ರೌಡಿಸಂ ಕಥಾನಕದಲ್ಲೊಂದು ಮೋಸದ ಪ್ರೀತಿ…”ರಕ್ಕಿ” ಚಿತ್ರವಿಮರ್ಶೆ-ರೇಟಿಂಗ್ : 3.5 /5)

Spread the love

ರೇಟಿಂಗ್ : 3.5 /5
ಚಿತ್ರ: ರಕ್ಕಿ
ನಿರ್ದೇಶಕ : ವೆಂಕಟ್ ಭಾರದ್ವಾಜ್
ನಿರ್ಮಾಪಕ : ಸಾಲಿಗ್ರಾಮ ಸುರೇಶ್
ಸಂಗೀತ : ಲೋಕಿ ತವಸ್ಯ
ಛಾಯಾಗ್ರಹಣ : ಐಸಾಕ್ ಪ್ರಭಾಕರ್
ತಾರಾಗಣ : ರಕ್ಕಿ ಸುರೇಶ್, ಪಲ್ಲವಿ ಮಂಜುನಾಥ್, ಆಶಿಕಾ ಸೋಮಶೇಖರ್, ಬಿ.ಸರೇಶ್, ಸಂಪತ್ ಮೈತ್ರೇಯ, ರಮೇಶ್ ಪಂಡಿತ್, ಬಲ ರಾಜವಾಡಿ, ಹರಿಣಿ ಶ್ರೀಕಾಂತ್ ಹಾಗೂ ಮುಂತಾದವರು…

ಬದುಕಿನಲ್ಲಿ ಪ್ರೀತಿ , ನಂಬಿಕೆ , ಸಂಬಂಧಗಳೇ ಬಹಳ ಮುಖ್ಯ. ಇದರಲ್ಲಿ ಯಾವುದೇ ಏರುಪೇರಾದರೆ ಜೀವನದ ದಿಕ್ಕೆ ಬದಲಾಗುತ್ತಾ ಹೋಗುತ್ತದೆ. ಮುಗ್ಧರು ಕ್ರೂರಿಗಳಾಗುತ್ತಾರೆ , ಇದನ್ನೇ ಅಸ್ತ್ರವಾಗಿ ಮಾಡಿಕೊಳ್ಳುವ ರಾಜಕೀಯ ಮುಖಂಡರು , ಪೊಲೀಸ್ ಇಲಾಖೆಗಳು ತಮ್ಮ ಬೇಳೆಯನ್ನು ಬೇಯಿಸಿಕೊಳ್ಳಲು ಮುಂದಾಗುತ್ತಾರೆ. ಇದರ ನಡುವೆ ಎದುರಾಗುವ ಪ್ರೀತಿಯ ದೋಖದ ಸುತ್ತ ಕ್ರೈಮ್ , ಥ್ರಿಲ್ಲರ್ , ಪೊಲಿಟಿಕಲ್ ಕಥಾಹಂದರ ದೊಂದಿಗೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರಕ್ಕಿ”.

ಡ್ಯಾನಿ (ಬಿ. ಸುರೇಶ) ಅಂಡರ್ ವರ್ಲ್ಡ್ ರೌಡಿ ತನ್ನದೇ ಗ್ಯಾಂಗ್ಸ್ಟರ್ ಟೀಮ್ ನೊಂದಿಗೆ ಸುಪಾರಿ ಪಡೆಯುತ್ತಾ ಕ್ರಿಮಿನಲ್ ಕೆಲಸವನ್ನ ನಡೆಸುತ್ತಾನೆ. ಇವನ ಪತ್ನಿ ಮಂಗಳ (ಹರಿಣಿ ಶ್ರೀಕಾಂತ್) ಕೂಡ ರೌಡಿ ಮಗಳು , ಇನ್ನು ಇವರಿಬ್ಬರ ಪುತ್ರಿ ಸಿರಿ (ಪಲ್ಲವಿ ಮಂಜುನಾಥ್) ಗೂ ಎಲ್ಲಾ ವಿಚಾರ ಗೊತ್ತಿದ್ದು , ಅಪ್ಪನ ಗ್ಯಾಂಗಿನಲ್ಲಿರುವ ರಕ್ಕಿ( ರಕ್ಕಿ ಸುರೇಶ್) ಎಂದರೆ ಪ್ರಾಣ. ಇದರ ನಡುವೆ ಎಲೆಕ್ಷನ್ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷದ ಅಧ್ಯಕ್ಷ ಪುಷ್ಕರ್ (ಬಲ ರಾಜವಾಡಿ) ಬಳಿ ಅಭ್ಯರ್ಥಿಯ ಟಿಕೆಟ್ ಪಡೆಯಲು ಒಂದಷ್ಟು ಅಭ್ಯರ್ಥಿಗಳ ಹಣದ ಲಾಬಿ ಜೋರಾಗಿ ನಡೆಯುತ್ತಾ ಹೋಗುತ್ತದೆ.

ಶ್ರೀಮಂತ ವ್ಯಕ್ತಿ ವಿವೇಕ್ ಅಭ್ಯರ್ಥಿ ಸ್ಥಾನಕ್ಕೆ ಪ್ರೇಯಸಿ ಸುಮಾ ಬೆಂಬಲವಾಗಿ ನಿಂತರು ಒಂದು ನಿಗೂಢತೆ ಅಡಗಿರುತ್ತೆ. ಇನ್ನು ಗ್ಯಾಂಗ್ ಲೀಡರ್ ಡ್ಯಾನಿ ತನ್ನ ತಂಡದ ಗಣೇಶ (ಸಂಪತ್ ಮೈತ್ರೇಯ) ಹಾಗೂ ರಕ್ಕಿಗೆ ಆಗಾಗ ಕೆಲವು ಕ್ರಿಮಿನಲ್ ಕೆಲಸದ ಜವಾಬ್ದಾರಿ ನೀಡಿದರು ಒಂದಷ್ಟು ಕಿತ್ತಾಟ ಮಾತಿನ ಚಿಕ್ಕಮಕಿ ಇಬ್ಬರಲ್ಲೂ ಇದ್ದೇ ಇರುತ್ತೆ. ಇನ್ನು ರಕ್ಕಿಯ ಪ್ರೀತಿಯ ಫ್ಲಾಶ್ ಬ್ಯಾಕ್ ಗೆಳೆಯ ಡ್ರಾಕುಲಾ (ಗೋವಿಂದೇಗೌಡ) ಮೂಲಕ ಡ್ಯಾನಿಗೆ ತಿಳಿಯುತ್ತದೆ. ಮುಂದೆ ಎದುರಾಗುವ ಒಂದಷ್ಟು ಘಟನೆಗಳು ಕೊಂಡಿಯಂತೆ ಸಾಗಿ ಕ್ಲೈಮಾಕ್ಸ್ ಹಂತಕ್ಕೆ ಬರುತ್ತದೆ. ಏನದು ಘಟನೆ… ರಕ್ಕಿ ಯಾರು… ಫ್ಲಾಶ್ ಬ್ಯಾಕ್ ಏನು… ಇದೆಲ್ಲದಕ್ಕೂ ಒಮ್ಮೆ ಚಿತ್ರ ನೋಡಬೇಕು.

ನಿರ್ದೇಶಕ ವೆಂಕಟ್ ಭರದ್ವಾಜ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ವಿಭಿನ್ನವಾಗಿದೆ. ಕ್ರೈಂ , ಸಸ್ಪೆನ್ಸ್ ಕಥಾನಕದಲ್ಲಿ ಮೋಸದ ಪ್ರೀತಿ , ನಂಬಿಕೆ ದ್ರೋಹ , ರಾಜಕೀಯ ಕುತಂತ್ರ , ಕಳ್ಳ ಪೊಲೀಸ ಆಟದ ನಡುವೆ ಒಳ್ಳೆ ಬದುಕು ಕಾಣುವ ದಾರಿಯೂ ಇದೆ ಎಂಬುದನ್ನು ತೋರಿಸುವುದು ಗಮನ ಸೆಳೆಯುತ್ತದೆ. ಚಿತ್ರಕಥೆ , ಸಂಭಾಷಣೆ ಇನ್ನು ಬಿಗಿ ಆಗಬೇಕಿತ್ತು ಅನಿಸುತ್ತದೆ. ಕೆಲವು ಸನ್ನಿವೇಶಗಳು ಸಿನಿಮೆಟಿಕ್ ಬಿಟ್ಟು ಡ್ರಾಮೆಟಿಕ್ ಆದಂತಿದೆ.

ಸಂಗೀತ ಓಟಕ್ಕೆ ಪೂರಕವಾಗಿದ್ದು , ಛಾಯಾಗ್ರಾಹಕರ ಕೈಚಳಕ ಗಮನ ಸೆಳೆಯುತ್ತದೆ. ಬಜೆಟ್ ಗೆ ತಕ್ಕಂತೆ ಸಿನಿಮಾ ಮಾಡಿದಂತಿದೆ. ನಾಯಕನಾಗಿ ಅಭಿನಯಿಸಿರುವ ಯುವ ಪ್ರತಿಭೆ ರಕ್ಕಿ ಸುರೇಶ್ ಪಾತ್ರಕ್ಕೆ ನ್ಯಾಯ ಒದಗಿಸಲು ಬಹಳಷ್ಟು ಶ್ರಮ ಪಟ್ಟಿದ್ದು , ನೋಡಲು ಸುಂದರವಾಗಿರುವ ಈ ನಟ ಇನ್ನಷ್ಟು ತಾಲಿಮು ಮಾಡಿದರೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ. ನಟಿಯರಾದ ಪಲ್ಲವಿ ಮಂಜುನಾಥ್ , ಆಶಿಕಾ ಸೋಮಶೇಖರ್ ತಮ್ಮ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಇನ್ನು ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರದಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಹೆಚ್ಚು ಆರ್ಭಟವಿಲ್ಲದೆ ಸಾಗಿರುವ ಚಿತ್ರವನ್ನ ನೋಡಬಹುದು.

Visited 1 times, 1 visit(s) today
error: Content is protected !!