‘ನೆನಪಾದಳು ಶಾಕುಂತಲೆ’ ಚಿತ್ರದ ಚಿತ್ರೀಕರಣ ಮುಕ್ತಾಯ

Spread the love

ಕಿರಣ್ ಹಳ್ಳಿಮೈಸೂರು ಅರ್ಪಿಸುವ, ವಿಸ್ಮಯ ವೆಂಚರ್ಸ್ ಮೂಲಕ ವಿಸ್ಮಯ ಕೆ. ನಿರ್ಮಾಣದ ನೆನಪಾದಳು ಶಾಕುಂತಲೆ ಚಿತ್ರದ ಚಿತ್ರೀಕರಣವನ್ನು ಇತ್ತೀಚೆಗೆ ಮುಗಿಸಿದ ಚಿತ್ರತಂಡ ಶ್ರೀ ಬಂಡೆ ಮಹಾಕಾಳಮ್ಮ ದೇವಸ್ಥಾನದ ಮುಂದೆ ಕುಂಬಳಕಾಯಿ ಒಡೆದಿದೆ. ಈ ಹಿಂದೆ ಸಾಲ್ಟ್ ಎಂಬ ಚಿತ್ರ ನಿರ್ಮಿಸಿದ್ದ ಪ್ರೊಡಕ್ಷನ್ ಹೌಸ್ ಜಂಟಿಯಾಗಿ ವಿಸ್ಮಯ ಕೆ ವೆಂಚರ್ಸ್ ಬ್ಯಾನರ್ ಅಡಿಯಲ್ಲಿ 5 ವರ್ಷಗಳ ನಂತರ ದಿಯಾ, ಲವ್ ಮಾಕ್ಟೇಲ್ ನೆನಪಿಸುವಂಥ, ವಿಭಿನ್ನ ಪ್ರೇಮಕಾವ್ಯವನ್ನು ಹೊತ್ತು ತರುತ್ತಿದೆ. ವಿನಯ್ ಚಂದ್ರಹಾಸ- ವಿರಾಜ್ ಕೋಲಾಟ್ಲು ಈ ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ ಹಾಗೂ ವಿನಯ್ ಚಂದ್ರಹಾಸ ನಿರ್ದೇಶನ ಮಾಡಿದ್ದಾರೆ.

ಪುರಾಣದ ಕಾವ್ಯಾತ್ಮಕ ನೆರಳು ಹಾಗೂ ಆಧುನಿಕ ಕಾಲದ ಪ್ರೇಮವನ್ನು ಮೇಳೈಸಿದ ‘ನೆನಪಾದಳು ಶಾಕುಂತಲೆ’ ಚಿತ್ರವು ಪಾರ್ಥಸಾರಥಿ ಎಂಬ ಯುವ ಸ್ಟಾರ್ಟ್ ಅಪ್ ಸಂಸ್ಥಾಪಕನ ಪ್ರೀತಿ, ಪ್ರೇಮದ ಕಥೆಯನ್ನು ಹೇಳಲಿದೆ. ಪ್ರಥಮ ಪ್ರೀತಿಯ ವೈಫಲ್ಯದಿಂದ ಹೊರಬರಲು ನಾಯಕ, ಅಕ್ಕನ ಊರಿಗೆ ಬರುತ್ತಾನೆ. ಅಲ್ಲಿನ ಹಳೆಯ ಗ್ರಂಥಾಲಯದಲ್ಲಿ ಆತನಿಗೆ ಯುವತಿಯೊಬ್ಬಳ ಭೇಟಿಯಾಗುತ್ತದೆ.

ಆಕೆಯ ಸಾನ್ನಿಧ್ಯ ಆತನ ಜೀವನದ ದಿಕ್ಕನ್ನೇ ಬದಲಿಸುತ್ತದೆ. ಮೈಸೂರು, ಕೊಡಚಾದ್ರಿ,‌ ಕೊಡ್ಲಿ ಪೇಟೆ ಸುತ್ತಮುತ್ತ 36 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಪ್ರಸನ್ನಕುಮಾರ್ ಎಂ.ಎಸ್ ಸಂಗೀತ ನೀಡಿರುವ ಈ ಚಿತ್ರದ ಐದೂ ಹಾಡುಗಳಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ವಿಶಾಲ್ ಕುಮಾರ್ ಗೌಡ ಛಾಯಾಗ್ರಹಣ ಈ ಚಿತ್ರಕ್ಕಿದೆ.

ಪ್ರಾಚೀನ ಕಾಲದ ದುಷ್ಯಂತ-ಶಾಕುಂತಲೆಯ ಗಾಂಧರ್ವ ವಿವಾಹದ ಸಾದೃಶ್ಯವನ್ನು ಹೊತ್ತ ಈ ಕಥೆ, ನೆನಪು ಮತ್ತು ಹಂಬಲಗಳ ನಡುವೆ ಸಾಗುವ ಸುಂದರ ಕಾವ್ಯದಂತಿದೆ. ಸಧ್ಯ ಚಿತ್ರವೀಗ ಸೆನ್ಸಾರ್ ಹಂತದಲ್ಲಿದ್ದು, ನವೆಂಬರ್ ವೇಳೆಗೆ ರಿಲೀಸ್ ಮಾಡುವ ಯೋಜನೆಯಿದೆ ಎಂದು ಚಿತ್ರದ ಕ್ರಿಯೇಟಿವ್ ಹೆಡ್ ಆದ ಕಿರಣ್ ಹಳ್ಳಿಮೈಸೂರು ಅವರು ತಿಳಿಸಿದ್ದಾರೆ.
ಆಧುನಿಕ ಪ್ರೇಮಕಥೆಯ ಜೊತೆಗೆ ಪುರಾಣದ ಸ್ಪರ್ಶವಿರುವ ‘ನೆನಪಾದಳು ಶಾಕುಂತಲೆ’ ತನ್ನ ಟೈಟಲ್ ಮೂಲಕವೇ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

ಈ ಚಿತ್ರವನ್ನು ವಿಸ್ಮಯ ಕೆ. ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಭಾಸ್ಕರನ್ ಮುತ್ತುಸ್ವಾಮಿ ಸಹ ನಿರ್ಮಾಪಕರು. ಈ ಚಿತ್ರದಲ್ಲಿ ರಂಗಭೂಮಿ ಕಲಾವಿದ ವಿರಾಜ್ ಕೋಲಾಟ್ಲು ಪ್ರಥಮ ಭಾರಿಗೆ ಬೆಳ್ಳಿತೆರೆಗೆ ನಾಯಕನಾಗಿ ಹಾಗು ಕಾವ್ಯ ಭಗವಂತ್ ನಾಯಕಿಯಾಗಿ ನಟಿಸಿದ್ದಾರೆ, ಕಥೆಗೆ ಪೂರಕವಾಗಿ ತಬಲಾ ನಾಣಿ, ಮಂಡ್ಯ ರಮೇಶ್, ಸ್ಪಂದನ ಪ್ರಸಾದ್, ಸುನೇತ್ರ ಪಂಡಿತ್, ಮೂಗು ಸುರೇಶ್ ಹಾಗೂ ಹೊಸ ಹಾಸ್ಯ ಕಲಾವಿದ ಹರ್ಷವರ್ಧನ ಪ್ರಸಾದ್ ಚಿತ್ರಕ್ಕೆ ಜೀವ ತುಂಬಿದ್ದಾರೆ…

Visited 1 times, 1 visit(s) today
error: Content is protected !!