Cini NewsSandalwood

ರಾಷ್ಟ್ರಪ್ರಶಸ್ತಿ ಗೆದ್ದ ’ಡೊಳ್ಳು’ ಮೆಕ್ಸಿಕೋ ಚಿತ್ರೋತ್ಸವದಲ್ಲಿ ಪ್ರದರ್ಶನ

ಪವನ್ ಒಡೆಯರ್ ನಿರ್ಮಾಣದ ಮೊದಲ ಸಿನಿಮಾ ‘ಡೊಳ್ಳು’ ಈಗಾಗಲೇ ಪ್ರಪಂಚ ಪರ್ಯಟನೆ ಮಾಡಿ ಬಂದಿದೆ. ಪ್ರತಿಷ್ಟಿತ ಬರ್ಲಿನ್ ಅಂತಾರಾಷ್ಟ್ರೀಯ ಚಿತ್ರೋತ್ಸವ, ಅಂತಾರಾಷ್ಟ್ರೀಯ ಢಾಕಾ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿರುವ ಡೊಳ್ಳು, ಎರಡು ರಾಷ್ಟ್ರಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಇದೀಗ ಈ ಚಿತ್ರ ಮತ್ತೊಂದು ಅಂತರಾಷ್ಟ್ರೀಯ ಮನ್ನಣೆಗೆ ಭಾಜನವಾಗಿದೆ.

ಡೊಳ್ಳು ಸಿನಿಮಾ ಮೆಕ್ಸಿಕೋದಲ್ಲಿ ನಡೆಯಲಿರುವ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಆಸ್ಕರ್ ಗೆದ್ದಿರುವ ಎಸ್ ಎಸ್ ರಾಜಮೌಳಿಯವರ RRR, ದೀಪಿಕಾ ಪಡುಕೋಣೆ ಹಾಗೂ ರಣ್ಬೀರ್ ಸಿಂಗ್ ನಟನೆಯ ಬಾಜಿರಾವ್ ಮಸ್ತಾನಿ, ಸೂರ್ಯ ನಟನೆಯ ಸೂರರೈ ಪೊಟ್ರು, ಅಜಯ್ ದೇವಗನ್ ನಟನೆಯ ತಾನಜಿ ಚಿತ್ರಗಳ ಜೊತೆಗೆ ನಮ್ಮ ಕನ್ನಡದ ಹೆಮ್ಮೆಯ ಡೊಳ್ಳು ಸಿನಿಮಾ ಪ್ರದರ್ಶನ ಕಾಣುತ್ತಿರುವುದು ಖುಷಿ ಜೊತೆಗೆ ಹೆಮ್ಮೆಯ ವಿಷಯ.

‘ಡೊಳ್ಳು’ ಸಿನಿಮಾ ಹೆಸರೇ ಹೇಳುವಂತೆ ಡೊಳ್ಳು ಕುಣಿತದ ಸುತ್ತಮುತ್ತ ಹಾಗೂ ನಮ್ಮ ನೆಲದ ಜಾನಪದ ಸೊಗಡನ್ನು ಮುಖ್ಯವಾಗಿ ಇರಿಸಿ ಹೆಣೆದ ಕಥೆ ಇದಾಗಿದೆ. ಸಾಗರ್ ಪುರಾಣಿಕ್ ನಿರ್ದೇಶನ ಮೂಡಿಬಂದಿದ್ದ ಈ ಚಿತ್ರದಲ್ಲಿ ಕಾರ್ತಿಕ್ ಮಹೇಶ್, ನಿಧಿ ಹೆಗ್ಡೆ ಜೋಡಿಯಾಗಿ ನಟಿಸಿದ್ದಾರೆ. ಬಾಬು ಹಿರಣ್ಣಯ್ಯ, ಚಂದ್ರ ಮಯೂರ್, ಶರಣ್ಯ ಸುರೇಶ್ ಸೇರಿದಂತೆ ಹಲವು ಮಂದಿ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಸ್ಯಾಂಡಲ್ವುಡ್ನಲ್ಲಿ ಹಲವು ಯಶಸ್ವಿ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪವನ್ ಒಡೆಯರ್ ತಮ್ಮದೇ ಹೋಂ ಬ್ಯಾನರ್ ಒಡೆಯರ್ ಮೂವೀಸ್ನಲ್ಲಿ ಪತ್ನಿ ಅಪೇಕ್ಷಾ ಜೊತೆಗೂಡಿ ಡೊಳ್ಳು ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಪ್ರತಿಭಾವಂತ ನಿರ್ದೇಶಕರಾಗಿರುವ ಪವನ್ ಒಡೆಯರ್, ಗೂಗ್ಲಿ, ರಣವಿಕ್ರಮ, ನಟ ಸಾರ್ವಭೌಮ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ನಿರ್ದೇಶನ, ಬರವಣಿಗೆ ಜೊತೆಗೆ ಸಿನಿಮಾ ನಿರ್ಮಾಣ ಕೂಡ ಆರಂಭಿಸಿದ್ದು, ನಿರ್ಮಾಣ ಮಾಡಿದ ಮೊದಲ ಚಿತ್ರದ ಮೂಲಕವೇ ಸಂಚಲನ ಸೃಷ್ಟಿಸಿದ್ದಾರೆ.

error: Content is protected !!