“ಧೀರ ಭಗತ್ ರಾಯ್” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಭೀಮ ವಿಜಯ್ ಕುಮಾರ್.
ಸಮಾಜದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವುದರ ಜೊತೆಗೆ ಭೂಮಿ, ನೀರಿಗಾಗಿ ಅದೆಷ್ಟೋ ಹೋರಾಟಗಳು ನಡೆದು ಹೋಗಿವೆ. ಅಂತಹದ್ದೇ ಒಂದು ನೈಜ ಘಟನೆಗಳ ಆಧಾರಿತ ಹೋರಾಟದ ಹಿನ್ನಲೆಯ ಕಥಾಹಂದರವನ್ನು ಹೊಂದಿರುವ “ಧೀರ ಭಗತ್ ರಾಯ್” ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ನಗರದ ಪ್ರಸನ್ನ ಥಿಯೇಟರ್ ನಲ್ಲಿ ಚಿತ್ರತಂಡ ಆಯೋಜನೆ ಮಾಡಿದ್ದು, ಸ್ಯಾಂಡಲ್ವುಡ್ ನ ಭೀಮ ನಟ , ನಿರ್ದೇಶಕ , ನಿರ್ಮಾಪಕ ವಿಜಯ್ ಕುಮಾರ್ ಮುಖ್ಯ ಅತಿಥಿಯಾಗಿ ಆಗಮಿಸಿ ಟೈಲರನ್ನ ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು. ಇದೇ ವೇದಿಕೆಯ ಮೇಲೆ ಮಾಜಿ ಸಚಿವ ಎಚ್. ಆಂಜನೇಯ , ಶೃಂಗೇರಿ ಎಂ.ಎಲ್.ಎ ಟಿ.ಡಿ. ರಾಜೇಗೌಡ , ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ, ಸಾಮಾಜಿಕ ಕಾರ್ಯಕರ್ತ ರಾದ ಭಾಸ್ಕರ್ ಪ್ರಸಾದ್, ಹರಿರಾಂ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.
ಈ ಕಾರ್ಯಕ್ರಮದ ಮುಖ್ಯ ಅತಿಥಿ ದುನಿಯಾ ವಿಜಯ್ ಮಾತನಾಡುತ್ತ ಇವತ್ತಿನ ದಿನಗಳಲ್ಲಿ ಗೂಗಲ್ನಿಂದಲೇ ಎಲ್ಲವನ್ನೂ ತಿಳಿದುಕೊಳ್ಳುವ ಹಂತಕ್ಕೆ ಬಂದಿದ್ದೇವೆ. ಸಿನಿಮಾಗಳ ಮೂಲಕ ಉತ್ತಮ ಕಥೆಗಳೊಂದಿಗೆ ಜಾಗೃತಿ ಹಾಗೂ ಸಂದೇಶವನ್ನು ನೀಡುವ ಕೆಲಸ ನಡೆಯಬೇಕಿದೆ. ಯುವ ಪಡೆಗಳ ಜೊತೆ ಅನುಭವಿಗಳು ಸೇರಿ ಚಿತ್ರ ಮಾಡುವ ಕೆಲಸ ಆಗಬೇಕು, ಆ ನಿಟ್ಟಿನಲ್ಲಿ ಈ ಒಂದು ತಂಡ “ಧೀರ ಭಗತ್ ರಾಯ್” ಎಂಬ ಹೋರಾಟದ ನೆಲೆ , ಅಸ್ತಿತ್ವ , ಸಾಮಾಜಿಕ ನ್ಯಾಯ , ಸಮಾನತೆಯ ಅಂಶಗಳನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಿದ್ಧರಾಗಿದ್ದಾರೆ. ಈ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇಲ್ಲದೇ ಇದ್ದರೆ ಏನೆಲ್ಲಾ ಆಗುತ್ತಿತ್ತು ಎಂಬುದನ್ನು ನೆನೆಸಿಕೊಂಡರೆ ಆತಂಕವಾಗುತ್ತದೆ. ನಾನು ನೋಡಿದ ಈ ಟೈಲರ್ ಬಹಳ ಗಮನ ಸೆಳೆಯುವಂತಿದೆ ನಾಯಕ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ , ಚಿತ್ರ ಯಶಸ್ವಿಗೊಳ್ಳಲಿ , ಎಲ್ಲರೂ ಚಿತ್ರವನ್ನು ನೋಡಿ ಬೆಂಬಲಿಸಿ ಎಂದರು.
ಇನ್ನು ಮಾಜಿ ಸಚಿವ ಹೆಚ್ ಆಂಜನೇಯ ಮಾತನಾಡುತ್ತ ನಮ್ಮ ದೇಶದ ಉಕ್ಕಿನ ಮಹಿಳೆ ಇಂದಿರಾ ಗಾಂಧಿ ತೆಗೆದುಕೊಂಡ ದಿಟ್ಟ ನಿರ್ಧಾರ , ಉಳುವವನೇ ಭೂಮಿಯ ಒಡೆಯ ಎನ್ನುವಂತಹ ಕಾನೂನನ್ನು ಸಮರ್ಥವಾಗಿ ಜಾರಿಗೊಳಿಸಿದ್ದರು. ಈ ಕಾಯ್ದೆಯನ್ನ ಮಾಜಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ರಾಜ್ಯದಲ್ಲಿ ಪರಿಣಾಮಕಾರಿ ಯಾಗಿ ಜಾರಿಗೆ ತಂದರು.
ಧ್ವನಿ ಇಲ್ಲದಿದ್ದವರಿಗೆ , ಶಕ್ತಿ ಇಲ್ಲದಿದ್ದವರಿಗೆ ಈ ಕಾಯ್ದೆ ಹೊಸ ಚೈತನ್ಯ ನೀಡಿದ್ದು, ಸಮಾನತೆಯ ದಿಕ್ಕಿನೆಡೆಗೆ ಸಾಗುವಂತೆ ಮಾಡಿತ್ತು. ಸಂಪತ್ತಿನ ಸಮಾನ ಹಂಚಿಕೆಯ ಸೂತ್ರವನ್ನು ಸಹಕಾರಗೊಳಿಸಿತ್ತು. ಈ ಕಾಯ್ದೆ ರಾಜ್ಯದಲ್ಲಿ ಲಕ್ಷಾಂತರ ಕುಟುಂಬಗಳಿಗೆ ನ್ಯಾಯ ಒದಗಿಸಿದೆ. ಇಂತಹ ಚಿತ್ರಗಳು ಹೆಚ್ಚು ಹೆಚ್ಚಾಗಿ ಬರಬೇಕು, ಈ ಹಿಂದೆ ಬಂದಂತ ಅತ್ಯುತ್ತಮ ಚಿತ್ರಗಳು ಉತ್ತಮ ಪರಿಣಾಮ ಬೀರುತ್ತಿದ್ದವು.
ಅದೇ ಮಾದರಿಯಲ್ಲಿ ಸಂದೇಶ ನೀಡುವಂತ ಚಿತ್ರ ಬರಲಿ ಈ ಚಿತ್ರತಂಡದ ಶ್ರಮಕ್ಕೆ ಯಶಸ್ಸು ಸಿಗಲಿ ಎಂದು ಶುಭ ಕೋರಿದರು. ಈ ತಂಡಕ್ಕೆ ಬೆನ್ನೆಲುಬಾಗಿ ನಿಂತಿರುವಂತಹ ಸುಧೀರ್ ಮುರೋಳಿ ಮಾತನಾಡುತ್ತ ಈ ಧೀರ ಭಗತ್ ರಾಯ್ ಚಿತ್ರ ಸೋಲಿನ ಕಥೆಯಲ್ಲ. ಇದು ಗೆಲುವಿನ ಕಥೆಯನ್ನ ಹೊಂದಿದೆ. ಸಂವಿಧಾನದ ಶಕ್ತಿಯನ್ನು ಹೇಳುವ ಜೊತೆಗೆ ಜನರಲ್ಲಿ ಜಾಗೃತಿ , ಆತ್ಮಸ್ಥೈರ್ಯವನ್ನ ತುಂಬುವಂತಹ ಚಿತ್ರವಾಗಿ ಬರುತ್ತಿದೆ. ಎಲ್ಲರೂ ಇಂತಹ ಚಿತ್ರಗಳಿಗೆ ಬೆಂಬಲ , ಸಹಕಾರ ನೀಡಬೇಕು ಎಂದರು.
ಈ ಚಿತ್ರದ ನಿರ್ದೇಶಕ ಕರ್ಣನ್. ಎಸ್ ಮಾತನಾಡುತ್ತಾ ಈ ಕಾರ್ಯಕ್ರಮಕ್ಕೆ ಬಂದಂತ ಎಲ್ಲಾ ಗಣ್ಯರಿಗೆ ನನ್ನ ಧನ್ಯವಾದಗಳು ತಿಳಿಸುತ್ತಾ ಈ ಒಂದು ಚಿತ್ರಕ್ಕೆ ಬಹಳಷ್ಟು ಶ್ರಮವನ್ನ ವಹಿಸಿದ್ದೇವೆ. ಬೆಂದು ನೊಂದವರ ಸುತ್ತ ಧ್ವನಿ ಎತ್ತುವ ಧೀರ ಭಗತ್ ರಾಯ್ ತನ್ನ ಪ್ರಜೆಗಳನ್ನು ಕಾಪಾಡಲು ಸಿಡಿದೆದ್ದು ನಿಲ್ಲುವ ಒಬ್ಬ ಮಹಾನ್ ನಾಯಕ , ಭೂ ಸುಧಾರಣೆ, ಜಮೀನ್ದಾರಿ ಪದ್ಧತಿ , ಜೀತ ಪದ್ಧತಿ , ಜಾತಿ ವ್ಯವಸ್ಥೆಯಂತಹ ಸಾಮಾಜಿಕ ವಿಚಾರಗಳ ಸುತ್ತ ಸಾಗುವ ಕಥಾನಕವಿದೆ. ಸಾಯೋದಾದ್ರೆ ಹೋರಾಟ ಮಾಡಿ ಸಾಯಿ, ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರೆ ಎಂದು ಸಮಾನತೆಯನ್ನು ಸಾರುವ ಡೈಲಾಗ್ಗಳು ಚಿತ್ರದಲ್ಲಿವೆ.
ನಮ್ಮ ತಂಡದ ಕಲಾವಿದರು ಹಾಗೂ ತಾಂತ್ರಿಕ ವರ್ಗದವರ ಸಹಕಾರ ಹಾಗೂ ನಿರ್ಮಾಪಕರ ಬೆಂಬಲ ನನಗೆ ಈ ಚಿತ್ರ ಮಾಡಲು ಸಾಧ್ಯವಾಯಿತು. ಡಿಸೆಂಬರ್ ನಲ್ಲಿ ಬಿಡುಗಡೆ ಮಾಡಲು ನಿರ್ಧಾರ ಮಾಡಿದ್ದೇವೆ. ಎಲ್ಲರೂ ನೋಡಿ ಪ್ರೋತ್ಸಾಹಿಸಿ ಎಂದು ಕೇಳಿಕೊಂಡರು. ಈ ಚಿತ್ರವನ್ನು ವೈಟ್ ಲೋಟಸ್ ಎಂಟರ್ಟೈನ್ಮೆಂಟ್ ಮತ್ತು ಶ್ರೀ ಓಂ ಸಿನಿ ಎಂಟರ್ ಟ್ರೈನರ್ಸ್ ನಿರ್ಮಾಣ ಸಂಸ್ಥೆಗಳ ಮೂಲಕ ಪ್ರವೀಣ್ ಗೌಡ ಹಗಡೂರು ಮತ್ತು ಶ್ರೀನಾಥ್ ಪಾಟೀಲ್ ನಿರ್ಮಾಣ ಮಾಡಿದ್ದಾರೆ.
ಇನ್ನು ಈ ಚಿತ್ರದಲ್ಲಿ ನಾಯಕನಾಗಿ ರಂಗಭೂಮಿ ಪ್ರತಿಭೆ ರಾಕೇಶ್ ದಳವಾಯಿ ಹಾಗೂ ನಾಯಕಿ ಸುಚರಿತಾ ಸಹಾಯರಾಜ್ ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಹಂಚಿಕೊಂಡರು. ಉಳಿದಂತೆ ಹಿರಿಯ ನಟ ಶರತ್ ಲೋಹಿತಾಶ್ವ , ಪ್ರವೀಣ್ ಹಗಡೂರು , ಮಠ ಕೊಪ್ಪಳ , ಸುಧೀರ್ ಕುಮಾರ್ ಮುರೊಳ್ಳಿ , ಶಶಿಕುಮಾರ್, ಚಂದ್ರಿಕಾ ಗೌಡ, ನಯನ , ಅನಿಲ್ ಹೊಸಕೊಪ್ಪ , ಹರಿರಾಮ್ , ಪಿ. ಮೂರ್ತಿ , ನೀನಾಸಂ ಅಶ್ವಥ್ , ರಮೇಶ್ ಕುಮಾರ್ ಸೇರಿದಂತೆ ಹಲವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಪೂರ್ಣಚಂದ್ರ ತೇಜಸ್ವಿ ಸಂಗೀತ , ಎಂ. ಸೆಲ್ವಂ ಜಾನ್ ಛಾಯಾಗ್ರಹಣ , ವಿಶ್ವ ಎನ್. ಎಂ. ಸಂಕಲನವಿದೆ. ಈಗಾಗಲೇ ಪ್ರಚಾರದ ಕಾರ್ಯವನ್ನು ಆರಂಭಿಸಿದ್ದು , ಡಿಸೆಂಬರ್ ನಲ್ಲಿ ರಾಜ್ಯಾದ್ಯಂತ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರಂತೆ.