ಕರ್ನಾಟಕದಲ್ಲಿ ‘ರಾಮಾಯಣ’ ಚಿತ್ರದ ಮುಂಜಾನೆ ಪ್ರದರ್ಶನಗಳ ಟಿಕೆಟ್ ಬುಕ್ಕಿಂಗ್ ಆರಂಭ
ನವೆಂಬರ್ 5ರಂದು ವಿಶ್ವದಾದ್ಯಂತ ತೆರೆಗೆ. ಕರ್ನಾಟಕದಲ್ಲಿ ವಿತರಣೆಯ ಹೊಣೆ ಹೊತ್ತ ಯಶ್ ಅವರ ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್. ಭಾರತೀಯ ಮಹಾಕಾವ್ಯ ರಾಮಾಯಣವನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಬೆಳ್ಳಿತೆರೆಗೆ ತರುತ್ತಿರುವ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರ ನವೆಂಬರ್ 5, 2026ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.
ನಮಿತ್ ಮಲ್ಹೋತ್ರಾ ನಿರ್ಮಾಣದ, ನಿತೇಶ್ ತಿವಾರಿ ನಿರ್ದೇಶನದ ಈ ಚಿತ್ರವು ಭವ್ಯ ದೃಶ್ಯ ವೈಭವ ಹಾಗೂ ಅತ್ಯಾಧುನಿಕ ವಿಎಫ್‌ಎಕ್ಸ್ ತಂತ್ರಜ್ಞಾನದೊಂದಿಗೆ ಮೂಡಿಬಂದಿದೆ. 3D ಸೇರಿದಂತೆ ವಿವಿಧ ಪ್ರೀಮಿಯಂ ಸ್ವರೂಪಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ.
*ಕರ್ನಾಟಕದಲ್ಲಿ ಮುಂಜಾನೆ ಪ್ರದರ್ಶನಗಳ ಟಿಕೆಟ್ ಬುಕ್ಕಿಂಗ್ ಅಕ್ಟೋಬರ್ 28ರಂದು ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ* . ಚಿತ್ರದ ಬಿಡುಗಡೆಗೆ ಮುನ್ನವೇ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿದ್ದು, ಮಹಾಕಾವ್ಯವನ್ನು ದೊಡ್ಡ ಪರದೆಯಲ್ಲಿ ವೀಕ್ಷಿಸಲು ಅಭಿಮಾನಿಗಳು ಕಾತರರಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರು ‘ರಾಮಾಯಣ’ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಅಭಿನಯಿಸುವುದರ ಜೊತೆಗೆ, ಚಿತ್ರದ ನಿರ್ಮಾಣದಲ್ಲಿಯೂ ಪಾಲುದಾರರಾಗಿದ್ದಾರೆ. ಇದೀಗ ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಸಂಸ್ಥೆಯ ವಿತರಣಾ ವಿಭಾಗವು ಕರ್ನಾಟಕದಲ್ಲಿ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.