ಆರ್. ಚಂದ್ರು ನಿರ್ಮಾಣ ‘ಫಾದರ್’ ಚಿತ್ರದ ಟೀಸರ್‌ಗೆ ಪ್ರಶಂಸೆ

Spread the love

ಡಾರ್ಲಿಂಗ್ ಕೃಷ್ಣ ಹಾಗೂ ಪ್ರಕಾಶ್ ರಾಜ್ ಕಾಂಬಿನೇಷನ್‌ ನಲ್ಲಿ ಮೂಡಿಬರುತ್ತಿರುವ ಈ ‘ಫಾದರ್’ ಚಿತ್ರ ಬಿಡುಗಡೆಗೆ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳು.
“ತಾಜ್ ಮಹಲ್”, “ಚಾರ್ ಮಿನಾರ್”, “ಮೈಲಾರಿ” ಮುಂತಾದ ಚಿತ್ರಗಳ ನಿರ್ದೇಶಕರಾಗಿ ಕನ್ನಡಿಗರ ಮನ ಗೆದ್ದಿರುವ ಅರ್ ಚಂದ್ರು, “ಕಬ್ಜ” ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಭಾರತದಾದ್ಯಂತ ಹಾಗೂ ಭಾರತದಾಚೆಗೂ ಜನಪ್ರಿಯರಾದರು. ಪ್ರಸ್ತುತ ಆರ್ ಚಂದ್ರು, ತಮ್ಮದೇ ಆದ ಆರ್ ಸಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿ, ಆ ಸಂಸ್ಥೆಯ ಮೊದಲ ಚಿತ್ರವಾಗಿ “ಫಾದರ್” ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ.

“ಲವ್ ಮಾಕ್ಟೇಲ್” ಸರಣಿಗಳು ಹಾಗೂ ಅನೇಕ ಜನಪ್ರಿಯ ಚಿತ್ರಗಳ ಮೂಲಕ ಅಭಿಮಾನಿಗಳ ಮನಸೂರೆಗೊಂಡಿರುವ ಡಾರ್ಲಿಂಗ್ ಕೃಷ್ಣ ಹಾಗೂ ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರಾಜ್ ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. “ಫಾದರ್” ಅಪ್ಪ – ಮಗನ ಬಾಂಧವ್ಯದ ಚಿತ್ರವಾಗಿದ್ದು, ಪ್ರಕಾಶ್ ರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಅಪ್ಪ – ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ರಾಜಮೋಹನ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳನ್ನು ಪೂರ್ಣಗೊಳಿಸಿ ತೆರೆಗೆ ಬರಲು ಸಿದ್ದವಾಗಿರುವ ಬಹು ನಿರೀಕ್ಷಿತ “ಫಾದರ್” ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಟೀಸರ್ ನೋಡುಗರ ಮನ ಗೆದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಚಿತ್ರ ನೋಡುವ ಕಾತುರತೆಯನ್ನು ಹೆಚ್ಚಿಸಿದೆ. ಟೀಸರ್ ಗೆ ಸಿಗುತ್ತಿರುವ ಪ್ರಶಂಸೆಗೆ ಚಿತ್ರತಂಡ ಖುಷಿಯಾಗಿದೆ.

ಚಿತ್ರವನ್ನು ತುಂಬಾ ಪ್ರೀತಿಯಿಂದ ಹಾಗೂ ಯಾವುದೇ ಕೊರೆತೆ ಬಾರದ ಹಾಗೆ ನಿರ್ಮಾಣ ಮಾಡುವ ಆರ್ ಚಂದ್ರು ಅವರ ನಿರ್ಮಾಣದಲ್ಲಿ ಹಾಗೂ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನೆ ಗೆದ್ದಿರುವ ಡಾರ್ಲಿಂಗ್ ಕೃಷ್ಣ – ಪ್ರಕಾಶ್ ರಾಜ್ ಅಭಿನಯದ “ಫಾದರ್” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಈಗ ಬಿಡುಗಡೆಯಾಗಿರುವ ಟೀಸರ್, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇದಕ್ಕೆ ಪೂರಕವಾಗಿ ಹೆಸರಾಂತ “ಮ್ಯಾಕೀಸ್” ಸಂಸ್ಥೆ ಈ ಚಿತ್ರದ ವಿತರಣೆಯ ಹಕ್ಕನ್ನು ಪಡೆದುಕೊಂಡಿದೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಚಿತ್ರದ ಹಾಡುಗಳು ಹಾಗೂ ಟ್ರೇಲರ್ ಹೇಗಿರಬಹುದು? ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇದೊಂದು ಕೇವಲ ಚಿತ್ರವಾಗದೆ ಸಂಬಂಧಗಳೊಂದಿಗೆ ಪಯಣಿಸುವ ಭಾವನಾತ್ಮಕ ಅನುಭವವಾಗಲಿದೆ.

Visited 1 times, 1 visit(s) today
error: Content is protected !!