‘ಅತಿಕಾಯ’ ತಂಡ ಸೇರಿದ ರಾಕ್‌ಲೈನ್ ವೆಂಕಟೇಶ್

Spread the love

ರಂಗಿ ತರಂಗ ಖ್ಯಾತಿಯ ನಿರೂಪ್ ಭಂಡಾರಿ ಹಾಗೂ ಸ್ವಾತಿಷ್ಟ ಕೃಷ್ಣನ್ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ‘ಅತಿಕಾಯ’ ತಂಡಕ್ಕೆ ಖ್ಯಾತ ನಿರ್ಮಾಪಕ, ನಟ ರಾಕ್‌ಲೈನ್ ವೆಂಕಟೇಶ್ ಸೇರಿಕೊಂಡಿದ್ದಾರೆ. ಪೊಲೀಸ್ ಕಮಿಷನರ್ ಪಾತ್ರ ನಿರ್ವಹಿಸುತ್ತಿರುವ ಅವರು, ಖಡಕ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಾಗಲೇ ಖಾಕಿ ಖದರ್‌ನಲ್ಲಿ ಹಲವಾರು ಬಾರಿ ಮಿಂಚಿರುವ ರಾಕ್‌ಲೈನ್ ವೆಂಕಟೇಶ್, ಈ ಬಾರಿ ತುಸು ಹೆಚ್ಚೇ ಖಡಕ್ ಪಾತ್ರ ನಿಭಾಯಿಸುತ್ತಿದ್ದಾರೆ. ‘ನೈಜ ಘಟನೆಗಳು ಹಾಗೂ ವ್ಯಕ್ತಿಗಳಿಂದ ಸ್ಫೂರ್ತಿ ಪಡೆಯಲಾಗಿದೆ. ನಮ್ಮ ಸಿನಿಮಾದಲ್ಲಿನ ಪೊಲೀಸ್ ಕಮಿಷನರ್ ರಿಯಲ್ ಲೈಫ್‌ನಲ್ಲೂ ಇದ್ದರೆ ಚೆನ್ನಾಗಿರುತ್ತದೆ ಎನಿಸುವಷ್ಟು ನೈಜವಾಗಿ ಮೂಡಿಬಂದಿದೆ. ರಾಕ್‌ಲೈನ್ ವೆಂಕಟೇಶ್ ಅವರ ಸಪೋರ್ಟ್ ತುಂಬಾ ಇತ್ತು’ ಎನ್ನುತ್ತಾರೆ ನಿರ್ದೇಶಕ ನಾಗರಾಜ್ ಪೀಣ್ಯ.

ಈ ಹಿಂದೆ ಪದೇ ಪದೇ, ನಮಕ್‌ಹರಾಮ್ ಮೊದಲಾದ ವಿಭಿನ್ನ ರೀತಿಯ ಸಿನಿಮಾಗಳನ್ನು ನಿರ್ದೇಶಿಸಿದ್ದ ನಾಗರಾಜ್ ಪೀಣ್ಯ, ಇದೀಗ ‘ಅತಿಕಾಯ’ನಿಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಬಾರಿ ಹೊಸ ರೀತಿಯ ಕಥೆ ಸಿದ್ಧಪಡಿಸಿಕೊಂಡು ಅಖಾಡಕ್ಕಿಳಿದಿರುವ ನಾಗರಾಜ್, ಸದ್ಯ ಕೊನೆಯ ಹಂತದ ಚಿತ್ರೀಕರಣಕ್ಕೆ ಅಣಿಯಾಗುತ್ತಿದ್ದಾರೆ. ಈವರೆಗೂ ಬೆಂಗಳೂರಿನ ಜನಜಂಗುಳಿ ಪ್ರದೇಶಗಳಲ್ಲೇ ಬಹುತೇಕ ಚಿತ್ರೀಕರಣ ನಡೆಸಲಾಗಿದ್ದು, ನೈಜವಾಗಿ ಮೂಡಿಬರಬೇಕೆಂಬ ಕಾರಣದಿಂದ ರಿಯಲಿಸ್ಟಿಕ್ ಆಗಿಯೇ ಶೂಟ್ ಮಾಡಲಾಗಿದೆಯಂತೆ.

ಎ.ಎನ್ ಮೂವಿ ಮೇಕರ‍್ಸ್ ಹಾಗೂ ನಿಹಾಲ್ ಮೂವೀಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಸಿನಿಮಾವನ್ನು ಜೆ.ಮಹೇಶ್ ಕುಮಾರ್ ಅರ್ಪಿಸುತ್ತಿದ್ದಾರೆ. ಹರೀಶ್ ರಾಯ್, ದಿನೇಶ್ ಮಂಗ್ಳೂರು, ಬಿ.ಸುರೇಶ, ಪುಂಗ ಉಮೇಶ, ಕಾಕ್ರೋಚ್ ಸುಧೀ, ವಜ್ರಧೀರ್ ಜೈನ್, ವರ್ಧನ್ ತೀರ್ಥಹಳ್ಳಿ, ‘ಕಾಂತಾರ’ ಖ್ಯಾತಿಯ ರಕ್ಷಿತ್ ರಾಮಚಂದ್ರ ಶೆಟ್ಟಿ, ಮಹಾಂತೇಶ್ ಹಿರೇಮಠ್ ಹಾಗೂ ಜಾಕ್ ಜಾಲಿ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ಉದಯಲೀಲ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಶ್ರೀನಿವಾಸ್ ಪಿ ಬಾಬು ಸಂಕಲನ, ಸಚಿನ್ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ.

Visited 1 times, 1 visit(s) today
error: Content is protected !!