೈರಲ್ ಹಾಗೂ ಮುಂತಾದವರು…
ಈ ಭೂಮಿ ಮೇಲೆ ಹೆಣ್ಣು ವರವೋ…ಅಥವಾ ಶಾಪವೋ… ಎಂಬ ಪ್ರಶ್ನೆ ಕಾಡುತ್ತೆ. ಅದರಲ್ಲೂ ಮುದ್ದಾದ ಸೌಂದರ್ಜವತಿಯಾದರೆ ಅಷ್ಟೇ, ಆಕೆಯ ಮೇಲೆ ಬಹುತೇಕರ ಕಣ್ಣು ಇದ್ದೇ ಇರುತ್ತೆ. ಇನ್ನು ಖುಷಿಯಾಗಿ ಆಡಂಬರದಲ್ಲಿ ಜೀವನ ನಡೆಸಲು ಹಣ, ಆಸ್ತಿ ಬಹಳ ಮುಖ್ಯ. ಸೌಂದರ್ಯವಿದ್ದು , ದುಡ್ಡಿಲ್ಲದಿದ್ದರೆ ಬದುಕು ಬಹಳ ಕಷ್ಟ. ಇನ್ನು ತಂದೆ , ತಾಯಿ ಇಲ್ಲದ ಅನಾಥ ಮುದ್ದಾದ ಯೌವ್ವನದ ಹುಡುಗಿಯೊಬ್ಬಳ ಲೈಫ್ ನಲ್ಲಿ ಸಿಗುವ ಅವಕಾಶ, ಸಮಸ್ಯೆ , ನೋವಿನ ಸುತ್ತ ಸಾಗುವ ಕಥಾನಕವಾಗಿ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ತಪಸ್ಸಿ”. ಹಾಲಿನಂತೆ ಕಾಣುವ ಸಿಹಿ ತಿಂಡಿಗಳಲ್ಲಿ ಹಾಲ್ ಕೂವ ಬಹಳ ರುಚಿ. ಈ ಮುದ್ದಾದ ಹುಡುಗಿಯನ್ನು ಈ ಸಿಹಿ ಪದಾರ್ಥಕ್ಕೆ ಹೋಲಿಸಿರುವ ಹಾಡಿನ ಹಾಗೆಯೇ ನೋಡಲು ಸುಂದರವಾಗಿರುವ ಯುವತಿ ಸುತ್ತ ಇರುವೆಗಳ ಕಾಟ ಇರುತ್ತೆ.
ಒಬ್ಬಂಟಿಯಾದರೂ ಸುಖವಾಗಿ ಜೀವನ ನಡೆಸಬೇಕೆಂದು ಆಸೆ ಪಡುವ ಹುಡುಗಿ ತಪಸ್ಸಿ (ಅಮ್ಮಯ್ರ ಗೋಸ್ವಾಮಿ) ಮಾಡ್ಲಿಂಗ್ , ಅಡ್ಡ್ಸ್ ಶೂಟ್ ಕ್ಷೇತ್ರದಲ್ಲಿ ಹೆಸರು ಮಾಡಬೇಕೆಂದು ನಿರ್ಧರಿಸಿ ಫ್ಯಾಶನ್ ಸ್ಕ್ವಯರ್ ಟೀಮ್ ಗೆ ಸೇರಿಕೊಂಡು ಮಾಡ್ಲಿಂಗ್ ನಲ್ಲಿ ಮಿಂಚುತ್ತಾಳೆ. ಇಷ್ಟವಿಲ್ಲದಿದ್ದರೂ ಓನರ್ ಅರುಲ್ ಮಾತಿನಂತೆ ಎಣ್ಣೆ , ಸಿಗರೇಟ್ ಸೇದುತ್ತಾ ಅವನ ಜೊತೆ ಮಲಗುತ್ತಾಳೆ. ತನ್ನ ಭವಿಷ್ಯ ಹೀಗಾಯಿತು ಎನ್ನುತ್ತಲೇ , ಹಣದ ವ್ಯಾಮೋಹಕ್ಕೆ ಬಿದ್ದು ಪಾರ್ಟಿ , ಮೋಜು, ಡ್ರಗ್ಸ್ ನಿಶೆಯಲ್ಲಿ ಸಿಕ್ಕ ಸಿಕ್ಕ ಹುಡುಗರ ಜೊತೆ ಎಂಜಾಯ್ ಮಾಡಲು ಹೋಗಿ ಗ್ಯಾಂಗ್ ರೇಪ್ ಆಗುತ್ತಾಳೆ. ಇದರಿಂದ ಹೊರಬರಲು ಪರದಾಡುವ ಸಮಯದಲ್ಲಿ ಪರಿಚಯವಾಗುವ ರಾಜೀವ್ , ರಾಜೇಶ್ ಎಂಬ ಸ್ನೇಹಿತರು ಸಾಥ್ ನೀಡುವ ಹಾದಿಯಲ್ಲಿ ಪ್ರೊಫೆಸರ್ ರವೀಶ್ ವೈದ್ಯನಾಥನ್ (ವಿ. ರವಿಚಂದ್ರನ್) ಬಳಿ ಕರೆದುಕೊಂಡು ಹೋಗಿ ತಪಸ್ಸಿ ತನ್ನ ತಪ್ಪನ್ನ ಅರಿತುಕೊಂಡು , ಬದುಕಿನ ಶೈಲಿ ಬದಲಿಸಿಕೊಳ್ಳಲಿ ಎಂಬ ನಿಟ್ಟಿನಲ್ಲಿ ಮುಂದಾದರೂ ಆಕೆಯ ಚಟ, ಆರ್ಭಟ ನಿಲ್ಲುವುದಿಲ್ಲ. ಮುಂದೆ ಎದುರಾಗುವ ಒಂದು ತಿರುವು
ಬೇರೆದೇ ದಾರಿ ತೋರುತ್ತ ಹೋಗುತ್ತದೆ. ಅದು ಏನು.. ಹೇಗೆ… ಎಂಬುದನ್ನು ಚಿತ್ರ ನೋಡಿದರೆ ತಿಳಿಯುತ್ತದೆ.
ಈ ಚಿತ್ರದಲ್ಲಿ ನಟ ವಿ. ರವಿಚಂದ್ರನ್ ಒಬ್ಬ ಬರಹಗಾರನಾಗಿ , ಪ್ರೊಫೆಸರ್ ಪಾತ್ರವನ್ನು ನಿರ್ವಹಿಸಿದ್ದು , ಬಹಳ ತಾಳ್ಮೆ , ಸೌಮ್ಯ ಸ್ವಭಾವದಲ್ಲೇ ಸಮಸ್ಯೆಗೆ ಪರಿವರ್ತನೆಯ ದಾರಿ ತೋರುವ ರೀತಿ ಗಮನ ಸೆಳೆಯುವಂತಿದೆ. ಈ ರೀತಿಯ ಪಾತ್ರ ಸ್ಟಾರ್ ನಟನಿಗೆ ಬೇಕಿತ್ತ ಅನಿಸಿದರೂ , ವಿಷಯಧಾರಿತ ಚಿತ್ರ ಎನ್ನುವಂತಿದೆ. ಇನ್ನು ನಟಿಯಾಗಿ ಅಭಿನಯಿಸಿರುವ ಪುಣೆ ಮೂಲದ ಸುಂದರಿ ಅಮ್ಮಯ್ರ ಗೋಸ್ವಾಮಿ ಒಂದು ಬೋಲ್ಡ್ ಅಂಡ್ ಬ್ಯೂಟಿಫುಲ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ.
ಉಳಿದಂತೆ ಚಿತ್ರದಲ್ಲಿ ಅಭಿನಯಿಸಿರುವ ಪಾತ್ರಗಳು ಚಿತ್ರದ ಓಟಕ್ಕೆ ಸಾಥ್ ನೀಡಿವೆ. ಇನ್ನು ತಾಂತ್ರಿಕವಾಗಿ ಹಾಡುಗಳು , ಛಾಯಾಗ್ರಹಣ ತಕ್ಕಮಟ್ಟಿಗೆ ಇದೆ. ನಿರ್ಮಾಪಕ ಹಾಗೂ ನಿರ್ದೇಶಕ ಸ್ಪೆನ್ಸರ್ ಮ್ಯಾಥ್ಯೂ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ನಡೆಯುತ್ತಿರುವ ಕೆಲವು ಘಟನೆಗಳಿಗೆ ಸಾಕ್ಷಿ ಎನ್ನುವಂತಿದೆ. ಮಾಡ್ಲಿಂಗ್ , ಅಡ್ಡ್ಸ್ , ಸಿನಿಮಾ ಅವಕಾಶಕ್ಕಾಗಿ ಬರುವ ಹೆಣ್ಣು ಮಕ್ಕಳ ಪರಿಸ್ಥಿತಿಯನ್ನ ದುರುಪಯೋಗ ಪಡಿಸಿಕೊಳ್ಳುವ ವ್ಯಕ್ತಿಗಳ ಜಾಲದ ಸುತ್ತ ನಡೆಯುವ ವಿಚಾರವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ.
ಅಸಹ್ಯ ಅನಿಸುವ ದೃಶ್ಯ ಇಲ್ಲದಿದ್ದರೂ ಆಕೆ ಮೇಲಿನ ದೌರ್ಜನ್ಯದ ಅಂಶ ಗಮನ ಸೆಳೆಯುತ್ತದೆ. ಚಿತ್ರಕಥೆ ಹಾಗೂ ತಾಂತ್ರಿಕತೆಯಲ್ಲಿ ಇನ್ನಷ್ಟು ಪರಿಪಕ್ವತೆ ಅಗತ್ಯ ಎನಿಸುತ್ತದೆ. ಆದರೆ ಪ್ರಯತ್ನ ಉತ್ತಮವಾಗಿದ್ದು, ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿಚಾರ ಎಲ್ಲರ ಗಮನ ಸೆಳೆಯುವಂತಿದೆ.