ಡಿಸೆಂಬರ್ 24ಕ್ಕೆ ಧನಂಜಯ್ ಅಭಿನಯದ ‘ಅಣ್ಣ ಫ್ರಮ್ ಮೆಕ್ಸಿಕೋ’ ರೀಲಿಸ್
ಕನ್ನಡ ಚಿತ್ರರಂಗದ ಖ್ಯಾತ ನಟ, ‘ನಟರಾಕ್ಷಸ’ ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಮ್ ಮೆಕ್ಸಿಕೋ’ (Anna From Mexico) ಸಿನಿಮಾದ ಬಿಡುಗಡೆ ದಿನಾಂಕ ಅಧಿಕೃತವಾಗಿ ಘೋಷಣೆಯಾಗಿದೆ. ಕ್ರಿಸ್ಮಸ್ ಹಾಗೂ ಹೊಸ ವರ್ಷದ ಸಾಲು ಸಾಲು ರಜಾದಿನಗಳ ಸಂಭ್ರಮವನ್ನು ದುಪ್ಪಟ್ಟು ಮಾಡಲು, ಈ ಸಿನಿಮಾ ಮುಂಬರುವ ಡಿಸೆಂಬರ್ 24ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ವರ್ಷಾಂತ್ಯಕ್ಕೆ ಅಭಿಮಾನಿಗಳಿಗೆ ದೊಡ್ಡ ಮಟ್ಟದ ಮನರಂಜನೆ ನೀಡಲು ಸಜ್ಜಾಗಿರುವ ಈ ಸುದ್ದಿ ಡಾಲಿ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಹಾಗೂ ಸಂತಸ ಮೂಡಿಸಿದೆ.ಈ ಚಿತ್ರದ ವಿಶೇಷವೆಂದರೆ, 2021ರ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ನಲ್ಲಿ ಸೂಪರ್ ಡೂಪರ್ ಹಿಟ್ ಆಗಿದ್ದ ‘ಬಡವ ರಾಸ್ಕಲ್’ ಸಿನಿಮಾದ ಜೋಡಿ ಈಗ ಬರೋಬ್ಬರಿ ಐದು ವರ್ಷಗಳ ಬಳಿಕ ಮತ್ತೆ ಒಂದಾಗಿದೆ.
‘ಬಡವ ರಾಸ್ಕಲ್’ ಚಿತ್ರದ ಮೂಲಕವೇ ಧನಂಜಯ್ ತಮ್ಮ ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾಗಿ ಬಡ್ತಿ ಪಡೆದು ಯಶಸ್ಸು ಕಂಡಿದ್ದರು. ಆ ಚಿತ್ರವನ್ನು ಯಶಸ್ವಿಯಾಗಿ ನಿರ್ದೇಶಿಸಿದ್ದ ಶಂಕರ್ ಗುರು, ಈಗ ಎರಡನೇ ಬಾರಿಗೆ ಧನಂಜಯ್ ಅವರಿಗೆ ‘ಅಣ್ಣ ಫ್ರಮ್ ಮೆಕ್ಸಿಕೋ’ ಚಿತ್ರದ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಿಟ್ ಜೋಡಿ ಮತ್ತೆ ಅದೇ ಡಿಸೆಂಬರ್ ತಿಂಗಳಲ್ಲೇ ಒಂದಾಗಿ ಚಿತ್ರಮಂದಿರಕ್ಕೆ ಎಂಟ್ರಿ ನೀಡುತ್ತಿರುವುದು ಸಿನಿಪ್ರಿಯರಲ್ಲಿ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ.

ಪಕ್ಕಾ ಆಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್ಟೇನರ್ ಎಲಿಮೆಂಟ್ಸ್ ಹೊಂದಿರುವ ಈ ಸಿನಿಮಾದಲ್ಲಿ ಧನಂಜಯ್ಗೆ ನಾಯಕಿಯಾಗಿ ಸ್ಯಾಂಡಲ್ವುಡ್ನ ಉದಯೋನ್ಮುಖ ನಟಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಉಳಿದಂತೆ ರಂಗಾಯಣ ರಘು, ನಾಗಭೂಷಣ ಹಾಗೂ ಪೂರ್ಣಚಂದ್ರ ಮೈಸೂರು ಸೇರಿದಂತೆ ಬಲವಾದ ತಾರಾಗಣವೇ ಚಿತ್ರದಲ್ಲಿದ್ದು, ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶೇಷವೆಂದರೆ, ನಟ ಲೂಸ್ ಮಾದ ಯೋಗಿ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೋಸ್ ಜಂಟಿ ಬ್ಯಾನರ್ನಡಿ ಅದ್ಧೂರಿ ವೆಚ್ಚದಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ವಾಸುಕಿ ವೈಭವ್ ಅವರ ಸಂಗೀತ ನಿರ್ದೇಶನವಿದ್ದು, ಹಿನ್ನೆಲೆ ಸಂಗೀತ ಹಾಗೂ ಹಾಡುಗಳ ಮೇಲೆ ಅಪಾರ ನಿರೀಕ್ಷೆಯಿದೆ. ತಾಂತ್ರಿಕ ಬಳಗದಲ್ಲಿ ಅಜಯ್ ಅವರ ಸಂಕಲನ ಹಾಗೂ ಗುಣ ಅವರ ಕಲಾ ನಿರ್ದೇಶನವಿದ್ದು, ಅದ್ಧೂರಿ ಮೇಕಿಂಗ್ನೊಂದಿಗೆ ಸಿನಿಮಾ ಡಿಸೆಂಬರ್ 24ಕ್ಕೆ ಪ್ರೇಕ್ಷಕರ ಮುಂದೆ ಬರಲು ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ.