ತಾಯಿ-ಮಗನ ಬಾಂಧವ್ಯದ ನಡುವೆ ಪ್ರೀತಿಯ ಕರಿ ನೆರಳು…”ಲಕ್ಷ್ಮೀಪುತ್ರ” (ಚಿತ್ರವಿಮರ್ಶೆ-ರೇಟಿಂಗ್ : 4 /5

Spread the love

ರೇಟಿಂಗ್ : 4 /5

ಚಿತ್ರ : ಲಕ್ಷ್ಮೀಪುತ್ರ
ನಿರ್ದೇಶಕ: ವಿಜಯ ಸ್ವಾಮಿ ನಿರ್ಮಾಪಕಿ : ಅನ್ನಪೂರ್ಣ ಅರ್ಜುನ್
ಸಂಗೀತ : ಅರ್ಜುನ್ ಜನ್ಯ ಛಾಯಾಗ್ರಹಣ : ಗಿರೀಶ್
ತಾರಾಗಣ : ಚಿಕ್ಕಣ್ಣ , ವಂದಿತಾ, ತಾರಾ, ಮಿತ್ರ, ಕುರಿ ಪ್ರತಾಪ್ ,ಶಿವರಾಜ್ ಕೆ ಆರ್ ಪೇಟೆ, ಧರ್ಮಣ್ಣ, ಗಿರಿ ಹಾಗೂ ಮುಂತಾದವರು…

ಜೀವನದ ಪಯಣದಲ್ಲಿ ಪ್ರತಿಯೊಬ್ಬರಿಗೂ ಅಮ್ಮನ ಮಡಿಲು , ತ್ಯಾಗ , ಮಮಕಾರದ ಬಗ್ಗೆ ತಿಳಿದಿರಬೇಕು. ಹಾಗೆಯೇ ಬಾಳ ಸಂಗಾತಿಯಾಗಿ ಬರುವ ಮಡದಿಗೆ ಬಗ್ಗೆಯೂ ಕೂಡ ಗಮನವಿರಬೇಕು. ಪುರುಷರ ಬದುಕಲ್ಲಿ ಈ ಇಬ್ಬರು ಸ್ತ್ರೀಯರು ಬಹಳ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಅದರಲ್ಲಿ ಯಾವುದೇ ಒಂದು ಏರುಪೇರು ಆದರೂ ಗಂಡಿನ ಸ್ಥಿತಿಗತಿ ಬದಲಾಗುತ್ತಾ ಹೋಗುತ್ತದೆ. ಅಂತದ್ದೇ ಒಂದಷ್ಟು ಸೂಕ್ಷ್ಮ ವಿಚಾರವನ್ನು ಇಟ್ಟುಕೊಂಡು ತಾಯಿಯ ಪ್ರೀತಿ , ಗೆಳೆಯರ ಒಡನಾಟ, ಪ್ರೀತಿಯ ಸೆಳೆತದ ನಡುವೆ ತುಂಟಾಟ , ತರ್ಲೆ, ಹಾಸ್ಯದ ಮೂಲಕ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಲಕ್ಷ್ಮಿಪುತ್ರ”.

ಗೆಳೆಯರೊಟ್ಟಿಗೆ ತನಗಾಗಿ ಹುಡುಗಿಯನ್ನು ಹುಡುಕುವುದೇ ಒಂದು ದೊಡ್ಡ ಕೆಲಸ ಎಂದುಕೊಳ್ಳುವ ಕೃಷ್ಣ (ಚಿಕ್ಕಣ್ಣ) ತನ್ನ ಅಮ್ಮ ಲಕ್ಷ್ಮಿ (ತಾರಾ) ಹೆಸರಿನಲ್ಲಿ ಮೊಬೈಲ್ ಅಂಗಡಿಯನ್ನ ನಡೆಸುತ್ತಾನೆ. ತನ್ನ ಒಡನಾಡಿ ಮಹಿಳೆಯರ ಜೊತೆ ಕೂಡ ಮಾತನಾಡುತ್ತ ತನ್ನ ಮಗನಿಗಾಗಿ ಮುದ್ದಾದ ಹುಡುಗಿ ಹುಡುಕುವ ಕೆಲಸ ಮಾಡುತ್ತಾಳೆ.

ಹಾಗೆಯೇ ತನ್ನ ಮಗನಿಗೆ ಕಾಶಿಗೆ ಕರೆದೊಯ್ಯಲು ಸದಾ ಕೇಳುತ್ತಾಳೆ. ಅದಕ್ಕೂ ಒಂದು ಕಾರಣ ಇರುತ್ತದೆ. ಇದರ ನಡುವೆ ಕೃಷ್ಣ ಗೆಳೆಯರೊಂದಿಗೆ ಮದುವೆ ಮಂಟಪಕ್ಕೆ ಹೋದಾಗ ಸುಂದರವಾದ ಹುಡುಗಿ ಗೌರಿ (ವಂದಿತಾ)ಯನ್ನ ನೋಡಿ ಇಷ್ಟಪಡುತ್ತಾನೆ. ನೂರು ಹುಡುಗಿಯನ್ನ ನೋಡುವ ಬದಲು… ಒಂದೇ ಹುಡುಗಿಯ ಹಿಂದೆ ನೂರು ಬಾರಿ ಹೋದರೆ ಖಂಡಿತ ಸಿಗುತ್ತಾಳೆ… ಎಂಬ ಆಸೆಯೊಂದಿಗೆ ಅವಳನ್ನ ಹಿಂಬಾಲಿಸಿ ತನ್ನ ಪ್ರೀತಿ ನಿವೇದನೆಯನ್ನು ಹೇಳಿಕೊಳ್ಳುತ್ತಾನೆ.

ಒಂದಷ್ಟು ಸಂದರ್ಭಗಳು ಎದುರಾಗಿ ಗೌರಿ ಕೂಡ ಕೃಷ್ಣನನ್ನು ಪ್ರೀತಿಸಲು ನಿರ್ಧರಿಸುತ್ತಾಳೆ. ಇದು ತಾಯಿಯ ಗಮನಕ್ಕೂ ಬರುತ್ತದೆ. ಆದರೆ ತಾಯಿಯ ಕಡೆ ಗಮನ ಕೊಡದ ಕೃಷ್ಣ ಪ್ರೀತಿಯ ಕಡೆ ಒಲವು ತೋರುತ್ತ ಸಾಗುತ್ತಾನೆ. ಮುಂದೆ ಕೃಷ್ಣನ ಬದುಕಿನಲ್ಲಿ ಒಂದರ ಹಿಂದೆ ಒಂದು ದೊಡ್ಡ ಆಘಾತ ಎದುರಾಗುತ್ತದೆ. ಬದುಕಿನಲ್ಲಿ ಯಾವುದಕ್ಕೆ ಎಷ್ಟು ಪ್ರಾಮುಖ್ಯತೆ ಕೊಡಬೇಕು ಎಂಬ ಸೂಕ್ಷ್ಮತೆಯನ್ನು ಅಚ್ಚುಕಟ್ಟಾಗಿ ತೆರೆದಿಟ್ಟಿರುವ ಈ ಚಿತ್ರವನ್ನು ಒಮ್ಮೆ ನೋಡಬೇಕು.

ಒಂದು ಕೌಟುಂಬಿಕ ಕಥಾನಕ , ಸಂಬಂಧಗಳ ಮೌಲ್ಯ , ಮಮಕಾರದ ಬೆಸುಗೆ, ಪ್ರೀತಿಯ ಸೆಳೆತ , ಗೆಳೆತನದ ಒಡನಾಟ ಸೇರಿದಂತೆ ಒಂದಷ್ಟು ಸೂಕ್ಷ್ಮ ವಿಚಾರವನ್ನು ಅಚ್ಚುಕಟ್ಟಾಗಿ ನಿರ್ಮಾಣ ಮಾಡಿರುವ ಎ.ಪಿ. ಅರ್ಜುನ್ ದಂಪತಿಗಳ ಆಲೋಚನೆ ಮೆಚ್ಚುವಂಥದ್ದು, ಅದಕ್ಕೆ ಪೂರಕವಾಗಿ ನಿರ್ದೇಶಕ ವಿಜಯ್ ಸ್ವಾಮಿ ಕೂಡ ದೃಶ್ಯಗಳನ್ನು ಕಟ್ಟಿಕೊಡುವುದರಲ್ಲಿ ಬಹಳಷ್ಟು ಶ್ರಮ ಪಟ್ಟಿದ್ದು, ದ್ವಿತೀಯ ಭಾಗ ಹೆಚ್ಚು ಗಮನ ಸೆಳೆಯುವಂತಿದೆ.

ಚಿತ್ರಕಥೆ , ಸಂಭಾಷಣೆಯಲ್ಲಿ ಇನ್ನಷ್ಟು ಹಿಡಿತ ಮಾಡಬಹುದಿತ್ತು. ಚಿತ್ರದಲ್ಲಿ ಅಮ್ಮನ ಹಾಡು ಗುನುಗುವಂತಿದ್ದು , ಉಳಿದ ಹಾಡುಗಳು ಚೆನ್ನಾಗಿ ಮೂಡಿ ಬಂದಿದೆ. ಛಾಯಾಗ್ರಾಹಕರ ಕೈಚಳಕ ಅಚ್ಚುಕಟ್ಟಾಗಿದೆ. ನಾಯಕ ಚಿಕ್ಕಣ್ಣ ತನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮ ಪಟ್ಟಿದ್ದು, ಹಾಸ್ಯ ಸನ್ನಿವೇಶವನ್ನ ಲೀಲಾಜಾಲವಾಗಿ ನಿಭಾಯಿಸುವಷ್ಟು ಸುಲಭವಲ್ಲ ಎಮೋಷನ್ ಸನ್ನಿವೇಶ ಎಂಬ ಸತ್ಯ ತಿಳಿದಂತಿದೆ.

ಆಕ್ಷನ್ ಜೊತೆಗೆ ಡ್ಯಾನ್ಸಿಂಗ್ ಸ್ಟೆಪ್ಸ್ ಕೂಡ ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಮುದ್ದು ಗೊಂಬೆಯಂತೆ ನಾಯಕನ ಎತ್ತರದಷ್ಟೇ ಕಾಣುವ ಬೆಡಗಿ ವಂದಿತಾ ಸಿಕ್ಕ ಅವಕಾಶವನ್ನ ಸಮರ್ಥವಾಗಿ ಎದುರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನು ಇಡೀ ಚಿತ್ರದ ಕೇಂದ್ರ ಬಿಂದು ಹಿರಿಯ ನಟಿ ತಾರಾ ಅಮ್ಮನಾಗಿ ಅದ್ಭುತವಾಗಿ ಅಭಿನಯಿಸಿದ್ದಾರೆ. ಕ್ಲೈಮಾಕ್ಸ್ ಸನ್ನಿವೇಶ ಮನ ಮಿಡಿಯುವಂತಿದೆ. ಉಳಿದಂತೆ ಅಭಿನಯಿಸಿರುವ ಮಿತ್ರ , ಕುರಿ ಪ್ರತಾಪ್, ಶಿವರಾಜ್ ಕೆ ಆರ್ ಪೇಟೆ, ಧರ್ಮಣ್ಣ, ಗಿರಿ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ಒಟ್ಟಾರೆ ಮನೋರಂಜನೆಯ ಜೊತೆ ಒಂದು ಮಮತೆಯ ಚಿತ್ರ ಇದಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.

 

Visited 1 times, 1 visit(s) today
error: Content is protected !!