“ಕನಕರಾಜ” ಚಿತ್ರದ ಮೋಷನ್ ಪೋಸ್ಟರ್ ಮತ್ತು ಹಾಡು ಬಿಡುಗಡೆ

Spread the love

ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್ ಆರ್ ಸನತ್ ಕುಮಾರ್ ಅವರು ನಿರ್ಮಿಸಿರುವ, ಡಾ||ವಿ.ನಾಗೇಂದ್ರಪ್ರಸಾದ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆಯನ್ನೂ ಮಾಡಿರುವ, ಆರ್ ರವೀಂದ್ರ ನಿರ್ದೇಶಿಸಿರುವ ಹಾಗೂ ಎಚ್ ಎಂ ರೇವಣ್ಣ ಅವರ ಪುತ್ರ ಅನೂಪ್‍ ರೇವಣ್ಣ ನಾಯಕನಾಗಿ ನಟಿಸಿರುವ ‘ಕನಕರಾಜ’ ಚಿತ್ರದ ಮೊದಲ ಹಾಡು ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ಕಲಾವಿದರ ಸಂಘದಲ್ಲಿ ಅದ್ದೂರಿಯಾಗಿ ನೆರವೇರಿತು.

ಡಾ||ವಿ.ನಾಗೇಂದ್ರಪ್ರಸಾದ್ ಬರೆದು ಸಂಗೀತ ಸಂಯೋಜಿಸಿರುವ ಚಿತ್ರದ ಮೊದಲ ಹಾಡನ್ನು ಮಾಜಿ ಸಚಿವರಾದ ಎಚ್ ಎಂ ರೇವಣ್ಣ ಅವರು ಅನಾವರಣ ಮಾಡಿದರು. ಮೋಷನ್ ಪೋಸ್ಟರ್ ಹಿರಿಯ ನಟ ದೊಡ್ಡಣ್ಣ ಅವರಿಂದ ಬಿಡುಗಡೆಯಾಯಿತು. ರಾಜಕೀಯ ಮುಖಂಡರಾದ ವೆಂಕಟೇಶ್, ನಿರ್ಮಾಪಕರ ಸಂಘದ ಉಪಾಧ್ಯಕ್ಷರಾದ ನಂದಿಹಾಳ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಕೃಷ್ಣೇಗೌಡ ಮುಂತಾದವರು ಮುಖ್ಯ ಅತಿಥಿಗಳಾಗಿ ಆಗಮಿಸಿ “ಕನಕರಾಜ” ಚಿತ್ರಕ್ಕೆ ಶುಭ ಕೋರಿದರು.

ಇದೊಂದು ವಿಭಿನ್ನ ಕಥೆ. ಯುವಜನತೆಯನ್ನು ಮನದಲ್ಲಿಟ್ಟಿಕೊಂಡು ವಿ.ನಾಗೇಂದ್ರಪ್ರಸಾದ್ ಅವರು ಕಥೆ ಬರೆದಿರುವ ಸಿನಿಮಾ ಕೂಡ. ಅನೂಪ್ ರೇವಣ್ಣ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿಯಾಗಿ ನಿಮಿಷ ನಟಿಸಿದ್ದಾರೆ. ಹಿರಿಯ ಕಲಾವಿದರಾದ ಶ್ರೀನಾಥ್, ರಾಮಕೃಷ್ಣ, ಪದ್ಮಾವಾಸಂತಿ, ಯಮುನ ಶ್ರೀನಿಧಿ ಮುಂತಾದವರು ತಾರಾಬಳಗದಲ್ಲಿದ್ದಾರೆ.

ರವೀಂದ್ರ ಅವರ ನಿರ್ದೇಶನ ಕೂಡ ಚೆನ್ನಾಗಿದೆ. ಇಂದು ಮೊದಲ ಹಾಡಿನ ಬಿಡುಗಡೆಯಾಗಿದೆ. ಇನ್ನೂ ಮೂರು ಹಾಡುಗಳು ಚಿತ್ರದಲ್ಲಿದೆ. ಮುಂದಿನ ತಿಂಗಳು ಚಿತ್ರವನ್ನು ತೆರೆಗೆ ತರುವ ಪ್ರಯತ್ನ ನಡೆಯುತ್ತಿದೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ನಿರ್ಮಾಪಕ ಎಸ್ ಅರ್ ಸನತ್ ಕುಮಾರ್.

ನಿರ್ಮಾಪಕ ಸನತ್ ಕುಮಾರ್ ಹಾಗೂ ನಿರ್ದೇಶಕ ರವೀಂದ್ರ ಅವರು ಈ ಚಿತ್ರದ ಸಂಗೀತ ನಿರ್ದೇಶನದ ಜೊತೆಗೆ, ಕಥೆ, ಚಿತ್ರಕಥೆಯನ್ನು ನೀವೇ ಬರೆಯಬೇಕೆಂದು ಹೇಳಿದರು. ಇಂದಿನ ಯುವಪೀಳಿಗೆಗೆ ಹತ್ತಿರವಾದ ಕಥೆಯಿದು. ಚಿತ್ರದಲ್ಲಿ ನಾಯಕ ಮುಖ್ಯಮಂತ್ರಿಗಳ ಅಭಿಮಾನಿಯಾಗಿರುತ್ತಾನೆ ಎಂದು ಕಥೆಯ ಕುರಿತು ಡಾ||ವಿ.ನಾಗೇಂದ್ರಪ್ರಸಾದ್ ಹೇಳಿದರು.
‌‌‌‌
ನನ್ನದು ಈ ಚಿತ್ರದಲ್ಲಿ ವಕೀಲನ ಪಾತ್ರ. ಮುಖ್ಯಮಂತ್ರಿ ರಾಮಯ್ಯ ಅವರ ಅಭಿಮಾನಿಯಾಗಿರುತ್ತೇನೆ ಎಂದು ನಾಯಕ ಅನೂಪ್ ರೇವಣ್ಣ ತಿಳಿಸಿದರು. “ಕನಕರಾಜ”, ನನ್ನ ಹಾಗೂ ನಿರ್ಮಾಪಕರ ಕಾಂಬಿನೇಶನ್ ನಲ್ಲಿ ಬರುತ್ತಿರುವ ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡದ ಪ್ರತಿಯೊಬ್ಬರಿಗೂ ನಿರ್ದೇಶಕ ಆರ್ ರವೀಂದ್ರ ಧನ್ಯವಾದ ಹೇಳಿದರು.

ನಾಯಕಿ ನಿಮಿಷ, ನಟ ಸುಂದರರಾಜ್, ನಟಿಯರಾದ ಪದ್ಮಾವಾಸಂತಿ, ಯಮುನ ಶ್ರೀನಿಧಿ, ನಟ – ಸಹ ನಿರ್ಮಾಪಕ ಮಂಜುನಾಥ್ ಅರಸ್, ಛಾಯಾಗ್ರಾಹಕ ಪ್ರಮೋದ್ ಭಾರತೀಯ ಹಾಗೂ ಗಾಯಕ ಚೇತನ್ ನಾಯಕ್ ಮುಂತಾದವರು “ಕನಕರಾಜ” ಚಿತ್ರದ ಕುರಿತು ಮಾತನಾಡಿದರು.

Visited 1 times, 1 visit(s) today
error: Content is protected !!