ಯುವ ಪ್ರತಿಭೆಗಳ “ನಡೆಯುವ ದೋಣಿ” ಚಿತ್ರಕ್ಕೆ ಗಣ್ಯರಿಂದ ಸಾಥ್.

Spread the love

ಹೊಸ ವರ್ಷದ ಸಂಭ್ರಮದ ನಡುವೆ 2027ರ ಜನವರಿಯಲ್ಲಿ ತೆರೆಗೆ ಬರಲು ಸಜ್ಜಾಗಿರುವ ‘ನಡೆಯುವ ದೋಣಿ’ ಚಲನಚಿತ್ರಕ್ಕೆ ಕನ್ನಡ ಚಿತ್ರರಂಗದ ದಿಗ್ಗಜರು ಹಾಗೂ ಗಣ್ಯರಿಂದ ಅಪಾರ ಬೆಂಬಲ ಮತ್ತು ಪ್ರೋತ್ಸಾಹ ಹರಿದುಬರುತ್ತಿದೆ. ಈಗಾಗಲೇ ಚಿತ್ರವನ್ನು ವೀಕ್ಷಿಸಿ ಮನಸಾರೆ ಮೆಚ್ಚಿಕೊಂಡಿರುವ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರು, ಹೊಸಬರ ತಂಡದ ಬೆನ್ನೆಲುಬಾಗಿ ನಿಂತಿದ್ದು, ತಮ್ಮ ಬ್ಯಾನರ್ ಮೂಲಕ ಚಿತ್ರಕ್ಕೆ ಧ್ವನಿಯಾಗಿ ಬೆಂಬಲ ನೀಡುತ್ತಿದ್ದಾರೆ. ಚಿತ್ರದ ಟೈಟಲ್ ಸಾಂಗ್ ವೀಕ್ಷಿಸಿದ ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದರೊಂದಿಗೆ, ವಿಜಯ್ ಪ್ರಕಾಶ್ ಅವರು ಹಾಡಿರುವ ಗೀತೆಯನ್ನು ಬಿಡುಗಡೆಗೊಳಿಸುವ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ತುಂಬಿದ್ದಾರೆ.

‘ದಿಯಾ’ ಖ್ಯಾತಿಯ ನಟಿ ಖುಷಿ ರವಿ ಅವರು ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ಖ್ಯಾತ ಬರಹಗಾರ ಜೋಗಿ ಅವರು ‘ನಡೆಯುವ ದೋಣಿ’ ಹಾಡನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದು, “ಅಪರಿಚಿತ ಚಿತ್ರತಂಡಕ್ಕೆ ವಿಡಿಯೋ ಮೂಲಕ ನನ್ನ ಧನ್ಯವಾದಗಳು. ನೈಜತೆಯಿಂದ ಕೂಡಿರುವ ಸುಂದರ ಪ್ರೇಮಗೀತೆಯನ್ನು ನೀಡಿದ್ದೀರಿ; ಸಿನಿಮಾ ಬಿಡುಗಡೆಯಾದ ಮೇಲೆ ಖಂಡಿತವಾಗಿಯೂ ಚಿತ್ರ ವೀಕ್ಷಿಸುತ್ತೇನೆ” ಎಂದು ತಿಳಿಸಿದ್ದಾರೆ. ಅಲ್ಲದೆ, ಚಿತ್ರದ ತುಣುಕುಗಳನ್ನು ಕಂಡು “ಒಳ್ಳೆಯ ಚಲನಚಿತ್ರದೊಂದಿಗೆ ಸದಾ ನಿಲ್ಲುತ್ತೇನೆ” ಎಂಬ ಅವರ ಮಾತು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.

‘ಸಪ್ತ ಸಾಗರದಾಚೆ ಎಲ್ಲೋ’ ಖ್ಯಾತಿಯ ನಟಿ ಚೈತ್ರಾ ಆಚಾರ್ಯ ಅವರು ಕೂಡ ಚಿತ್ರಕ್ಕಾಗಿ ಪ್ರೀತಿಯಿಂದ ಹಾಡೊಂದನ್ನು ಹಾಡುವ ಮೂಲಕ ಸಾಥ್ ನೀಡಿದ್ದಾರೆ. ಒಳ್ಳೆಯ ಕಂಟೆಂಟ್ ಮತ್ತು ಗುಣಮಟ್ಟದ ಸಿನಿಮಾ ಮಾಡಿದರೆ ಚಿತ್ರರಂಗ ಹಾಗೂ ಪ್ರೇಕ್ಷಕರು ಸದಾ ಕೈಹಿಡಿಯುತ್ತಾರೆ ಎಂಬುದಕ್ಕೆ ‘ನಡೆಯುವ ದೋಣಿ’ ಉತ್ತಮ ನಿದರ್ಶನವಾಗಿದೆ. ಇವರುಗಳ ಜೊತೆಗೆ ಕ ಪಿಕ್ಟರ್ ಚಿತ್ರವನ್ನು ನೋಡಿ ಒಳ್ಳೆಯ ಚಲನ ಚಿತ್ರದೊಂದಿಗೆ ನಿಲ್ಲುತ್ತದೆ ಎಂದು ಹೇಳಿರುವುದು ಚಿತ್ರ ತಂಡಕ್ಕೆ ಖುಷಿಯನ್ನು ತಂದಿದೆ.

ಚಂದ್ರಶೇಖರ್ ರಾಯ ಅವರ ನಿರ್ಮಾಣದಲ್ಲಿ, ಉಮೇಶ್ ಬಡಿಗೇರ್ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದೆ. ರಘು ಬಸರಿಮರದ ನಾಯಕನಾಗಿ ಹಾಗೂ ಸನ್ನಿಧಿ ಶೆಟ್ಟಿ ನಾಯಕಿಯಾಗಿ ನಟಿಸಿದ್ದಾರೆ. ಅಖಿಲ ಆಲಮಟ್ಟಿ ಅವರ ಸಂಗೀತ ಸಂಯೋಜನೆ ಚಿತ್ರದ ಪ್ರಮುಖ ಆಕರ್ಷಣೆಯಾಗಿದ್ದು, ಈಗಾಗಲೇ ಭರವಸೆ ಮೂಡಿಸಿದೆ.
2027ರ ಜನವರಿಯಲ್ಲಿ ರಾಜ್ಯಾದ್ಯಂತ ತೆರೆಕಾಣಲಿರುವ ‘ನಡೆಯುವ ದೋಣಿ’ ಚಿತ್ರಕ್ಕೆ ಕರುನಾಡಿನ ಸಿನಿಪ್ರಿಯರು ಮತ್ತು ಮಾಧ್ಯಮ ಮಿತ್ರರ ಹಾರೈಕೆ ಹಾಗೂ ಬೆಂಬಲವನ್ನು ಚಿತ್ರತಂಡ ಕೋರಿದೆ.

Visited 1 times, 1 visit(s) today
error: Content is protected !!