ಬದುಕಿನ ಪಾಠಕ್ಕೆ ದೋಸ್ತಿಯ ಬಲ… “ಚಂದ್ರಹಾಸ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5

ಚಿತ್ರ : ಚಂದ್ರಹಾಸ
ನಿರ್ದೇಶಕ : ಆನಂದ್ ಕಲಕಬಂಡಿ
ನಿರ್ಮಾಪಕ : ಬಸವಂತ ಗೌಡ ಪಟೀಲ್
ಸಂಗೀತ : ಪೂರ್ಣಚಂದ್ರ ಛಾಯಾಗ್ರಹಣ : ಚೇತನ್ ಶರ್ಮಾ
ತಾರಾಗಣ : ಹರೀಶ್ ಹಿರಿಯೂರು, ಛಾಯಾಶ್ರೀ , ಉಮೇಶ್, ನಿಂಗರಾಜು ಮಂಡ್ಯ, ಸಂತೋಷ್ ಕೆರಿ, ಸೂರ್ಯಕಲ, ಜ್ಯೋತಿ ಮಂಗಳೂರು , ಕಳಕಪ್ಪ ತಲವಾರ್ ಹಾಗೂ ಮುಂತಾದವರು…

ಈ ಭೂಮಿಯ ಮೇಲೆ ಜೀವನ ನಡೆಸುವ ಪ್ರತಿಯೊಬ್ಬ ಮನುಷ್ಯನಿಗೂ ಸಮಯ , ಸಂದರ್ಭವೇ ಪಾಠವನ್ನ ಕಳಿಸುತ್ತಾ ಸಾಗುತ್ತದೆ. ಆದರೆ ಅದನ್ನು ಎದುರಿಸಿ ನಿಭಾಯಿಸುವ ಶಕ್ತಿ , ಧೈರ್ಯ , ವಿಶ್ವಾಸ , ಇದ್ದವರಿಗೆ ಮಾತ್ರ ದಾರಿ ಸಿಗಲು ಸಾಧ್ಯ , ಅಂತದ್ದೇ ಅಸಡ್ಡೆ ಹುಡುಗನೊಬ್ಬನ ಬದುಕಿನಲ್ಲಿ ಎದುರಾಗುವ ಗೆಳೆತನದ ಒಡನಾಟ , ಪ್ರೀತಿಯ ಸೆಳೆತ , ವೈವಾಹಿಕ ಜೀವನ , ಸಂಬಂಧಗಳ ಮೌಲ್ಯ , ಕಾಮಿಡಿ, ಎಮೋಷನ್, ಮಧ್ಯಮ ವರ್ಗದವರ ಜೀವನದ ಜಂಜಾಟ ಎಲ್ಲವೂ ಒಳಗೊಂಡಿರುವಂತಹ ಕೌಟುಂಬಿಕ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ಚಂದ್ರಹಾಸ.

ತಾಯಿ ಅಕ್ಕನ ಆಸರೆಯಲ್ಲಿ ಕೆಲಸ , ಕಾರ್ಯವಿಲ್ಲದೆ ತನ್ನಿಷ್ಟದಂತೆ ಓಡಾಡಿಕೊಂಡು ಕಾಲ ಕಳೆಯುವ ಸೋಮಶೇಖರ ( ಹರೀಶ್ ಹಿರಿಯೂರು)ನಿಗೆ ಹೋಟೆಲ್ ನಡೆಸುವ ಗೆಳೆಯ ಚಂದ್ರ (ನಿಂಗರಾಜು ಮಂಡ್ಯ) ಸಾತ್. ಇನ್ನು ಅತ್ತೆ ಮಗಳು ಶ್ರೀದೇವಿ (ಛಾಯಾಶ್ರೀ) ಆಸೆಯಂತೆ ಮಾವ ಸೋಮನನ್ನ ಮದುವೆಯಾಗುತ್ತಾಳೆ.

ದುಡಿಮೆ ಇಲ್ಲದಿದ್ದರೂ ಮಾತು ಪ್ರೀತಿಯಲ್ಲಿ ಜೀವನ ಸಾಗಿಸಿ ಅಪ್ಪನಾಗುವ ಸೋಮ ಬದುಕಿಗಾಗಿ ಮೊಬೈಲ್ ವಸ್ತುಗಳನ್ನ ಮಾರುವ ಕೆಲಸ ಮಾಡಿದರೂ ನೆಮ್ಮದಿ ಇರುವುದಿಲ್ಲ , ಹಣ ಸಂಪಾದನೆ ಮಾಡುವುದಕ್ಕಾಗಿ ಗೆಳೆಯ ಸಂತು (ಸಂತೋಷ್ ಕೇರಿ) ಜೊತೆ ಸೇರಿ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಇಳಿಯುತ್ತಾನೆ. ಇದರ ನಡುವೆ ಗೆಳೆಯ ಚಂದ್ರ ಹೇಳುವ ಉತ್ತಮ ಮಾರ್ಗವು ಅನುಸರಿಸದೇ ಸಾಗುವ ಸೋಮನ ಬದುಕಲ್ಲಿ ಎದುರಾಗುವ ಘಟನೆಗಳು ಅವನ ದಿಕ್ಕನ್ನೇ ಬದಲಿಸುತ್ತಾ ಹೋಗುತ್ತದೆ.

ಸೋಮನ ಸ್ಥಿತಿ ಗತಿ ಏನು.. ಕುಟುಂಬದ ಬದುಕು ಏನಾಗುತ್ತೆ…
ಬೆಟ್ಟಿಂಗ್ ಸುಳಿಯ ರಹಸ್ಯ ಏನು… ಕ್ಲೈಮಾಕ್ಸ್ ನೀಡುವ ಉತ್ತರ ಯಾವುದು ಎಂಬ ವಿಚಾರವನ್ನು ತಿಳಿದುಕೊಳ್ಳಲು ಒಮ್ಮೆ ಈ ಚಿತ್ರವನ್ನು ನೋಡಬೇಕು.

ಬದುಕಿನಲ್ಲಿ ಜವಾಬ್ದಾರಿ ಎಷ್ಟು ಮುಖ್ಯ ಎಂಬುದನ್ನು ನಿರ್ದೇಶಕ ಬಹಳ ಅಚ್ಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಕಥೆಯಲ್ಲಿ ಗಮನ ಸೆಳೆಯುವ ಅಂಶವಿದ್ದು , ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು. ಕೌಟುಂಬಿಕ ಅರ್ಥಪೂರ್ಣ ಸಂದೇಶ ಇರುವ ಈ ಚಿತ್ರದ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಚಿತ್ರದ ಸಾಹಿತ್ಯ ಹಾಗೂ ಸಂಗೀತ ಅರ್ಥಪೂರ್ಣವಾಗಿ ಸಾಗುತ್ತದೆ. ಸಂಕಲನ ಸೇರಿದಂತೆ ಛಾಯಾಗ್ರಾಹಗಳ ಕೈಚಳಕ ಉತ್ತಮವಾಗಿದೆ. ಇನ್ನು ರಂಗಭೂಮಿ ಪ್ರತಿಭೆ , ಕಾಮಿಡಿ ಕಿಲಾಡಿಯ ನಟ ಹರೀಶ್ ಹಿರಿಯೂರು ನಾಯಕನಾಗಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಇಡೀ ಚಿತ್ರದ ಕೇಂದ್ರ ಬಿಂದುವಾಗಿ ಅಪ್ರಯೋಜಕ ಪಾತ್ರದೊಂದಿಗೆ ಸಂಸಾರದ ಜಂಜಾಟದ ನಡುವೆ ಪ್ರಾಮಾಣಿಕ ವ್ಯಕ್ತಿಯಾಗಿ ನಿಲ್ಲುವ ಹಾದಿಯಲ್ಲಿ ಎಲ್ಲರ ಮನಸನ್ನು ಸೆಳೆಯುತ್ತಾರೆ.

ನಾಯಕಿಯಾಗಿ ಛಾಯಾಶ್ರೀ ಕೂಡ ಪ್ರಥಮ ಚಿತ್ರದಲ್ಲಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಗೆಳೆಯನ ಪಾತ್ರಧಾರಿ ನಿಂಗರಾಜು ಮಂಡ್ಯ ಪ್ರಮುಖ ಪಾತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಅದೇ ರೀತಿ ಸಂತೋಷ ಕೇರಿ ಕೂಡ ಉತ್ತಮವಾಗಿ ಅಭಿನಯಿಸಿದ್ದು , ತಾಯಿಯ ಪಾತ್ರಧಾರಿ ಹಾಗೂ ಅಕ್ಕನ ಪಾತ್ರವೂ ಕೂಡ ಚಿತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆ ಎಲ್ಲರೂ ನೋಡುವಂತಹ ಸಂಸಾರಿಕ ಚಿತ್ರ ಇದಾಗಿದೆ.

Visited 1 times, 1 visit(s) today
error: Content is protected !!