Cini NewsSandalwood

“ಪರವಶ” ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ರೀಲಿಸ್

ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ನೂತನ ಪ್ರತಿಭೆ ರಘು ಭಟ್ ಪ್ರಮುಖಪಾತ್ರದಲ್ಲಿ ನಟಿಸಿರುವ ನೂತನ ಚಿತ್ರವೊಂದರ ಚಿತ್ರೀಕರಣ ಸದ್ದಿಲ್ಲದೆ ನಡೆಯುತ್ತಿದ್ದು, ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ. ಇತ್ತೀಚಿಗೆ ಈ ಚಿತ್ರದ ಶೀರ್ಷಿಕೆ ಹಾಗೂ ಪೋಸ್ಟರ್ ನೆಲಮಂಗಲದ ಬಳಿ ಆಯೋಜಿಸಲಾಗಿದ್ದ ಅದ್ದೂರಿ ಸಮಾರಂಭದಲ್ಲಿ ಅನಾವರಣವಾಯಿತು. ಚಿತ್ರಕ್ಕೆ “ಪರವಶ” ಎಂದು ಹೆಸರಿಡಲಾಗಿದೆ. ಖ್ಯಾತ ನಿರೂಪಕಿ ಅನುಶ್ರೀ ಅವರ ಅಚ್ಚುಕಟ್ಟಾದ ನಿರೂಪಣೆಯಲ್ಲಿ ಸಮಾರಂಭ ನೆರವೇರಿತು.

ಅವ್ಯಕ್ತ ಸಿನಿಮಾಸ್ ಲಾಂಛನದಲ್ಲಿ ಹರೀಶ್ ಗೌಡ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ಸುಧೀಂದ್ರ ನಾಡಿಗರ್ ನಿರ್ದೇಶಿಸುತ್ತಿದ್ದಾರೆ. ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಮಾತನಾಡಿದರು.ಹೊಸತಂಡದ ಜೊತೆಗೆ ಕೆಲಸ ಮಾಡಿರುವುದು ಖುಷಿಯಾಗಿದೆ. ನಾನು ಈತನಕ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ.

ನನ್ನ ಭಾಗದ ಚಿತ್ರೀಕರಣ ಮುಕ್ತಾಯವಾಗಿದೆ. ನಿರ್ದೇಶಕ ಸುಧೀಂದ್ರ ನಾಡಿಗರ್ ಅವರ ‌ನಿರ್ದೇಶನದ ಶೈಲಿ ವಿನೂತನವಾಗಿದೆ. ನಿರ್ಮಾಪಕರಿಗೆ ಹಾಗೂ ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಕ್ರೇಜಿಸ್ಟಾರ್ ರವಿಚಂದ್ರನ್.

ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಈಗಾಗಲೇ ನಲವತ್ತು ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ಕೆಲವು ದಿನಗಳ ಚಿತ್ರೀಕರಣ ಮಾತ್ರ ಬಾಕಿಯಿದೆ. ಮಂಗಳೂರು, ಉಡುಪಿ, ಮಣಿಪಾಲ ಹಾಗೂ ಕುಂದಾಪುರದಲ್ಲಿ ಚಿತ್ರೀಕರಣವಾಗಿದೆ. ರವಿಚಂದ್ರನ್, ರಘು ಭಟ್, ಸೋನಾಲ್ ಮೊಂಟೆರೊ, ಪವಿತ್ರ ಲೋಕೇಶ್, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಮುಂತಾದವರು ತಾರಾಬಳಗದಲ್ಲಿದ್ದಾರೆ.

ನಾಯಕ ರಘು ಭಟ್ “ಪರವಶ” ಚಿತ್ರಕ್ಕೆ ಕಥೆ ಬರೆದಿದ್ದಾರೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ, ಆನಂದ್ ಮೀನಾಕ್ಷಿ ಛಾಯಾಗ್ರಹಣ ಹಾಗೂ ಪ್ರತೀಕ್ ಶೆಟ್ಟಿ ಅವರ ಸಂಕಲನವಿರುವ ಈ ಚಿತ್ರದ ಹಾಡುಗಳನ್ನು ಪ್ರಮೋದ್ ಮರವಂತೆ ರಚಿಸಿದ್ದಾರೆ. ಸಂಭಾಷಣೆಯನ್ನು ರಘು ನಿಡವಳ್ಳಿ ಬರೆದಿದ್ದಾರೆ ಎಂದು ನಿರ್ದೇಶಕ ಸುಧೀಂದ್ರ ನಾಡಿಗರ್ ತಿಳಿಸಿದರು.

ನಮ್ಮೂರಿನಲ್ಲಿ ನಾನು ನಿರ್ಮಿಸುತ್ತಿರುವ “ಪರವಶ” ಚಿತ್ರದ ಶೀರ್ಷಿಕೆ ಬಿಡುಗಡೆಯಾಗಿರುವುದು ಖುಷಿಯಾಗಿದೆ. ಹೊಸತಂಡಕ್ಕೆ ಪ್ರೋತ್ಸಾಹ ನೀಡುತ್ತಿರುವ ರವಿಚಂದ್ರನ್ ಅವರಿಗೆ ಹಾಗೂ ಇಡೀ ಚಿತ್ರತಂಡಕ್ಕೆ ನನ್ನ ಧನ್ಯವಾದ ಎಂದರು ನಿರ್ಮಾಪಕ ಹರೀಶ್ ಗೌಡ. ಥ್ರಿಲ್ಲರ್, ಕೌಟುಂಬಿಕ ಹಾಗೂ ಪ್ರೇಮ ಕಥಾಹಂದರವುಳ್ಳ “ಪರವಶ” ಚಿತ್ರದಲ್ಲಿ ಜನರಿಗೆ ಬೇಕಾದ ಎಲ್ಲಾ ಅಂಶಗಳು ಇದೆ.

ಒಟ್ಟಿನಲ್ಲಿ ಪ್ರೇಕ್ಷಕ ಕೊಟ್ಟ ದುಡ್ಡಿಗೆ ದುಪ್ಪಟ್ಟು ಮನೋರಂಜನೆ ನೀಡುವ ಚಿತ್ರವಿದು. ಸಚಿನ್ ಬಸ್ರೂರ್ ಸಂಗೀತ ನೀಡಿರುವ ಚಿತ್ರದ ಹಾಡುಗಳು ಕೂಡ ಮುದ ನೀಡುತ್ತದೆ ಎಂದು ನಾಯಕ ಹಾಗೂ ಕಥೆಗಾರ ರಘು ಭಟ್ ತಿಳಿಸಿದರು.ಚಿತ್ರದಲ್ಲಿ ನನ್ನ ಪಾತ್ರ ಕೂಡ ಚೆನ್ನಾಗಿದೆ.‌ ಈ ತಂಡದ ಜೊತೆಗೆ ಕೆಲಸ ಮಾಡಿದ್ದು ಸಂತೋಷವಾಗಿದೆ ಎಂದರು ನಾಯಕಿ ಸೋನಾಲ್ ಮೊಂಟೆರೊ. ಕಲಾವಿದರಾದ ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಅನನ್ಯ ಹಾಗೂ ಛಾಯಾಗ್ರಾಹಕ ಆನಂದ್ ಮೀನಾಕ್ಷಿ ಚಿತ್ರತಂಡದ ಅನೇಕ ಸದಸ್ಯರು ಶೀರ್ಷಿಕೆ ಬಿಡುಗಡೆ ಸಮಾರಂಭದಲ್ಲಿ  ಉಪಸ್ಥಿತರಿದ್ದರು.

error: Content is protected !!