Cini NewsSandalwood

ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್ ನಟನೆಯ “ಶಿವಾಜಿ ಬಹದ್ದೂರ್” ಚಿತ್ರಕ್ಕೆ ಚಾಲನೆ

ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ನಿರೀಕ್ಷೆ ಮೂಡಿಸುವಂತಹ ಚಿತ್ರ ಶುಭಾರಂಭಗೊಂಡಿದೆ. ಶಿವಪೂರ್ಣ (ಲೋಕೇಶ್) ಹಾಗೂ ಮುತ್ತುರಾಜ್ ನಿರ್ಮಾ‌ಣ ಮಾಡುತ್ತಿರುವ, ಆರೋನ್ ಕಾರ್ತಿಕ್ ನಿರ್ದೇಶನದ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಆಪ್ತಮಿತ್ರ ರಾಜ್ ಬಹದ್ದೂರ್ ಪ್ರಮುಖಪಾತ್ರದಲ್ಲಿ ನಟಿಸುತ್ತಿರುವ “ಶಿವಾಜಿ ಬಹದ್ದೂರ್” ಚಿತ್ರದ ಮುಹೂರ್ತ ಸಮಾರಂಭ ಹಾಗೂ ಪತ್ರಿಕಾಗೋಷ್ಠಿ ಇತ್ತೀಚೆಗೆ ನಡೆಯಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಎನ್ ಎಂ ಸುರೇಶ್, ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ನಿರ್ದೇಶಕ ಹೆಚ್ ವಾಸು, ಸ್ವಸ್ತಿಕ್ ಶಂಕರ್, ನಟ ಷಣ್ಮುಖ ಗೋವಿಂದರಾಜು, ಗಾಯಕ ಆಲೂರು ನಾಗಪ್ಪ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಸೇರಿದಂತೆ ಸಾಕಷ್ಟು ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು.

“ಶಿವಾಜಿ ಬಹದ್ದೂರ್” ಎಂದರೆ ಎರಡು ಪಾತ್ರಗಳ ಹೆಸರು ಎಂದು ಮಾತನಾಡಿದ ನಿರ್ದೇಶಕ ಆರೋನ್ ಕಾರ್ತಿಕ್, ನಮ್ಮ ಚಿತ್ರದಲ್ಲಿ ಶಿವಾಜಿ ಎಂಬುದು ಪ್ರಧಾನ ಮಂತ್ರಿ ಪಾತ್ರದ ಹೆಸರು. ಬಹದ್ದೂರ್ ಎಂದರೆ ಮುಖ್ಯಮಂತ್ರಿ ಪಾತ್ರದ ಹೆಸರು. ಶಿವಾಜಿ ಪಾತ್ರದ ಧ್ವನಿ ಮಾತ್ರ ಸಿನಿಮಾದಲ್ಲಿ ಕೇಳುತ್ತದೆ. ಬಹದ್ದೂರ್ ಅಂದರೆ ಮುಖ್ಯಮಂತ್ರಿ ಪಾತ್ರದಲ್ಲಿ ರಾಜ್ ಬಹದ್ದೂರ್ ನಟಿಸುತ್ತಿದ್ದಾರೆ.

ಪ್ರಪಂಚಕ್ಕೆ ಮಾರಕವಾಗಿರುವ ಉಗ್ರವಾದ(ಭಯೋತ್ಪಾದನೆ) ತಡೆಗಟ್ಟಲು ಹೋರಾಡುವ ಉತ್ತಮ ಮುಖ್ಯಮಂತ್ರಿಯಾಗಿ ರಾಜ್ ಬಹದ್ದೂರ್ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ವಿಲನ್ ಪಾತ್ರದಲ್ಲಿ ಖ್ಯಾತ ನಟ ಅಮೀರ್ ಖಾನ್ ಸಹೋದರ ಫೈಸಲ್ ಖಾನ್ ನಟಿಸಲಿದ್ದಾರೆ. “ರಂಗಿನ ರಾಟೆ” ಖ್ಯಾತಿಯ ರಾಜೀವ್ ರಾಥೋಡ್, ಪಲ್ಲವಿ ಪ್ರಕಾಶ್, ಸುಶ್ಮಿತ, ಶೋಭ, ಗಣೇಶ್ ರಾವ್ ಮುಂತಾದವರು ಮುಖ್ಯಭೂಮಿಕೆ ಯಲ್ಲಿದ್ದಾರೆ. ಸಂಗೀತ ನಿರ್ದೇಶನವನ್ನು ನಾನೇ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ರಜನಿಕಾಂತ್ ಹಾಗೂ ತಮ್ಮ ಸ್ನೇಹದ ಕುರಿತು ಮಾಹಿತಿ ನೀಡಿದ ನಟ ರಾಜ್ ಬಹದ್ದೂರ್, ರಜನಿಕಾಂತ್ ಅವರಿಗೆ ನಾನು ಈ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ತಿಳಿಸಿದೆ. ತುಂಬಾ ಖುಷಿಪಟ್ಟರು. ಚಿತ್ರ ಸಿದ್ದವಾದ ಮೇಲೆ ಬಂದು ನೋಡುವುದಾಗಿಯೂ ಹೇಳಿದ್ದಾರೆ. ನಾನು ಈ ಹಿಂದೆ ರಜನಿ ಅವರ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದೆ. ಮೈನ್ ಲೀಡ್ ನಲ್ಲಿ ನಟಿಸುತ್ತಿರುವ ಮೊದಲ ಚಿತ್ರವಿದು.

ನಾನು ನಟಿಸುತ್ತಿರುವ ವಿಷಯ ತಿಳಿದು ಇಲ್ಲಿನ ರಜನಿಕಾಂತ್ ಅಭಿಮಾನಿಗಳು ತುಂಬಾ ಸಂತೋಷ ಪಟ್ಟಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಕಾಯುತ್ತಿರುವುದಾಗಿಯೂ ಹೇಳಿದ್ದಾರೆ. ರಜನಿಕಾಂತ್ ಅಭಿಮಾನಿಗಳು ಸಿನಿಮಾ ನೋಡಿದರೆ ಸಿನಿಮಾ ಗೆದ್ದ ಹಾಗೆ ಎಂದರು ನಟ ರಾಜ್ ಬಹದ್ದೂರ್. ನಮ್ಮ ಮೊದಲ ಪ್ರಯತ್ನಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ಮಾಪಕರಾದ ಶಿವಪೂರ್ಣ ಹಾಗೂ ಮುತ್ತುರಾಜ್. ಚಿತ್ರದಲ್ಲಿ ನಟಿಸುತ್ತಿರುವ ರಾಜೀವ್ ರಾಥೋಡ್, ಪಲ್ಲವಿ ಪ್ರಕಾಶ್, ಸುಶ್ಮಿತ, ಶೋಭ, ಗಣೇಶ್ ರಾವ್ ಮುಂತಾದವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ನೀಡಿದರು.

error: Content is protected !!