ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಫಸ್ಟ್ ಲುಕ್ ಬಿಡುಗಡೆ

Spread the love

ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಹಾಗೂ ಹೊಸ ಬಗೆಯ ಕಥಾವಸ್ತುಗಳ ಮೂಲಕವೇ ಸದಾ ಗಮನಸೆಳೆಯುವ ನಿರ್ದೇಶಕ ‘ಸಿಂಪಲ್’ ಸುನಿ ಇದೀಗ ಮತ್ತೊಂದು ಕುತೂಹಲಕಾರಿ ಕಥಾಹಂದರದೊಂದಿಗೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ‘ಲಂಬೋದರ 2.0’ ಚಿತ್ರದ ಅಧಿಕೃತ ಫಸ್ಟ್ ಲುಕ್ ಪೋಸ್ಟರ್ ಇದೀಗ ಬಿಡುಗಡೆಯಾಗಿದ್ದು, ಸಿನಿರಸಿಕರಲ್ಲಿ ಭಾರಿ ಕುತೂಹಲ ಹುಟ್ಟುಹಾಕಿದೆ. ಮಹಾವೀರ್ ಜೈನ್ ಫಿಲ್ಮ್ಸ್ ಪ್ರಸ್ತುತಿಯಲ್ಲಿ, ಮಾಸ್ ಪ್ರೊಡಕ್ಷನ್ ಸಂಸ್ಥೆಯು ಈ ಮಹತ್ವಾಕಾಂಕ್ಷೆಯ ಚಿತ್ರವನ್ನು ಅತ್ಯಂತ ಅದ್ದೂರಿಯಾಗಿ ನಿರ್ಮಿಸುತ್ತಿದೆ.

ಈ ಚಿತ್ರವು ಕೇವಲ ಮನರಂಜನೆಗೆ ಸೀಮಿತವಾಗಿರದೆ, ಮನುಷ್ಯನ ನಿಜವಾದ ಸಂತೋಷ, ಕೃತಕ ಬುದ್ಧಿಮತ್ತೆ (AI), ರೋಬೋಟಿಕ್ಸ್ ಹಾಗೂ ಮಾನವಕುಲದ ಭವಿಷ್ಯದ ಸುತ್ತ ಸಾಗುವ ಸೈಂಟಿಫಿಕ್ ಸೋಷಿಯಲ್ ಥ್ರಿಲ್ಲರ್ ಜಾನರ್‌ನಲ್ಲಿ ತೆರೆಗೆ ಬರಲಿದೆ. “ಭಾರತ ವಿಶ್ವದ ಅತ್ಯಂತ ಸಂತೋಷದ ದೇಶವಾಗುತ್ತಾ?”, “ಭಾರತದ ಅತ್ಯಂತ ಸಂತೋಷದ ವ್ಯಕ್ತಿ ಯಾರಾಗುತ್ತಾರೆ?”, “ಮನುಷ್ಯನಿಗೆ ಅಸಲಿ ಸಂತೋಷ ನೀಡುವುದು ಯಾವುದು?” ಎಂಬಿತ್ಯಾದಿ ಗಂಭೀರ ಹಾಗೂ ಆಕರ್ಷಕ ಪ್ರಶ್ನೆಗಳನ್ನಿಟ್ಟುಕೊಂಡು ಐದು ವಿಭಿನ್ನ ಪಾತ್ರಗಳ ಸುತ್ತ ಈ ಕಥೆ ಹೆಣೆಯಲಾಗಿದೆ. ವಿಭಿನ್ನ ಪ್ರಪಂಚಗಳ ಆ ಐದು ಜೀವಿಗಳು ನಿಜವಾದ ಸಂತೋಷದ ಹುಡುಕಾಟದಲ್ಲಿ ಸಾಗುವ ರೋಚಕ ಪಯಣವೇ ಚಿತ್ರದ ಮುಖ್ಯ ತಿರುಳು.

ಚಿತ್ರದಲ್ಲಿ ಬಹುತಾರಾಗಣವಿದ್ದು, ಅನಿಲ್ ಶೆಟ್ಟಿ, ಕುನಾಲ್ ಕಪೂರ್, ಸಾಚಿ ಬಿಂದ್ರಾ, ಮೇಘನಾ ಗಾಂವ್ಕರ್ ಹಾಗೂ ಮ್ಯಾಕ್ ಡಿಸೋಜಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ, ‘ಜಿಯಾ’ ಹೆಸರಿನ ಹ್ಯೂಮನಾಯ್ಡ್ ರೋಬೋಟ್ ಕೂಡ ಚಿತ್ರದ ಪ್ರಮುಖ ಆಕರ್ಷಣೆಯಾಗಿ ಬಣ್ಣಹಚ್ಚುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ಪೋಸ್ಟರ್‌ನಲ್ಲಿ ‘ಸಂತೋಷ ಲೋಡಿಂಗ್… 92%’ ಎಂಬ ಟ್ಯಾಗ್‌ಲೈನ್ ಮೂಲಕ ಚಿತ್ರತಂಡ ವಿಭಿನ್ನ ಪ್ರಚಾರಕ್ಕೆ ಮುನ್ನುಡಿ ಬರೆದಿದೆ. ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಾಣಲು ಸಜ್ಜಾಗಿರುವ ‘ಲಂಬೋದರ 2.0’ ಚಿತ್ರವು ಇದೇ ನವೆಂಬರ್ 20ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಗ್ರ್ಯಾಂಡ್ ರಿಲೀಸ್ ಆಗಲಿದೆ.

Visited 1 times, 1 visit(s) today
error: Content is protected !!