ಬೆಂಗಳೂರಿನಲ್ಲಿ ‘ಚೆನ್ನೈ ಲವ್‌ ಸ್ಟೋರಿ’ ಚಿತ್ರತಂಡ

Spread the love

ಬಹುನಿರೀಕ್ಷಿತ ‘ಚೆನ್ನೈ ಲವ್‌ ಸ್ಟೋರಿ’ ಸಿನಿಮಾದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರಚಾರ ಕಾರ್ಯದ ಭಾಗವಾಗಿ ಚಿತ್ರತಂಡ ಬೆಂಗಳೂರಿಗೆ ಆಗಮಿಸಿ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡಿದೆ. ಜುಲೈ 24 ರಂದು ಚಿತ್ರವು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗೆ ಬರಲಿದ್ದು, ಜುಲೈ 23ರಂದೇ ಬೆಂಗಳೂರಿನಲ್ಲಿ ವಿಶೇಷ ಪ್ರೀಮಿಯರ್ ಶೋಗಳು ಆಯೋಜನೆಗೊಂಡಿವೆ.ಕನ್ನಡದಲ್ಲೂ ಉತ್ತಮ ಮಾರುಕಟ್ಟೆ ನಿರೀಕ್ಷೆಯಲ್ಲಿರುವ ಈ ಚಿತ್ರವನ್ನು ಕರ್ನಾಟಕದಾದ್ಯಂತ 100ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ವಿತರಕ ಕುಮಾರ್ ಅವರು ಬಿಡುಗಡೆ ಮಾಡುತ್ತಿದ್ದಾರೆ.

*ಬೆಂಗಳೂರಿನ ಹಳೆಯ ದಿನಗಳನ್ನು ನೆನೆದ ನಟ ಕಿರಣ್ ಅಬ್ಬಾವರಂ*
ಮಾಧ್ಯಮಗಳೊಂದಿಗೆ ಮಾತನಾಡಿದ ನಾಯಕ ನಟ ಕಿರಣ್ ಅಬ್ಬಾವರಂ, ತಮ್ಮ ಸಾಫ್ಟ್‌ವೇರ್ ಉದ್ಯೋಗದ ದಿನಗಳನ್ನು ಹಾಗೂ ಬೆಂಗಳೂರಿನೊಂದಿಗಿನ ಅವಿನಾಭಾವ ಸಂಬಂಧವನ್ನು ಹಂಚಿಕೊಂಡರು. “ನನ್ನ ತವರು ರಾಯಚೋಟಿ ಇಲ್ಲಿಗೆ ಹತ್ತಿರದಲ್ಲೇ ಇದೆ. ಬಿ.ಟೆಕ್ ಮುಗಿದ ಮೇಲೆ ಮೊದಲ ಕೆಲಸ ಸಿಕ್ಕಿದ್ದು ಬೆಂಗಳೂರಿನಲ್ಲೇ. ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಬೆಳ್ಳಂದೂರು, ಎಚ್‌ಎಸ್‌ಆರ್ ಲೇಔಟ್ ಹಾಗೂ ಮಾರತಹಳ್ಳಿಯಲ್ಲಿ ಸುಮಾರು 3 ವರ್ಷ ವಾಸವಿದ್ದೆ” ಎಂದು ಅವರು ನೆನೆದರು.

ಸಾಫ್ಟ್‌ವೇರ್ ಹಿನ್ನೆಲೆಯಿಂದ ಬಂದು ಚಿತ್ರರಂಗದಲ್ಲಿ ಸಾಧನೆ ಮಾಡಿದ ರಕ್ಷಿತ್ ಶೆಟ್ಟಿ ಹಾಗೂ ರಾಕಿಂಗ್ ಸ್ಟಾರ್ ಯಶ್ ತಮಗೆ ದೊಡ್ಡ ಸ್ಪೂರ್ತಿ ಎಂದ ಕಿರಣ್, “ಕ್ಯಾಬ್‌ನಲ್ಲಿ ಕೆಲಸಕ್ಕೆ ಹೋಗುವಾಗ ಐಟಿ ಕೆಲಸ ಬಿಡಬೇಕೋ ಬೇಡವೋ ಎಂದು ದಿನವೂ ಯೋಚಿಸುತ್ತಿದ್ದೆ. ಕೊನೆಗೆ ಸಿನಿಮಾ ಕನಸಿಗಾಗಿ ಕೆಲಸ ಬಿಟ್ಟು ಬಂದೆ. ಕಳೆದ 5 ವರ್ಷಗಳಲ್ಲಿ 12 ಸಿನಿಮಾಗಳನ್ನು ಮಾಡಿದ್ದು, ಹಲವು ಬ್ಲಾಕ್‌ಬಸ್ಟರ್ ಹಿಟ್‌ಗಳನ್ನು ನೀಡಿದ್ದೇನೆ. ನನ್ನ ಚೆನ್ನೈ ಲವ್‌ ಸ್ಟೋರಿ ಸಿನಿಮಾ ಖಂಡಿತ ಎಲ್ಲರಿಗೂ ಇಷ್ಟವಾಗಲಿದೆ” ಎಂದರು.

*ನನ್ನ ವೃತ್ತಿಜೀವನದ ಅತ್ಯುತ್ತಮ ಪಾತ್ರ*
ಚಿತ್ರದ ನಾಯಕಿ ಶ್ರೀ ಗೌರಿ ಪ್ರಿಯ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಮಹಿಳೆಯೊಬ್ಬರಿಗೆ ಈ ಮಟ್ಟದ ಸವಾಲಿನ ಹಾಗೂ ದೊಡ್ಡ ಪಾತ್ರ ಸಿಗುವುದು ವಿರಳ. ಸಾಮಾನ್ಯವಾಗಿ ಪ್ರೇಮಕಥೆಗಳು ಹುಡುಗನ ದೃಷ್ಟಿಕೋನದಲ್ಲೇ ಇರುತ್ತವೆ. ಆದರೆ ‘ಚೆನ್ನೈ ಲವ್ ಸ್ಟೋರಿ’ಯಲ್ಲಿ ಹುಡುಗ ಮತ್ತು ಹುಡುಗಿ ಇಬ್ಬರ ದೃಷ್ಟಿಕೋನಕ್ಕೂ ಸಮಾನ ಪ್ರಾಮುಖ್ಯತೆ ನೀಡಲಾಗಿದೆ” ಎಂದರು.

“ಇದು ಸಾಕಷ್ಟು ಟ್ವಿಸ್ಟ್, ಸಸ್ಪೆನ್ಸ್ ಹಾಗೂ ಅತ್ಯಂತ ಭಾವನಾತ್ಮಕ ಸನ್ನಿವೇಶಗಳನ್ನು ಒಳಗೊಂಡ ಪ್ರಾಮಾಣಿಕ ಪ್ರಯತ್ನ. ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿಸುವಂತಹ ಸವಾಲಿನ ಪಾತ್ರ ಇದಾಗಿದ್ದು, ನನ್ನ ಅಭಿನಯದ ಕೆರಿಯರ್‌ನಲ್ಲೇ ಇದು ಅತ್ಯುತ್ತಮ ಪಾತ್ರ ಎಂದು ಧೈರ್ಯವಾಗಿ ಹೇಳಬಲ್ಲೆ” ಎಂದರು. ಜೊತೆಗೆ, ‘ಲವರ್’ ಹಾಗೂ ‘ಹ್ಯಾಪಿ ರಾಜ್’ ಚಿತ್ರಗಳ ಶೂಟಿಂಗ್‌ಗಾಗಿ ಗೋಕರ್ಣ ಹಾಗೂ ಬೆಂಗಳೂರಿನಲ್ಲಿ ಕಾಲಕಳೆದ ಕ್ಷಣಗಳನ್ನು ಮೆಲಕುಹಾಕಿದರು ಶ್ರೀ ಗೌರಿ ಪ್ರಿಯ.

*’ಬೇಬಿ’ ಚಿತ್ರದಂತೆ ಹೊಸ ತನದ ಪ್ರೇಮಕಥೆ*
ಕರ್ನಾಟಕದ ವಿತರಣೆಯ ಹಕ್ಕನ್ನು ಪಡೆದಿರುವ ಕುಮಾರ್ ಮಾತನಾಡಿ, “ಇತ್ತೀಚೆಗೆ ಬಂದ ‘ಬೇಬಿ’ ಸಿನಿಮಾದಂತೆ ಈ ಚಿತ್ರದಲ್ಲೂ ಅತ್ಯುತ್ತಮ ಫ್ರೆಶ್‌ನೆಸ್ ಇದೆ. ಕಿರಣ್ ಅವರ ಲುಕ್ ಹಾಗೂ ನಟನೆ ಟ್ರೇಲರ್‌ನಲ್ಲೇ ಭರವಸೆ ಮೂಡಿಸಿದೆ. ಕಮರ್ಷಿಯಲ್ ಸಿನಿಮಾಗಳ ನಡುವೆ ಈ ಫ್ರೆಶ್ ಲವ್ ಸ್ಟೋರಿಯನ್ನು ಕರ್ನಾಟಕದ ಪ್ರೇಕ್ಷಕರು ಖಂಡಿತವಾಗಿಯೂ ಮೆಚ್ಚಿಕೊಳ್ಳಲಿದ್ದಾರೆ. ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದೇವೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

Visited 1 times, 1 visit(s) today
error: Content is protected !!