ನ್ಯಾಯ , ನೀತಿ , ಧರ್ಮಕ್ಕೆ ಕಾಣುವ ಕನ್ನಡಿ… “ಕಾಮನ್ ಮ್ಯಾನ್” (ಚಿತ್ರವಿಮರ್ಶೆ -ರೇಟಿಂಗ್ : 3/5)

Spread the love

ರೇಟಿಂಗ್ : 3/5

ಚಿತ್ರ : ಕಾಮನ್ ಮ್ಯಾನ್
ನಿರ್ದೇಶಕ : ಓಂ ಸಾಯಿ ಪ್ರಕಾಶ್
ನಿರ್ಮಾಪಕ : ಎನ್. ನರಸಿಂಹಮೂರ್ತಿ
ಸಂಗೀತ : ವಿನಯ ಚಂದ್ರ
ಛಾಯಾಗ್ರಹಣ : ಜೆ‌.ಜಿ. ಕೃಷ್ಣ, ದೀಪಕ್ ಕುಮಾರ್
ತಾರಾಗಣ : ಗೌರಿಶಂಕರ್, ಸೋನಾ ಲದ್ವಾ , ಸಬ್ಬಿ ಸೂರಿ , ಬಲ ರಾಜ್ವಾಡಿ , ನರಸಿಂಹ ಮೂರ್ತಿ, ಹಿರಿಯ ನಟ ಅಶೋಕ್, ರಮೇಶ್ ಭಟ್, ಪಿ . ಡಿ.ಸತೀಶ್, ಪ್ರಕಾಶ್ ತುಮ್ಮಿನಾಡು ಹಾಗೂ ಮುಂತಾದವರು…

ಖಾದಿ , ಖಾಕಿ , ಕಾವಿ, ಕಾನೂನಿನ ನಡುವೆ ಈ
ಸಮಾಜದಲ್ಲಿ ಬದುಕು ನಡೆಸುವುದು ಹೇಗೆ ಎಂಬುದೇ ಒಂದು ಮುಖ್ಯ ಪ್ರಶ್ನೆಯಾಗಿದೆ ಎನ್ನಬಹುದು. ಯಾಕೆಂದರೆ
ಊಟ , ಬಟ್ಟೆ , ವಿದ್ಯೆ , ಆರೋಗ್ಯ , ನೆಲೆ ಸೇರಿದಂತೆ
ಮೂಲ ಸೌಲಭ್ಯದ ಕೊರತೆಯಲ್ಲಿ ಸಿಲುಕಿ ಪರದಾಡುತ್ತಿರುವಂತಹ ಬಹಳಷ್ಟು ಜನರು ಇದ್ದಾರೆ.
ಇಂಥದ್ದೇ ವಿಚಾರವನ್ನು ಇಟ್ಟುಕೊಂಡು ನ್ಯಾಯ ನೀತಿ ಎಂದು ಹೋರಾಡುವವರ ಪರಿಸ್ಥಿತಿ ಏನು , ರಾಜಕೀಯದ ಚದುರಂಗದ ಸಂಚು , ಕಾನೂನು ಸಮರ ಹೇಗೆ ಎಂಬ ಇನ್ನಷ್ಟು ವಿಚಾರಗಳ ಜೊತೆಗೆ ತಂದೆ ಮಗನ ಬಾಂಧವ್ಯ , ಗೆಳೆತನ , ಪ್ರೀತಿ , ದ್ವೇಷ , ಪಿತೂರಿಯ ನಡುವೆ ಜನರಲ್ಲಿ ಜಾಗೃತಿ ಮೂಡಿಸುವ ಸಂದೇಶದ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕಾಮನ್ ಮ್ಯಾನ್”. ತನ್ನ ಬುದ್ಧಿವಂತಿಕೆಯ ಮಾತಿನಿಂದ ಎದುರಾಳಿಗೆ ಟಕ್ಕರ್ ಕೊಟ್ಟು ವಾದ-ವಿವಾದದ ಮೂಲಕ ಕೋರ್ಟ್ ಅಂಗಳದಲ್ಲಿ ಕೇಸ್ ಗೆಲ್ಲುವ ಖ್ಯಾತ ಲಾಯರ್ ಕುಮಾರ್ ಕಂಸಾಳೆ ( ಗೌರಿ ಶಂಕರ್). ಈ ವೃತ್ತಿಗೆ ಬರಲು ಕಾರಣದ ಹಿಂದೆ ತಂದೆ (ಬಲ ರಾಜ್ವಾಡಿ) ಹಾಗೂ ಮಗ (ಕುಮಾರ್) ನ ಒಂದು ಫ್ಲಾಶ್ ಬ್ಯಾಕ್ ಕಥೆ ಅಡಗಿರುತ್ತದೆ.

ಇನ್ನೂ ಲಾಯರ್ ಕುಮಾರ್ ಕಂಸಾಳೆ ಒಬ್ಬ ಡಾಕ್ಟರ್ ವಿರುದ್ಧ ತನ್ನ ಆರೋಗ್ಯದ ವಿಚಾರವಾಗಿ ಕೇಸನ್ನ ಹಾಕಿ ಗೆಲ್ಲುವ ಹಂತಕ್ಕೆ ಹೋಗುತ್ತಾನೆ. ಇದೇ ಸಮಯಕ್ಕೆ ಡಾಕ್ಟರ್ ಪುತ್ರಿ ಪೂಜಾ (ಸೋನಾ ಲದ್ವಾ) ಎಂಟ್ರಿ ಆಗಿ ತಂದೆಯನ್ನ ರಕ್ಷಿಸಲು ಲಾಯರ್ ಕುಮಾರ್ ಹೇಳಿದಂತೆ ಅವನ ಡಯಟ್ರೀಷನ್ ಸೇವೆ ಮಾಡಲು ಒಪ್ಪುತ್ತಾಳೆ.

ಸ್ನೇಹ , ಸಲುಗೆ ಪ್ರೀತಿಯ ಕಡೆ ವಾಲುತ್ತದೆ. ಇನ್ನೂ ರಾಜ್ಯದ ಮುಖ್ಯಮಂತ್ರಿ ಸದಾಶಿವ ರಾವ್ (ನರಸಿಂಹಮೂರ್ತಿ) ತನ್ನ ಕ್ಯಾಬಿನೆಟ್ ಸಚಿವರ ಜೊತೆಗೂಡಿ ಅವರವರ ಅನುಕೂಲಕ್ಕೆ ತಕ್ಕಂತೆ ರಾಜ್ಯಭಾರ ಮಾಡುತ್ತಿರುತ್ತಾರೆ. ಒಮ್ಮೆ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವಿನ ಮಾತಿನ ಸಮರದ ನಡುವೆ ಸರ್ಕಾರದ ಆಸ್ತಿ ಪ್ರಜೆಗಳ ಆಸ್ತಿ ಎಂಬ ಮಾತು ಲಾಯರ್ ಕುಮಾರ್ ಕಂಸಾಳೆಯ ಮನಸ್ಸಿನಲ್ಲಿ ಹೊಸ ಸಂಚಲನ ಮೂಡಿಸುತ್ತದೆ.

ಮುಂದೆ ವಿಧಾನಸೌಧ ನನ್ನ ಸ್ವತ್ತು ನನ್ನ ಭಾಗದ ಆಸ್ತಿಯನ್ನು ಕೊಡಿ ಎಂದು ಕೋರ್ಟ್ ಮೊರೆ ಹೋಗುತ್ತಾನೆ. ಇದು ತಾರಕಕ್ಕೇರಿ ಸರ್ಕಾರಕ್ಕೆ ಗಡಿಬಿಡಿ ಉಂಟು ಮಾಡುತ್ತದೆ. ಇದೇ ಸಮಯಕ್ಕೆ ಸ್ವಾಮೀಜಿಯ ಮಾತಿನಂತೆ ಸಿಎಂ ತನ್ನ ಸ್ಥಾನವನ್ನ ಕಾಮನ್ ಮ್ಯಾನ್ ಲಾಯರ್ ಕುಮಾರ್ ಕಂಸಾಳೆಗೆ ಅಧಿಕಾರ ನೀಡುತ್ತಾರೆ. ಅವಕಾಶ , ಅದೃಷ್ಟ ಒಲಿದು ಬಂದಾಗ ಎಲ್ಲವೂ ಅಯೋಮಯವಾಗುತ್ತದೆ.

ಹಾಗೆಯೇ ಲಾಯರ್ ಕುಮಾರ್ ಅಧಿಕಾರ ಸ್ವೀಕರಿಸುವಾಗಲೇ ವಿದ್ಯೆ ಹಾಗೂ ಆರೋಗ್ಯ ಉಚಿತವಾಗಿ ಸಿಗಬೇಕೆಂಬ ಉದ್ದೇಶ ಹೊಂದಿರುತ್ತಾರೆ. ಇದರ ನಡುವೆ ಒಂದಷ್ಟು ಸಮಸ್ಯೆಗಳು ಎದುರಾಗಿ ರಾಜಕೀಯ ನಾಯಕರ ಷಡ್ಯಂತರ ಬೇರೆದೇ ತಿರುವನ್ನ ನೀಡುತ್ತದೆ. ಮುಂದೆ ಈ ಕಾಮನ್ ಮ್ಯಾನ್ ಏನೆಲ್ಲ ಸಮಸ್ಯೆ ಎದುರಿಸುತ್ತಾನೆ… ಜನರ ಸೇವೆ ಮಾಡುತ್ತಾನ… ರಾಜಕೀಯ ಬಿಟ್ಟು ಹೋಗುತ್ತಾನ… ತನ್ನ ಪ್ರೀತಿ ಪಡೆಯುತ್ತಾನ… ಇಂತಹ ಹಲವು ಪ್ರಶ್ನೆಗೆ ಉತ್ತರಕ್ಕಾಗಿ ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಓಂ ಸಾಯಿ ಪ್ರಕಾಶ್ ಎಂದೆನಂತೆ ತಮ್ಮ ಚಿತ್ರದಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಸಂದೇಶದ ಜೊತೆಗೆ ಮಾಸ್, ಆಕ್ಷನ್, ಲವ್ ಕಂಟೆಂಟ್ ಗಳನ್ನು ಬೆಸೆದುಕೊಂಡು ಉತ್ತಮವಾಗಿ ತೆರೆಯ ಮೇಲೆ ತರಲು ಸರ್ವ ಪ್ರಯತ್ನ ಮಾಡಿದ್ದಾರೆ. ಈ ಹಿಂದೆ ಇಂತಹ ಚಿತ್ರಗಳು ಬಂದಿದ್ದು , ಕಥೆಗೆ ಇನ್ನಷ್ಟು ಬಲಿಷ್ಠವಾದ ಪಾತ್ರದಾರಿಗಳು ಇದ್ದಿದ್ದರೆ ಗಮನ ಸೆಳೆಯುವಂತಿತ್ತು. ಇನ್ನು ಈ ಚಿತ್ರದ ನಿರ್ಮಾಪಕ ನರಸಿಂಹಮೂರ್ತಿ ತಮ್ಮದೇ ಕಥೆಗೆ ಹಣವನ್ನು ಹಾಕಿದ್ದು , ಈ ಚಿತ್ರದಲ್ಲಿ ಸಿಎಂ ಪಾತ್ರಧಾರಿಯಾಗಿ ತಮ್ಮ ನಟನ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ.

ಇನ್ನು ನಾಯಕಿಯಾಗಿ ಪರಭಾಷಾ ನಟಿ ಸೋನಾ ಲದ್ವಾ ಸಿಕ್ಕ ಪಾತ್ರಕ್ಕೆ ನ್ಯಾಯವನ್ನು ಒದಗಿಸಲು ಶ್ರಮ ಪಟ್ಟಿದ್ದಾರೆ. ಇನ್ನು ವಿಶೇಷವಾಗಿ ಹಿರಿಯ ನಟರಾದ ರಮೇಶ್ ಭಟ್ ಜಡ್ಜ್ ಪಾತ್ರದಲ್ಲಿ ಕಳಿಸಿಕೊಂಡಿದ್ದು , ರಾಜ್ಯಪಾಲರ ಪಾತ್ರದಲ್ಲಿ ಹಿರಿಯ ನಟ ಅಶೋಕ್ ಅಭಿನಯಿಸಿದ್ದಾರೆ. ಉಳಿದಂತೆ ಪ್ರಕಾಶ್ ತುಮ್ಮಿ ನಾಡು, ಸಬ್ಬಿ ಸೂರಿ , ಬಲ ರಾಜ್ವಾಡಿ , ಪಿಡಿ ಸತೀಶ್ ಚಂದ್ರ , ಮುನಿ , ನಾಗೇಂದ್ರ ಅರಸ್ , ಗಣೇಶ ರಾವ್ , ಸೇರಿದಂತೆ ಹಲವಾರು ಚಿತ್ರಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಇನ್ನು ವಿನಯ್ ಚಂದ್ರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಉತ್ತಮವಾಗಿದ್ದು , ಜೆ. ಜೆ. ಕೃಷ್ಣ ಹಾಗೂ ದೀಪಕ್ ಕುಮಾರ್ ಛಾಯಾಗ್ರಾಹಣ ಹಾಗೂ ಥ್ರಿಲ್ಲರ್ ಮಂಜು ಸಾಹಸ ಸನ್ನಿವೇಶಗಳು ಉತ್ತಮವಾಗಿದೆ. ಒಟ್ಟಾರೆ ಒಂದು ಮಾಸ್ ಹಾಗೂ ಸಂದೇಶವಿರುವ ಚಿತ್ರವಾಗಿದ್ದು ಎಲ್ಲರೂ ಒಮ್ಮೆ ನೋಡಬಹುದು.

Visited 1 times, 1 visit(s) today
error: Content is protected !!