“ಮ್ಯಾರೇಜ್ ಪಾರ್ಟಿ” ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಯುವ ನಿರ್ದೇಶಕ ಚಯನ್ ಶೆಟ್ಟಿ ನಿರ್ದೇಶನ ಹಾಗೂ ಶ್ರೀ ವಾರಾಹಿ ಫಿಲಂಸ್ ಬ್ಯಾನರಿನಡಿಯಲ್ಲಿ ಸಂತೋಷ್ ವಿ ನಿರ್ಮಾಣ ಮಾಡಿರುವ `ಮ್ಯಾರೇಜ್ ಪಾರ್ಟಿ’ ಚಿತ್ರವೀಗ ಪ್ರೇಕ್ಷಕರನ್ನು ಮುಖಾಮುಖಿಯಾಗುವ ಸನಿಹದಲ್ಲಿದೆ. ಇದೇ ಹೊತ್ತಿನಲ್ಲಿ ಚಿತ್ರತಂಡ ಫಸ್ಟ್ ಲುಕ್ ಪೋಸ್ಟರ್ ಅನ್ನು ಬಿಡುಗಡೆಗೊಳಿಸಿದೆ. ಸಿನಿಮಾದ ಆಂತರ್ಯವನ್ನು ತೆರೆದಿಡುವಂತೆ ಕಾಣಿಸುವ ಈ ಪೋಸ್ಟರ್ ಮೂಲಕ ಮ್ಯಾರೇಜ್ ಪಾರ್ಟಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ.
ಈ ಹಿಂದೆ ಬಿಗ್ ಬಸ್ ಖ್ಯಾತಿಯ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿದ್ದ ಅಧಿಪತ್ರ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಚಯನ್ ಶೆಟ್ಟಿ. ಆ ಚಿತ್ರಕ್ಕೆ ಪ್ರೇಕ್ಷಕರ ಕಡೆಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಿಕ್ಕಿತ್ತು. ಅದಾದ ನಂತರ ಎರಡನೇ ಚಿತ್ರದ ವಿಚಾರದಲ್ಲಿ ಸಂಪೂರ್ಣವಾಗಿ ಭಿನ್ನ ಪಥದತ್ತ ಚಯನ್ ಹೊರಳಿಕೊಂಡಿದ್ದಾರೆ. ಅದರ ಫಲವಾಗಿಯೇ ಗಟ್ಟಿ ಕಥೆಯೊಂದಿಗೆ, ಹಾಸ್ಯಪ್ರಧಾನವಾಗಿರುವ ಮ್ಯಾರೇಜ್ ಪಾರ್ಟಿ ಚಿತ್ರ ರೂಪುಗೊಂಡಿದೆ.

ಈಗಾಗಲೇ ಒಂದಷ್ಟು ತುಳು ಸಿನಿಮಾಗಳಲ್ಲಿ ನಟಿಸುವ ಮೂಲಕ ಗಮನ ಸೆಳೆದಿರುವ ವಿನೀತ್ ಕುಮಾರ್ ಮ್ಯಾರೇಜ್ ಪಾರ್ಟಿ ಮೂಲಕ ನಾಯಕನಾಗಿ ಬಡ್ತಿ ಪಡೆದಿದ್ದಾರೆ. ಕರಾವಳಿ ಭಾಗದಲ್ಲಿ ಘಟಿಸುವ ರಸವತ್ತಾದ ಕಥಾನಕದೊಂದಿಗೆ ಮ್ಯಾರೇಜ್ ಪಾರ್ಟಿ ಬಿಡುಗಡೆಗೆ ಅಣಿಗೊಂಡಿದೆ. ಶ್ರೀಕಾಂತ್ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ, ಸು ಫ್ರಂ ಸೋ ಖ್ಯಾತಿಯ ನಿತಿನ್ ಶೆಟ್ಟಿ ಸಂಕಲನ, ಪ್ರಮೋದ್ ಮರವಂತೆ ಮತ್ತು ತ್ರಿಲೋಕ್ ಸಾಹಿತ್ಯ, ಪ್ರಕಾಶ್ ತುಮಿನಾಡು, ದೀಪಕ್ ರೈ, ನವೀನ್ ಡಿ ಪಡೀಲ್, ರಕ್ಷಿತಾ, ನಮಿತಾ ಕಿರಣ್, ರಾಮ್ದಾಸ್, ರಘು ಪಾಂಡೇಶ್ವರ, ಪುಷ್ಪರಾಜ್ ಬೋಳಾರ್, ಜ್ಯೋತಿಷ್ ಶೆಟ್ಟಿ, ರಾಧಾಕೃಷ್ಣ, ಪಿಡಿ ಸತೀಶ್, ಭೀಮ್ ರಾವ್ ಮುಂತಾದವರ ತಾರಾಗಣವಿರುವ ಈ ಚಿತ್ರ ಕನ್ನಡ ಮತ್ತು ಮಲೆಯಾಳಂ ಭಾಷೆಗಳಲ್ಲಿ ತೆರೆಗಾಣಲಿದೆ.