Cini NewsMovie Review

‘ಯುವ’ ಚಿತ್ರ ಹೇಗಿದೆ..? ಇಲ್ಲಿದೆ ಚಿತ್ರವಿಮರ್ಶೆ (ರೇಟಿಂಗ್ : 4/5)

ಚಿತ್ರ : ಯುವ
ನಿರ್ದೇಶಕ : ಸಂತೋಷ್ ಆನಂದ್ ರಾಮ್
ನಿರ್ಮಾಪಕ : ವಿಜಯ್ ಕಿರಗಂದುರ್
ಸಂಗೀತ : ಬಿ. ಅಜಿನೀಶ್ ಲೋಕನಾಥ್
ಛಾಯಾಗ್ರಹಕ : ಶ್ರೀಶ ಕುದುವಲ್ಲಿ
ತಾರಾಗಣ : ಯುವರಾಜ್ ಕುಮಾರ್, ಸಪ್ತಮಿ ಗೌಡ ಅಚ್ಚುತ್ ಕುಮಾರ್ , ಸುಧಾರಾಣಿ , ಕಿಶೋರ್ ಕುಮಾರ್ , ಗೋಪಾಲಕೃಷ್ಣ ದೇಶಪಾಂಡೆ, ಹಿತ ಚಂದ್ರಶೇಖರ್, ಸಂದೀಪ್ ಮಲಾನಿ ಹಾಗೂ ಮುಂತಾದವರು…

 

ಬದುಕು ಎಲ್ಲರಿಗೂ ಪಾಠ ಕಲಿಸುತ್ತೆ. ಆದರೆ ಕಲಿಯುವ ಸಮಯ , ದಿಕ್ಕು ಬಹಳ ಮುಖ್ಯವಾಗಿರುತ್ತೆ. ಇಂತಹದ್ದೇ ಕಥಾಹಂದರದ ಮೂಲಕ ತಂದೆ ತಾಯಿಯ ಜವಾಬ್ದಾರಿ , ವಿದ್ಯಾರ್ಥಿಗಳ ಜೀವನ, ಗುರು ಶಿಷ್ಯರ ಸಂಬಂಧ, ಪ್ರೀತಿಯ ಸೆಳೆತ , ಜೀವನೋಪಾಯ ಮಾರ್ಗ , ಶ್ರದ್ಧೆ , ನಿಷ್ಠೆ , ಗುರಿ ಹೇಗೆಲ್ಲಾ ಬದುಕುವ ದಾರಿಯನ್ನ ತೋರಿಸುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ತೆರೆಯ ಮೇಲೆ ತಂದಿರುವಂತಹ ಯುವ ಪೀಳಿಗೆಯ ಚಿತ್ರ “ಯುವ”.

ಕಾಲೇಜು ಲೈಫ್ ಇಸ್ ಗೋಲ್ಡನ್ ಲೈಫ್ ಅನ್ನೋ ಮಾತಿದೆ. ಓದಿ ಉತ್ತಮ ಭವಿಷ್ಯ ಕಟ್ಟಿಕೊಳ್ಳಿ ಎಂಬ ತಂದೆ (ಅಚ್ಯುತ್ ಕುಮಾರ್) ಮಗ ಯುವ (ಯುವರಾಜ್‍ ಕುಮಾರ್) ನನ್ನ ಮಂಗಳೂರಿಗೆ
ಓದಿಗೆ ಅಂತ ಕಳಿಸುತ್ತಾರೆ. ಹಾಸ್ಟೆಲ್ ನಲ್ಲಿ ಇದ್ದುಕೊಂಡು ಓದುವ ಯುವ ಹಾಗೂ ಅವನ ಸಂಗಡಿಗರ ವಿರುದ್ಧ ಅದೇ ಇಂಜಿನಿಯರಿಂಗ್ ಕಾಲೇಜಿನ ಲೋಕಲ್ ವಿದ್ಯಾರ್ಥಿಗಳ ಗ್ಯಾಂಗ್ ವಾರ್ ಶುರುವಾಗುತ್ತೆ.

ಅದು ಬೆಳೆಯುತ್ತಾ ಕಾಲೇಜಿನ ವಾತಾವರಣವನ್ನೇ ಹಾಳು ಮಾಡುತ್ತದೆ. ಇದನ್ನ ಸರಿಪಡಿಸಲು ಪ್ರಿನ್ಸಿಪಾಲ್ ಹರಸಾಹಸ ಪಟ್ಟರು ಅದು ಗೊಂದಲದ ಗೂಡಾಗಿರುತ್ತದೆ. ಇನ್ನು ಇದರ ನಡುವೆ ಅದೇ ಕಾಲೇಜಿನ ವಿದ್ಯಾರ್ಥಿನಿ ಸಿರಿ (ಸಪ್ತಮಿ ಗೌಡ) ಯುವನ ಪ್ರೀತಿ , ನಿಷ್ಠೆ , ನಡುವಳಿಕೆಗೆ ಮನಸೋತಿರುತ್ತಾಳೆ.

ಮಗನ ವರ್ತನೆ ತಿಳಿಯುವ ಅಪ್ಪ ನನ್ನ ಕನಸು ನುಚ್ಚುನೂರು ಮಾಡಿದ ಅಂತ ನೋವಿನಲ್ಲೆ ಮಗ ಯುವನ ಬಿಟ್ಟು ಅದ್ದೂರಿಯಾಗಿ ಮಗಳ ಮದುವೆ ಮಾಡ್ತಾನೆ. ಮರುದಿನವೇ ತಂದೆ ನಾಪತ್ತೆ ಆಗುತ್ತಾನೆ. ಈ ವಿಚಾರ ತಿಳಿಯುವ ಯುವ ತಂದೆಯ ಹುಡುಕಾಟದಲ್ಲೇ ಫುಡ್ ಡೆಲಿವರಿ ಬಾಯಿ ಕೆಲಸ ಮಾಡುತ್ತಾ ಮನೆಯ ಜವಾಬ್ದಾರಿ ವಹಿಸಿಕೊಳ್ಳುತ್ತಾನೆ.

ಇದರ ಹಿಂದೆಯೂ ಒಂದು ಫ್ಲಾಶ್ ಬ್ಯಾಕ್ ಇದ್ದು , ಯುವ ಒಬ್ಬ ರಾಷ್ಟ್ರ ಮಟ್ಟದ ಕುಸ್ತಿಪಟು ಆಗುವ ಸಮಯಕ್ಕೆ ಆಗುವ ಎಡವಟ್ಟು ಅವನ ಭವಿಷ್ಯದ ದಿಕ್ಕನ್ನೇ ಬದಲಿಸಿರುತ್ತದೆ. ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ರೋಚಕ ಕ್ಲೈಮಾಕ್ಸ್ ಗೆ ಬಂದು ನಿಲ್ಲುತ್ತದೆ.
ಯುವನ ಕಾಲೇಜ್ ಲೈಫ್ , ತಂದೆ ಸಿಕ್ತಾರಾ, ಕುಸ್ತಿ ಗೆಲ್ತಾನಾ, ಪ್ರೀತಿ ಸಿಗುತ್ತಾ , ಈ ಎಲ್ಲಾ ಅಂಶ ತಿಳಿಯಬೇಕಾದರೆ ನೀವು ಯುವ ಚಿತ್ರ ನೋಡಬೇಕು.

ತಮ್ಮ ಪ್ರತಿ ಚಿತ್ರದಲ್ಲೂ ಜನಸಾಮಾನ್ಯರು ಅರಿಯಬೇಕಾದ ಸೂಕ್ಷ್ಮ ಅಂಶವನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಸಂತೋಷ್ ಆನಂದ್ ರಾಮ್ ಗೆದ್ದಿದ್ದಾರೆ. ತಂದೆ ಮಗನ ಒಡನಾಟ , ಬದುಕು ಕಲಿಸುವ ಪಾಠ , ಸಂಬಂಧಗಳ ಮೌಲ್ಯ , ಗುರಿಮುಟ್ಟುವ ಹಾದಿಯ ಬಗ್ಗೆ ಸಮಗ್ರವಾಗಿ ಬೆಳಕು ಚೆಲ್ಲಿದ್ದಾರೆ.

ಕಲಾವಿದರಗಳ ಆಯ್ಕೆ ಹಾಗೂ ಪಾತ್ರ ಪೋಷಣೆ ಅಚ್ಚುಕಟ್ಟಾಗಿದೆ. ಆದರೆ ಹೊಡೆದಾಟ ಹೆಚ್ಚಾಯ್ತು ಅನಿಸುತ್ತದೆ. ಚಿತ್ರದ ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುತ್ತದೆ. ಚಿತ್ರದ ಓಟ ಇನ್ನಷ್ಟು ವೇಗ ಮಾಡಿದರೆ ಚೆನ್ನಾಗಿರುತ್ತಿತ್ತು. ಇಡೀ ಸಾರಾಂಶ ಅರ್ಥ ಪೂರ್ಣವಾಗಿದೆ. ಯಶಸ್ವಿ ನಿರ್ಮಾಪಕ ವಿಜಯ್ ಕಿರಗಂದುರ್ ರವರ ಮತ್ತೊಂದು ಅರ್ಥಪೂರ್ಣ ಚಿತ್ರವಾಗಿ ಯುವ ಹೊರ ಬಂದಿದೆ. ಇನ್ನು ಅಜನೀಶ್ ಲೋಕನಾಥ್ ಸಂಗೀತ ಚಿತ್ರದ ಓಟಕ್ಕೆ ಕೈ ಜೋಡಿಸಿದ್ದು, ಹಿನ್ನೆಲೆ ಸಂಗೀತ ಹೆಚ್ಚು ಅಬ್ಬರಿಸಿದೆ. ಛಾಯಾಗ್ರಹಕ ಶ್ರೀಶ ಕುದುವಲ್ಲಿ ಕ್ಯಾಮೆರಾ ಕೈಚಳಕ ಅದ್ಭುತವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿರುವುದು ಕಾಣುತ್ತದೆ.

ಇಡೀ ಚಿತ್ರವನ್ನು ಆವರಿಸಿಕೊಂಡಿದ್ದಾರೆ ಯುವ ರಾಜಕುಮಾರ್. ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಲು ಬಹಳಷ್ಟು ಶ್ರಮಪಟ್ಟಿದ್ದಾರೆ. ಯುವ ಆಕ್ಷನ್ ದೃಶ್ಯಗಳಲ್ಲಿ ಖಡಕ್ಕಾಗಿ ಮಿಂಚಿದ್ದಾರೆ. ಅಷ್ಟೇ ಅದ್ಭುತವಾಗಿ ಡ್ಯಾನ್ಸಿಂಗ್ ಸ್ಟೆಪ್ನಲ್ಲೂ ಸೈ ಅಂದಿದ್ದಾರೆ. ಮತ್ತೊಬ್ಬ ಯುವ ನಾಯಕ ಚಿತ್ರರಂಗಕ್ಕೆ ಸಿಕ್ಕಂತಾಗಿದೆ.

ನಾಯಕಿಗೆ ಅಭಿನಯಿಸಿರುವ ಸಪ್ತಮಿ ಗೌಡ ತಮಗೆ ಸಿಕ್ಕ ಪಾತ್ರಕ್ಕೆ ಜೀವ ತುಂಬಿ ಬಹಳ ನೈಜ್ಯತೆಯಿಂದ ಅಭಿನಯಿಸಿದ್ದಾರೆ. ಇನ್ನು ತಂದೆಯ ಪಾತ್ರದಲ್ಲಿ ಅಚ್ಚುತ್ ಕುಮಾರ್ ಮಿಂಚಿದ್ದಾರೆ. ತಾಯಿಯ ಪಾತ್ರದಲ್ಲಿ ಸುಧಾರಾಣಿ , ಅಕ್ಕನಾಗಿ ಹಿತಾ ಚಂದ್ರಶೇಕರ್ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಪ್ರಾಂಶುಪಾಲರ ಪಾತ್ರ ಮಾಡಿರುವ ಗೋಪಾಲಕೃಷ್ಣ ದೇಶಪಾಂಡೆ ಗಮನ ಸೆಳೆಯುತ್ತಾರೆ. ಕುಸ್ತಿ ತರಬೇತಿದಾರರಾಗಿ ಕಿಶೋರ್ ಕುಮಾರ್ ಖಡಕ್ಕಾಗಿ ಅಬ್ಬರಿಸಿದ್ದಾರೆ. ಇನ್ನು ಸಂದೀಪ್ ಮಲಾನಿ, ರವಿಶಂಕರ್ ಗೌಡ ಸೇರಿದಂತೆ ಬರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಇಡೀ ಕುಟುಂಬ ಕುಳಿತು ನೋಡಬೇಕಾದಂತ ಚಿತ್ರ ಯುವ

error: Content is protected !!