ಬ್ಯಾಂಕ್ ಗಳ ಸ್ಕ್ಯಾಮ್ ಹಿಂದಿರುವ ಕರಾಳ ಸತ್ಯ “ಸ್ಪಾರ್ಕ್” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಸ್ಪಾರ್ಕ್
ನಿರ್ದೇಶಕ : ಮಹಾಂತೇಶ್
ನಿರ್ಮಾಪಕಿ : ಗರೀಮಾ ಅವಿನಾಶ್ ವಸಿಷ್ಠ
ಸಂಗೀತ : ಸಚಿನ್ ಬಸ್ರೂರು
ಛಾಯಾಗ್ರಹಣ : ಸ್ವಾಮಿ.ಜೆ
ತಾರಾಗಣ : ನಿರಂಜನ್ ಸುಧೀಂಧ್ರ ,ಲವ್ಲಿ ಸ್ಟಾರ್ ಪ್ರೇಮ್, ಭಾವನಾ ಮೆನನ್ , ಅಭಯ್ ವಸಿಷ್ಠ , ರಚನಾ ಇಂದರ್, ಧರ್ಮಣ್ಣ , ರಮೇಶ್ ಇಂದಿರಾ ಹಾಗೂ ಮುಂತಾದವರು…
ಈ ಭೂಮಿ ಮೇಲೆ ಎಲ್ಲಿಯವರೆಗೂ ಮೋಸ ಹೋಗುವವರು ಇರ್ತಾರೋ… ಅಲ್ಲಿವರೆಗೂ ಮೋಸ ಮಾಡುವವರು ಇದ್ದೇ ಇರುತ್ತಾರೆ… ಅದರಲ್ಲೂ ನಂಬಿಕೆಗೆ ದ್ರೋಹವಾದರೆ ಬದುಕು ಕಷ್ಟ. ಹಣ ಒಂದಿದ್ದರೆ ಎಲ್ಲವೂ ಸರಳ , ಸುಗಮ. ನಮ್ಮ ಹಣ ಬ್ಯಾಂಕಿನಲ್ಲಿದ್ದರೆ ಸುರಕ್ಷಿತ , ಅಗತ್ಯವಿದ್ದಾಗ ಬಳಸಬಹುದು ಎಂದು ನಂಬಿ ಹಣವನ್ನ ಇಟ್ಟಾಗ ಅದೇ ಬ್ಯಾಂಕ್ ದಿವಾಳಿ ಆದಾಗ ಜನರ ಪರಿಸ್ಥಿತಿ ಏನು ಅದಕ್ಕೆ ಪೊಲೀಸ್ , ಕಾನೂನು , ಪತ್ರಕರ್ತರು , ರಾಜಕೀಯ ಮುಖಂಡರು ಹೇಗೆ ತಮ್ಮ ತಮ್ಮ ಪರಿಮಿತಿಯಲ್ಲಿ ಕೆಲಸ ಮಾಡ್ತಾರೆ ಎನ್ನುವ ಅಂಶದ ಜೊತೆಗೆ ಬುದ್ಧಿವಂತಿಗೆ, ಆಕ್ಷನ್ , ಲವ್ , ಥ್ರಿಲ್ಲರ್ ಕಾಂಟಾಕ್ಟ್ ನೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸ್ಪಾರ್ಕ್”.
ತನ್ನ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಾ ಭ್ರಷ್ಟ ಅಧಿಕಾರಿಗಳ ಮುಖವಾಡವನ್ನು ವಾಹಿನಿಯಲ್ಲಿ ವರದಿ ಮಾಡುವ ಸ್ಟ್ರೈಟ್ ಫಾರ್ವರ್ಡ್ ಹುಡುಗ ಅಭಿರಾಮ್ (ನಿರಂಜನ್ ಸುಧೀಂದ್ರ). ಇದರ ನಡುವೆ ಅಮರ ಜ್ಯೋತಿ ಕೋ ಆಪರೇಟಿವ್ ಬ್ಯಾಂಕ್ ದಿವಾಳಿಯಾಗಿ ನೂರಾರು ಜನರ ಬದುಕು ಬೀದಿಗೆ ಬಂದುಬಿಡುತ್ತದೆ.
ಇದರಿಂದ ಕಂಗಾಲಾಗುವ ಜನರು ಬ್ಯಾಂಕ್ ವಿರುದ್ಧ ಧರಣಿ ಮಾಡುತ್ತಾರೆ. ಈ ಕೇಸಿನ ವಿಚಾರವಾಗಿ ಸ್ಪೆಷಲ್ ಅಧಿಕಾರಿ ಎಸ್ಪಿ ರಂಜಿತ್ ಕುಮಾರ್ (ಪ್ರೇಮ್) ಪ್ರವೇಶ ಮಾಡಿ ವಂಚಕರನ್ನ ಹಿಡಿದು ಹಣ ಕೊಡಿಸುವ ಭರವಸೆ ನೀಡುತ್ತಾರೆ. ಇನ್ನು ರಂಜಿತ್ ಕುಮಾರ್ ತಂಗಿ ಮಧುಮತಿ (ರಚನಾ ಇಂದರ್) ವೃತ್ತಿಯಲ್ಲಿ ಡಾಕ್ಟರ್. ಅಚನಕ್ಕಾಗಿ ಅಭಿರಾಮ್ ಭೇಟಿಯಾಗುವ ಮಧುಮತಿ ನಡುವೆ ಸಣ್ಣ ತರಲೆ , ಸ್ನೇಹ , ಸಲುಗೆ ಪ್ರೀತಿಯ ಕಡೆ ತಿರುಗುತ್ತದೆ.
ಮುಂದೆ ಈ ಬ್ಯಾಂಕ್ ಸ್ಕ್ಯಾಮ್ ವಿಚಾರವಾಗಿ ಎಸ್ಪಿ ರಂಜಿತ್ ಕುಮಾರ್ ಹಾಗೂ ಟಿವಿ ವರದಿಗಾರ ಅಭಿರಾಮ್ ನಡುವೆ ಪೈಪೋಟಿ ಎದುರಾಗುತ್ತದೆ. ಈ ಸ್ಕ್ಯಾಮ್ ಹಿಂದೆ ದೊಡ್ಡ ದೊಡ್ಡ ವ್ಯಕ್ತಿಗಳ ಕೈವಾಡ ಅಡಗಿದ್ದು , ಒಂದೊಂದೇ ಗೊಂದಲ ಎದುರಾಗುತ್ತಾ ಹೋಗುತ್ತದೆ. ಜನರ ಕಷ್ಟಕ್ಕೆ ನಾನಿದ್ದೇನೆ ಎನ್ನುವ ಲಾಯರ್ ವೈದೇಹಿ (ಭಾವನಾ ಮೆನನ್) ಹಿನ್ನೆಲೆಯಲ್ಲಿ ನಿಗೂಢದ ಜರ್ನಿ ಅಡಗಿರುತ್ತದೆ. ಇನ್ನು ಈ ಸ್ಕ್ಯಾಮ್ ನ ರೂವಾರಿ ಸತ್ಯಮೂರ್ತಿ (ರಮೇಶ್ ಇಂದಿರಾ) ಹಾಗೂ ಡ್ರಗ್ ಸೆಕ್ಸ್ ಸ್ಕ್ಯಾಂಡಲ್ ಕಿಂಗ್ ರಾಕಿ (ಅಭಯ್ ವಶಿಷ್ಠ) ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ರೋಚಕ ಹಂತಕ್ಕೆ ಬಂದು ನಿಲ್ಲುತ್ತದೆ.
ಈ ಕೋ ಆಪರೇಟಿವ್ ಬ್ಯಾಂಕ್ ಸ್ಕ್ಯಾಮ್ ಹಿಂದಿರುವವರು ಯಾರು… ಪೊಲೀಸ್ ಇಲಾಖೆ ಕಾರ್ಯವೈಖರಿ ಏನು… ವರದಿಗಾರ ಕಂಡು ಹಿಡಿಯುವ ಸತ್ಯ ಏನು… ಲಾಯರ್ ಮಾಡುವ ಪ್ಲಾನ್ ಏನು… ಕ್ಲೈಮಾಕ್ಸ್ ಉತ್ತರ ಏನಾಗುತ್ತೆ… ಎಂಬ ಪ್ರಶ್ನೆಗೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಈ ಚಿತ್ರದ ನಿರ್ದೇಶಕ ಮಾಂತೇಶ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆಯುವಂತಿದ್ದು , ಚಿತ್ರಕಥೆ ಕುತೂಹಲದಿಂದ ಕೂಡಿದ್ದು ಇನ್ನಷ್ಟು ಹಿಡಿತ ಮಾಡಬಹುದಿತ್ತು. ಬ್ಯಾಂಕಿಂಗ್ ಸ್ಕ್ಯಾಮ್ ಹಾಗೂ ಅದರ ಹಿಂದಿರುವ ಕಾಣದ ಕೈಗಳ ಕುತಂತ್ರದ ನಡುವೆ ಪೋಲಿಸ್ ಹಾಗೂ ಮೀಡಿಯಾ ಜುಗಳಬಂದಿ , ಪ್ರೀತಿಯ ಸೆಳೆತ ವಿಭಿನ್ನವಾಗಿದೆ. ಮೊದಲ ಪ್ರಯತ್ನದಲ್ಲಿ ತಮ್ಮ ಸಾಮರ್ಥ್ಯವನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಇಂತಹ ವಿಭಿನ್ನ ಚಿತ್ರಕ್ಕೆ ಹಣವನ್ನು ಹಾಕಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ನಾಯಕನಾಗಿ ನಿರಂಜನ್ ಸುಧೀಂದ್ರ ತಮ್ಮ ಪಾತ್ರದಲ್ಲಿ ಜೀವಿಸಿದ್ದು , ಆಕ್ಷನ್ ಹಾಗೂ ಡಾನ್ಸ್ ನಲ್ಲಿ ಸೈ ಎನ್ನುವಂತೆ ಮಿಂಚಿದ್ದಾರೆ.
ಅದೇ ರೀತಿ ನಾಯಕಿಯಾಗಿ ರಚನಾ ಇಂದರ್ ಕೂಡ ಸಿಕ್ಕ ಅವಕಾಶವನ್ನು ಅಚ್ಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ನಟ ಪ್ರೇಮ್ ಕೂಡ ಪೋಲಿಸ್ ಅಧಿಕಾರಿಯಾಗಿ ಖಡಕ್ಕಾಗಿ ಅಭಿನಯಿಸಿದ್ದು , ಎರಡು ಶೇಡ್ ಗಳಲ್ಲಿ ಗಮನ ಸೆಳೆಯುತ್ತಾರೆ. ಇನ್ನು ವಕೀಲರಾಗಿ ಭಾವನ ಮೆನನ್ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರದ ಪ್ರಮುಖ ತಿರುವಿನ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ವಿಲನ್ ಪಾತ್ರದಲ್ಲಿ ಅಭಯ್ ವಶಿಷ್ಠ ವಿಭಿನ್ನ ಗೆಟಪ್ ಮೂಲಕ ಗಮನ ಸೆಳೆಯುತ್ತಾರೆ.

ನಾಯಕನ ಗೆಳೆಯನಾಗಿ ತಂಬ್ ನೇಲ್ ಸುದ್ದಿಗಾರನಾಗಿ ಧರ್ಮಣ್ಣ ಕಡೂರು ಪಾತ್ರದಲ್ಲಿ ಜೀವಿಸಿದ್ದು , ಉಳಿದಂತೆ ರಮೇಶ್ ಇಂದಿರಾ, ಶಂಕರ್ ಅಶ್ವಥ್ ಹಾಗೂ ಉಳಿದ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಈ ಚಿತ್ರದ ಛಾಯಾಗ್ರಹಣ, ಸಂಗೀತ , ಸಂಭಾಷಣೆ ಉತ್ತಮವಾಗಿ ಮೂಡಿಬಂದಿದೆ. ಒಟ್ಟಾರೆ ಭ್ರಷ್ಟಾಚಾರದ ವಿರುದ್ಧ ಜೊತೆ ಮನೋರಂಜನೆಯ ಅಂಶ ಒಳಗೊಂಡಿರುವ ಈ ಚಿತ್ರವನ್ನು ಒಮ್ಮೆ ನೋಡುವಂತಿದೆ.