ರೂಪಾ ರಾವ್ ನಿರ್ದೇಶನದ `ಭಯಂಕರ ಪ್ರೀತಿ’ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಅನಾವರಣ.

Spread the love

ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ತಮ್ಮದೇ ಆದ ಪ್ರೇಕ್ಷಕ ವರ್ಗವನ್ನು ಸೃಷ್ಟಿಸಿಕೊಂಡಿರುವ ರೂಪಾ ರಾವ್, ಇದೀಗ ಮತ್ತೊಂದು ಹೊಸಾ ಬಗೆಯ ಕಥಾನಕಕ್ಕೆ ದೃಶ್ಯರೂಪ ನೀಡುವ ಸಂಭ್ರಮದಲ್ಲಿದ್ದಾರೆ. ಅವರು ಮತ್ತೊಂದು ಚಿತ್ರವನ್ನು ನಿರ್ದೇಶಿಸಲಿದ್ದಾರೆಂಬ ಬಗ್ಗೆ ಈ ಹಿಂದೆಯೇ ಸುದ್ದಿಯಾಗಿತ್ತು. ಈ ಬಾರಿ ಅವರು ಯಾವ ಕಥಾ ವಸ್ತುವನ್ನು ಕೈಗೆತ್ತಿಕೊಂಡಿರಬಹುದೆಂಬ ಕುತೂಹಲವೂ ಮೂಡಿಕೊಂಡಿತ್ತು.

ಇದೀಗ ಆ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿದೆ. `ಭಯಂಕರ ಪ್ರೀತಿ’ ಎಂಬ ಈ ಶೀರ್ಷಿಕೆಯ ಮೂಲಕವೇ ಕಥೆಯ ಭಿನ್ನ ಪಥದ ಸುಳಿವನ್ನೂ ರೂಪಾ ರಾವ್ ರವಾನಿಸಿದಂತಿದೆ.
ಪ್ರೇಮ ಕಥನಗಳು ಸಿನಿಮಾವಾಗೋದೇನು ಹೊಸತಲ್ಲ. ಆದರೆ, ಇದು ಮಾಮೂಲಿ ಪ್ರೇಮ ಕಥನವಲ್ಲ ಎಂಬ ಸೂಕ್ಷ್ಮ ಸಂದೇಶವನ್ನು ಭಯಂಕರ ಪ್ರೀತಿ ಎಂಬ ಶೀರ್ಷಿಕೆಯೇ ಸ್ಪಷ್ಟಪಡಿಸುವಂತಿದೆ. ಇಲ್ಲಿ ತೇಜು ಬೆಳವಾಡಿ ಮತ್ತು ಪ್ರಣವ್ ಶ್ರೀಧರ್ ನಾಯಕ ನಾಯಕಿಯರಾಗಿ ನಟಿಸುತ್ತಿದ್ದಾರೆ. ಅವರಿಬ್ಬರ ಪಾತ್ರಗಳ ಜೊತೆಗೆ ಟೈಟಲ್ ಮೋಷನ್ ಪೋಸ್ಟರ್ ಅನ್ನು ರೂಪಾ ರಾವ್ ರೂಪಿಸಿದ್ದಾರೆ. ಅದೀಗ ಪ್ರೇಕ್ಷಕರನ್ನು ತಲುಪಿಕೊಂಡಿದೆ.


ಈ ಹಿಂದೆ ಗಂಟುಮೂಟೆ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದ ರೂಪಾ ರಾವ್, ಆ ಬಳಿಕ ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಪಕಿಯಾಗಿಯೂ ಸದ್ದು ಮಾಡಿದ್ದರು. ಭಯಂಕರ ಪ್ರೀತಿ ಚಿತ್ರ ಕೂಡಾ ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿಯೇ ನಿರ್ಮಾಣಗೊಳ್ಳುತ್ತಿದೆ. ಆಶಿತ್, ಅನನ್ಯಾ ಮೋಹನ್, ವಿನಯ್ ಭಾರದ್ವಾಜ್, ಶೀತಲ್ ರಾವ್, ಸುಧಾ ಪ್ರಸಾದ್, ಅನಘ, ಚಂದ್ರಶೇಖರ್, ಪೃಥ್ವಿ ಬನವಾಸಿ, ರಾಮ್ ಮಂಜೊನಾಥ್, ವಿಶಾಲ್, ವೈಭವ್ ಶೆಟ್ಟಿ, ಚೇತನ್, ನಿತಿನ್, ಗಗನಶ್ರೀ ಮುಂತಾವರ ತಾರಾಗಣವಿದೆ. ಪ್ರದೀಪ್ ನಾಯಕ್ ಸಂಕಲನ, ಶಿಬಿ ಶ್ರೀನಿವಾಸನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಹದೇವ್ ಕೆಲವಡಿ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ. ಭಯಂಕರ ಪ್ರೀತಿಯ ಬಗೆಗಿನ ಮತ್ತಷ್ಟು ವಿವರಗಳು ಶೀಘ್ರದಲ್ಲಿಯೇ ಜಾಹೀರಾಗಲಿವೆ.

Visited 1 times, 1 visit(s) today
error: Content is protected !!