‘ಲಂಬೋದರ 2.0’ ಚಿತ್ರದ ಪ್ರದರ್ಶನದಲ್ಲಿ ಸಿನಿಮಾ ತಾರೆಯರು, ಜಾಗತಿಕ ಉದ್ಯಮಿಗಳ ಭಾಗಿ

Spread the love

ಅನಿಲ್ ಶೆಟ್ಟಿ ನಿರ್ಮಿಸಿ, ಪ್ರಮುಖ ಪಾತ್ರದಲ್ಲಿ ನಟಿಸಿರುವ ಹಾಗೂ ‘ಸಿಂಪಲ್’ ಸುನಿ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಭವ್ಯ ರೆಡ್ ಕಾರ್ಪೆಟ್ ಪ್ರದರ್ಶನ ನಗರದ ಬ್ರಿಗೇಡ್ ರಸ್ತೆಯಲ್ಲಿರುವ ಫೋರಮ್ ರೆಕ್ಸ್ ವಾಕ್‌ನ ಪಿವಿಆರ್ ಡೈರೆಕ್ಟರ್ಸ್ ಕಟ್‌ನಲ್ಲಿ ಅತ್ಯಂತ ವೈಭವದಿಂದ ನಡೆಯಿತು. ವಿಶೇಷವೆಂದರೆ ಈ ಸಮಾರಂಭಕ್ಕೆ ಕೇವಲ ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ತಾರೆಯರು ಮಾತ್ರವಲ್ಲದೆ, ದೇಶ-ವಿದೇಶಗಳ ಖ್ಯಾತ ಉದ್ಯಮಿಗಳು ಹಾಗೂ ಗಣ್ಯರು ಆಗಮಿಸಿ ಚಿತ್ರತಂಡಕ್ಕೆ ಸಾಥ್ ನೀಡಿದ್ದು ಕಾರ್ಯಕ್ರಮಕ್ಕೆ ಮೆರುಗು ನೀಡಿತು.

ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿರುವ ಬಾಲಿವುಡ್ ನಟ ಕುನಾಲ್ ಕಪೂರ್ ಅವರು ವಿಶೇಷವಾಗಿ ಬೆಂಗಳೂರಿಗೆ ಆಗಮಿಸಿ ಪ್ರದರ್ಶನದಲ್ಲಿ ಪಾಲ್ಗೊಂಡರು. ಚಿತ್ರದಲ್ಲಿ ಅವರು ‘ರಾಘವ್ ಕಶ್ಯಪ್’ ಎಂಬ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಬಾಲಿವುಡ್ ಹಿರಿಯ ನಟ ಸುನಿಲ್ ಶೆಟ್ಟಿ ಕೂಡ ರೆಡ್ ಕಾರ್ಪೆಟ್‌ನಲ್ಲಿ ಕಾಣಿಸಿಕೊಂಡು ಅನಿಲ್ ಶೆಟ್ಟಿ ಹಾಗೂ ತಂಡಕ್ಕೆ ಶುಭ ಹಾರೈಸಿದರು. ಅಲ್ಲದೆ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಹಾಗೂ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಶೆಟ್ಟಿ ಅವರು ಆಗಮಿಸಿ ಚಿತ್ರತಂಡಕ್ಕೆ ಬೆಂಬಲ ಸೂಚಿಸಿದರು.

ಸ್ಯಾಂಡಲ್‌ವುಡ್ ತಾರೆಯರಾದ ಶ್ರೀಮುರಳಿ, ನಿಶ್ವಿಕಾ ನಾಯ್ಡು, ಶಾನ್ವಿ ಶ್ರೀವಾಸ್ತವ, ಮೇಘನಾ ಗಾಂವ್ಕರ್, ಶುಭ್ರಾ ಅಯ್ಯಪ್ಪ, ಐಶ್ವರ್ಯಾ ನಾಗ್, ಕಾರ್ತಿಕ್ ಮಹೇಶ್, ಕಿಶನ್ ಬಿಳಗಲಿ, ನಿರೂಪಕಿ ಚೈತ್ರಾ ವಾಸುದೇವನ್ ಹಾಗೂ ರಾಜಕಾರಣಿ-ಉದ್ಯಮಿ ಮೊಹಮ್ಮದ್ ನಲಪಾಡ್ ಸೇರಿದಂತೆ ಅನೇಕರು ಈ ವಿಶೇಷ ಪ್ರದರ್ಶನವನ್ನು ವೀಕ್ಷಿಸಿದರು.

ಮತ್ತೊಂದೆಡೆ, ಕಾರ್ಪೊರೇಟ್ ಮತ್ತು ಜಾಗತಿಕ ಮಟ್ಟದ ಗಣ್ಯರ ಉಪಸ್ಥಿತಿ ಈ ಸಿನಿಮಾ ಸಮಾರಂಭದ ವಿಶೇಷತೆಯಾಗಿತ್ತು. ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ವಿಪ್ರೋ ಅಧ್ಯಕ್ಷ ರಿಷದ್ ಪ್ರೇಮ್‌ಜಿ, ಲಂಡನ್ ಮೂಲದ ಇಂಡಿಯಾ ಗ್ಲೋಬಲ್ ಫೋರಮ್ ಸ್ಥಾಪಕ ಪ್ರೊ. ಮನೋಜ್ ಲಾಡ್ವಾ ಹಾಗೂ ಬೆಂಗಳೂರಿನಲ್ಲಿರುವ ಇಸ್ರೇಲ್ ಕಾನ್ಸುಲ್ ಜನರಲ್ ಓರ್ಲಿ ವೈಟ್ಜ್‌ಮನ್ ಅವರು ಆಗಮಿಸಿ ಅನಿಲ್ ಶೆಟ್ಟಿ ಅವರ ಪ್ರಯತ್ನಕ್ಕೆ ಬೆನ್ನುತಟ್ಟಿದರು.

ಮಹಾವೀರ್ ಜೈನ್ ಫಿಲ್ಮ್ಸ್ ಅರ್ಪಿಸಿರುವ ಈ ಚಿತ್ರವನ್ನು ‘ಮಾಸ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ಅನಿಲ್ ಶೆಟ್ಟಿ ನಿರ್ಮಿಸಿದ್ದಾರೆ. ಕೃತಕ ಬುದ್ಧಿಮತ್ತೆ, ಅಲ್ಗಾರಿದಮ್ ಮತ್ತು ಡಿಜಿಟಲ್ ತಂತ್ರಜ್ಞಾನವು ಇಂದಿನ ಮನುಷ್ಯನ ದೈನಂದಿನ ಬದುಕಿನ ಮೇಲೆ ಬೀರುತ್ತಿರುವ ಪರಿಣಾಮಗಳ ಸುತ್ತ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಚಿತ್ರದಲ್ಲಿ ಅನಿಲ್ ಶೆಟ್ಟಿ, ಕುನಾಲ್ ಕಪೂರ್, ಸಾಚಿ ಬಿಂದ್ರಾ ಮುಖ್ಯ ಭೂಮಿಕೆಯಲ್ಲಿದ್ದು, ‘ಜಿಯಾ’ ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್ ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವುದು ಈ ಚಿತ್ರದ ಮತ್ತೊಂದು ವಿಶೇಷ. ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಕಂಡಿರುವ ‘ಲಂಬೋದರ 2.0’ ತನ್ನ ವಿಭಿನ್ನ ಕಥಾವಸ್ತುವಿನ ಮೂಲಕ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ.

Visited 1 times, 1 visit(s) today
error: Content is protected !!