ಡಾ. ವಿ. ನಾಗೇಂದ್ರ ಪ್ರಸಾದ್ ಮುಖ್ಯಭೂಮಿಕೆಯ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಟೀಸರ್ ರಿಲೀಸ್!

Spread the love

ಬೆಂಗಳೂರು: ಖ್ಯಾತ ಸಾಹಿತಿ ಹಾಗೂ ನಟ ಡಾ. ವಿ. ನಾಗೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ’ ಸಿನಿಮಾದ ಟೀಸರ್ ಇತ್ತೀಚೆಗೆ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ‘ಕವಿರತ್ನ ಸಾರ್ಥಕ ಸುವರ್ಣ’ ಕಾರ್ಯಕ್ರಮದಲ್ಲಿ ನಾದಬ್ರಹ್ಮ ಹಂಸಲೇಖ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ಸಮಾಜಿಕ,ರಾಜಕೀಯ ಮತ್ತು ಕನ್ನಡ ಭಾಷೆಯ ಸುತ್ತ ಸಾಗುವ ಈ ಸೋಶಿಯೋ-ಪೊಲಿಟಿಕಲ್ ಲಿಂಗ್ವಿಸ್ಟಿಕ್ (Socio-Political Linguistic Drama) ಕಥಾಹಂದರ ಹೊಂದಿರುವ ಚಿತ್ರವನ್ನು ಗುರುಪ್ರಸಾದ್ ಚಂದ್ರಶೇಖರ್ ಮೊದಲ ಬಾರಿಗೆ ನಿರ್ದೇಶಿಸಿದ್ದಾರೆ.

*ಕಥೆಯಲ್ಲಿ ರಾಜಕೀಯ ಮತ್ತು ಭಾಷೆಯ ಕಾಳಜಿ*
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್, “ಇದು ಕನ್ನಡ ಭಾಷೆ ಮತ್ತು ಅದರ ಸುತ್ತ ನಡೆಯುವ ಸಾಮಾಜಿಕ-ರಾಜಕೀಯ ಘಟನೆಗಳ ಆಧಾರಿತ ಡ್ರಾಮಾ. ಟೀಸರ್‌ನಲ್ಲಿ ನಾಗೇಂದ್ರ ಪ್ರಸಾದ್ ಅವರ ಲೀಡ್ ರೋಲ್ ಹಾಗೂ ರಾಜಕೀಯದ ಟ್ರ್ಯಾಕ್ ಮಾತ್ರ ತೋರಿಸಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸುವ ಪ್ರಯತ್ನ ಮಾಡಿದ್ದೇವೆ” ಎಂದಿದ್ದಾರೆ. ಹಿಂದೆ ‘ಸೆಕೆಂಡ್ ಹಾಫ್’ ಹಾಗೂ ‘ಗಾಂಧಿ ಮತ್ತು ನೋಟು’ ಚಿತ್ರಗಳಿಗೆ ಬರಹಗಾರರಾಗಿ ಮತ್ತು ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಗುರುಪ್ರಸಾದ್ ಚಂದ್ರಶೇಖರ್ ಅವರಿಗೆ ಇದು ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.

ಚಿತ್ರದಲ್ಲಿ ನಾಗೇಂದ್ರ ಪ್ರಸಾದ್ ಅವರು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿ ಸಮಾಜದಲ್ಲಿ ಏನೆಲ್ಲಾ ಬದಲಾವಣೆ ತರುತ್ತಾರೆ ಮತ್ತು ಕಾಲಕ್ಕೆ ತಕ್ಕಂತೆ ಅವರ ಪಾತ್ರ ಹೇಗೆ ಬದಲಾಗುತ್ತದೆ ಎಂಬುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಈ ಚಿತ್ರದ ಎರಡು ಹಾಡುಗಳನ್ನು ಡಾ. ವಿ. ನಾಗೇಂದ್ರ ಪ್ರಸಾದ್ ಅವರೇ ಬರೆದಿದ್ದು, ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ ಜೊತೆಗೆ ಉತ್ತರ ಕರ್ನಾಟಕ ಶೈಲಿಯ ಫೋಕ್ ಭಜನೆ ಹಾಡುಗಳು ಹಾಗೂ ಬಿಟ್ ಸಾಂಗ್‌ಗಳು ಚಿತ್ರದಲ್ಲಿರಲಿವೆ. ಇದರಲ್ಲಿ ಡಾ. ನಾಗೇಂದ್ರ ಪ್ರಸಾದ್ ಬರೆದಿರುವ ‘ಕನ್ನಡ ನನ್ನ ಕನ್ನಡ’ ಎಂಬ ಹಾಡನ್ನು ಕಳೆದ ವರ್ಷದ ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಿಡುಗಡೆ ಮಾಡಿದ್ದರು ಎಂಬುದು ವಿಶೇಷ.

ಬಿ ವಿ ಎಮ್ ಕ್ರಿಯೇಷನ್ಸ್ ಅಡಿಯಲ್ಲಿ ಬಿ. ಶಿವಶಂಕರ್, ಡಿ ಎಲ್ ವಿ ಪ್ರೊಡಕ್ಷನ್ಸ್ ಅಡಿಯಲ್ಲಿ ದತ್ತಾತ್ರೇಯ ಜಮಾದಾರ್ ಮತ್ತು ಅನಿಕೇತನ ಪಿಕ್ಚರ್ಸ್ ಅಡಿಯಲ್ಲಿ ಶಶಿಪ್ರಸಾದ್ ಚಂದ್ರಶೇಖರ್ ಜಂಟಿಯಾಗಿ ನಿರ್ಮಿಸುತ್ತಿದ್ದಾರೆ. ಶೃತಿ ವಾಲೆ ಸಹ ನಿರ್ಮಾಪಕರಾಗಿದ್ದಾರೆ.
ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಜವಾಬ್ದಾರಿ ಹೆಗಲೇರಿಸಿ ಕೊಂಡಿದ್ದಾರೆ ಗುರುಪ್ರಸಾದ್ ಚಂದ್ರಶೇಖರ್. ಇನ್ನು, ತಾರಾಗಣದಲ್ಲಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರೊಂದಿಗೆ ವೈಜನಾಥ್ ಬಿರಾದಾರ್, ಡಿಂಪನ ಜೀವನ್, ಅಶ್ವಿತಾ ಹೆಗಡೆ, ಬಾಲ ರಾಜವಾಡಿ, ಪ್ರದೀಪ್ ಪೂಜಾರಿ, ಶ್ರೀನಾಥ್ ವಶಿಷ್ಠ, ಶ್ರೀನಿವಾಸ್ ಪ್ರಭು, ಕಲಾಮಾಧ್ಯಮ ಪರಮೇಶ್ವರ್, ಅಂಕಿತಾ ಗೌಡ, ದತ್ತಾತ್ರೇಯ ಜಮಾದಾರ್ ಹಾಗೂ ಮಾವಳ್ಳಿ ಕಾರ್ತಿಕ್ ಮುಂತಾದವರು ಅಭಿನಯಿಸಿದ್ದಾರೆ.ಛಾಯಾಗ್ರಹಣ ಶಿವಶಂಕರ್ ನೂರಂಬಡ, ಸಿಜಿ ಮತ್ತು ವಿಎಫ್ಎಕ್ಸ್ ಸಂಗಮೇಶ ವಾಲೆ,
ಸಂಕಲನದಲ್ಲಿ ಮಧು ತುಂಬಕೆರೆ, ಪಿ ಆರ್ ಓ ಹರೀಶ್ ಅರಸು ಜೊತೆಗಿದ್ದಾರೆ.

Visited 1 times, 1 visit(s) today
error: Content is protected !!