ರಕ್ಷಣೆ ಇಲ್ಲದ ಕುರಿಗಾಹಿಗಳ ಪಯಣ…”ಅನಂತ ಪಯಣ” ( ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಅನಂತ ಪಯಣ
ನಿರ್ದೇಶಕ : ಶ್ರೀ ಕಾಕಾ
ನಿರ್ಮಾಪಕರು : ಸಂತೋಷ ಅಶೋಕ್ ಹೆಗಡೆ , ಸಾಗರ್
ಸಂಗೀತ : ಆಕಾಶ ಪರ್ವ
ಛಾಯಾಗ್ರಹಣ : ವಿನೋದ್ ಭಾರತಿ
ತಾರಾಗಣ : ಶ್ರೀ ಕಾಕಾ , ನಿವಿಷ್ಕಾ ಪಾಟೀಲ್, ಬಾಲ ರಾಜ್ವಾಡಿ, ಲಕ್ಷ್ಮಿ ಸಿದ್ದಯ್ಯ, ಪ್ರಶಾಂತ್ ಸಿದ್ದಿ, ಅಪೂರ್ವ , ಮಂಜುನಾಥ ಹೆಗಡೆ , ಸಂದೀಪ್ ನೀನಾಸಂ, ಸಂಗೀತ ಭಟ್, ಅನನ್ಯ ಹಾಗೂ ಮುಂತಾದವರು…
ಸಾಮಾನ್ಯವಾಗಿ ಬದುಕಿನ ಪಯಣ ಯಾವಾಗ , ಹೇಗೆ , ಸಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ.. ಊರು , ಒಡನಾಟ , ಆಚಾರ ವಿಚಾರ , ಪದ್ಧತಿ , ಮಮಕಾರದ ಪ್ರೀತಿಯ ನಡುವೆ ಬದುಕು ಕಟ್ಟಿಕೊಳ್ಳಲು ದುಡಿಯುವುದು ಅವಶ್ಯಕತೆ. ಇಂಥದ್ದೇ ಪ್ರಾಮಾಣಿಕ ಮುಗ್ಧ ಹುಡುಗ ವಿದ್ಯಾಭ್ಯಾಸ ತೊರೆದು ಬದುಕಿಗಾಗಿ ಕುರಿಗಳನ್ನ ಮೇಯಿಸಲು ನಿರ್ಧರಿಸಿ, ಮುಂದೆ ಸಾಗುವವನ ಬದುಕಿನಲ್ಲಿ ಎದುರಾಗುವ ಸ್ನೇಹ, ವಿಶ್ವಾಸ , ಪ್ರೀತಿ , ಸಮಸ್ಯೆಗಳ ನಡುವೆ ಬದುಕಿನ ಭದ್ರತೆಯಲ್ಲಿ ಹೆಣ್ಣಿನ ರಕ್ಷಣೆ ಎಷ್ಟು ಅವಶ್ಯಕ ಎಂಬುದನ್ನು ಬಹಳ ನೈಜಕ್ಕೆ ಪೂರ್ವಕವಾಗಿ ಈ ವಾರ ಪ್ರೇಕ್ಷಕರ ಮುಂದೆ ತಂದಿರುವಂತಹ ಚಿತ್ರ “ಅನಂತ ಪಯಣ”.
ಕುರಿ ಕಾಯುವ ಸಿದ್ದಪ್ಪ (ಬಾಲ ರಾಜ್ವಾಡಿ)ನ ಮನೆ ಮಳೆಯ ಅಬ್ಬರಕ್ಕೆ ಕುಸಿದಾಗ ತಂದೆಗೆ ಧೈರ್ಯ ಹೇಳಿ ನಿಲ್ಲುವ ಮಗ ಮುಂದೆ ತಾನು ಕೂಡ ಕುರಿಗಾಹಿ ಕಾಯಕಕ್ಕೆ ಮುಂದಾಗುತ್ತಾನೆ. ಅಮ್ಮ ( ಲಕ್ಷ್ಮಿ ಸಿದ್ದಯ್ಯ) ನ ಮಾರ್ಗದರ್ಶನದಲ್ಲಿ ಬೆಳೆದು ತನ್ನ ಕುಲ ಬಂಧುಗಳ ಜೊತೆ ಕುರಿ ಕಾಯುವ ಬೀರ (ಶ್ರೀ ಕಾಕಾ)ನಿಗೆ ಮುದ್ದಾದ ಬೆಡಗಿ ಗೌರಿ (ನಿವಿಷ್ಕಾ ಪಾಟೀಲ್) ಪ್ರೀತಿ ಸಿಕ್ಕಿ ಕುಟುಂಬದ ಒಪ್ಪಿಗೆಯಿಂದ ಮದುವೆ ಆಗುತ್ತಾನೆ.
ಮುಂದೆ ಊರೂರು ಸಾಗುವ ಬೀರ , ಗೌರಿ ಹಾಗೂ ತಂಡಕ್ಕೆ ಒಂದಲ್ಲ ಒಂದು ಸಮಸ್ಯೆ ಎದುರಾಗುತ್ತಾ ಹೋಗುತ್ತದೆ. ಒಂದು ಭದ್ರ ನೆಲೆ ಇಲ್ಲದ ಈ ಕುರಿ ಕಾಯುವವರ ಬದುಕಿನಲ್ಲಿ ಕಾಮುಕರ ಅಟ್ಟಹಾಸ ಏನೆಲ್ಲ ತೊಂದರೆಯನ್ನು ನೀಡುತ್ತದೆ. ಮುಂದೆ ಈ ಜನರು ಎದುರಿಸುವ ಸಮಸ್ಯೆ ಏನು… ಮುಂದೆ ಇದಕ್ಕೆಲ್ಲ ಪರಿಹಾರ ಇದೆಯಾ… ಇಲ್ಲವಾ… ಈ ಮುಗ್ಧರ ರಕ್ಷಣೆಗೆ ಯಾರು ಹೊಣೆ… ಎಂಬ ಒಂದಷ್ಟು ಪ್ರಶ್ನೆಗಳು ಮೂಡುತ್ತಾ ಹೋಗುತ್ತದೆ. ಒಂದಷ್ಟು ಸೂಕ್ಷ್ಮ ವಿಚಾರವನ್ನು ಗಮನಿಸಲು ಒಮ್ಮೆ ನೀವು ಒಮ್ಮೆ ಚಿತ್ರ ನೋಡಬೇಕು.
ನಿರ್ದೇಶಕ ಶ್ರೀ ಕಾಕಾ ಒಂದು ಸಂಚಾರಿ ಕುರಿಗಾಹಿಗಳ ಕಥಾವಸ್ತುವನ್ನು ಆಯ್ಕೆ ಮಾಡಿಕೊಂಡಿರುವ ವಿಚಾರ ಗಮನ ಸೆಳೆಯುತ್ತದೆ. ಅದರಲ್ಲೂ ಹೆಣ್ಣು ಮಕ್ಕಳ ಮೇಲೆ ದುಷ್ಟರ ಕಣ್ಣು ಬಿದ್ದಾಗ ಎದುರಾಗುವ ಸಮಸ್ಯೆ , ಭದ್ರತೆ ಇಲ್ಲದ ಬದುಕಿನ ವಿಚಾರ ಮನ ಮಟ್ಟುತ್ತದೆ. ಆದರೆ ಚಿತ್ರಕಥೆಯಲ್ಲಿ ಇನ್ನಷ್ಟು ಏರಿಳಿತ ಅಗತ್ಯ ಅನಿಸುತ್ತದೆ.
ಹಾಡುಗಳು ಸುಂದರವಾಗಿ ಮೂಡಿ ಬಂದಿದ್ದು , ನಾಯಕನಾಗಿ ಅಭಿನಯಿಸಿರುವ ಶ್ರೀ ಕಾಕ ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕಿಯಾಗಿ ನಿವಿಷ್ಕಾ ಪಾಟೀಲ್ ನೈಜಕ್ಕೆ ಪೂರಕವಾಗಿ ಜೀವ ತುಂಬಿ ಅಭಿನಯಿಸಿದ್ದಾರೆ. ಅದೇ ರೀತಿ ಗೆಳೆಯರ ಪಾತ್ರಗಳು ಕೂಡ ಚಿತ್ರದಲ್ಲಿ ಸಮಯ ಸಂದರ್ಭಕ್ಕೆ ತಕ್ಕಂತೆ ನಗುಸುತ್ತಾ ತೇಲಿಸಿಕೊಂಡು ಹೋಗಿದ್ದಾರೆ. ವಿಶೇಷ ಹಾಡುವುದರಲ್ಲಿ ಸಂಗೀತ ಭಟ್ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದಾರೆ.
ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿ ಕಾಣಿಸಿಕೊಂಡಿದೆ. ಇನ್ನು ಛಾಯಾಗ್ರಹಾಕರ ಕೈಚಳಕವು ಉತ್ತಮವಾಗಿದ್ದು , ಒಂದು ಸಮಾಜಮುಖಿ , ಜನರಲ್ಲಿ ಜಾಗೃತಿ ಮೂಡಿಸುವ ಚಿತ್ರ ನಿರ್ಮಿಸಿರುವ ನಿರ್ಮಾಪಕರ ಸಾಹಸ ಮೆಚ್ಚುವಂತದ್ದು , ಯಾವುದೇ ಅಬ್ಬರ , ಆಡಂಬರವಿಲ್ಲದೆ ಬಂದಿರುವಂತಹ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.