ದುಷ್ಟರ ಹಟ್ಟಹಾಸಕ್ಕೆ ರೌದ್ರಾವತಾರ ದರ್ಶನ… “ರುದ್ರಾಭಿಷೇಕಂ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5

ಚಿತ್ರ : ರುದ್ರಾಭಿಷೇಕಂ
ನಿರ್ದೇಶಕ : ವಸಂತ ಕುಮಾರ್ ಕಂಪ್ಲಿ
ನಿರ್ಮಾಪಕರು : ನಾರಾಯಣಪ್ಪ , ಕೃಷ್ಣಪ್ಪ , ನಾರಾಯಣಸ್ವಾಮಿ
ಸಂಗೀತ : ವಿ ಮನೋಹರ್
ಛಾಯಾಗ್ರಹಣ : ಮುತ್ತುರಾಜ್
ತಾರಾಗಣ : ವಿಜಯ್ ರಾಘವೇಂದ್ರ , ಪ್ರಿಯಾಂಕಾ ತಿಮ್ಮೇಶ್ , ಬಾಲ ರಾಜ್ವಾಡಿ , ವಿ.ಮನೋಹರ್, ವಸಂತ್ ಕುಮಾರ್ , ಮನು ಹಾಗೂ ಮುಂತಾದವರು…

ಕಾಲಾನುಕಾಲಕ್ಕೂ ದುಷ್ಟರ ಅಟ್ಟಹಾಸಕ್ಕೆ ತಕ್ಕ ಪಾಠವನ್ನು ಕಲಿಸಲು ಶಿಷ್ಟರು ಬಂದೇ ಬರ್ತಾರೆ. ಅದೇ ರೀತಿ ನೆಮ್ಮದಿಯಾದ ಊರಿನಲ್ಲಿ ಕೀಚಕರು , ದುರುಳರ ಹಾವಳಿಯಿಂದ ಜನರು ಅನುಭವಿಸುವ ನೋವು , ಸಂಕಷ್ಟಕ್ಕೆ ವೀರಭದ್ರನ ಅವತಾರವಾಗಿ ಬರುವ ವ್ಯಕ್ತಿಯ ಸುತ್ತ ಬೆಸೆದುಕೊಂಡಿರುವ ಕುತೂಹಲ ಕಥಾನಕವಾಗಿ ದೈವದ ಅನುಗ್ರಹದ ರೂಪದಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರುದ್ರಾಭಿಷೇಕಂ”.

ಇನ್ನು ವೀರಭದ್ರಸ್ವಾಮಿಯನ್ನು ಆರಾಧಿಸುವ ವೀರಗಾಸೆ ಕುಣಿತ ಸೇವೆಯನ್ನು ನಿರಂತರವಾಗಿ ನಡೆದುಕೊಂಡು ಬರುವ ಬಸಯ್ಯ (ವಿಜಯ್ ರಾಘವೇಂದ್ರ) ಊರಿನ ಮುಖಂಡ ಬೈರೇಗೌಡ (ಬಲ ರಾಜ್ವಾಡಿ) ಯ ಮೋಸದ ಜಾಲಕ್ಕೆ ಬಲಿಯಾಗುತ್ತಾನೆ. ಇನ್ನು
ಗರ್ಭಿಣಿಯಾಗಿದ್ದ ಆತನ ಪತ್ನಿ ಶಿವಗಂಗಾ ಗಂಡು ಮಗುವಿಗೆ ಜನ್ಮ ನೀಡಿ ಪ್ರಾಣ ಬಿಡುತ್ತಾಳೆ.

ಯಾರು ಇಲ್ಲದೆ ಅನಾಥವಾದ ಮಗುವಿಗೆ ಅಜ್ಜಿಯ ಆಸರೆಯಲ್ಲೇ ಬೆಳೆಯುತ್ತಾನೆ. ಮುಂದೆ ವೀರಭದ್ರ ಊರಿನಲ್ಲಿ ಜನರ ಪ್ರೀತಿ , ವಿಶ್ವಾಸವನ್ನ ಪಡೆದು ಎಲ್ಲರಿಗೂ ಪ್ರೀತಿ ಪಾತ್ರನಾಗಿರುತ್ತಾನೆ. ಇದರ ನಡುವೆ ಮನೆಯಲ್ಲೇ ಇದ್ದ ಅತ್ತೆಯ ಮಗಳು ಪೂರ್ವಿ (ಪ್ರಿಯಾಂಕ ತಿಮ್ಮೇಶ್)ಗೆ ವೀರಭದ್ರನ ಮೇಲೆ ಪ್ರೀತಿ ಮೂಡುತ್ತದೆ. ಅದೇ ರೀತಿ ವೀರಭದ್ರನಿಗೂ ಪೂರ್ವಿ ಎಂದರೆ ಅಷ್ಟೇ ಇಷ್ಟ.

ಊರಿನ ಮುಖಂಡ ಬೈರೇಗೌಡನ ಮಗನಾದ ಬೆಂಕಿ ಪುಂಡ ಸ್ನೇಹಿತರ ಜತೆ ಸೇರಿ ಊರ ಹೆಣ್ಣುಮಕ್ಕಳಿಗೆ ಕ್ವಾಟ್ಲೆ ನೀಡುವುದೇ ನಿತ್ಯ ಕಾಯಕವಾಗಿರುತ್ತೆ. ಈತನ ದುಷ್ಟತನಕ್ಕೆ ಪವಿತ್ರ ಎಂಬ ಮುಗ್ಧ ಯುವತಿ ಕೂಡ ಬಲಿಯಾಗುತ್ತಾಳೆ, ಅಲ್ಲದೆ ಈ ದುರುಳರ ಕಣ್ಣು ವೀರಭದ್ರನ ಮನೆಯಲ್ಲಿದ್ದ ಪೂರ್ವಿಯ ಮೇಲೆ ಬೀಳುತ್ತದೆ. ಮುಂದೆ ಒಂದು ಅನಿರೀಕ್ಷಿತ ಘಟನೆ ನಡೆಯುತ್ತದೆ. ಅದು ಇಡೀ ಚಿತ್ರದ ಓಟದ ತಿರುವಿಗೆ ಪ್ರಮುಖ ಕಾರಣವಾಗುತ್ತದೆ. ಆ ಘಟನೆ ಯಾವುದು…
ದುಷ್ಟರ ಸಂಹಾರ ಆಗುತ್ತಾ..
ವೀರಭದ್ರನ ಕ್ಲೈಮ್ಯಾಕ್ಸ್ ಅವತಾರ ಏನು…
ಹೀಗೆ ಒಂದಷ್ಟು ಗಮನ ಸೆಳೆಯುವ ಅಂಶಗಳನ್ನು ನೋಡಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ಇನ್ನು ಈ ಚಿತ್ರದ ನಿರ್ದೇಶಕ ವಸಂತಕುಮಾರ್ ಕಂಪ್ಲಿ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆದಿದ್ದು , ಬೆಂಕಿಪುರ ಎಂಬ ಕಾಲ್ಪನಿಕ ಊರಿನ ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು. ಕೆಲವು ದೃಶ್ಯಗಳು ಕುತೂಹಲವನ್ನು ಮೂಡಿಸುತ್ತಾ ಸಾಗುತ್ತದೆ.ಚಿತ್ರದ ಕ್ಲೈಮಾಕ್ಸ್ ಹಂತದ ಸನ್ನಿವೇಶ ಉತ್ತಮವಾಗಿ ಮೂಡಿಬಂದಿದೆ.

ಇಂತಹ ಗ್ರಾಮೀಣ ಭಾಗದ ಕಥಾಹಂದರದ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಇನ್ನು ಕಥೆಗೆ ಪೂರಕವಾಗಿ ಸಂಗೀತ , ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿ ಬಂದಿದ್ದು , ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿರುವುದು ತೆರೆಯ ಮೇಲೆ ಕಾಣುತ್ತದೆ. ಇನ್ನು ಇಡೀ ಚಿತ್ರದ ಕೇಂದ್ರ ಬಿಂದುವಾಗಿ ನಟ ವಿಜಯ್ ರಾಘವೇಂದ್ರ ಅದ್ಭುತವಾಗಿ ಅಭಿನಯಿಸಿದ್ದಾರೆ.

ಈ ಚಿತ್ರದಲ್ಲಿ ಎರಡು ಶೇಡ್ಗಳ ರೂಪದಲ್ಲಿ ತಂದೆ ಹಾಗೂ ಮಗನ ಪಾತ್ರಗಳನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಅದೇ ರೀತಿ ನಟಿ ಪ್ರಿಯಾಂಕಾ ತಿಮ್ಮೆಶ್ ಅಕ್ಕ ,ತಂಗಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ತಮಗೆ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಹಾಗೆಯೇ ಕಾಲಜ್ಞಾನಿ ಲಿಂಗಯ್ಯನಾಗಿ ನಿರ್ದೇಶಕ ವಸಂತ ಕುಮಾರ್ ಅಭಿನಯಿಸಿದ್ದು ಆ ಪಾತ್ರಕ್ಕೆ ದೈವಕಳೆ ನೀಡಿದ್ದಾರೆ. ಇದಲ್ಲದೆ ಮತ್ತೊಂದು ಗೆಟಪ್ ಇದ್ದು ಅದನ್ನು ತೆರೆಯ ಮೇಲೇ ನೋಡಬೇಕು, ಶಾನುಭೋಗನಾಗಿ ವಿ. ಮನೋಹರ್, ಪಟೇಲನಾಗಿ ಶಂಕರ್ ನಾರಾಯಣ್, ಮನು , ಸನತ್, ಬುಲೆಟ್‌ ವಿನು ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಸಾತ್ ನೀಡಿದ್ದು , ಒಟ್ಟಾರೆ ಇಡೀ ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿದೆ.

Visited 1 times, 1 visit(s) today
error: Content is protected !!