ಯಶಸ್ಸಿನ ಸಂಭ್ರಮದಲ್ಲಿ “ಕಾಟೇರ” ಕುಟುಂಬ
ಸ್ಯಾಂಡಲ್ ವುಡ್ ನಲ್ಲಿ ಬಹು ನಿರೀಕ್ಷೆಯೊಂದಿಗೆ ಬಿಡುಗಡೆಗೊಂಡಂತಹ “ಕಾಟೇರ” ಚಿತ್ರ ಉತ್ತಮ ಪ್ರಶಂಸೆಯನ್ನು ಪಡೆದು ರಾಜ್ಯಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆ , ನಿರ್ದೇಶಕ ತರುಣ್ ಸುಧೀರ್ ಸಾರಥ್ಯ , ರಾಕ್ ಲೈನ್ ವೆಂಕಟೇಶ್ ಅದ್ದೂರಿ ನಿರ್ಮಾಣ , ಯುವನಟಿ ಆರಾಧನಾ ರಾಮ್ ಅಭಿನಯ ಸೇರಿದಂತೆ ಎಲ್ಲರ ಬಗ್ಗೆ ಪ್ರಶಂಸೆಗಳ ಮಾತು ಕೇಳಿಬರುತ್ತಿದೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಬಾರಿ ಸದ್ದು ಮಾಡುತ್ತಿರುವ ಕಾರಣದ ಜೊತೆಗೆ ಒಂದಷ್ಟು ವಿಚಾರವನ್ನು ಹಂಚಿಕೊಳ್ಳಲು ಇತ್ತೀಚಿಗೆ ಪತ್ರಿಕಾಗೋಷ್ಠಿಯನ್ನು ಆಯೋಜನೆ ಮಾಡಿತು. ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರದ ನಡುವೆಯೂ ಕನ್ನಡ ಭಾಷೆಯೊಂದರಲ್ಲೇ ನಿರ್ಮಾಣವಾಗಿದ್ದ ಈ ಚಿತ್ರವೀಗ ದೇಶಾದ್ಯಂತ ಸದ್ದುಮಾಡುತ್ತಿದೆ. ಇಂದು ಬಹುತೇಕ ಸ್ಟಾರ್ ಚಿತ್ರಗಳು ಕನ್ನಡ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಗೂ ಡಬ್ ಆಗಿ ತೆರೆಗೆ ಬರುತ್ತಿವೆ. ಆದರೆ ಕಾಟೇರ ಚಿತ್ರದಲ್ಲಿ ಪಾನ್ ಇಂಡಿಯಾ ಕಥಾವಸ್ತು ಇದ್ದರೂ ಅದನ್ನು ಸ್ಥಳೀಯ ಸಂಸ್ಕೃತಿಗೆ ಅನುಗುಣವಾಗಿ ಚಿತ್ರಿಸಿ, ಪ್ರೇಕ್ಷಕರನ್ನು ಗೆಲ್ಲುವಲ್ಲಿ ಚಿತ್ರತಂಡ ಯಶಸ್ವಿಯಾಗಿದೆ.
ಕಳೆದ ವರ್ಷದ ಕೊನೆಯ ಚಿತ್ರವಾಗಿ ತೆರೆಗೆ ಬಂದ ಕಾಟೇರ ದೊಡ್ಡಮಟ್ಟದಲ್ಲಿ ಸೌಂಡ್ ಮಾಡುತ್ತಿದೆ. ಸಿಂಗಲ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಕಾಟೇರ ದೊಡ್ಡಮಟ್ಟದ ಯಶಸ್ಸು ಹಾಗೂ ಗಳಿಕೆಯನ್ನು ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಈ ಸಂದರ್ಭದಲ್ಲಿ ಕಾಟೇರ ಚಿತ್ರದ ಕಲೆಕ್ಷನ್ ಬಗ್ಗೆ ಹರಿದಾಡುತ್ತಿರುವ ಸುದ್ದಿಯ ಕುರಿತಂತೆ ಮಾತನಾಡಿದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್, ನಾನ್ಯಾವತ್ತೂ ನನ್ನ ಚಿತ್ರಗಳ ಲಾಭ-ನಷ್ಟದ ಬಗ್ಗೆ ಚರ್ಚೆ ಮಾಡಿಲ್ಲ. ಈ ಚಿತ್ರದ ಬಗ್ಗೆಯೂ ನಾನು ಎಲ್ಲೂ ಸಹ ಚರ್ಚೆ ಮಾಡಿಲ್ಲ. ಚಿತ್ರ ಅಷ್ಟು ಗಳಿಕೆ ಮಾಡಿದೆ, ಇಷ್ಟು ಗಳಿಕೆ ಮಾಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ಬರುತ್ತಿದೆ. ಹೌದಾ, ಇಷ್ಟಾದರೆ ಭಗವಂತ ಕೊಡಲಿ ಎಂದು ಪ್ರಾರ್ಥನೆ ಮಾಡಿಕೊಂಡು ಸುಮ್ಮನಿದ್ದೇನೆ. ಉತ್ತಮ ಗಳಿಕೆಯ ಅಂತೂ ಆಗುತ್ತಿದೆ. ಆದರೆ, ನಾನು ಲೆಕ್ಕ ನೋಡುವುದಕ್ಕೆ ಹೋಗುವುದಿಲ್ಲ. ಲೆಕ್ಕವನ್ನು ಕೊನೆಯಲ್ಲಿ ನೋಡುತ್ತೇನೆ ಎಂದು ಹೇಳಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡುತ್ತಾ ಈ ಚಿತ್ರದ ಬಗ್ಗೆ ಉತ್ತಮ ಪ್ರಶಂಸೆಯನ್ನು ನೀಡುತ್ತಿರುವ ಎಲ್ಲರಿಗೂ ಧನ್ಯವಾದಗಳು. ಹಾಗೆಯೇ ವಿಶೇಷವಾಗಿ ನನ್ನ ಸೆಲಿಬ್ರೆಟಿಸ್ ಗಳಿಗೆ ಸಿನಿಮಾ ಇಷ್ಟವಾಗಿದೆ. ಅವರು ಒಪ್ಪಿಕೊಂಡಿರುವುದು ನನಗೆ ಆಸ್ಕರ್ ಅವಾರ್ಡ್, ಪ್ರಶಸ್ತಿ ಗಳಿಗಿಂತ ದೊಡ್ಡದು, ನಿರ್ದೇಶಕರ ಕಲ್ಪನೆಯ ಕಥೆಗೆ ಪೂರಕವಾಗಿ ನನ್ನ ಪಾತ್ರವನ್ನು ನಿರ್ವಹಿಸಿದ್ದೇನೆ. ಅವರು ನನ್ನ ಬಳಿ ಬಂದು ಸ್ಕ್ರಿಪ್ಟ್ ಹೇಳಿದಾಗ ನನಗೂ ಅಭಿನಯಿಸುವುದಕ್ಕೆ ಇಲ್ಲಿ ಒಂದು ಅವಕಾಶ ಇದೆ ಅನಿಸಿತು ಹಾಗಾಗಿ ಒಪ್ಪಿಕೊಂಡೆ. ಹಾಗೆಯೇ ನನ್ನ ಚಿತ್ರದಲ್ಲಿ ಹೆಣ್ಣನ್ನ ತುಚ್ಚವಾಗಿ ಕಾಣಬಾರದು, ಕನ್ನಡವನ್ನು ಕೇವಲವಾಗಿ ಮಾತನಾಡಿಸಬಾರದು , ಹಣವನ್ನ ಒದಗಿಸುವ ಕ್ಯಾಪ್ಟನ್ ಆಫ್ ಶಿಪ್ ನಿರ್ಮಾಪಕನಿಗೆ ಮೋಸ ಆಗಬಾರದು ಇದಿಷ್ಟು ಓಕೆ ಆದರೆ ಮಾತ್ರ ನಾನು ಸಿನಿಮಾ ಮಾಡಲು ಒಂದಾಗುತ್ತೇನೆ ಎನ್ನುತ್ತಾ ಚಿತ್ರದ ಕಲಾವಿದರು ಹಾಗೂ ತಂತ್ರಜ್ಞಾನರ ಬಗ್ಗೆ ಬಹಳ ಸುದೀರ್ಘವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಚಿತ್ರದಲ್ಲಿ ದೇಶಕ್ಕೆ ಸಂಬಧಿಸಿದ ಕಥೆ ಇದ್ದರೂ ಪಾನ್ ಇಂಡಿಯಾ ಆಗಿ ಸಿನಿಮಾ ರಿಲೀಸ್ ಮಾಡಲಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿರುವ ಚಿತ್ರತಂಡ ನಾವು ಕಥೆಮಾಡಿಕೊಂಡಾಗಲೇ ಅದರಲ್ಲಿ ನಮ್ಮ ಮಣ್ಣಿಗೆ ಹೊಂದುವಂಥ ಅಂಶಗಳನ್ನು ಬಳಸಿಕೊಂಡೆವು. ಪಾನ್ ಇಂಡಿಯಾ ಮಟ್ಟದಲ್ಲಿ ಯೋಚನೆ ಮಾಡಿದಾಗ ನಮ್ಮ ಸೊಗಡನ್ನು ಅದರಲ್ಲಿ ತರಲು ಆಗುವುದಿಲ್ಲ. ಯಾಕೆಂದರೆ ಬ್ಯುಸಿನೆಸ್‌ಗಾಗಿ ನಾವೊಂದಿಷ್ಟು ಬದಲಾವಣೆ ಮಾಡಿಕೊಳ್ಳ ಬೇಕಾಗುತ್ತದೆ. ನಮ್ಮ ರೈತರು ಲುಂಗಿ ಉಟ್ಟು ಉಳುಮೆ ಮಾಡುತ್ತಾರೆ. ಪಂಜಾಬ್ ಕಡೆ ಹೋದರೆ ತಲೆಗೆ ಪೇಟ ಸುತ್ತುತ್ತಾರೆ. ನಾವು ಆ ಜನರನ್ನು ತೃಪ್ತಿಪಡಿಸಲು ಆ ಸಂಸ್ಕೃತಿ ಬಳಸಬೇಕಾಗುತ್ತದೆ. ಆಗ ನಮ್ಮ ಸಂಸ್ಕೃತಿಗೆ ಪೆಟ್ಟು ಬಿದ್ದಂತಾಗುತ್ತದೆ. ಹಾಗಾಗಿ ನಾವು ನಮ್ಮ ನೆಲಕ್ಕಾಗಿಯೇ ಸಿನಿಮಾ ಮಾಡಿದೆವು. ಮೊದಲು ನಮ್ಮ ಜನ ಚಿತ್ರವನ್ನು ಒಪ್ಪಲಿ, ನಂತರ ಅದೇ ಬೇರೆ ಬೇರೆ ಭಾಷೆಗಳಿಗೆ ಹೋಗುತ್ತದೆ ಎಂಬ ಭರವಸೆ ನಮಗಿತ್ತು. ಹಾಗಾಗಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಯೋಚಿಸಲಿಲ್ಲ. ಇನ್ನು ಮರ‍್ನಾಲ್ಕು ವಾರಗಳಲ್ಲಿ ತೆಲುಗು, ತಮಿಳು, ಭಾಷೆಗಳಲ್ಲಿ ರಿಲೀಸ್ ಮಾಡಲಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ ನಾಯಕ ನಟ ದರ್ಶನ್, ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅಲ್ಲದೆ ಫಿಲಂ ಚೇಂಬರ್ ಅಧ್ಯಕ್ಷ ಎನ್.ಎಂ. ಸುರೇಶ್, ಬಾ.ಮ ಗಿರೀಶ್ ಅಲ್ಲದೆ ಕಥೆಗಾರ ಜಡೇಶ್. ಕೆ ಹಂಪಿ, ಸಂಗೀತ ನಿರ್ದೇಶಕ ವಿ. ಹರಿಕೃಷ್ಣ, ಛಾಯಾಗ್ರಾಹಕ ಸುಧಾಕರ್ ಎಸ್.ರಾಜ್, ಸಂಭಾಷಣೆಗಾರ ಮಾಸ್ತಿ, ಕಲಾವಿದರಾದ ಶೃತಿ, ರವಿಚೇತನ್, ಅವಿನಾಶ್, ಶ್ವೇತಾಪ್ರಸಾದ್ , ಕುಮಾರ್ ಗೋವಿಂದ ಮುಂತಾದವರಿದ್ದರು. ಈ ಕಾಟೇರ ಚಿತ್ರ ಇದೇ ಜನವರಿ 4ರಂದು ದುಬೈನಲ್ಲಿ 5ರಂದು ಯುಎ, ಕೆನಡಾ, ಅಮೆರಿಕಾ, ಜರ್ಮನಿ ಸೇರಿದಂತೆ ವಿದೇಶಗಳಲ್ಲೂ ಚಿತ್ರವು ತೆರೆಗೆ ಬರಲಿದೆಯಂತೆ. ದುಬೈನಲ್ಲಿ ಜ.7ರಂದು “ಕಾಟೇರ” ಚಿತ್ರದ ಪ್ರೀಮಿಯರ್ ಶೋ ನಡೆಯಲಿದ್ದು, ಅದರಲ್ಲಿ ಚಿತ್ರದ ನಟರು, ತಂತ್ರಜ್ಞರು ಭಾಗಿಯಾಗುತ್ತಿದ್ದಾರಂತೆ. ಒಟ್ಟಾರೆ ಅಭಿಮಾನಿಗಳು , ಪ್ರೇಕ್ಷಕರಿಂದ ಪ್ರಶಂಸೆ ಪಡೆದು ಮುನ್ನುಗ್ಗುತ್ತಿರುವ “ಕಾಟೇರ” ಚಿತ್ರ ಗೆಲುವಿನ ಓಟವನ್ನು ಮುಂದುವರಿಸಿದೆ. ಇದು ಕನ್ನಡ ಚಿತ್ರರಂಗಕ್ಕೆ ಒಂದು ಉತ್ತಮ ಚೈತನ್ಯ ಕೊಟ್ಟಂತಾಗಿದೆ. ಈ ಕಾಟೇರ ನ ಓಟ ಯಶಸ್ವಿಯಾಗಿ ಮುಂದೆವರೆಲಿ ಎಂದು ಎಲ್ಲರೂ ಶುಭ ಹಾರೈಸಿದರು.