‘ಸಮುದ್ರ ಮಂಥನ’ ಚಿತ್ರದ ಮೂಲಕ ಯಶ್ವಂತ್ ಕುಮಾರ್ ನಾಯಕನಾಗಿ ಎಂಟ್ರಿ
ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿರುವ ನಟ ಯಶ್ವಂತ್ ಕುಮಾರ್, ಇದೀಗ ತಮ್ಮ ಕಿರುತೆರೆ ಪಯಣಕ್ಕೆ ತಾತ್ಕಾಲಿಕ ವಿರಾಮ ನೀಡಿ ಪೂರ್ಣಪ್ರಮಾಣದಲ್ಲಿ ಸಿನಿಮಾರಂಗದಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದಾರೆ. ಎರಡೆರಡು ಯಶಸ್ವಿ ಧಾರಾವಾಹಿಗಳಲ್ಲಿ ಸಕ್ರಿಯರಾಗಿದ್ದ ಅವರು, ಬಹುನಿರೀಕ್ಷಿತ ‘ಸಮುದ್ರ ಮಂಥನ’ ಚಿತ್ರದ ಮೂಲಕ ಬೆಳ್ಳಿತೆರೆಯ ನಾಯಕ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ತಮ್ಮ ಈ ಮಹತ್ವದ ನಿರ್ಧಾರದ ಕುರಿತು ಮಾತನಾಡಿರುವ ಯಶ್ವಂತ್ ಕುಮಾರ್, “ನಾನು ನಾಯಕ ನಟನಾಗಿ ಅಭಿನಯಿಸುತ್ತಿರುವ ‘ಸಮುದ್ರ ಮಂಥನ’ ಚಿತ್ರ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ನಟನೆಯ ಜೊತೆಗೆ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿಯೂ ಜವಾಬ್ದಾರಿ ನಿರ್ವಹಿಸುತ್ತಿರುವುದರಿಂದ, ಚಿತ್ರದ ಕೆಲಸಗಳಿಗೆ ನನ್ನ ಸಂಪೂರ್ಣ ಸಮಯ ಮತ್ತು ಇರುವಿಕೆಯ ಅಗತ್ಯವಿತ್ತು. ಇದೇ ಕಾರಣಕ್ಕಾಗಿ ನಾನಾಗಿಯೇ ‘ನಂದಗೋಕುಲ’ ಧಾರಾವಾಹಿಯಿಂದ ಹೊರಬಂದೆ. ಮತ್ತೊಂದೆಡೆ ‘ಅಮೃತಧಾರೆ’ ಧಾರಾವಾಹಿ ಕೂಡ ಮುಕ್ತಾಯದ ಹಂತಕ್ಕೆ ತಲುಪಿರುವುದರಿಂದ, ಸಿನಿಮಾದತ್ತ ಮುಖ ಮಾಡಲು ಇದು ಅತ್ಯಂತ ಪ್ರಶಸ್ತ ಸಮಯ ಎನಿಸಿತು” ಎಂದು ವಿವರಿಸಿದ್ದಾರೆ.
“ಸದ್ಯ ಸಾಕಷ್ಟು ಕಿರುತೆರೆ ಅವಕಾಶಗಳು ನನ್ನನ್ನು ಹುಡುಕಿಕೊಂಡು ಬರುತ್ತಿದ್ದರೂ, ಇನ್ನುಮುಂದೆ ನನ್ನ ಸಂಪೂರ್ಣ ಗಮನವನ್ನು ಸಿನಿಮಾಗಳ ಮೇಲೆಯೇ ಕೇಂದ್ರೀಕರಿಸಲು ನಿರ್ಧರಿಸಿದ್ದೇನೆ. ಈ ನಿರ್ಧಾರಕ್ಕೆ ‘ಸಮುದ್ರ ಮಂಥನ’ ಚಿತ್ರ ಅದ್ಭುತವಾಗಿ ಮೂಡಿಬಂದಿರುವುದೇ ಮುಖ್ಯ ಕಾರಣ. ಪ್ರೇಕ್ಷಕರು ಈ ಸಿನಿಮಾವನ್ನು ಖಂಡಿತವಾಗಿಯೂ ಮೆಚ್ಚಿಕೊಳ್ಳುತ್ತಾರೆ ಎಂಬ ಪೂರ್ಣ ವಿಶ್ವಾಸ ನನಗಿದೆ. ಇತ್ತೀಚೆಗಷ್ಟೇ ನಾನು ನಟಿಸುತ್ತಿದ್ದ ಎರಡೂ ಧಾರಾವಾಹಿಗಳ ವಾಹಿನಿಗಳ ಪ್ರಶಸ್ತಿ ಸಮಾರಂಭಗಳಲ್ಲಿ ನನ್ನ ಪಾತ್ರಗಳಿಗೆ ಪ್ರಶಸ್ತಿ ಲಭಿಸಿರುವುದು ನನ್ನ ಕಿರುತೆರೆ ಪಯಣಕ್ಕೆ ಸಾರ್ಥಕತೆ ತಂದಿದೆ. ಒಂದೇ ವರ್ಷದಲ್ಲಿ ಎರಡು ವಿಭಿನ್ನ ವಾಹಿನಿಗಳಿಂದ ಪ್ರಶಸ್ತಿ ಪಡೆದ ಹೆಮ್ಮೆ ಹಾಗೂ ಧನ್ಯತಾ ಭಾವದೊಂದಿಗೆ ಬೆಳ್ಳಿತೆರೆಗೆ ಹೆಜ್ಜೆ ಇಡುತ್ತಿದ್ದೇನೆ” ಎಂದು ಅವರು ಸಂತಸ ಹಂಚಿಕೊಂಡಿದ್ದಾರೆ.
‘ಒಂದು ಶಿಕಾರಿಯ ಕಥೆ’ ಖ್ಯಾತಿಯ ನಿರ್ದೇಶಕ ಸಚಿನ್ ಶೆಟ್ಟಿ ಅವರು ‘ಸಮುದ್ರ ಮಂಥನ’ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಯಶ್ವಂತ್ ಕುಮಾರ್ ಅವರು ‘ಶ್ರೀ’ ಎಂಬ ಸಾಮಾನ್ಯ ಜನರ ಬದುಕಿಗೆ ತೀರಾ ಹತ್ತಿರವಾಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರನ್ನು ರಂಜಿಸಲು ಉತ್ಸುಕರಾಗಿದ್ದಾರೆ. ಮಂದಾರ ಬಟ್ಟಲಹಳ್ಳಿ, ಸ್ಕಂದ ಅಶೋಕ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಚಿತ್ರದ ತಾರಾಗಣದಲ್ಲಿದ್ದು, ಸದ್ಯದಲ್ಲೇ ‘ಸಮುದ್ರ ಮಂಥನ’ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.