“ಕರಾವಳಿ”ಯಲ್ಲಿ ಕಂಬಳದ ಕುರ್ಚಿಯ ಕದನದಲ್ಲಿ ರಕ್ತಪಾತ (ಚಿತ್ರವಿಮರ್ಶೆ -ರೇಟಿಂಗ್ : 4/5)

Spread the love

ರೇಟಿಂಗ್ : 4/5
ಚಿತ್ರ : ಕರಾವಳಿ
ನಿರ್ದೇಶಕ : ಗುರುದತ್ ಗಾಣಿಗ
ನಿರ್ಮಾಪಕರು : ವಿನೋದ್ ಕುಮಾರ್,
ಸಂಗೀತ : ಸಚಿನ್ ಬಸ್ರೂರು
ಛಾಯಾಗ್ರಹಣ : ಅಭಿಮನ್ಯು ಸದಾನಂದನ್
ತಾರಾಗಣ : ಪ್ರಜ್ವಲ್ ದೇವರಾಜ್, ರಾಜ್ ಬಿ ಶೆಟ್ಟಿ, ಸಂಪದಾ , ರಮೇಶ್ ಇಂದಿರಾ, ಮಿತ್ರಾ, ಸುಶ್ಮಿತಾ ಭಟ್, ಗೋವಿಂದೇಗೌಡ ಹಾಗೂ ಮುಂತಾದವರು…

ಕರಾವಳಿ ಭಾಗದಲ್ಲಿ ನಡೆಯುವ ಆಚರಣೆ , ದೈವ ನಂಬಿಕೆಗಳು , ಪದ್ಧತಿಗಳು , ಕಂಬಳಗಳಲ್ಲಿ ಕೋಣಗಳ ಓಟವು ಸರಿಸುಮಾರು 800 ವರ್ಷಕ್ಕೂ ಹೆಚ್ಚಿನ ಕಾಲದಿಂದ ನಡೆಯುತ್ತಾ ಬಂದಿದ್ದು , ಈ ಸಂಪ್ರದಾಯ ತನ್ನದೇ ಆದ ಮಹತ್ವವನ್ನ ಪಡೆದುಕೊಂಡಿದೆ. ಅಂತದ್ದೇ ದೊಡ್ಡ ಇತಿಹಾಸ ಇರುವ ಕರಾವಳಿಯಲ್ಲಿ ಮಹಾರಾಜರ ಕಾಲಘಟ್ಟದಲ್ಲಿ ನಡೆದಂತಹ ಕಂಬಳದ ಓಟ , ಅರಸರ ಕುರ್ಚಿ , ಕೋಟಿ ಚೆನ್ನಯ್ಯ ಕ್ರೀಡಾ ಕಂಬಳದ ಸ್ಪರ್ಧೆ , ಸ್ನೇಹ , ಪ್ರೀತಿ , ಗೆಳೆತನ , ನಂಬಿಕೆ ದ್ರೋಹ , ದ್ವೇಷ , ಕುರ್ಚಿಗಾಗಿ ಕದನ , ಸ್ಪರ್ಧೆಯಲ್ಲಿ ಶಪಥ ಹೀಗೆ ಒಂದಷ್ಟು ಕರಾವಳಿಯ ನೈಜ ಘಟನೆಗಳ ಸುತ್ತ ಕಥಾನಕವನ್ನು ಬೆಸೆದುಕೊಂಡು ಅಲ್ಲಿನ ಸಂಸ್ಕೃತಿ, ಸೊಗಡನ್ನು ಬಿಂಬಿಸುವ ರೂಪಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕರಾವಳಿ”.

ತನ್ನ ಊರಿನಲ್ಲಿ ತಾತ ಅಜ್ಜಿಯೊಂದಿಗೆ ನೆಮ್ಮದಿಯಾಗಿ ಬದುಕು ನಡೆಸುವ ದನ (ಪ್ರಜ್ವಲ್ ದೇವರಾಜ್) ತಮ್ಮ ಮನೆಯ ಭೂಮಿ (ಹಸು) ನಾಪತ್ತೆ ಆದ ಕಾರಣ ಬೇರೆ ಬೇರೆ ಊರಿನ ಜಾತ್ರೆಗಳಲ್ಲಿ ಹುಡುಕುತ್ತಾ ಕರಾವಳಿ ಭಾಗಕ್ಕೆ ಬರುತ್ತಾನೆ. ಪ್ರತಿ ಬಾರಿಯೂ ಕಂಬಳದಲ್ಲಿ ಗೆಲುವಿನ ಓಟ ಮುಂದುವರಿಸುವ ಆದಿಶೇಷ (ರಮೇಶ್ ಇಂದಿರಾ) ಎಂಬ ಊರ ಮುಖಂಡ ಹಾಗೂ ಸದಾ ಸೋಲುತ್ತಾ ಕುಡಿತವೇ ಜೀವನ ಮಾಡಿಕೊಂಡಿರುವ ಮಹಾಬಲ (ಮಿತ್ರ) ಕೋಣಗಳ ನಡುವೆ ಪೈಪೋಟಿ ಎದುರಾಗುತ್ತದೆ.

ಆಕಸ್ಮಿಕವಾಗಿ ಧನು ಸಹಾಯದಿಂದ ಪಂದ್ಯ ಗೆಲ್ಲುವ ಮಹಾಬಲನ ಕೋಣಗಳು ಎಲ್ಲರ ಗಮನ ಸೆಳೆಯುವಂತೆ ಮಾಡುತ್ತದೆ. ಅದೇ ಸ್ಥಳದಲ್ಲಿ ವೈದ್ಯೆ ದಕ್ಷಿಣ (ಸಂಪದ) ಯನ್ನ ಭೇಟಿ ಮಾಡುವ ಧನು ಸ್ನೇಹ ಸಂಪರ್ಕದೊಂದಿಗೆ ಆಕೆಯ ಮೇಲೆ ಪ್ರೀತಿ ಉಂಟಾಗುತ್ತದೆ. ಇದರ ನಡುವೆ ಊರ ಮುಖಂಡನಿಗೆ ಮಹಾಬಲನ ಕೋಣ ಗೆದ್ದ ವಿಷಯ ದ್ವೇಷದ ಕಿಚ್ಚಾಗುತ್ತದೆ. ಮುಂದೆ ಎದುರಾಗುವ ಒಂದಷ್ಟು ರೋಚಕ ಘಟನೆಗಳು ಫ್ಲಾಶ್ ಬ್ಯಾಕ್ ಕತೆಗೆ ದಾರಿ ಮಾಡಿಕೊಳ್ಳುತ್ತದೆ.

ಕಂಬಳದ ಕೋಣಗಳೆಂದರೆ ಪಂಚಪ್ರಾಣ ಎಂದು ಜೀವಿಸುವ ಮಹಾವೀರ (ರಾಜ್. ಬಿ. ಶೆಟ್ಟಿ) ಸ್ಪರ್ಧೆಯಲ್ಲಿ ದೊಡ್ಡವರ ಕೋಣವನ್ನ ನೋಡಿಕೊಳ್ಳುವುದೇ ಗುರಿಯಾಗಿರುತ್ತದೆ. ಇದಕ್ಕೆ ತನ್ನ ಗೆಳೆಯ ಮಹಾಬಲನ ಬೆಂಬಲವಿರುತ್ತದೆ. ಇದರ ನಡುವೆ ತನ್ನ ತಾಯಿಯ ಆಸೆಯಂತೆ ಭೂಮಿ ( ಸುಶ್ಮಿತಾ ಭಟ್) ಳನ್ನ ಮದುವೆ ಆಗುತ್ತಾನೆ. ಅವನ ಬದುಕಿನಲ್ಲಿ ಎದುರಾಗುವ ಒಂದಷ್ಟು ಘಟನೆಗಳು , ತನ್ನ ಸ್ನೇಹಿತನ ಮಹಾರಾಜರ ಕುರ್ಚಿ ಮೇಲಿನ ಪ್ರೀತಿ , ಕಂಬಳದ ಸ್ಪರ್ಧೆ ಎಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದು ಬೇರೆ ತಿರುವು ನೀಡುತ್ತದೆ. ಏನಿದು ಕರಾವಳಿ…
ಧನು ಯಾರು…

ಕಂಬಳಕ್ಕೂ… ಕುರ್ಚಿಗೂ… ಏನು ಸಂಬಂಧ.
ಮಹಾವೀರನ ಹಿನ್ನೆಲೆ ಏನು…
ಮಹಾಬಲನ ಆಸೆ ಏನಾಗುತ್ತೆ… ಇದಕ್ಕೆಲ್ಲಾ ಉತ್ತರ ಈ ಚಿತ್ರ ನೋಡಬೇಕು.

ನಿರ್ದೇಶಕ ಗುರುದತ್ ಗಾಣಿಗ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆಯುವಂತಿದೆ. ಕರಾವಳಿ ಭಾಗದ ಗ್ರಾಮೀಣ ಕಂಬಳದ ಕ್ರೀಡೆ , ಆಚರಣೆ , ನಂಬಿಕೆ , ಪದ್ಧತಿ , ಒಳ ಸುಳಿವು , ರಕ್ತ ಸಿಕ್ತ ದ್ವೇಷದ ಕಿಚ್ಚಿನ ಚಿತ್ರಕಥೆ ಗಮನ ಸುಳಿಯುವಂತಿದ್ದು , ಒಂದು ಪ್ರಾಂತ್ಯದ ಕಥೆ ತಾಳ್ಮೆಯಿಂದ ನೋಡಿದರೆ ಇಷ್ಟವಾಗುತ್ತದೆ. ನಿರ್ಮಾಪಕರ ಈ ಸಾಹಸ ಮೆಚ್ಚಲೇಬೇಕು.

ಸಂಗೀತ ಕಥೆಗೆ ಪೂರಕವಾಗಿ ಸಾಗಿದ್ದು , ಸಂಕಲನ , ವಿ.ಎಫ್. ಎಕ್ಸ್ ಸೇರಿದಂತೆ ಛಾಯಾಗ್ರಹಣ ಅದ್ಭುತವಾಗಿ ಮೂಡಿ ಬಂದಿದೆ. ನಾಯಕನಾಗಿ ಪ್ರಜ್ವಲ್ ದೇವರಾಜ್ ಪಾತ್ರಕ್ಕೆ ಜೀವ ತುಂಬಿದ್ದು , ಸಂಭಾಷಣೆ ಹೊಂದಿ ಕೊಂಡಂತಿಲ್ಲ. ಕೋಣಗಳ ಜೊತೆ ಓಟ ಗಮನ ಸೆಳೆಯುತ್ತದೆ. ಇನ್ನು ನಟ ರಾಜ್. ಬಿ. ಶೆಟ್ಟಿಯ ಪಾತ್ರ ಕೂಡ ಬಹಳ ವಿಶೇಷವಾಗಿದ್ದು , ಚಿತ್ರದ ತಿರುವಿಗೆ ಪ್ರಧಾನವಾಗಿದೆ.

ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಮಿತ್ರ ಅದ್ಭುತವಾಗಿ ಅಭಿನಯಿಸಿದ್ದು , ಚಿತ್ರದ ಕೇಂದ್ರ ಬಿಂದುವಾಗಿದ್ದು , ಉತ್ತಮ ಪೋಷಕ ನಟ ರಾಜ್ಯ ಪ್ರಶಸ್ತಿ ಪಡೆಯುವ ಅರ್ಹತೆ ಹೊಂದಿದ್ದಾರೆ. ಇನ್ನು ನಾಯಕಿರಾಗಿ ಸಂಪದ ಹಾಗೂ ಸುಶ್ಮಿತಾ ಭಟ್ ತಮ್ಮ ತಮ್ಮ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅದೇ ರೀತಿ ಗೋವಿಂದೇಗೌಡ , ಶ್ರೀಧರ್ ಸೇರಿದಂತೆ ಮತ್ತಷ್ಟು ಪಾತ್ರಗಳು ಓಟಕ್ಕೆ ಜೀವ ತುಂಬಿದ್ದಾರೆ. ಒಂದು ವಿಭಿನ್ನ ಕಥಾನಕವಾಗಿರುವ ಈ ಚಿತ್ರವನ್ನು ಎಲ್ಲರೂ ನೋಡಬಹುದಾಗಿದೆ.

Visited 1 times, 1 visit(s) today
error: Content is protected !!