“ಅಮರಾವತಿ” ಚಿತ್ರದ ದೂರಿಯಮ್ಮ ವೀಡಿಯೋ ಸಾಂಗ್ ಬಿಡುಗಡೆ
ಈವರೆಗೆ ತೆರೆಗಂಡಿರುವ ಮೂರು ಸಿನಿಮಾಗಳ ಮೂಲಕ ಭಿನ್ನ ಕಥೆಗಳ ಮೂಲಕ ಗೆಲುವು ಕಂಡಿರುವವರು ನಿರ್ದೇಶಕ ಕುಮಾರ್. ಅವರೀಗ ನೆಲಮೂಲದ ಸೂಕ್ಷ್ಮ ಕಥನವೊಂದನ್ನು ಅಪ್ಪಟ ಮನೋರಂಜನಾತ್ಮಕ ಶೈಲಿಯಲ್ಲಿ `ಅಮರಾವತಿ’ ಎಂಬ ಚಿತ್ರದ ಮೂಲಕ ಕಟ್ಟಿ ಕೊಟ್ಟಿದ್ದಾರೆ. ಆರಂಭದಿಂದಲೇ ಶೀರ್ಷಿಕೆಯೂ ಸೇರಿದಂತೆ ನಾನಾ ಕಾರಣದಿಂದ ಗಮನ ಸೆಳೆಯುತ್ತಾ ಬಂದಿದ್ದ ಈ ಚಿತ್ರದ ದೂರಿಯಮ್ಮ ಎಂಬ ಹಾಡೊಂದು ಇದೀಗ ಬಿಡುಗಡೆಗೊಂಡಿದೆ.
ಅತ್ಯಪರೂಪದ ಜಾನಪದ ಗಂಧ ಮೆತ್ತಿಕೊಂಡಂತಿರೋ ಈ ಹಾಡಿನ ಮೂಲಕವೇ ಅಮರಾವತಿಯ ಒಂದಷ್ಟು ಚಿತ್ರಣಗಳು ಪ್ರೇಕ್ಷಕರನ್ನು ತಲುಪಿಕೊಂಡಿವೆ. ಗಾಯಕನಾಗಿ ತಮ್ಮದೇ ಶೈಲಿಯ ಗಾಯನದ ಮೂಲಕ ಹೆಸರಾಗಿದ್ದ ನವೀನ್ ಸಜ್ಜು ಅಮರಾವತಿಯ ನಾಯಕನಾಗಿ ನಟಿಸಿದ್ದಾರೆ. ದೂರಿಯಮ್ಮ ಎಂಬ ಜಾನಪದ ಶೈಲಿಯ ಈ ಹಾಡನ್ನು ಖುದ್ದು ನವೀನ್ ಸಜ್ಜು ಬರೆದು, ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ. ವಿಶೇಷವೆಂದರೆ, ಗ್ರಾಮ್ಯ ಪ್ರತಿಭೆ ಕಿನ್ನರಿ ಜೋಗಿ ಸಿದ್ದಪ್ಪ ಎಂಬವರು ಈ ಹಾಡಿಗೆ ಧ್ವನಿಯಾಗಿದ್ದಾರೆ. ನವೀನ್ ಸಜ್ಜು ಕೂಡಾ ಧ್ವನಿಗೂಡಿಸಿದ್ದಾರೆ. ಕಿನ್ನರಿ ಜೋಗಿ ಸಿದ್ದಪ್ಪರನ್ನು ಸೋಶಿಯಲ್ ಮೀಡಿಯಾ ಮೂಲಕ ಹುಡುಕಿದ್ದ ಚಿತ್ರತಂಡ, ಅವರಿಂದಲೇ ಈ ಹಾಡನ್ನು ಹಾಡಿಸಿದೆ. ಪಿರಿಯಾಪಟ್ಟಣದ ಹಾಡಿ, ಮಡಿಕೇರಿ ಭಾಗದಲ್ಲಿ ಅತ್ಯಂತ ಸಹಜವಾಗಿ ಮೂಡಿ ಬರುವಂತೆ ಈ ಹಾಡನ್ನು ದೃಶ್ಯೀಕರಿಸಲಾಗಿದೆ. ಈ ಮೂಲಕವೇ ಒಟ್ಟಾರೆ ಕಥೆಯ ಝಲಕ್ಕು ತೆರೆದುಕೊಂಡಿದೆ.
ಈ ಹಿಂದೆ ಕೆಮಿಸ್ಟ್ರಿ ಆಫ್ ಕರಿಯಪ್ಪ, ಕ್ರಿಟಿಕಲ್ ಕೀರ್ತನೆಗಳು ಮತ್ತು ಲವ್ ಯೂ ಮುದ್ದು ಎಂಬ ಚಿತ್ರಗಳನ್ನು ನಿರ್ದೇಶನ ಮಾಡಿದ್ದವರು ಕುಮಾರ್. ಅವರು ಅಮರಾವತಿ ಚಿತ್ರದ ಮೂಲಕ ನಿರ್ಮಾಪಕರಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಕಾಮಿಡಿ ಥ್ರಿಲ್ಲರ್ ಜಾನರಿಗೊಳಪಡುವ ಈ ಚಿತ್ರ ಸತ್ಯಘಟನೆಯೊಂದರಿಂದ ಸ್ಫೂರ್ತಿ ಪಡೆದು, ಒಂದೇ ದಿನದಲ್ಲಿ ಘಟಿಸುವ ರೋಚಕ ಕಥೆಯನ್ನೊಳಗೊಂಡಿದೆ ಎಂಬ ವಿಚಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಗ್ರಾಮೀಣ ಬದುಕಿನ ಭೂಮಿಕೆಯಲ್ಲಿ ತೆರೆದುಕೊಳ್ಳುವ ಈ ಕಥನ, ಪರಿಸರ ನಾಶದಂಥಾ ಗಂಭೀರ ವಿಚಾರವನ್ನೂ ಒಳಗೊಂಡಿದೆಯಂತೆ. ಈ ಚಿತ್ರದೊಂದಿಗೆ ನಿರ್ದೇಶಕರಾಗಿ ಕುಮಾರ್ ಭಿನ್ನ ಪಥಕ್ಕೆ ಹೆಜ್ಜೆಯಿರಿಸಿದ್ದಾರೆ.
ಕೇಸರಿ ಫಿಲಂ ಕ್ಯಾಪ್ಚರ್ ಬ್ಯಾನರಿನಡಿಯಲ್ಲಿ ಕುಮಾರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ನವೀನ್ ಸಜ್ಜು ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ, ಗಿರೀಶ್ ಶಿವಣ್ಣ, ಯಶ್ ಶೆಟ್ಟಿ, ಸಮೀಕ್ಷಾ ರಾಮ್, ಗೌರಿ ಶೈವ, ಸುಮಂತ್, ವಿಶ್ವ ವಿಜೇತ ಮುಂತಾದವರ ತಾರಾಗಣವಿದೆ. ನವೀನ್ ಚಲ್ಲ ಛಾಯಾಗ್ರಹಣ, ವೆಂಕಿ ಯುಡಿವಿ ಮತ್ತು ದೀಪು ಸಿ.ಎಸ್ ಸಂಕಲನ, ಪುರುಷೋತ್ತಮ್ ಕಲಾ ನಿರ್ದೇಶನ, ನವೀನ್ ಸಜ್ಜು ಮತ್ತು ಆಕಾಶ್ ಪರ್ವ ಸಂಗೀತ ನಿರ್ದೇಶನವಿರುವ ಈ ಚಿತ್ರದ ಬಿಡುಗಡೆ ದಿನಾಂಕ ಶೀಘ್ರದಲ್ಲಿಯೇ ಜಾಹೀರಾಗಲಿದೆ.