ಬಸ್ ಚಾಲಕನಾದ ಶೈನ್ ಶೆಟ್ಟಿ ನಟನೆಯ ‘ಶಂಕರಾಭರಣ’ ಸಿನಿಮಾದ ಟೀಸರ್ ರಿಲೀಸ್.

Spread the love

‘ಶಂಕರಾಭರಣ’, ಇದೊಂದು ವಿಭಿನ್ನ ಪ್ರಯತ್ನದ ವಿನೂತನ ಸಿನಿಮಾ. ಶಂಕರಾಭರಣ ಹೆಸರಿನ ಬಸ್ ಪೋಸ್ಟರ್ ಮೂಲಕ ಈಗಾಗಲೇ ಸಿನಿ ಅಭಿಮಾನಿಗಳ ಗಮನ ಸೆಳೆದಿದ್ದ ಈ ಸಿನಿಮಾದ ಟೀಸರ್ ಈಗ ರಿಲೀಸ್ ಆಗಿದೆ. ಸ್ಯಾಂಡಲ್‌ವುಡ್‌ ನಟ ಶೈನ್ ಶೆಟ್ಟಿ ಹೀರೋ ಆಗಿ ಈ ಸಿನಿಮಾದಲ್ಲಿ ಮಿಂಚಿದ್ದಾರೆ. ಆಕರ್ಷಕ ಟೈಟಲ್ ಮೂಲಕವೇ ಗಮನ ಸೆಳೆದಿರುವ ಶಂಕರಾಭರಣ ಇದೀಗ ರಿಲೀಸ್ ಆಗಿರುವ ಟೀಸರ್‌ನಿಂದ ಮತ್ತಷ್ಟು ನಿರೀಕ್ಷೆ ಹೆಚ್ಚಿಸಿದೆ. ಸದ್ಯ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಮೋಷನ್ ಪ್ರಾರಂಭಿಸಿರುವ ಶಂಕರಾಭರಣ ಸಿನಿಮಾ ನವೆಂಬರ್ 20ಕ್ಕೆ ತೆರೆಗೆ ಬರಲು ಸಜ್ಜಾಗಿದೆ.

ಶೈನ್ ಶೆಟ್ಟಿ ಈ ಸಿನಿಮಾದಲ್ಲಿ ಬಸ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಡಿದ್ದು, ಶಂಕರಾಭರಣ ಬಸ್‌ನ ಚಾಲಕನಾಗಿ ಜೀವನ ಸಾಗಿರುವ ಒಬ್ಬ ಸಾಮಾನ್ಯ ವ್ಯಕ್ತಿಯ ಪಾತ್ರದಲ್ಲಿ ಶೈನ್ ಮಿಂಚಿದ್ದಾರೆ. ಶೈನ್ ಶಂಕರಾಭರಣ ಬಸ್ ಚಾಲಕನಾದ್ರೆ ಸಿನಿಮಾದ ಸಾರಥ್ಯವನ್ನು ಸುಮಂತ್ ಭಟ್ ವಹಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಸುಮಂತ್ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾಗೆ ಆಕ್ಷನ್ ಕಟ್ ಹೇಳಿರುವುದು ವಿಶೇಷ.

ಏಕಂ ವೆಬ್ ಸಿರೀಸ್, ರಾಷ್ಟ್ರ ಪ್ರಶಸ್ತಿ ಗೆದ್ದಿರುವ ಮಿಥ್ಯ ಎನ್ನುವ ಫೀಚರ್ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದ ಸುಮಂತ್ ಭಟ್ ಇದೀಗ ಶಂಕರಾಭರಣ ಸಿನಿಮಾ ಮೂಲಕ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲು ಸಜ್ಜಾಗಿದ್ದಾರೆ. ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದ್ದು ಟೀಸರ್ ಅದ್ಭುತವಾಗಿ ಮೂಡಿಬಂದಿದೆ. ಅಂದಹಾಗೆ ಈ ಸಿನಿಮಾದಲ್ಲಿ ಬಸ್ ಹೈಲೆಟ್. ಇಲ್ಲಿ ಹೀರೋ, ಹೀರೋಯಿನ್ ಅಷ್ಟೆ ಪ್ರಮುಖ ಪಾತ್ರವನ್ನು ಶಂಕರಾಭರಣ ಬಸ್ ವಹಿಸಲಿದೆ.

ಈ ಸಿನಿಮಾದಲ್ಲಿ ಶೈನ್ ಶೆಟ್ಟಿ ಹೀರೋ ಮಾತ್ರವಲ್ಲದೆ ಈ ಸಿನಿಮಾದ ಕಥೆ ಕೂಡ ಅವರದ್ದೆ. ತಮ್ಮ ಜೀವನದಲ್ಲಿ, ತಮ್ಮ ಸುತ್ತಮುತ್ತ ನೋಡಿದ ಒಂದಷ್ಟು ಅನುಭವವಗಳನ್ನೂ ಸೇರಿಸಿ ಈ ಸಿನಿಮಾದ ಕಥೆ ರಚಿಸಿದ್ದಾರೆ. ಶೈನ್ ಕಥೆಗೆ ಅಷ್ಟೆ ಸುಂದರವಾಗಿ ದೃಶ್ಯ ರೂಪ ಕೊಟ್ಟಿದ್ದಾರೆ ನಿರ್ದೇಶಕ ಸುಮಂತ್ ಭಟ್.

ಹೀರೋ, ಕಥೆ ಜೊತೆಗೆ ಶೈನ್ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ. ಹೌದು ಶಂಕರಾಭರಣ ಸಿನಿಮಾ ಮೂಲಕ ಶೈನ್ ನಿರ್ಮಾಪಕನಾಗಿಯು ಎಂಟ್ರಿ ಕೊಡುತ್ತಿದ್ದಾರೆ. ರಂಗಸ್ಥಳ ಸ್ಟುಡಿಯೋ ಬ್ಯಾನರ್ ನಡಿ ದಿವಾಕರ್ ಶೆಟ್ಟಿ ಹಾಗೂ ಶೈನ್ ಶೆಟ್ಟಿ ಇಬ್ಬರೂ ಸೇರಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಕರಾವಳಿ ಭಾಗದ ನಿರ್ಮಾಣ ಸಂಸ್ಥೆಗಳಾದ ರಕ್ಷಿತ್ ಶೆಟ್ಟಿ ಅವರ ಪರಂವ್ಹ, ರಾಜ್ ಬಿ ಶೆಟ್ಟಿ ಅವರ ಲಾಫಿಂಗ್ ಬುದ್ಧ, ರಿಷಬ್ ಶೆಟ್ಟಿ ಫಿಲ್ಮ್ಸ್ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತಿದೆ. ಇದೀಗ ಶೈನ್ ಶೆಟ್ಟಿ ಅವರ ರಂಗಸ್ಥಳ ಸ್ಟುಡಿಯೋ ಸೇರ್ಪಡೆಯಾಗುತ್ತಿರುವುದು ವಿಶೇಷ. ಉತ್ತಮ ಸಿನಿಮಾಗಳನ್ನು ನಿರ್ಮಾಣ ಮಾಡುವ ಕನಸುಕಂಡಿರುವ ರಂಗಸ್ಥಳ ಸ್ಟುಡಿಯೋ ಶಂಕರಾಭರಣ ಮೂಲಕ ಮೊದಲ ಹೆಜ್ಜೆ ಇಟ್ಟಿದೆ. ಇನ್ನೂ ಸಿನಿಮಾದ ನಾಯಕಿ ಪಾತ್ರದಲ್ಲಿ ನಟಿ ತನ್ವಿ ರಾವ್ ಕಾಣಿಸಿಕೊಂಡಿದ್ದಾರೆ. ಮಲಯಾಳಂನಲ್ಲಿ 17ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ತನ್ವಿ ರಾವ್ ಇದೀಗ ಶೈನ್ ಜೊತೆ ಶಂಕರಾಭರಣ ಬಸ್ ಏರಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಪತ್ನಿ ಕೃತಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚರಣ್ ರಾಜ್ ಸಂಗೀತ ಸಿನಿಮಾಗಿದೆ.

Visited 1 times, 1 visit(s) today
error: Content is protected !!