ಕ್ರೂರಿಗಳಿಗೆ ಚಾಣಾಕ್ಷರ ಉತ್ತರ “ಬೇಲ್” (ಚಿತ್ರವಿಮರ್ಶೆ-ರೇಟಿಂಗ್ : 4/5)

Spread the love

ರೇಟಿಂಗ್ : 4/5

ಚಿತ್ರ : ಬೇಲ್
ನಿರ್ದೇಶಕ : ಪವನ್ ಒಡೆಯರ್
ನಿರ್ಮಾಪಕ : ವೆಂಕಟ್ ಕೆ. ನಾರಾಯಣ
ಸಂಗೀತ : ಅಜನೀಶ್ ಲೋಕನಾಥ್
ಛಾಯಾಗ್ರಹಣ : ವೈದಿ
ತಾರಾಗಣ : ಶಿವರಾಜ್‌ ಕುಮಾರ್, ಜಯರಾಮ್ , ಸಾಯಿ ಕುಮಾರ್ , ಲೂಸ್ ಮಾದ ಯೋಗಿ, ದೀಕ್ಷಿತ್ , ಸಂಜನಾ ಆನಂದ್ , ಸಂಗೀತ ಕ್ರಿಶ್, ರಮೇಶ್ ಇಂದಿರಾ, ಗೋಪಾಲ್ ಕೃಷ್ಣ ದೇಶಪಾಂಡೆ ಹಾಗೂ ಮುಂತಾದವರು…

ಈ ದೇಶದಲ್ಲಿ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಆದರೆ
ಭಯೋತ್ಪಾದಕರು , ಡ್ರಗ್ ಮಾಫಿಯಾ , ಮಾನವನ ಮೇಲೆ ಮೆಡಿಸನ್ ಪ್ರಯೋಗ ,ಅತ್ಯಾಚಾರಿಗಳು, ರಾಜಕೀಯ ದ್ವೇಷ ಹೀಗೆ ಒಂದಷ್ಟು ದುಷ್ಟ ಕೃತಗಳನ್ನ ಮಾಡುವಂತಹ ಪಾಪಿಗಳ ಅಟ್ಟಹಾಸಕ್ಕೆ ತಕ್ಕ ಪಾಠ ಕಲಿಸಲು ಬರುವಂತಹ ತ್ರಿಮೂರ್ತಿಗಳ ಸಮಾಗಮದಲ್ಲಿ ಎದುರಾಗುವ ಏರಿಳಿತದ ಸುತ್ತ ಬುದ್ಧಿವಂತಿಕೆಯ ಪ್ಲಾನ್ ರೋಚಕ ತಿರುವಿನೊಂದಿಗೆ ಕಟ್ಟಿಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಬೇಲ್”.

ಪೊಲೀಸ್ ಇಲಾಖೆಯಲ್ಲಿ ಸೇವೆ ಮಾಡಿ ನಿವೃತ್ತಿಯಾದ ಕಮಿಷನರ್ ವಿಜಯ್ (ಶಿವರಾಜಕುಮಾರ್) ತನ್ನ ಸಹೋದ್ಯೋಗಿ ಹಾಗೂ ಹಿರಿಯ , ಕಿರಿಯ ಅಧಿಕಾರಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು , ವಿಶೇಷವಾಗಿ ಪಾರ್ಟಿಯನ್ನು ಕೂಡ ನೀಡುತ್ತಾನೆ. ವಿಜಯ್ ಮಡದಿ ಹಾಸಿನಿ (ಸಂಗೀತ) ರಾಜಕಾರಣಿಯ ಮಗಳು. ಇನ್ನು ಇವರಿಬ್ಬರ ಮುದ್ದಾದ ಮಗಳು ಕೃತಿ ಭಯೋತ್ಪಾದಕರ ಅಟ್ಯಾಕ್ ನಿಂದ ಸಾವಿಗಿಡಾಗುತ್ತಾಳೆ. ಇನ್ನೋರ್ವ ಸಾಕು ಮಗಳು ನಯನ (ಸಂಜನಾ ಆನಂದ್) ಜೊತೆ ನೆಮ್ಮದಿ ಹುಡುಕುತ್ತಾ ಬದುಕುತ್ತಾರೆ.

ಇನ್ನು ವಿಜಯ್ ಗೆ ಆತ್ಮೀಯ ಗೆಳೆಯರಾದ ರಿಟೈರ್ಡ್ ಸೈಂಟಿಸ್ಟ್ ರಾಬರ್ಟ್ (ಜಯರಾಮ್) ಹಾಗೂ ರಿಟೈರ್ಡ್ ಜಡ್ಜ್ ಆಲಿ (ಸಾಯಿ ಕುಮಾರ್) ಒಡನಾಟ ಕುಟುಂಬಕ್ಕಿಂತ ಹೆಚ್ಚು. ಸಮಾಜದಲ್ಲಿ ದುಷ್ಟ ವ್ಯಕ್ತಿಗಳ ಕೃತ್ಯ ಹೆಚ್ಚಾಗಿ ಜೈಲು ಸೇರಿದರು ಕಾನೂನಿನ ಕೆಲವು ಲೋಪದೋಷಗಳನ್ನು ಅಸ್ತ್ರವಾಗಿಸಿಕೊಂಡು ಬೇಲ್ ಮೂಲಕ ಹೊರಬರುವ ಪಾಪಿಗಳ ಸಂಖ್ಯೆ ಹೆಚ್ಚಾಗುತ್ತದೆ. ಇದಕ್ಕೆ ಕೆಲವು ರಾಜಕೀಯ ನಾಯಕರು , ಉದ್ಯಮಿಗಳು , ಪೊಲೀಸ್ ಹಾಗೂ ಕಾನೂನು ವ್ಯವಸ್ಥೆ ಎಲ್ಲವೂ ಕೈ ಗೊಂಬೆಯಂತೆ ಇರುವಾಗ ಜನಸಾಮಾನ್ಯರ ಪರಿಸ್ಥಿತಿ ಅದೋಗತಿಯೇ.

ಇಂಥದೇ ಒಂದಷ್ಟು ಸಂದರ್ಭಗಳು ಈ ಮೂವರು ನಿವೃತ್ತ ಅಧಿಕಾರಿಗಳ ಗಮನಕ್ಕೆ ಬರುತ್ತಿದ್ದಂತೆ ಒಂದೊಂದುಕ್ಕು ವಿಭಿನ್ನ ರೋಚಕ ಪ್ಲಾನ್ ಉತ್ತರ ನೀಡುತ್ತಾ ಹೋಗುತ್ತದೆ. ಅದು ಹೇಗೆ.. ಪ್ಲಾನ್ ಏನು… ದುಷ್ಟರ ಕೈಚಳಕ ಏನು… ಏಕೆ ಉತ್ತರ ಹೇಗೆ ಸಿಗುತ್ತೆ… ಇಂತಹ ತ್ರಿಮೂರ್ತಿಗಳು ಎಷ್ಟು ಅಗತ್ಯ… ಎಂಬ ಒಂದಷ್ಟು ಕುತೂಹಲಕಾರಿ ಅಂಶವನ್ನು ತಿಳಿಯುವುದಕ್ಕೆ ಒಮ್ಮೆ ಈ ಚಿತ್ರವನ್ನು ನೋಡಬೇಕು.

ನಿರ್ದೇಶಕ ಪವನ್ ಒಡೆಯರ್ ಆಯ್ಕೆಮಾಡಿಕೊಂಡಿರುವ ಕಥಾವಸ್ತು ಬಹಳ ಕುತೂಹಲಕಾರಿ ಗಮನ ಸೆಳೆಯುವಂತಿದೆ. ಸಮಾಜಘಾತಕ ಶಕ್ತಿಗಳಿಗೆ ಪ್ರತ್ಯುತ್ತರ ಹೇಗೆ ನೀಡಬಹುದು. ಅಧಿಕಾರ ಇದ್ದವರು ಹಾಗೂ ಇಲ್ಲದಿದ್ದವರು ಕಾರ್ಯವೈಖರಿ ಹೇಗೆ ಇರಬೇಕು ಎಂಬ ಸೂಕ್ಷ್ಮತೆಯ ಜೊತೆಗೆ ಜನರಲ್ಲಿ ಜಾಗೃತ ಮೂಡಿಸುವ ಹಾದಿಯಲ್ಲಿ ಒಂದು ಉತ್ತಮ ಸಂದೇಶವನ್ನು ಪ್ರೇಕ್ಷಕರ ಮುಂದೆ ನೀಡಿದ್ದಾರೆ.

ಬ್ರಿಲಿಯಂಟ್ ಹಾಗೂ ಮಾಸ್ಟರ್ ಮೈಂಡ್ ಹಾದಿಯಲ್ಲಿ ಸದ್ದು ಹೆಚ್ಚಾಗಿದ್ದು , ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು ಅನಿಸುತ್ತದೆ. ಆದರೂ ಪ್ರೇಕ್ಷಕರನ್ನ ಸೆಳೆಯುವಂತಹ ಅಂಶ ಉತ್ತಮವಾಗಿದೆ. ಇನ್ನು ಚಿತ್ರಕ್ಕೆ ಬಂಡವಾಳ ಹಾಕಿರುವ ನಿರ್ಮಾಪಕ ವೆಂಕಟ್ ಕೆ ನಾರಾಯಣ ಅವರ ಖರ್ಚು ವೆಚ್ಚ ತೆರೆಯ ಮೇಲೆ ಅದ್ದೂರಿಯಾಗಿ ಕಾಣುತ್ತದೆ. ಇನ್ನು ಚಿತ್ರದ ಸಂಗೀತದ ಜೊತೆಗೆ ಹಿನ್ನೆಲೆ ಸಂಗೀತ ಆವರಿಸಿಕೊಂಡಿದೆ. ಛಾಯಾಗ್ರಾಹಕ , ಸಂಕಲನ ಹಾಗೂ ಸಾಹಸದ ಕೈಚಳಕ ಕೆಲಸ ಅದ್ಭುತವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮಪಟ್ಟಿದೆ.

ಇನ್ನು ಪ್ರಮುಖ ವಿಜಯ್ ಪಾತ್ರದಲ್ಲಿ ನಟ ಶಿವರಾಜ್ ಕುಮಾರ್ ರಿಟೈಡ್ ಪೊಲೀಸ್ ಕಮಿಷನರ್ ಪಾತ್ರದಲ್ಲಿ ಅದ್ಭುತವಾಗಿ ಮಿಂಚಿದ್ದು, ಖಡಕ್ ಲುಕ್ , ಗೆಟಪ್ ಹಾಗೂ ಮಾಸ್ಟರ್ ಮೈಂಡ್ ಪ್ಲಾನ್ ನ ವರ್ಚಸ್ಸು ಎಲ್ಲರನ್ನ ಗಮನ ಸೆಳೆಯುತ್ತದೆ. ಅದೇ ರೀತಿ ರಿಟೈರ್ಡ್ ಜಡ್ಜ್ ಅಲಿ ಪಾತ್ರದಲ್ಲಿ ಸಾಯಿಕುಮಾರ್ ಪಾತ್ರಕ್ಕೆ ಜೀವ ತುಂಬಿದ್ದಾರೆ. ಇನ್ನು ಬ್ಯಾಚುಲರ್ ಸೈಂಟಿಸ್ಟ್ ರಾಬಿ ಪಾತ್ರದಲ್ಲಿ ಮಲಯಾಳಂ ನ ಖ್ಯಾತ ನಟ ಜಯರಾಮ್ ಅದ್ಭುತವಾದ ಟೈಮ್ ಸೆನ್ಸ್ ಕಾಮಿಡಿ , ಪಂಚಿಂಗ್ ಡೈಲಾಗ್ ಮೂಲಕ ಸೊಗಸಾಗಿ ನಟಿಸಿದ್ದಾರೆ.

ಇನ್ನು ಯೋಗಿ ರೆಡ್ಡಿ ಪಾತ್ರದಲ್ಲಿ ಲೂಸ್ ಮಾದ ಯೋಗಿ ವಿಲ್ಲನ್ ಪಾತ್ರದಲ್ಲಿ ಅಬ್ಬರಿಸಿದ್ದು , ಇನ್ಸ್ಪೆಕ್ಟರ್ ಪಾತ್ರದಲ್ಲಿ ದೀಕ್ಷಿತ್ , ಪ್ರೇಯಸಿಯ ಪಾತ್ರದಲ್ಲಿ ಸಂಜನಾ , ಹಿರಿಯ ಪತ್ರಕರ್ತರ ಪಾತ್ರದಲ್ಲಿ ರಮೇಶ್ ಇಂದಿರಾ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟಾರೆ ಮಾಸ್ ಹಾಗೂ ಎಂಟೈನಮೆಂಟ್ ಜೊತೆಗೆ ಮೆಸೇಜ್ ಇರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.

Visited 1 times, 1 visit(s) today
error: Content is protected !!