Cini NewsSandalwood

ವಿಭಿನ್ನ ಪ್ರೇಮಕಥೆಯ “ಜೊತೆಯಾಗಿರು” ಟ್ರೈಲರ್ ಬಿಡುಗಡೆ.

ರೇಣು ಮೂವೀಸ್ ಮೂಲಕ ಒಂದಷ್ಟು ಸ್ನೇಹಿತರೇ ಸೇರಿ ನಿರ್ಮಿಸಿರುವ ಚಿತ್ರ ಜೊತೆಯಾಗಿರು. ಅಜರಾಮರ, ನಾನೊಬ್ನೆ ಒಳ್ಳೇವ್ನು ಸೇರಿದಂತೆ ಹಲವಾರು ಸಿನಿಮಾಗಳಿಗೆ ಸಹಾಯಕ ನಿರ್ದೇಶಕ, ಸಹ ನಿರ್ದೇಶಕನಾಗಿಯೂ ಕೆಲಸ ಮಾಡಿದ ಸತೀಶ್ ಕುಮಾರ್ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ೩ ಹಾಡುಗಳ ಪ್ರದರ್ಶನ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ೨೦೦೯ರಲ್ಲಿ ನಡೆದ ನೈಜ ಘಟನೆಯಿಂದ ಪ್ರೇರಿತವಾದ ಕಥೆ ಈ ಚಿತ್ರದಲ್ಲಿದೆ. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸತೀಶ್ ಕುಮಾರ್, ಆಗ ನನ್ನ ಸ್ನೇಹಿತನ ಜೀವನದಲ್ಲಿ ನಡೆದ ಘಟನೆಯನ್ನಿಟ್ಟುಕೊಂಡು ಈ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದೇನೆ.‌ ಜೊತೆಗೆ ಒಂದು ಫ್ರೆಂಡ್ ಷಿಪ್ ಟ್ರ್ಯಾಕ್ ಕೂಡ ಬರುತ್ತದೆ.

ಚಿತ್ರದಲ್ಲಿ ಎರಡು ಲವ್ ಸ್ಟೋರಿಗಳು ಬರುತ್ತದೆ. ಸೋಷಿಯಲ್ ಮೀಡಿಯಾ ಇಲ್ಲದ ಕೀಪ್ಯಾಡ್ ಕಾಲದಲ್ಲಿ ಮಿಸ್ ಕಾಲ್ ನಿಂದ ಹುಟ್ಟಿದ ಪ್ರೇಮಕಥೆಯೊಂದು ಫ್ಲ್ಯಾಷ್ ಬ್ಯಾಕ್ ನಲ್ಲಿ ಬರುತ್ತದೆ. ಇನ್ನೊಂದು ಕಥೆಯಲ್ಲಿ ಹಣದ ಆಸೆಗೆ ಬಿದ್ದ ಹುಡುಗಿಯನ್ನು ಹುಡುಗ ಲವ್ ಮಾಡಿದರೆ ಏನಾಗುತ್ತೆ ಎಂಬುದನ್ನು ಹೇಳಿದ್ದೇವೆ. ಬೆಂಗಳೂರು, ಕನಕಪುರದಲ್ಲಿ ಮಾತಿನ ಭಾಗ ಹಾಗೂ ಕಳಸ, ಸಕಲೇಶಪುರ, ಕುಂದಾಪುರ, ಸುತ್ತಮುತ್ತ ಹಾಡುಗಳನ್ನು ಚಿತ್ರೀಕರಿಸಿದ್ದೇವೆ. ಮಿಸ್ ಕಾಲ್ ನಿಂದ ಹುಟ್ಟಿದ ಪ್ರೇಮಕಥೆಯಲ್ಲಿ ವೆಂಕಟೇಶ್ ಹೆಗಡೆ, ರಶ್ಮಿಗೌಡ ಹಾಗೂ ಸುನಿಲ್ ಕಾಂಚನ್, ಪೂಜಾ ಆಚಾರ್ ಇನ್ನೊಂದು ಕಥೆಯ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರೀಕರಣ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿದು ಸೆನ್ಸಾರ್ ನಿಂದ ಯು/ಎ ಪ್ರಮಾಣಪತ್ರವೂ ಸಿಕ್ಕಿದೆ. ಸ್ನೇಹಿತರು ಸೇರಿ ಈ ಸಿನಿಮಾ ಮಾಡಿದ್ದೇವೆ ಎಂದರು.

ನಂತರ ನಾಯಕ ವೆಂಕಟೇಶ್ ಹೆಗ್ಡೆ ಮಾತನಾಡಿ ನಾವೆಲ್ಲ ಹೊಸಬರು. ಮಿಸ್ ಕಾಲ್ ನಿಂದ ಪ್ರಾರಂಭ ವಾಗುವ ಲವ್ ಮುಂದೆ ಏನೇನಾಗುತ್ತೆ, ಯಾವ ತಿರುವು ತಗೊಳ್ಳುತ್ತೆ ಅನ್ನೋದು ಚಿತ್ರದಲ್ಲಿದೆ ಎಂದು ಹೇಳಿದರು. ನಾಯಕಿ ರಶ್ಮಿಗೌಡ ಮಾತನಾಡಿ ಐಟಿಯಲ್ಲಿ ವರ್ಕ್ ಮಾಡ್ತಿದ್ದ ನಾನು ನಿರೂಪಕಿಯಾಗೂ ಕೆಲಸ ಮಾಡಿದ್ದೇನೆ. ಹಿಂದೆ ರಾಜಲಕ್ಷ್ಮಿ ಚಿತ್ರದಲ್ಲಿ ನಟಿಸಿದ್ದೆ. ಮಿಸ್ ಕಾಲ್ ಲವ್ ಸ್ಟೋರಿಯಲ್ಲಿ ನಾನು ಕಾಣಿಸಿಕೊಂಡಿದ್ದೇನೆ ಎಂದರು. ಮತ್ತೊಬ್ಬ ನಾಯಕನಟ ಸುನಿಲ್ ಕಾಂಚನ್ ಮಾತನಾಡಿ ತನ್ನ ಪಾತ್ರದ ಬಗ್ಗೆ ಹೇಳಿಕೊಂಡರು. ಉಳಿದಂತೆ ಶಂಕರ ನಾರಾಯಣ್, ಸಂತೋಷ್, ಸುಧಾ ತಮ್ಮ ಪಾತ್ರಗಳ ಕುರಿತಂತೆ ಹೇಳಿಕೊಂಡರು. ರಾಜಶೇಖರ್ ಅವರ ಸಂಭಾಷಣೆ, ವಿನು ಮನಸು ಅವರ ಸಂಗೀತ, ಕೆ.ಕಲ್ಯಾಣ್, ಮನ್ವರ್ಷಿ,ಸತೀಶ್ ಕುಮಾರ್ ಸಾಹಿತ್ಯ, ಸತೀಶ್ ಚಂದ್ರಯ್ಯ ಸಂಕಲನ, ವಿ ನಾಗೇಶ್ ನೃತ್ಯ, ಲಯನ್ ಗಂಗರಾಜ್ ಸಾಹಸ,ರಾಜ ಶಿವಶಂಕರ್, ಆನಂದ್ ಇಳಯರಾಜ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

error: Content is protected !!