ಅಮೆರಿಕಾದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬದಲ್ಲಿ “ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ.

Spread the love

ಅಕ್ಕ ಸಂಸ್ಥೆಯ ಬೆಳ್ಳಿ ಹಬ್ಬದ ವರ್ಷದ ವಿಶೇಷ. ಕರ್ನಾಟಕದ ಎಲ್ಲ ಭಾಷೆಗಳ ಚಿತ್ರಗಳಿಗೆ ಜಾಗತಿಕ ವೇದಿಕೆ.
ಅಮೆರಿಕಾದ ಕನ್ನಡಿಗರ ಹೆಮ್ಮೆಯ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆಯಾದ ‘ಅಕ್ಕ’ (Association of Kannada Kootas of America), ತನ್ನ 25ನೇ ವರ್ಷದ ಬೆಳ್ಳಿ ಹಬ್ಬದ ಸಂಭ್ರಮದ ಭಾಗವಾಗಿ, ” ಅಕ್ಕ” ಸಮ್ಮೇಳನದ ಅಧ್ಯಕ್ಷರಾದ ಮಧು ರಂಗಯ್ಯ ಅವರ ನೇತೃತ್ವದಲ್ಲಿ ಅಮೆರಿಕಾದಲ್ಲಿ ಸ್ಪರ್ಧಾತ್ಮಕ ಸ್ವರೂಪದ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿದೆ.


ಅಕ್ಕ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮವನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ಕನ್ನಡ ಚಲನಚಿತ್ರಗಳಿಗೆ ಜಾಗತಿಕ ವೇದಿಕೆಯನ್ನು ಕಲ್ಪಿಸಬೇಕೆಂಬ ದೂರದೃಷ್ಟಿಯನ್ನು ಹೊಂದಿದ್ದವರು ಮಧು ರಂಗಯ್ಯನವರು. ಅವರ ಪ್ರೇರಣೆ, ಸಂಪೂರ್ಣ ಸಹಕಾರ ಮತ್ತು ದೃಢ ಸಂಕಲ್ಪವೇ ‘ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ 2026’ ಸಾಕಾರಗೊಳ್ಳಲು ಪ್ರಮುಖ ಶಕ್ತಿ. ಕನ್ನಡದ ಸೃಜನಶೀಲತೆಯನ್ನು ವಿಶ್ವದ ಕನ್ನಡಿಗರ ಮುಂದೆ ಹೆಮ್ಮೆಯಿಂದ ಕೊಂಡೊಯ್ಯುವ ಈ ಮಹತ್ವಾಕಾಂಕ್ಷಿ ಪ್ರಯತ್ನಕ್ಕೆ ಅವರ ನಾಯಕತ್ವವೇ ಬೆನ್ನೆಲುಬಾಗಿದೆ.


‘ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವ 2026’ ಎಂಬ ಈ ಉತ್ಸವ, ಕರ್ನಾಟಕದ ಶ್ರೇಷ್ಠ ಚಿತ್ರಗಳನ್ನು ಫಿಲಡೆಲ್ಫಿಯಾದ ಜಾಗತಿಕ ವೇದಿಕೆಗೆ ತಲುಪಿಸುವ ಐತಿಹಾಸಿಕ ಪ್ರಯತ್ನವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಇತ್ತೀಚೆಗೆ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಉತ್ಸವದ ನಿರ್ದೇಶಕರಾದ ಪಿ.ಶೇಷಾದ್ರಿ ಹಾಗೂ ರೂವಾರಿಗಳಾದ ಗೌರೀಶ್ ಅಕ್ಕಿ ಹಾಗೂ ಬಡಿಗೇರ್ ದೇವೇಂದ್ರ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಚಲನಚಿತ್ರೋತ್ಸವದ ನಿರ್ದೇಶಕರಾದ, ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕರಾದ ಪಿ.ಶೇಷಾದ್ರಿ ಅವರು ಜಗತ್ತಿನಾದ್ಯಂತ ಐದು ಸಾವಿರಕ್ಕೂ ಹೆಚ್ಚು ಚಲನಚಿತ್ರೋತ್ಸವಗಳು ನಡೆಯುತ್ತವೆ. ಬೆಂಗಳೂರಿನಲ್ಲೂ ಹದಿನೇಳು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳು ನಡೆದಿವೆ. ಈ ಬಾರಿ ಅಮೆರಿಕಾದಲ್ಲಿ “ಅಕ್ಕ”, ಬೆಳ್ಳಿಹಬ್ಬ ಆಚರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ಆಯೋಜಿಸುತ್ತಿರುವುದು ನಿಜಕ್ಕೂ ಖುಷಿಯ ವಿಚಾರ. ಬಡಿಗೇರ್ ದೇವೇಂದ್ರ ಹಾಗೂ ಗೌರೀಶ್ ಅಕ್ಕಿ, “ಅಕ್ಕ” ತಂಡದ ಮಾರ್ಗದರ್ಶನ ಮತ್ತು ಸಹಕಾರದ ಮೇರೆಗೆ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಚಿತ್ರೋತ್ಸವಗಳು ಒಂದು ಅಸ್ಮಿತೆಯನ್ನು ಬಿಂಬಿಸುತ್ತಾ, ಒಂದು ಪ್ರಾದೇಶಿಕತೆಯನ್ನು ನೀಡುತ್ತಾ ಹೋಗುತ್ತವೆ. ಈಗ ಸಿನಿಮಾ ನೋಡಲು ಸಾಕಷ್ಟು ಮಾರ್ಗಗಳಿವೆ. ಆದರೆ ಚಲನಚಿತ್ರೋತ್ಸವದಲ್ಲಿ ಚಿತ್ರಗಳನ್ನು ನೋಡಿದಾಗ ಆಗುವ ಸಂತೋಷವೇ ಬೇರೆ. ಅಲ್ಲಿ ವೀಕ್ಷಿಸಿದ ಚಿತ್ರಗಳನ್ನು ಮರೆಯುವುದು ಕಡಿಮೆ. ಅಲ್ಲಿ ಬಂದಿರುವ ಚಿತ್ರಾಸಕ್ತರ ಜೊತೆ ಸೇರಿ ಆ ಚಿತ್ರವನ್ನು ಗ್ರಹಿಸುವ ಪ್ರಯತ್ನ ಕೂಡ ಮಾಡುತ್ತೇವೆ. ಚಿತ್ರೋತ್ಸವಗಳಲ್ಲಿ ಒಟ್ಟಾಗಿ ಒಂದು ವೇದಿಕೆಯಲ್ಲಿ ಚಿತ್ರವನ್ನು ನೋಡಿ, ಅದರ ಬಗ್ಗೆ ಚರ್ಚೆ ಮಾಡಿದಾಗ ನಮ್ಮ ಗ್ರಹಿಕೆ ಸರಿಯಾ? ನೋಡಿದ ಬೇರೆ ಪ್ರೇಕ್ಷಕರ ಗ್ರಹಿಕೆ ಸರಿಯಾ? ಎಂದು ಚರ್ಚೆ ಮಾಡಲು ಸಾಧ್ಯವಾಗುತ್ತದೆ. ಇದನ್ನು ಬೇರೆ ಕಡೆ ಮಾಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇನ್ನು ಚಿತ್ರೋತ್ಸವದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು ಜನವರಿ 1,‌ 2025 ರಿಂದ ಡಿಸಂಬರ್ 31, 2025 ರ ಒಳಗೆ ತಯಾರಾದ ಚಿತ್ರಗಳು “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ಕ್ಕೆ ಆಯ್ಕೆಯಾಗುವುದಕ್ಕೆ ಅರ್ಹತೆ ಪಡೆಯುತ್ತವೆ. ಮೊದಲು, ಐದು ಜನರ ಆಯ್ಕೆ ಸಮಿತಿ ಚಿತ್ರೋತ್ಸವಕ್ಕೆ ಆಯ್ಕೆಯಾದ ಎಲ್ಲಾ ಚಿತ್ರಗಳನ್ನು ನೋಡಿ, ಹತ್ತು ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಅನಂತರ ಮತ್ತೊಂದು ಮೂರು ಸದಸ್ಯರ ಸಮಿತಿ ಈ ಹತ್ತು ಚಿತ್ರಗಳಲ್ಲಿ ಮೂರು ಚಿತ್ರಗಳನ್ನು ಆಯ್ಕೆ ಮಾಡುತ್ತಾರೆ. ಆ ಚಿತ್ರಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದುಕೊಳ್ಳಲಿವೆ. ಮೊದಲ ಚಿತ್ರಕ್ಕೆ ಒಂದು ಲಕ್ಷ, ಎರಡನೇ ಚಿತ್ರಕ್ಕೆ ಐವತ್ತು ಸಾವಿರ ಹಾಗೂ ಮೂರನೇ ಚಿತ್ರಕ್ಕೆ ಇಪ್ಪತ್ತೈದು ಸಾವಿರ ನಗದು ಬಹುಮಾನಗಳಿರುತ್ತದೆ. ಇಲ್ಲಿ ಆಯ್ಕೆಯಾದ ಹತ್ತು ಚಿತ್ರಗಳು “ಅಕ್ಕ” ಸಮ್ಮೇಳನದಲ್ಲಿ ಪ್ರದರ್ಶನವಾಗುತ್ತದೆ. ಈಗಾಗಲೇ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” https://cinegannadafilmfest.org/ ವೆಬ್ ಸೈಟ್ ನಲ್ಲಿ ಅರ್ಜಿ ಲಭ್ಯವಿದೆ. ಆಸಕ್ತರು ಅರ್ಜಿ ಭರ್ತಿ ಮಾಡಿ ಇಂದಿನಿಂದಲೇ ತಮ್ಮ ಚಿತ್ರಗಳನ್ನು ಚಿತ್ರೋತ್ಸವಕ್ಕೆ ಕಳುಹಿಸಿಕೊಡಬಹುದು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಹಾಗೂ ಚಿತ್ರೋತ್ಸವದ ಸಂಘಟಕರಾದ ಗೌರೀಶ್ ಅಕ್ಕಿ, ಅಮೆರಿಕಾದಲ್ಲಿ ಪ್ರದರ್ಶನವಾಗುವ ಹಾಗೂ ಹಣಗಳಿಸುವ ಚಿತ್ರಗಳಲ್ಲಿ ಮೊದಲ ಸ್ಥಾನದಲ್ಲಿ ತೆಲುಗು, ತಮಿಳು ಚಿತ್ರಗಳು ಬರುತ್ತವೆ. ನಂತರ ಸ್ಥಾನದಲ್ಲಿ ಕನ್ನಡ ಚಿತ್ರಗಳು ಬರುತ್ತವೆ. ಆ ನಿಟ್ಟಿನಲ್ಲಿ ಅಮೆರಿಕಾ ಕನ್ನಡಿಗರಿಗೆ ನಮ್ಮ ಚಿತ್ರಗಳನ್ನು ತಲುಪಿಸಲು ಈ ಚಿತ್ರೋತ್ಸವ ಸೂಕ್ತ ವೇದಿಕೆಯಾಗಿದೆ. ಒಂದು ಸಿನಿಮಾ ನೋಡಿಕೊಂಡು ಬರಬೇಕಾದರೆ ಆ ಚಿತ್ರದ ಬಗ್ಗೆ ಚರ್ಚೆ ಆಗಬೇಕು. ಅದು ಒಳ್ಳೆಯ ಸಿನಿಮಾ ಆಗುತ್ತದೆ. ಆ ರೀತಿಯ ಸಿನಿಮಾಗಳನ್ನು ಗುರುತಿಸುವ ಕೆಲಸವನ್ನು ನಾವು ಮಾಡೋಣ ಎಂದು ಬಡಿಗೇರ್ ದೇವೇಂದ್ರ ಅವರು ಹೇಳಿದಾಗ ನಾನು ಅವರ ಜೊತೆಯಾದೆ ಎಂದು ಹೇಳಿದರು.

ಅಕ್ಕ ಸಮ್ಮೇಳನದ ಅಧ್ಯಕ್ಷರಾದ ಮಧು ರಂಗಯ್ಯ ಅವರ ಸಹಕಾರ ಮತ್ತು ಮಾರ್ಗದರ್ಶನದಲ್ಲಿ ಚಿತ್ರೋತ್ಸವ ನಡೆಯಲಿದ್ದು, ಇಂದಿನಿಂದಲೇ ಅಧಿಕೃತ ವೆಬ್ಸೈಟ್ ನಲ್ಲಿ ಸಿನಿಮಾ ಸಲ್ಲಿಸಬಹುದು, ಆಸಕ್ತಿವುಳ್ಳವರು ಚಲನಚಿತ್ರೋತ್ಸವದ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಹಾಕಬಹುದು. ಆಗಸ್ಟ್ ಮೊದಲ ವಾರದಿಂದ ಚಿತ್ರಗಳನ್ನು ನೋಡುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಆಗಸ್ಟ್ ಕೊನೆಯವಾರದಲ್ಲಿ ಇಲ್ಲೇ ಸಮಾರಂಭ ಆಯೋಜಿಸಿ ಪ್ರಶಸ್ತಿ ವಿಜೇತ ಚಿತ್ರಗಳನ್ನು ಘೋಷಿಸಲಾಗುವುದು ಎಂದು ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಪ್ರಶಂಸೆ ಪಡೆದುಕೊಂಡ “ವನ್ಯಾ” ಚಿತ್ರದ ನಿರ್ದೇಶಕರು ಹಾಗೂ ಸಿನಿಗನ್ನಡ ಚಲನಚಿತ್ರೋತ್ಸವದ ರೂವಾರಿಗಳಾದ ಬಡಿಗೇರ್ ದೇವೇಂದ್ರ ತಿಳಿಸಿದರು.

“ಅಕ್ಕ”ದಲ್ಲಿ ಪ್ರಶಸ್ತಿ ವಿಜೇತ ಚಿತ್ರಗಳು ಸೇರಿದಂತೆ ಹತ್ತು ಚಿತ್ರಗಳ ಪ್ರದರ್ಶನವಾಗುತ್ತವೆ. ವಿಜೇತ ಚಿತ್ರತಂಡದವರು ವೀಸಾ ಉಳ್ಳವರಾಗಿದ್ದರೆ ಅವರನ್ನು “ಅಕ್ಕ” ಸಮ್ಮೇಳನಕ್ಕೂ ಕರೆದುಕೊಂಡು ಹೋಗುವ ಯೋಜನೆ ಇದೆ.‌ ಉತ್ತಮ ಕನ್ನಡ ಚಿತ್ರಗಳನ್ನು ಅಮೆರಿಕಾದ ಕನ್ನಡಿಗರಿಗೆ ತಲುಪಿಸುವ ಉದ್ದೇಶದಿಂದ “ಅಕ್ಕ” ಸಮ್ಮೇಳನದ ಬೆಳ್ಳಿಹಬ್ಬದ ಸಂದರ್ಭದಲ್ಲಿ ಈ‌ “ಅಕ್ಕ-ಸಿನಿಗನ್ನಡ ಚಲನಚಿತ್ರೋತ್ಸವ” ವನ್ನು ಅಮೆರಿಕಾದ ಕನ್ನಡಿಗರ ಹೆಮ್ಮೆಯ ಅತಿದೊಡ್ಡ ಪ್ರಾತಿನಿಧಿಕ ಸಂಸ್ಥೆಯಾದ ‘ಅಕ್ಕ’ ಮತ್ತು ABGYOR VENTURES ಸಂಘಟಿಸಿದೆ.

ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ರೈನ್ ಮೇಕರ್ಸ್ ವರ್ಕ್ ಸ್ಪೇಸ್ ಎಂಬ ಸುಂದರ ಸ್ಥಳದಲ್ಲಿ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಇಪ್ಪತ್ತು ಆಸನಗಳುಳ್ಳ ಮಿನಿ ಥಿಯೇಟರ್ ಕೂಡ ಈ ಸ್ಥಳದಲ್ಲಿರುವುದು ವಿಶೇಷ. “ಅಕ್ಕ – ಸಿನಿಗನ್ನಡ ಚಲನಚಿತ್ರೋತ್ಸವದ” ಮಾರ್ಕೆಟಿಂಗ್ ನಿರ್ವಹಣೆಯನ್ನು ಕಂದಯ್ಯ ಶೆಟ್ಟಿ ಅವರು ಮಾಡುತ್ತಿದ್ದಾರೆ.

Visited 1 times, 1 visit(s) today
error: Content is protected !!