ಸಾಮಾಜಿಕ ಸಂದೇಶದ ಕಥೆ ‘ಗಾಜು’ ಟ್ರೇಲರ್ ಬಿಡುಗಡೆ
ಈಗಾಗಲೇ ಪ್ಲಾಸ್ಟಿಕ್ ಬಳಕೆ, ಅರಣ್ಯ ನಾಶ, ಪರಿಸರ ನಾಶ, ವಾಯು ಮಾಲಿನ್ಯ, ಜಲ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಪರಿಸರ ಕಾಳಜಿಯ ಹತ್ತಾರು ವಿಷಯಗಳನ್ನು ಹೊತ್ತ ಅನೇಕ ಚಿತ್ರಗಳು ತೆರೆಗೆ ಬಂದಿವೆ. ಈಗ ಈ ಸಾಲಿಗೆ ಸೇರ್ಪಡೆಯಾಗುತ್ತಿರುವ ಅಂಥದ್ದೇ ಒಂದು ಚಿತ್ರದ ಹೆಸರು ‘ಗಾಜು’.
ಚಿತ್ರದ ಹೆಸರೇ ಹೇಳುವಂತೆ, ‘ಗಾಜು’ ಇತ್ತೀಚಿನ ದಿನಗಳಲ್ಲಿ ವಿಪರೀತವಾಗಿ ಹೆಚ್ಚಾಗುತ್ತಿರುವ ಗಾಜಿನ ಬಳಕೆ, ಅದರ ದುಷ್ಪರಿಣಾಮಗಳ ಬಗ್ಗೆ ಬೆಳಕು ಚೆಲ್ಲುವಂತ ಚಿತ್ರ. ಕೆಲ ವರ್ಷಗಳ ಹಿಂದೆ ಕಿರುಚಿತ್ರ ರೂಪದಲ್ಲಿ ಬಿಡುಗಡೆಯಾಗಿ ಅನೇಕರ ಮೆಚ್ಚುಗೆ ಪಡೆದಿದ್ದ ನಿರ್ದೇಶನದ ‘ಗಾಜು’ ಇದೀಗ ಸಿನಿಮಾ ರೂಪದಲ್ಲಿ ಹಿರಿತೆರೆಗೆ ಬರುತ್ತಿದೆ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಾಮಾಜಿಕ ಹೋರಾಟಗಾರರಾದ ಡಾ. ಸಿ. ಎನ್. ಮಂಜುನಾಥ್ (ದಂಡೋರ ಮಂಜಣ್ಣ) ‘ಗಾಜು’ ಎಂಬ ಈ ಸಾಮಾಜಿಕ ಕಾಳಜಿಯ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ‘ಗಾಜು’ ಚಿತ್ರಕ್ಕೆ ವೆಂಕಟೇಶ್ ಗಿರಿಕ್ಷೇತ್ರ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ.
ಸದ್ಯ ಬಹುತೇಕ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಗಾಜು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ’ ಮಾಜಿ ಅಧ್ಯಕ್ಷ ಭಾ. ಮ. ಹರೀಶ್, ‘ಗಾಜು’ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೇ ವೇಳೆ ಮಾತನಾಡಿದ ನಿರ್ಮಾಪಕ ಡಾ. ಸಿ. ಎನ್. ಮಂಜುನಾಥ್ (ದಂಡೋರ ಮಂಜಣ್ಣ), ‘ಇದೊಂದು ಪರಿಸರ ಕಾಳಜಿ ಹೊಂದಿರುವ ಚಿತ್ರ. ರೈತಾಪಿ ಹಿನ್ನೆಲೆಯಿಂದ ಬಂದಿರುವ ನಾವು ಸಾಮಾಜಿಕ ಕಳಕಳಿಯಿಂದ ಈ ಚಿತ್ರ ನಿರ್ಮಿಸಿದ್ದೇವೆ. ಗಾಜಿನ ಬಳಕೆ, ಅದರಿಂದಾಗುತ್ತಿರುವ ಅನಾಹುತಗಳ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ. ಎಲ್ಲಾ ವರ್ಗದ ಪ್ರೇಕ್ಷಕರಿಗೂ ಚಿತ್ರ ಇಷ್ಟವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದ ಕಥಾಹಂದರದ ಬಗ್ಗೆ ಮಾತನಾಡಿದ ನಿರ್ದೇಶಕ ವೆಂಕಟೇಶ್ ಗಿರಿಕ್ಷೇತ್ರ, ‘ಬಳಸಿದ ಗಾಜಿನ ಉತ್ಪನ್ನಗಳ ಸಮರ್ಥ ವಿಲೇವಾರಿ, ಮರುಬಳಕೆಯಿಲ್ಲದಂತಾಗಿದೆ. ಹೀಗಾಗಿ ಗಾಜು ಪರಿಸರಕ್ಕೆ ಮತ್ತು ಜೀವಸಂಕುಲಕ್ಕೆ ಮಾರಕವಾಗಿ ಪರಿಣಮಿಸುತ್ತಿದೆ. ಇದೇ ವಿಷಯವನ್ನು ಇಟ್ಟುಕೊಂಡು ಗ್ರಾಮೀಣ ಹಿನ್ನೆಲೆಯಲ್ಲಿ ಈ ಚಿತ್ರ ಮಾಡಿದ್ದೇವೆ. ಬೇಲೂರು ಮತ್ತು ಚನ್ನರಾಯಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗ್ರಾಮೀಣ ಪ್ರತಿಭೆಗಳನ್ನು ಇಟ್ಟುಕೊಂಡು ಈ ಚಿತ್ರದ ಚಿತ್ರೀಕರಣ ಮಾಡಿದ್ದೇವೆ. ನಮ್ಮ ಪ್ರಯತ್ನಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಸಿಗುತ್ತಿದೆ. ಶೀಘ್ರದಲ್ಲಿಯೇ ಚಿತ್ರ ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.
ಇನ್ನು ಬಿಡುಗಡೆಯಾಗಿರುವ ‘ಗಾಜು’ ಚಿತ್ರದ ಟ್ರೇಲರಿನಲ್ಲಿ, ಗಾಜುಗಳನ್ನು ಒಡೆಯುವುದರಿಂದ ಪರಿಸರಕ್ಕೆ, ಜನರಿಗೆ, ಪ್ರಾಣಿ-ಪಕ್ಷಿಗಳಿಗೆ ಯಾವ ರೀತಿ ತೊಂದರೆಯಾಗುತ್ತದೆ. ಒಬ್ಬ ಚಿಕ್ಕ ಬಾಲಕ ಗಾಜಿನ ಬಳಕೆಯ ವಿರುದ್ದ ಹೇಗೆ ಹೋರಾಡುತ್ತಾನೆ? ಹುಡುಗನ ಹೋರಾಟದಿಂದ ಸಮಾಜದಲ್ಲಿ ಏನೇನು ಬದಲಾವಣೆಯಾಗುತ್ತದೆ? ಎನ್ನುವ ಕಥೆಯನ್ನು ‘ಗಾಜು’ ಚಿತ್ರದ ಮೂಲಕ ತೆರೆಮೇಲೆ ಹೇಳಲು ಹೊರಟಿರುವುದು ಕಾಣುತ್ತದೆ.
ಹಿರಿಯ ನಟರಾದ ರಾಮಕೃಷ್ಣ, ಬಲರಾಜವಾಡಿ, ಮಾಸ್ಟರ್ ವಿಸ್ಮಯ್ ವೆಂಕಟೇಶ್, ಅಪ್ಪಣ್ಣ ರಾಮದುರ್ಗ, ವಾಣಿ, ಮಿಲ್ಟ್ರಿ ಮಂಜು, ಸಂತೋಷ್ ಮೊದಲಾದ ಕಲಾವಿದರು ‘ಗಾಜು’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಗಾಜು’ ಚಿತ್ರಕ್ಕೆ ನಾಗೇಂದ್ರ ರಂಗಾರಿ ಛಾಯಾಗ್ರಹಣ, ಸೂರ್ಯೋದಯ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರದ ಹಾಡುಗಳಿಗೆ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜಿಸುತ್ತಿದ್ದು, ಮಸ್ತಾನ್ ನೃತ್ಯ ಸಂಯೋಜಿಸಿದ್ದಾರೆ. ಒಟ್ಟಾರೆ ‘ಗಾಜು’ ಚಿತ್ರದ ಟ್ರೇಲರ್ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಚಿತ್ರ ಥಿಯೇಟರಿನಲ್ಲಿ ಹೇಗಿರಲಿದೆ ಎಂಬುದು ‘ಗಾಜು’ ತೆರೆಕಂಡ ಮೇಲಷ್ಟೇ ಗೊತ್ತಾಗಲಿದೆ.
