Cini NewsSandalwood

ಹಳ್ಳಿ ಮುಗ್ಧನ ಪ್ರೀತಿ , ಮಮಕಾರದ ಬೆಸುಗೆ(ನಾ ಕೋಳಿಕ್ಕೆ ರಂಗ ಚಿತ್ರವಿಮರ್ಶೆ-ರೇಟಿಂಗ್ : 3/5)

ರೇಟಿಂಗ್ : 3/5

ಚಿತ್ರ : ನಾ ಕೋಳಿಕ್ಕೆ ರಂಗ
ನಿರ್ದೇಶಕ : ಗೊರವಾಲೆ ಮಹೇಶ್
ನಿರ್ಮಾಪಕ : ಎಸ್.ಟಿ. ಸೋಮಶೇಖರ್
ಸಂಗೀತ: ರಾಜುಎಮ್ಮಿಗನೂರು ಛಾಯಾಗ್ರಹಣ : ಧನಪಲ್ ನಾಯಕ್
ತಾರಾಗಣ : ಮಾಸ್ಟರ್ ಆನಂದ್ , ರಾಜೇಶ್ವರಿ , ಭವ್ಯ , ಶೋಭ್ ರಾಜ್, ಹೊನ್ನವಳ್ಳಿ ಕೃಷ್ಣ , ಪುಂಗ , ಶಕೀಲಾ, ರಾಕ್ ಲೈನ್ ಸುಧಾಕರ್ ಹಾಗೂ ಮುಂತಾದವರು…

ಗ್ರಾಮೀಣ ಭಾಗದ ಸಂಪ್ರದಾಯ, ಆಚಾರ , ವಿಚಾರದ ಸೊಗಡೆ ವಿಶೇಷ. ಮುಗ್ಧ ಮನಸುಗಳ ನಡುವಳಿಕೆ, ಗುರು ಹಿರಿಯರಿಗೆ ಗೌರವ, ಸ್ನೇಹಿತರ ಒಡನಾಟ, ಗೆಳತಿಯ ಜೊತೆ ಕೀಟಲೆ, ತುಂಟಾಟ, ಮುಗ್ಧ ಪ್ರಾಣಿಯ ಆರೈಕೆ, ನೆಂಟು, ದೈವದ ಮೇಲೆ ನಂಬಿಕೆ ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಂಸಾರಿಕ ಕಥಾನಕ ಮೂಲಕ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ನಾ ಕೋಳಿಕ್ಕೆ ರಂಗ”. ಯಾರ ಕೈಗೂ ಸಿಗದೇ ಊರಿಲ್ಲ ಓಡಾಡುವಾ ಸುಕ್ಕು (ಕೋಳಿ) ಯನ್ನ ಹಿಡಿಯಲು ಒದ್ದಾಡುವ ರಂಗ (ಮಾಸ್ಟರ್ ಆನಂದ್) ನ ಗೆಳೆಯರು. ಆದರೆ ರಂಗನಿಗೆ ಸುಕ್ಕು ಅಂದರೆ ಪಂಚಪ್ರಾಣ , ತನ್ನ ತಾಯಿ ಸೋಬಾನೆ ಸಣ್ಣಕ್ಕ (ಭವ್ಯ) ಈ ಮೂವರದೆ ಒಂದು ಸಣ್ಣ ಪ್ರಪಂಚ.

ಊರಿನ ತುಂಬಾ ಉಂಡಾಡಿ ಗೊಂಡನಂತೆ ಗೆಳೆಯರೊಟ್ಟಿಗೆ ಓಡಾಡಿಕೊಂಡು ತಾಯಿ ಮಾತಿಗೆ ಕಿವಿ ಕೊಡೆದೆ, ಸುಕ್ಕು ಜೊತೆ ಅಡ್ಡಾಡುತ್ತಿರುತ್ತಾನೆ. ಇದರ ನಡುವೆ ಊರಿನ ಪೂಜಾರಿ (ರಾಕ್ ಲೈನ್ ಸುಧಾಕರ್) ಮಗಳು (ರಾಜೇಶ್ವರಿ) ರಂಗನೊಟ್ಟಿಗೆ ಕೀಟಲೆ ಮಾಡಿಕೊಂಡರುಅವನ ಬಗ್ಗೆ ಒಲವನ್ನು ಬೆಳೆಸಿಕೊಳ್ಳುತ್ತಾಳೆ.

ಇದರ ನಡುವೆ ಗೆಳೆಯ ಪುಂಗನ ಮಾತಿನಂತೆ ಪೋಲಿ ಗೆಳೆಯ ಮುಸ್ತಫನ ಪ್ರೀತಿಗೆ ಸಪೋರ್ಟ್ ಮಾಡಲು ದುಬೈ ಶೇಕ್ ಅವತಾರದಲ್ಲಿ ನುಗ್ಗಿ ಇಲ್ಲಸಲ್ಲದ ಎಡವಟ್ಟುಗಳನ್ನು ಕೂಡ ಮಾಡಿಕೊಳ್ಳುತ್ತಾನೆ. ಕೆಲವೊಮ್ಮೆ ಊರ ಮುಖಂಡರ ಕಣ್ಣಿಗೂ ಗುರಿಯಾಗುತ್ತಾನೆ. ಇದರ ಹೊರತಾಗಿಯೂ ತಾಯಿಯ ಮುದ್ದಿನ ಮಗನಾಗಿ ತನ್ನ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಸುಕ್ಕು ಕಾಣೆಯಾದಾಗ ಪರದಾಡುವ ಪರಿ, ಅದರಿಂದ ಆಗುವ ಅವಾಂತರ ಒಮ್ಮೆ ಅವನ ಜೀವಕ್ಕೆ ಕುತುಬರುತ್ತದೆ.

ದೇವಿಯ ಮೊರೆ ಹೋಗುವ ತಾಯಿಗೆ ಪೂಜಾರಿ ದೇವರಿಗೆ ತಪ್ಪು ಕಾಣಿಕೆ ನೀಡುವುದರ ಜೊತೆಗೆ ಸುಕ್ಕು(ಕೋಳಿ) ಬಲಿ ಕೊಡಬೇಕೆಂದು ತಿಳಿಸುತ್ತಾನೆ. ಇದೇ ವೇಳೆ ಊರಿನಲ್ಲೂ ಮಳೆ ಇಲ್ಲದ ಕಾರಣ ಜಾತ್ರೆ ಮಾಡಲು ಮುಖಂಡರು ತೀರ್ಮಾನಿಸುತ್ತಾರೆ. ಇಲ್ಲಿಂದ ಕತೆಯ ಓಟ ಮತ್ತೊಂದು ತಿರುವು ಪಡೆದುಕೊಳ್ಳುತ್ತದೆ. ಇದರಿಂದ ರಂಗನ ಮನಸ್ಸಿನಲ್ಲಿ ಆಗುವ ತಳಮಳ, ಆಲೋಚನೆ ಬೇರೆದೆ ರೂಪ ಪಡೆದು ರೋಚಕ ಘಟ್ಟಕ್ಕೆ ಬಂದು ನಿಲ್ಲುತ್ತದೆ.
ರಂಗನಿಗೆ ಎದುರಾಗುವ ಸಂಕಷ್ಟ ಏನು…
ಕೋಳಿ ಬಲಿ ಕೊಡುತ್ತಾರಾ…
ಗೆಳತಿಯ ಆಸೆ ಈಡೇರುತ್ತಾ…
ತಾಯಿ ಏನಾಗುತ್ತಾಳೆ… ಕ್ಲೈಮ್ಯಾಕ್ಸ್ ಉತ್ತರ ಏನು… ಎಂಬುದನ್ನು ತಿಳಿಯಬೇಕಾದರೆ ಒಮ್ಮೆ ನೀವು “ನಾ ಕೋಳಿಕ್ಕೆ ರಂಗ” ಚಿತ್ರ ನೋಡಬೇಕು.

ಈ ಚಿತ್ರದ ನಿರ್ಮಾಪಕ ಕುಟುಂಬ ಸಮೇತ ನೋಡುವಂತ ನಕ್ಕು ನಗಿಸುವ ಕಥೆಯಲ್ಲಿ ತಾಯಿಯ ಪ್ರೀತಿ , ಜೀವದ ಬೆಲೆ, ಸಂಬಂಧದ ಮೌಲ್ಯಗಳನ್ನು ಎತ್ತಿ ಹಿಡಿಯುವಂತ ಚಿತ್ರ ನಿರ್ಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ನಿರ್ದೇಶಕರು ಒಂದು ಹಳ್ಳಿ ಸೊಗಡಿನ ಕಥೆಯನ್ನು ನೈಜಕ್ಕೆ ಹತ್ತಿರ ಎನ್ನುವಂತೆ ತೆರೆ ಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ತಾಯಿ ಮಗನ ಬಾಂಧವ್ಯ , ಮುಖ ಜೀವಿಗಳ ರಕ್ಷಣೆಯ ಮೇಲೆ ಇರಬೇಕಾದ ನಿಲುವು, ಹಳ್ಳಿ ಹಾಗೂ ಸಿಟಿ ಮಂದಿಯ ನಡುವಳಿಕೆ ಬದುಕಿನ ಜೊತೆಗೆ ಮಾನವೀಯತೆಯ ಮೌಲ್ಯಗಳ ಮೂಲಕ ದೈವದ ನಂಬಿಕೆಯನ್ನು ಕೂಡ ಹೊರಹಾಕಿದ್ದಾರೆ.

ಚಿತ್ರದ ಓಟ ವೇಗ ಮಾಡಬಹುದಿತ್ತು , ಆದರೆ ಈ ಕಥಾವಸ್ತು ಪ್ರಸ್ತುತ ದಿನಗಳಿಗೆ ಎಷ್ಟು ಸೂಕ್ತ ಎಂಬುದೇ ಪ್ರಶ್ನೆ. ಒಂದು ಕೋಳಿಯ ಒಡನಾಟದೊಂದಿಗೆ ಕಥೆಯ ಸಾಗಿರುವ ರೀತಿ ಗಮನ ಸೆಳೆಯುತ್ತದೆ. ಇನ್ನು ನಟ ಮಾಸ್ಟರ್ ಆನಂದ್ ಇಡೀ ಚಿತ್ರದ ಕೇಂದ್ರ ಬಿಂದು, ಹಳ್ಳಿಯ ಮುಗ್ಧ ಹುಡುಗನಾಗಿ ತಾಯಿಯ ಮುದ್ದಿನ ಮಗನಾಗಿ , ಮೂಕ ಪ್ರಾಣಿಯ ಗೆಳೆಯನಾಗಿ ಸಾಗಿರುವ ರೀತಿ, ತುಂಟಾಟ, ತರ್ಲೆ ಮಾಡುತ್ತಾ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ.

ನಗಿಸುತ್ತ ಪಂಚಿಂಗ್ ಡೈಲಾಗ್ ಮೂಲಕ ತಮ್ಮ ನಟನ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಇನ್ನು ನಾಯಕಿಯಾಗಿ ಅಭಿನಯಿಸಿರುವ ರಾಜೇಶ್ವರಿ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ತಾಯಿಯ ಪಾತ್ರದಲ್ಲಿ ಭವ್ಯ ಗಮನ ಸೆಳೆಯುತ್ತಾರೆ. ಶಿಕ್ಷಣ ಅಭಿಯಾನ ಮಾಡುತ್ತಾ ವಿದ್ಯಾಭ್ಯಾಸ ಎಷ್ಟು ಮುಖ್ಯ ಎಂದು ತೋರಿಸಲು ಶಿಕ್ಷಕಿಯಾಗಿ ಬರುವ ಶಕೀಲಾ ರವರ ಪಾತ್ರ ಕೂಡ ಉತ್ತಮವಾಗಿದೆ.

ಇನ್ನುಳಿದಂತೆ ಅಭಿನಯಿಸಿರುವ ಶೋಭರಾಜ್ , ಹೊನ್ನಾವಳ್ಳಿ ಕೃಷ್ಣ , ಬಿರಾದರ್ , ಕಾಮಿಡಿ ಕಿಲಾಡಿಗಳ ಗೆಳೆಯರು ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಪೂರಕವಾಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಹೈಲೈಟ್ ಅಂದರೆ ಸಂಗೀತ ನೀಡಿರುವ ರಾಜು ಎಮ್ಮಿಗನೂರು ಕೆಲಸ. ವಿಶೇಷವಾಗಿ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಬಗ್ಗೆ ಬಂದಿರುವ ಹಾಡು ಹಾಗೂ ಪುನೀತ್ ರಾಜಕುಮಾರ್ ಹಾಡಿರುವ ಹಾಡು ಗಮನ ಸೆಳೆಯುತ್ತದೆ. ಅದೇ ರೀತಿ ಛಾಯಾಗ್ರಹಾಕರ ಕೆಲಸವೂ ಕೂಡ ಉತ್ತಮವಾಗಿ ಮೂಡಿಬಂದಿದೆ. ಒಟ್ಟಾರೆ ಕುಟುಂಬ ಸಮೇತ ನೋಡುವಂತ ಚಿತ್ರವಾಗಿ “ನಾ ಕೋಳಿಕ್ಕೆ ರಂಗ” ಮೂಡಿಬಂದಿದೆ

error: Content is protected !!