ರೊಮ್ಯಾಂಟಿಕ್ ಥ್ರಿಲ್ಲರ್ ಕಥಾನಕ ‘ಲಾರ್ಡ್ ಗಾಗ’ ಫಸ್ಟ್ ಲುಕ್ ಮತ್ತು ಮೋಶನ್ ಪೋಸ್ಟರ್ ರಿಲೀಸ್

Spread the love

ಸ್ಯಾಂಡಲ್ ವುಡ್ ನಲ್ಲಿ ವಿಭಿನ್ನ ಪ್ರಯತ್ನದ ಹೊಸ ಆಲೋಚನೆಯೊಂದಿಗೆ ತಂಡಗಳು ಪ್ರೇಕ್ಷಕರ ಮುಂದೆ ಬಂದು ಗಮನ ಸೆಳೆದಿದೆ. ಆ ನಿಟ್ಟಿನಲ್ಲಿ ಆರಂಭದಲ್ಲೇ ಕುತೂಹಲ ಮೂಡಿಸಿ ತನ್ನ ಟೈಟಲ್ ಮತ್ತು ಕಂಟೆಂಟ್ ಮೂಲಕವೇ ಗಮನ ಸೆಳೆದಿದ್ದ ‘ಲಾರ್ಡ್ ಗಾಗ’ ಚಿತ್ರದ ಟೈಟಲ್ ಪೋಸ್ಟರ್ ಮತ್ತು ಮೋಶನ್ ಪೋಸ್ಟರ್ ಬಿಡುಗಡೆ ಆಗಿದೆ. ಈಗಾಗಲೇ ಸದ್ದಿಲ್ಲದೆ ತನ್ನ ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ‘ಲಾರ್ಡ್ ಗಾಗ’ ಚಿತ್ರತಂಡ, ಇದೀಗ ತಮ್ಮ ಚಿತ್ರದ ಟೈಟಲ್ ಮೋಶನ್ ಪೋಸ್ಟರ್ ಅನ್ನು ಬಿಡುಗಡೆ ಮಾಡುವುದರ ಜೊತೆಗೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಞರನ್ನು ಪರಿಚಯಿಸಿದೆ.

ಇನ್ನು ‘ಲಾರ್ಡ್ ಗಾಗ’ ಚಿತ್ರಕ್ಕೆ ಯುವ ನಿರ್ದೇಶಕ ವೈಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ‘ಝೀರೋ ಗ್ರ್ಯಾವಿಟಿ ಫಿಲಂಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ಲಾರ್ಡ್ ಗಾಗ’ ಚಿತ್ರವನ್ನು ಉದ್ಯಮಿ ಮುಕಿ ರೆಘುನಾಥನ್ ನಿರ್ಮಿಸುತ್ತಿದ್ದಾರೆ. ರೊಮ್ಯಾಂಟಿಕ್ ಥ್ರಿಲ್ಲರ್ ಶೈಲಿಯ ‘ಲಾರ್ಡ್ ಗಾಗ’ ಚಿತ್ರದಲ್ಲಿ ಶೂನ್ಯ ನಾಯಕ ನಟನಾಗಿ ಅಭಿನಯಿಸಿದ್ದು, ಸ್ವರೂಪಿಣಿ ಮತ್ತು ದಿಶಾ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕ ಮುಕಿ ರೆಘುನಾಥನ್ ಕೂಡ ಚಿತ್ರದ ಪಾತ್ರವೊಂದರಲ್ಲಿ ಅಭಿನಯಿಸಿದ್ದಾರೆ.

‘ಇನ್ನು ಹೆಸರೇ ಹೇಳುವಂತೆ, ‘ಲಾರ್ಡ್ ಗಾಗ’ ಔಟ್ ಅಂಡ್ ಔಟ್ ಇಂಡಿಯನ್ ಕಲ್ಟ್ ಸಿನಿಮಾ. ಮನುಷ್ಯನ ಮನಸ್ಸಿನಲ್ಲಿ ಮೂಡುವ ಪ್ರೀತಿ, ಪ್ರೇಮ, ಪ್ರಣಯ, ಭಾವನೆ, ವ್ಯಸನ, ಆಯ್ಕೆ ಎಲ್ಲದರ ಚಿತ್ರಣ ಈ ಸಿನಿಮಾದಲ್ಲಿದೆ. ಅದನ್ನು ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್ ಶೈಲಿಯಲ್ಲಿ ತೆರೆಮೇಲೆ ತೋರಿಸಿದ್ದೇವೆ. ಇದೊಂದು ಕಾಲಾತೀತ ಕಥೆಯ ಸಿನಿಮಾ. ಇಗೋ ಸೆಂಟ್ರಿಕ್ ಆಗಿರುವಂತಹ ಕಥೆಯೊಂದು ಈ ಸಿನಿಮಾದಲ್ಲಿದೆ. ಹಿಮ್ಮುಖ ನಿರೂಪಣೆಯಲ್ಲಿ ಇಡೀ ಚಿತ್ರದ ಕಥೆ ಸಾಗುತ್ತದೆ’ ಎಂಬುದು ಚಿತ್ರದ ನಿರ್ದೇಶಕ ವೈಕೆ ನೀಡುವ ವಿವರಣೆ.

‘ಲಾರ್ಡ್ ಗಾಗ’ ಚಿತ್ರದ ಬಗ್ಗೆ ಮಾತನಾಡಿರುವ ನಿರ್ಮಾಪಕ ಮುಕಿ ರೆಘುನಾಥನ್, ‘ಕಾರ್ಪೋರೆಟ್ ಶೈಲಿಯಲ್ಲಿ ಇಡೀ ಸಿನಿಮಾ ನಿರ್ಮಾಣ ಮಾಡಿದ್ದೇವೆ. ಚಿತ್ರದ ಎಲ್ಲಾ ಕಲಾವಿದರು ಮತ್ತು ತಂತ್ರಜ್ಞರಿಗೆ ಸಂಭಾವನೆ ಜೊತೆಗೆ ವಿಮೆ, ಗುಣಮಟ್ಟದ ಸಾವಯವ ಆಹಾರ, ವಸತಿ, ಆರೋಗ್ಯ ಹೀಗೆ ಕಾರ್ಪೋರೆಟ್ ಶೈಲಿಯಲ್ಲಿ ಸೌಲಭ್ಯ ನೀಡಿದ್ದೇವೆ. ಈ ಸಿನಿಮಾ ಇಡೀ ಚಿತ್ರರಂಗಕ್ಕೆ ಹೊಸ ಮೈಲಿಗಲ್ಲು ಆಗಬೇಕು ಎಂದು ಎಲ್ಲರೂ ಸಾಕಷ್ಟು ಪರಿಶ್ರಮ ಹಾಕಿದ್ದೇವೆ. ಅನೇಕ ತಿದ್ದುಪಡಿಗಳ ನಂತರ ಒಂದೊಳ್ಳೆ ಸಿನಿಮಾ ಆಗಿದೆ. ಈಗಾಗಲೇ ಸುಮಾರು 3 ಸಾವಿರಕ್ಕೂ ಅಧಿಕ ಬೇರೆ ಬೇರೆ ವರ್ಗದ ಪ್ರೇಕ್ಷಕರಿಗೆ ‘ಲಾರ್ಡ್ ಗಾಗ’ ಚಿತ್ರವನ್ನು ತೋರಿಸಲಾಗಿದ್ದು, ಎಲ್ಲರ ಅನಿಸಿಕೆ, ಅಭಿಪ್ರಾಯ, ಸಲಹೆ ಪಡೆದುಕೊಂಡು ಇದೀಗ ಸಿನಿಮಾ ಅಂತಿಮ ರೂಪ ಪಡೆದುಕೊಂಡಿದೆ. ಖಂಡಿತವಾಗಿಯೂ ಈ ನಮ್ಮ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಲಾರ್ಡ್ ಗಾಗ’ ಚಿತ್ರದ ಬಗ್ಗೆ ಮಾತನಾಡಿರುವ ನಾಯಕ ನಟ ಶೂನ್ಯ, ‘ನಾನು ಈ ಸಿನಿಮಾದ ಹೀರೋ ಎಂಬುದಕ್ಕಿಂತ ಒಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದೇನೆ ಎಂದು ಹೇಳಬಹುದು. ಯಾಕೆಂದರೆ, ಈ ಸಿನಿಮಾದಲ್ಲಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯೇ ನಿಜವಾದ ಹೀರೋ. ಈ ಸಿನಿಮಾಕ್ಕೂ ಮುನ್ನ ಸುಮಾರು 45ಕ್ಕೂ ಹೆಚ್ಚು ಕಥೆಗಳನ್ನು ಕೇಳಿ, ಅಂತಿಮವಾಗಿ ಈ ಸಿನಿಮಾ ಒಪ್ಪಿಕೊಂಡೆ. ಈ ಸಿನಿಮಾದ ಕಥೆ ಮತ್ತು ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ’ ಎಂದು ನಿರೀಕ್ಷೆಯ ಮಾತನಾಡಿದರು.

ಈ ಹಿಂದೆ ಕನ್ನಡದಲ್ಲಿ ‘ಮತ್ಸ್ಯಗಂಧ’ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದ ನಟಿ ದಿಶಾ, ‘ಲಾರ್ಡ್ ಗಾಗ’ ಚಿತ್ರದಲ್ಲಿ ಒಬ್ಬ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಮತ್ತೊಬ್ಬ ನಾಯಕಿಯಾಗಿ ಸ್ವರೂಪಿಣಿ ನಾರಾಯಣ್ ಅಭಿನಯಿಸಿದ್ದಾರೆ. ಉಡುಪಿ, ಗೋಕರ್ಣ, ಹಾಸನ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಕೊನೆಯ ಹಂತದಲ್ಲಿದ್ದು, ಶೀಘ್ರದಲ್ಲೇ ಚಿತ್ರ ಸೆನ್ಸಾರ್ ಮುಂದೆ ಹೋಗಲಿದೆ ಎಂಬುದು ಚಿತ್ರತಂಡದ ಕಡೆಯಿಂದ ಬಂದಿರುವ ಮಾಹಿತಿ.

‘ಲಾರ್ಡ್ ಗಾಗ’ ಚಿತ್ರವನ್ನು ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ, ಹಿಂದಿ, ಬೆಂಗಾಲಿ, ಭೋಜಪುರಿ ಸೇರಿದಂತೆ ಏಕಕಾಲಕ್ಕೆ ಏಳಕ್ಕೂ ಹೆಚ್ಚು ಭಾಷೆಗಳಲ್ಲಿ ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ. ಸದ್ಯ ಚಿತ್ರದ ಟೈಟಲ್ ಮೋಶನ್ ಪೋಸ್ಟರ್ ಮತ್ತು ಕಥಾಹಂದರದ ಎಳೆಯನ್ನು ಅಷ್ಟೇ ಬಿಟ್ಟುಕೊಟ್ಟಿರುವ ಚಿತ್ರತಂಡ, ಶೀಘ್ರದಲ್ಲೇ ಚಿತ್ರದ ಟೀಸರ್ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ, 2027ರ ಮಾರ್ಚ್ ವೇಳೆಗೆ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

Visited 1 times, 1 visit(s) today
error: Content is protected !!