Cinisuddi Fresh Cini News 

ಶಿವಣ್ಣನ ಹೊಸ ಚಿತ್ರಕ್ಕೆ ರಾಮ್ ಧುಲಿಪುಡಿ ಆಕ್ಷನ್ ಕಟ್

ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಡಾ. ಶಿವರಾಜ್ ಕುಮಾರ್ ಅಭಿನಯದ ಮತ್ತೊಂದು ಸಿನಿಮಾ ಆರಂಭಗೊಳ್ಳುತ್ತಿದೆ. ಬರುವ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರುವಾಗಲಿರುವ ಈ ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಸದ್ಯಕ್ಕೆ ಪದ್ಮಭೂಷಣ ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ದಿನದಂದು ಸಿನಿಮಾ ಅಧಿಕೃತವಾಗಿ ಘೋಷಣೆಯಾಗುತ್ತಿದೆ.

ತೆಲುಗಿನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ, ಚಿತ್ರಕಥೆ, ಸಂಭಾಷಣೆ ಬರಹಗಾರರಾಗಿ ಸಾಕಷ್ಟು ಹೆಸರು ಮಾಡಿರುವ ರಾಮ್ ಧುಲಿಪುಡಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರವಿದು. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಯೋಧನ ಪಾತ್ರವನ್ನು ನಿರ್ವಹಿಸಲಿದ್ದಾರೆ.

ಭಾವನಾತ್ಮಕ ವಿಚಾರಗಳೊಂದಿಗೆ ಪ್ರೀತಿಯನ್ನು ಎತ್ತಿಹಿಡಿಯುವ ಕಥಾಹಂದರ ಇದರಲ್ಲಿದೆ. ಆರಂಭದಲ್ಲಿ ಶಿವರಾಜ್ ಕುಮಾರ್ ಅವರಿಗೆ ರಾಮ್ ಧುಲಿಪುಡಿ ಕಥೆಯ ಸಣ್ಣ ಎಳೆಯನ್ನು ಹೇಳಿದ್ದರಂತೆ. ಕಥಾವಸ್ತುವನ್ನು ಅಪಾರವಾಗಿ ಇಷ್ಟಪಟ್ಟ ಶಿವಣ್ಣ ಪೂರ್ತಿ ಕೇಳಿ, ತಕ್ಷಣವೇ ಒಪ್ಪಿಗೆ ಸೂಚಿಸಿದ್ದರು.

ಹೀಗೆ ಆರಂಭವಾದ ಸಿನಿಮಾದ ಕೆಲಸ ಈಗ ಪರಿಪಕ್ವವಾದ ರೂಪುರೇಷೆಯನ್ನು ಸಿದ್ದಪಡಿಸಿಕೊಂಡಿದೆ. ಅದರಂತೆ ಶಿವಮೊಗ್ಗ, ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ದೇಶದ ಹಲವಾರು ಕಡೆ ಚಿತ್ರೀಕರಣಗೊಳ್ಳಲಿದೆ. ಶ್ರೀಚರಣ್ ಪಕಲ ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಕನ್ನಡದ ಖ್ಯಾತ ಛಾಯಾಗ್ರಾಹಕ ರವಿಕುಮಾರ್ ಸನಾ ಛಾಯಾಗ್ರಹಣ ಇರುವ ಈ ಚಿತ್ರವನ್ನು ಬಾಲಶ್ರೀರಾಂ ಸ್ಟುಡಿಯೋಸ್ ಲಾಂಛನದಲ್ಲಿ ಸ್ವಾತಿ ವನಪಲ್ಲಿ, ಶ್ರೀಕಾಂತ್ ಧುಲಿಪುಡಿ ಮತ್ತು ನರಲ ಶ್ರೀನಿವಾಸ ರೆಡ್ಡಿ ಸೇರಿ ನಿರ್ಮಿಸುತ್ತಿದ್ದಾರೆ. ಕುಡಿಪುಡಿ ವಿಜಯ್ ಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ.

ಸೆಪ್ಟೆಂಬರ್ ತಿಂಗಳಲ್ಲಿ ಆರಂಭಗೊಂಡು ಐವತ್ತೈದು ದಿನಗಳ ಕಾಲ ಚಿತ್ರೀಕರಣಗೊಳ್ಳಲಿರುವ ಈ ನೂತನ ಚಿತ್ರಕ್ಕೆ ಉಳಿದ ಕಲಾವಿದರ ಆಯ್ಕೆ ನಡೆಯುತ್ತಿದೆ. ಶೀರ್ಷಿಕೆ ಸೇರಿದಂತೆ ಇನ್ನೂ ಹೆಚ್ಚಿನ ಮಾಹಿತಿ ಸದ್ಯದಲ್ಲೇ ಹೊರಬರಲಿದೆ.

Related posts