ಜನ್-ಜ಼ಿಗಳ ‘ಡಿಂಚಕ್ ಡಿಂಚಕ್’ ಶೀರ್ಷಿಕೆ ಅನಾವರಣ

Spread the love

ಜೊತೆಯಾಗಿ ಹಿತವಾಗಿ ಎಂಬ ಕಾವ್ಯತ್ಮಕ ಶೀರ್ಷಿಕೆಯ ಚಿತ್ರದ ಮೂಲಕ ಕನ್ನಡ ಸಿನಿ ರಸಿಕರ ಗಮನವನ್ನು ಸೆಳೆದ ಯುವ ನಟ ಅಗಸ್ತ್ಯ. ಈ ಹುಡುಗನ ಎರಡನೇ ಚಿತ್ರದ ಶೀರ್ಷಿಕೆ ಅನಾವರಣಗೊಂಡಿದೆ. ‘ಡಿಂಚಕ್ ಡಿಂಚಕ್’ ಎಂಬ ವಿಶಿಷ್ಟ ಶೀರ್ಷಿಕೆಯೊಂದಿಗೆ ಜನ್-ಜ಼ಿಗಳ ಗಮನ ಸೆಳೆಯಲು ಹೊರಟಿರುವ ಚಿತ್ರತಂಡ ಈ ಬಾರಿ ಹೊಸದೊಂದು ಹುರುಪಿನೊಂದಿಗೆ ಸಿನಿ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ. ಇತ್ತೀಚೆಗೆ ಬರುತ್ತಿರುವ ಸಾಕಷ್ಟು ಸಿನಿಮಾಗಳ ಶೀರ್ಷಿಕೆಗಳನ್ನು ಗಮನಿಸಿದರೆ ವಿಚಿತ್ರ ಎನಿಸಿದರು ಪ್ರಸ್ತುತ ಸಂದರ್ಭದಲ್ಲಿ ಹೇಳಿ ಮಾಡಿಸಿದಂತೆ ಇರುತ್ತವೆ. ಜನ್-ಜ಼ಿ ಮತ್ತು ಜನ್ ಆಲ್ಫಾ ಗಳನ್ನು ಗುರಿಯಗೇರಿಸಿಕೊಂಡು ಬಂದ ಸಾಕಷ್ಟು ಸೌತ್ ಸಿನಿಮಾಗಳು ಇತ್ತೀಚೆಗೆ ಹೆಚ್ಚು ಹೆಚ್ಚು ಯಶಸ್ವಿಯಾಗುತ್ತಿರುವ ಈ ಸಂದರ್ಭವನ್ನು ಸದುಪಯೋಗಪಡಿಸಿಕೊಳ್ಳಲು ಚಿತ್ರದ ತಂಡ ಮುಂದಾಗಿದೆ.

ಈ ನಿಟ್ಟಿನಲ್ಲಿ ಹದಿಹರೆಯದ ಮನಸ್ಸುಗಳು ಮತ್ತು ಕೌಟುಂಬಿಕ ಪ್ರೇಕ್ಷಕರನ್ನು ಗುರಿಯಾಗಿಸಿ ಕಥಾ ಎಳೆಯನ್ನು ಅಚ್ಚುಕಟ್ಟಾಗಿ ಸಿದ್ಧಪಡಿಸಿಕೊಂಡು ಇನ್ನೇನು ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ ‘ಡಿಂಚಕ್ ಡಿಂಚಕ್’ ಚಿತ್ರತಂಡ.

ಅತ್ಯಂತ ಸೀಮಿತ ಬಜೆಟ್ ನಲ್ಲಿ ನಿರ್ಮಾಣವಾಗಿದ್ದರೂ, ಕಳೆದ ವರ್ಷ ಬಿಡುಗಡೆಯಾದ ‘ಜೊತೆಯಾಗಿ ಹಿತವಾಗಿ’ ಚಿತ್ರದ ಮೂಲಕ ನಾಯಕ ನಟನಾಗಿ ಅಗಸ್ತ್ಯ ಛಾಪು ಮೂಡಿಸಿದ್ದರು. ಇದೀಗ ಎರಡನೇ ಚಿತ್ರದ ವಿಶಿಷ್ಟ ಶೀರ್ಷಿಕೆಯ ಮೂಲಕ ಭಾರಿ ನಿರೀಕ್ಷೆಯನ್ನು ಮೂಡಿಸಿದ್ದಾರೆ.

ಅತ್ಯಂತ ಸವಾಲಿನಿಂದ ಕೂಡಿರಬಹುದಾದ ಪಾತ್ರವನ್ನು ಆರಿಸಿಕೊಂಡು ಕಥೆ,ಚಿತ್ರಕಥೆ ಹಾಗೂ ನಿರ್ದೇಶನದ ಜವಾಬ್ದಾರಿಯನ್ನು ತಮ್ಮ ತಂಡದ ಸಹಯೋಗದೊಂದಿಗೆ ಹೊತ್ತು ಸಾಗಲು ಅಣಿಯಾಗಿದ್ದಾರೆ ಅಗಸ್ತ್ಯ. ಶ್ರೀರತ್ನ ಫಿಲಂ ಕಂಪನಿ ನಿರ್ಮಿಸುತ್ತಿರುವ ಈ ಚಿತ್ರ ಕ್ಕೆ ಆನಂದ್ ರಾಜ ವಿಕ್ರಮ ರವರ ಸಂಗೀತ ಇರುವ ಹಾಡುಗಳು ನಿಜಕ್ಕೂ ಒಂದಕ್ಕಿಂತ ಒಂದು ವಿಭಿನ್ನವಾಗಿ ಮೂಡಿ ಬರಲಿವೆ.

ಚಿತ್ರವನ್ನು ತಾಂತ್ರಿಕವಾಗಿ ಶ್ರೀಮಂತ ಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಕ್ಯಾಮರಾ ಮತ್ತಿತರ ಸಲಕರಣೆಗಳನ್ನು ಉಪಯೋಗಿಸಲಾಗುವುದು ಎಂದು ಶ್ರೀರತ್ನ ಫಿಲಂ ಕಂಪನಿಯ ಕ್ರಿಯೇಟಿವ್ ಹೆಡ್ ಆದ ಪ್ರಶಾಂತ ಬಾಗೂರು ತಿಳಿಸಿದ್ದಾರೆ. ಫ್ಯಾಶನ್ ಜಗತ್ತಿನಲ್ಲಿ ಈಗಾಗಲೇ ಹೆಸರುವಾಸಿ ಆಗಿರುವ ಅಭಿರೇಖ ಕೃಷ್ಣರವರು ಈ ಚಿತ್ರಕ್ಕೆ ವಸ್ತ್ರಾಲಂಕಾರದ ಹೊಣೆ ಹೊತ್ತಿದ್ದಾರೆ. ಇನ್ನುಳಿದ ತಾಂತ್ರಿಕ ವರ್ಗ ಇನ್ನಷ್ಟೇ ಆಯ್ಕೆ ಆಗಬೇಕಿದೆ.

Visited 1 times, 1 visit(s) today
error: Content is protected !!