ಡಿಸೆಂಬರ್ 5 ರಂದು ಬೆಂಗಳೂರಿನಲ್ಲಿ ಯುವನ್ ಶಂಕರ್ ರಾಜಾ ಸಂಗೀತ ಹಬ್ಬ
ಹೊಸ ವರ್ಷದತ್ತ ಹೊರಳಿಕೊಳ್ಳುವ ಕಡೇಯ ಕ್ಷಣಗಳಲ್ಲಿ ಬೆಂಗಳೂರಿನ ಒಡಲು ಮಾಧುರ್ಯದಿಂದ ಮುದಗೊಳ್ಳುವಂಥ ಸಂಗೀತ ಕಾರ್ಯಕ್ರಮಕ್ಕೆ ವೇದಿಕೆ ಸಿದ್ಧಗೊಂಡಿದೆ. ಈಗಾಗಲೇ ಸಾಕಷ್ಟು ಮ್ಯೂಸಿಕ್ ಈವೆಂಟುಗಳ ಮೂಲಕ ಗಮನ ಸೆಳೆದಿರುವ, ಬೆಂಗಳೂರು ಮೂಲದ ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆ U1niverse ಟೂರ್ ಎಂಬ ಪರಿಕಲ್ಪನೆಯಡಿಯಲ್ಲಿ ಬೃಹತ್ ಈವೆಂಟ್ ಒಂದನ್ನು ಹಮ್ಮಿಕೊಂಡಿದೆ.
ಈ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಸಂಗೀತ ನಿರ್ದೇಶಕ, ಗೀತರಚನೆಕಾರ, ಗಾಯಕ ಯುವನ್ ಶಂಕರ್ ರಾಜಾರ ವಿಭಿನ್ನ ಗಾಯನವಿರಲಿದೆ. ಪತ್ರಿಕಾಗೋಷ್ಠಿಯ ಮೂಲಕ ಯುವನ್ ಶಂಕರ್ ರಾಜಾ, ನಾಯ್ಸ್ ಸಂಸ್ಥೆ ಮತ್ತು ಈ ಈವೆಂಟ್ನ ಸಹಭಾಗಿತ್ವ ಹೊಂದಿರುವ ಸುಮನ್ ಟಿವಿ ಕನ್ನಡದ ಮುಖ್ಯಸ್ಥರು ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
ಈ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಯುವನ್ ಶಂಕರ್ ರಾಜಾ 4 ಗಂಟೆಗಳ ಕಾಲ ನಡೆಯಲಿರುವ ನಾಯ್ಸ್ ಎಂಟರ್ಟೈನ್ಮೆಂಟ್ ಮ್ಯೂಸಿಕ್ ಕಾನ್ಸರ್ಟ್ನ ರೂಪುರೇಷೆಗಳನ್ನು ತೆರೆದಿಟ್ಟರು. `ಬೆಂಗಳೂರು ನನ್ನ ಪಾಲಿಗೆ ಪ್ರಿಯವಾದ ಊರು. ಇಲ್ಲಿ ನಡೆಯುತ್ತಿರೋ ಈ ಮ್ಯೂಸಿಕ್ ಕಾನ್ಸರ್ಟ್ನಲ್ಲಿ ಪಾಲ್ಗೊಳ್ಳಲು ಸಂತಸವಾಗುತ್ತಿದೆ. ಈ ಸಂಗೀತ ಕಾರ್ಯಕ್ರಮ ವಿಭಿನ್ನವಾದ ಸಂಗೀತ ಸಂಯೋಜನೆ, ವೇದಿಕೆ, ಗಾಯಕರು, ತಾಂತ್ರಿಕ ವರ್ಗದಿಂದ ಕಳೆಗಟ್ಟಿಕೊಳ್ಳಲಿದೆ’ ಎಂದರು.
ಇನ್ನೂ ಈ ಕಾರ್ಯಕ್ರಮದಲ್ಲಿ ನಾಯ್ಸ್ ಎಂಟರ್ಟೈನ್ಮೆಂಟ್ನ CEO ವಿಕಾಸ್ ಮತ್ತು COO ಅಪರ್ಣಾ ಭಾಗಿಯಾಗಿದ್ದರು.. ಈ ಸಂದರ್ಭದಲ್ಲಿ ಮಾತನಾಡಿದ CFO ಸುರೇಶ್ ಗೌಡ ‘ಇದೊಂದು ಬೆಂಗಳೂರು ಮೂಲದ ಸಂಸ್ಥೆ. ಈಗಾಗಲೇ ನಮ್ಮ ಸಂಸ್ಥೆಯ ಕಡೆಯಿಂದ ವಿಜಯ್ ಪ್ರಕಾಶ್, ಶಾನ್, ರಾಜೇಶ್ ಕೃಷ್ಣನ್ ಮುಂತಾದ ಪ್ರಸಿದ್ಧ ಗಾಯಕರ ಲೈವ್ ಮ್ಯೂಸಿಕ್ ಕಾನ್ಸರ್ಟ್ಗಳನ್ನು ಯಶಸ್ವಿಯಗಿ ನಡೆಸಿದ್ದೇವೆ. ಈ ಕಾರ್ಯಕ್ರಮ ಡಿಸೆಂಬರ್ 5 ರಂದು ಬೆಂಗಳೂರಿನ ನೈಸ್ ಗ್ರೌಂಡ್ನಲ್ಲಿ ನಡೆಯಲಿದೆ. ಹೆಚ್ಚಿನ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ 699/- ರಿಂದ ಟಿಕೆಟ್ ಬೆಲೆ ಆರಂಭವಾಗಲಿದೆ. ಟಿಕೆಟ್ ಮೊತ್ತ 3000/- ದವರೆಗೂ ಇರಲಿದೆ’ ಎಂಬ ಮಾಹಿತಿ ನೀಡಿದರು.
ಸುಮನ್ ಟಿವಿ ಕನ್ನಡದ ಮುಖ್ಯಸ್ಥರಾದ ಯುಗಂಧರ್ ಪೂಲಾ `ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಈ ಮ್ಯೂಸಿಕ್ ಕಾನ್ಸರ್ಟ್ಗೆ ಸುಮನ್ ಟಿವಿ ಕನ್ನಡ ಡಿಜಿಟಲ್ ಪಾರ್ಟ್ನರ್ ಆಗಿ ಸಾಥ್ ಕೊಡಲಿದೆ. ಈ ಕಾರ್ಯಕ್ರಮದ ಮುಖ್ಯ ಸೆಲೆಬ್ರಿಟಿಯಾಗಿ ಯುವನ್ ಶಂಕರ್ ರಾಜಾ ಆಗಮಿಸಲಿದ್ದಾರೆ. ಇನ್ನೂ ಹಲವಾರು ಸೆಲೆಬ್ರಿಟಿಗಳು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸದರಿ ಇವೆಂಟ್ಗೆ ಆಗಮಿಸಲಿರುವ ಅತಿಥಿ ಸೆಲೆಬ್ರಿಟಿಗಳ ಪಟ್ಟಿ ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ’ ಎಂದರು. ನಾಯ್ಸ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಕಡೆಯಿಂದ ಮುಂದಿನ ದಿನಗಳಲ್ಲಿ ಕನ್ನಡ ಹಬ್ಬದಂಥಾ ಈವೆಂಟುಗಳು ಟಿಕೆಟ್ ರಹಿತವಾಗಿಯೂ ನಡೆಯಲಿದೆ ಎಂಬ ಮಾಹಿತಿಯನ್ನು ಸುರೇಶ್ ಗೌಡ ಹಂಚಿಕೊಂಡರು.