Cini NewsMovie Review

ಸೇವೆ – ಪ್ರೀತಿಯ ಸುಳಿಯಲ್ಲಿ ರಾಮನ ಓಡಾಟ…(ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ರಾಮನ ಅವತಾರ
ನಿರ್ದೇಶಕ : ವಿಕಾಸ್ ಪಂಪಾಪತಿ
ನಿರ್ಮಾಪಕ : ಅಮರೇಜ್ ಸೂರ್ಯವಂಶಿ
ಸಂಗೀತ : ಜೂಡಾ ಸ್ಯಾಂಡಿ
ಛಾಯಾಗ್ರಹಕ : ವಿಷ್ಣುಪ್ರಸಾದ್ , ಸಮೀರ್ ದೇಶ್ ಪಾಂಡೆ
ತಾರಾಗಣ : ರಿಷಿ , ಪ್ರಣೀತಾ ಸುಭಾಷ್ , ಶುಭ್ರ ಅಯ್ಯಪ್ಪ , ಅರುಣ್ ಸಾಗರ್ ಹಾಗೂ ಮುಂತಾದವರು…

ಸಾಮಾನ್ಯವಾಗಿ ನಮ್ಮ ಊರು , ಜನ , ಗೆಳೆಯರು ಅಂದಾಗಲೇ ಒಂದು ರೀತಿಯ ವಿಶೇಷ. ಇನ್ನು ಪ್ರೀತಿಸುವ ಗೆಳತಿ ಇದ್ದರಂತೂ ಮುಗಿದೇ ಹೋಯಿತು. ಇದೆಲ್ಲದರ ನಡುವೆ ಊರು ಉದ್ದಾರ ಮಾಡಲು ಹೊರಡುವ ಆಧುನಿಕ ರಾಮನ ಬದುಕಿನಲ್ಲಿ ಎದುರಾಗುವ ಎಡವಟ್ಟುಗಳು, ಅದನ್ನು ಎದುರಿಸುವ ಪರಿಯನ್ನ ರೋಮ್ಯಾಂಟಿಕ್ ಕಾಮಿಡಿ ಮೂಲಕ ಪ್ರೇಕ್ಷಕರ ಮುಂದೆ ಮೂರು ಅಧ್ಯಾಯದ ರೂಪಕವಾಗಿ ಈ ವಾರ ತೆರೆಯ ಮೇಲೆ ತಂದಿರುವಂತಹ ಚಿತ್ರ “ರಾಮನ ಅವತಾರ”.

ನಾವು ಹುಟ್ಟಿ ಬೆಳೆದಂತ ಜಾಗದಲ್ಲಿ ಬದುಕು ಕಟ್ಟಿಕೊಳ್ಳುವುದು ಮುಖ್ಯ ಎಂಬ ದೃಢ ನಿರ್ಧಾರ ಮಾಡುತ್ತಾನೆ ಜಂಟಲ್ ಮ್ಯಾನ್ ರಾಮ( ರಿಷಿ). ತಾನು ಪ್ರೀತಿಸಿದ ಹುಡುಗಿ ಪೂರ್ಣಿ (ಶುಭ್ರ ಅಯ್ಯಪ್ಪ) ಇಷ್ಟಪಟ್ಟಳು ಅನ್ನುವಷ್ಟರಲ್ಲಿ ಬೆಂಗಳೂರಿನಲ್ಲಿ ಕೆಲಸ ಸಿಕ್ಕಿತೆಂದು ದೂರವಾಗುತ್ತಾಳೆ. ಇದೇ ನೋವಿನಲ್ಲಿ ಗೆಳೆಯರ ಗ್ಯಾಂಗ್ ಕಟ್ಟಿಕೊಂಡು ಊರು ಉದ್ದಾರ ಮಾಡಲು ಸಮಾಜ ಸೇವೆಯೇ ದಾರಿ ಎನ್ನುತ್ತಾ ಊರ ಮುಖಂಡರ ಸಹಕಾರ ಪಡೆದು ರಾಜಕೀಯ ಸೇರಲು ಹಣ ಸಂಗ್ರಹಿಸುವ ಕೆಲಸಕ್ಕೆ ಮುಂದಾಗುವ ರಾಮ.

ಮಗನ ಅವತಾರಕ್ಕೆ ಬೇಸತ್ತ ಅಪ್ಪ ತನ್ನ ನಾಟಕ ಮಂಡಳಿಯಲ್ಲಿ ಪಾತ್ರಧಾರಿ ಬರದ ಕಾರಣ ರಾಮನ ಪಾತ್ರ ನಿರ್ವಹಿಸಲು ಹೇಳುತ್ತಾನೆ. ರಾಜಕೀಯಕ್ಕೆ ಬರುವ ರಾಮನಿಗೆ ಒಂದೊಂದು ಓಟು ಮುಖ್ಯ. ಇದರ ನಡುವೆ ಸಂಗ್ರಹಿಸಿದ ಹಣ ಕಾಣೆಯಾಗುತ್ತೆ. ಊರ ಜನರ ಕೋಪಕ್ಕೆ ಗುರಿಯಾಗಿ ಊರು ಬಿಡುವ ಪರಿಸ್ಥಿತಿ ಎದುರಾಗುತ್ತದೆ.

ಕಡಲ ಕಿನಾರೆಯ ರೆಸಾರ್ಟ್ ನಲ್ಲಿ ಕೆಲಸ ಮಾಡುವ ಗೆಳೆಯನ ಸಹಾಯ ಪಡೆಯುತ್ತಾ ಹಣ ಕದ್ದವನನ್ನ ಹುಡುಕಲು ಮುಂದಾಗುತ್ತಾನೆ. ಅದೇ ರೆಸಾರ್ಟ್ ನಲ್ಲಿ ಮುದ್ದಾದ ಚೆಲುವೆ ರಿಪೋರ್ಟರ್ ( ಪ್ರಣಿತಾ ಸುಭಾಷ್ ) ಪ್ರಾಜೆಕ್ಟ್ ವರ್ಕ್ ಗೆ ಬಂದಿದ್ದು , ರಾಮನ ಕಣ್ಣಿಗೆ ಬೀಳುತ್ತಾ ಮನಸ್ಸನ್ನ ಸೆಳೆಯುತ್ತಾಳೆ. ಆಕೆಗೆ ಸಹಾಯ ಮಾಡುವ ನೆಪದಲ್ಲಿ ಹೆಸರು , ಊರು , ಕುಟುಂಬ ಹಿನ್ನೆಲೆ ಕೇಳುವಷ್ಟರಲ್ಲಿ ಕಿಡ್ನಾಪ್ ಆಗುತ್ತಾಳೆ. ಇದರ ನಡುವೆ ಅಲೆಕ್ಸಾಂಡರ್ (ಅರುಣ್ ಸಾಗರ್) ಒಬ್ಬ ಗ್ಯಾಂಗ್ ಸ್ಟಾರ್ ಅವನದು ಡ್ರಗ್ಸ್ , ಹೆಣ್ಣುಮಕ್ಕಳ ಮಾರಾಟ ದಂಧೆ.

ಮುಂದೆ ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಕ್ಲೈಮಾಕ್ಸ್ ಅಂತಕ್ಕೆ ಬಂದು ನಿಲ್ಲುತ್ತದೆ.
ರಾಮನ ರಾಜಕೀಯ ಭವಿಷ್ಯ ಏನು…
ಕಿಡ್ನಾಪ್ ಮಾಡಿದ್ದು ಯಾರು…
ರಾಮನಿಗೆ ಪ್ರೀತಿ ಸಿಗುತ್ತಾ…
ಎಲ್ಲದಕ್ಕೂ ಉತ್ತರ ಚಿತ್ರಮಂದಿರಕ್ಕೆ ಬರಬೇಕು.

ಇನ್ನು ನಿರ್ದೇಶಕ ವಿಕಾಸ್ ಪಂಪಾಪತಿ ಆಧುನಿಕ ರಾಮನ ಆಲೋಚನೆಗೆ ಪೂರಕ ಎನ್ನುವಂತ ಕಥಾವಸ್ತು ಆಯ್ಕೆ ಮಾಡಿದ್ದು , ಚಿತ್ರಕಥೆ ಶೈಲಿ ಇನ್ನಷ್ಟು ಉತ್ತಮವಾಗಿ ಮಾಡಬಹುದಿತ್ತು. ರೋಮ್ಯಾಂಟಿಕ್ ಕಾಮಿಡಿ ಮೂಲಕ ಸಂಭಾಷಣೆ ಗಮನ ಸೆಳೆಯುತ್ತದೆ. ಇನ್ನು ಓಟ ನಿಧಾನ ಗತಿ ಅನಿಸುತ್ತದೆ. ಇದೆಲ್ಲದರ ನಡುವೆ ಹೇಳಿರುವ ವಿಚಾರ ಉತ್ತಮವಾಗಿದೆ. ಹೊಸ ಆಲೋಚನೆಗೆ ದುಡ್ಡು ಹಾಕಿರುವ ನಿರ್ಮಾಪಕ ಅಮರೇಜ್ ಸೂರ್ಯವಂಶಿ ಸಾಹಸ ಮೆಚ್ಚಬೇಕು. ಜೂಡಾ ಸ್ಯಾಂಡಿ ಹಿನ್ನೆಲೆ ಸಂಗೀತ ಗಮನ ಸೆಳೆಯುತ್ತದೆ. ಇನ್ನು ಛಾಯಾಗ್ರಹಕ ವಿಷ್ಣು ಪ್ರಸಾದ್ ಹಾಗೂ ಸಮೀರ್ ದೇಶ್ ಪಾಂಡೆ ಕೈ ಚಳಕ ಉತ್ತಮವಾಗಿದೆ.

ಇನ್ನು ನಾಯಕನಾಗಿ ರಿಷಿ ಎಂದಿನಂತೆ ತಮ್ಮ ಪಾತ್ರವನ್ನು ಬಹಳ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ರೋಮ್ಯಾಂಟಿಕ್ ಹುಡುಗನಾಗಿ ಮಾತಿನ ವರಸೆಯಲ್ಲೇ ಕಾಮಿಡಿ ಮೂಲಕ ಓಟಕ್ಕೆ ಪೂರಕವಾಗಿ ಸಾಗಿದ್ದಾರೆ. ಇನ್ನು ಇವರಿಗೆ ಜೋಡಿಯಾಗಿ ಪ್ರಣಿತಾ ಸುಭಾಷ್ ಮುದ್ದಾಗಿ ಕಾಣಿಸುತ್ತಾ ಸಿಕ್ಕ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅರುಣ್ ಸಾಗರ್ ಒಬ್ಬ ಬಹುಮುಖ ಪ್ರತಿಭೆ ಎಂಬುದನ್ನ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇನ್ನುಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದು , ಮನೋರಂಜನೆಯ ದೃಷ್ಟಿಯಿಂದ ಎಲ್ಲರೂ ಒಮ್ಮೆ ನೋಡುವಂತ ಚಿತ್ರ ಇದಾಗಿದೆ

error: Content is protected !!