ಹಣ , ಅಂತಸ್ತು , ಪ್ರೀತಿಯ ಸುಳಿಯಲ್ಲಿ ಕಿಡ್ನಾಪ್ ಜಾಲ.. “ರಿಲ್ಯಾಕ್ಸ್” (ಚಿತ್ರವಿಮರ್ಶೆ -ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ರಿಲ್ಯಾಕ್ಸ್
ನಿರ್ದೇಶಕ : ಶ್ರೀನಿವಾಸ್ ಮಂಡ್ಯ
ನಿರ್ಮಾಪಕ : ಅಂಬಟಿ ಮಧುಮೋಹನ್ ಕೃಷ್ಣ
ಸಂಗೀತ : ಜೆಸ್ಸಿ ಗಿಫ್ಟ್
ಛಾಯಾಗ್ರಹಣ : ರಾಕೇಶ್ ಸಿ. ತಿಲಕ್
ತಾರಾಗಣ : ಕೋಮಲ್ ಕುಮಾರ್, ಸೋನಲ್ ಮೊಂತೆರೊ , ವಿನೋದ್ ಪ್ರಭಾಕರ್ , ಅಚ್ಚುತ್ ಕುಮಾರ್, ನವೀನ್ ಪಡೀಲ್, ಅರುಣಾ ಬಾಲರಾಜ್ , ಅಂಬಟಿ ಮಧುಮೋಹನ್ ಹಾಗೂ ಮುಂತಾದವರು…
ಮನುಷ್ಯನಿಗೆ ಊಟ, ಬಟ್ಟೆ ಎಷ್ಟು ಮುಖ್ಯವೋ ಹಣವು ಅಷ್ಟೇ ಮುಖ್ಯ. ಮನೆಯಲ್ಲಿ ನೆಮ್ಮದಿ , ಗೌರವ , ಪ್ರೀತಿ ಬೇಕೆಂದರು ಕಾಸು ಕೈಯಲ್ಲಿ ಇದ್ದರಷ್ಟೇ ಸಾಧ್ಯ ಎನ್ನಬಹುದು. ಇಂತದ್ದೇ ಕಥಾನಕದ ರೂಪದಲ್ಲಿ ಕೆಲಸವಿಲ್ಲದ ವ್ಯಕ್ತಿ ಹಣಕ್ಕಾಗಿ ಪರದಾಡಿದರೆ… ಹಣವಿದ್ದು ದರ್ಪದಿಂದ ಮರೆಯುವ ಹುಡುಗಿ… ಪ್ರೀತಿಗಾಗಿ ಪರಿತಪಿಸುವ ಯುವಕ ಹೀಗೆ ಒಂದೊಂದು ಮನಸ್ಥಿತಿಯ ಸುತ್ತ ಸಂಬಂಧ , ಸ್ನೇಹ , ಪ್ರೀತಿಯ ನಡುವೆ ಕಿಡ್ನಾಪ್ ಪ್ರಕರಣ ಕೊಂಡಿಯಂತೆ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರಿಲ್ಯಾಕ್ಸ್”.
ಸಣ್ಣಪುಟ್ಟ ಕಳ್ಳತನ ಮಾಡುತ್ತಾ ಮನೆಯವರೊಂದಿಗೆ ಬಯಸಿಕೊಳ್ಳುತ್ತಾ ಕೆಲಸವಿಲ್ಲದೆ ಒದ್ದಾಡುವ ಅಲೆಕ್ಸ್ (ಕೋಮಲ್ ಕುಮಾರ್) ತನ್ನನ್ನು ಶ್ರೀಮಂತ ಆಗುವ ದಾರಿತೋರು ಎಂದು ಗಣೇಶನನ್ನು ಬೇಡಿಕೊಳ್ಳುತ್ತಾನೆ. ಇನ್ನು ಟಿವಿ ವಾಹಿನಿಯಲ್ಲಿ ಕಿಡ್ನಾಪ್ ಪ್ರಕರಣ ಪ್ರಸಾರವಾಗುತ್ತಿದ್ದಂತೆ ಸೇಟು ತನ್ನ ಅಡ್ಡದಲ್ಲಿ ಅಲೆಕ್ಸ್ ಅಪ್ಪ ಬೆಟ್ಟ (ನವೀನ್ ಪಡೀಲ್) ಹಾಗೂ ಜನರನ್ನು ಗುಂಪು ಕಟ್ಟಿಕೊಂಡು ಬೆಟ್ಟಿಂಗ್ ನಡೆಸುತ್ತಾನೆ.
ಇದರ ನಡುವೆ ಅಚಾನಕ್ಕಾಗಿ ಒಬ್ಬ ಅನಾಮಿಕ ವ್ಯಕ್ತಿ ಅಲೆಕ್ಸ್ ನನ್ನ ಕಿಡ್ನಾಪ್ ಮಾಡಿ ಅರಣ್ಯದಲ್ಲಿರುವ ಒಂಟಿ ಮನೆಯಲ್ಲಿ ಕೂಡಿಹಾಕುತ್ತಾನೆ. ಅದೇ ರೀತಿ ಉದ್ಯಮಿ , ರಾಜಕಾರಣಿ ದಯಾನಂದ ರೈ (ಅಚ್ಚುತ್ ಕುಮಾರ್) ಮಗಳು ಐಶ್ವರ್ಯ (ಸೋನಲ್ ಮೊಂತೆರೊ) ಳನ್ನ ಅಪಹರಿಸಿ ಒಂಟಿ ಮನೆಗೆ ಸೇರಿಸುತ್ತಾನೆ. ಇನ್ನು ಅಲೆಕ್ಸ್ ಹಾಗು ಐಶ್ವರ್ಯ ಗೆ ಗೊಂದಲ ನಡುವೆ ವಾದ ವಿವಾದ , ಪ್ರೀತಿ, ಅನುಮಾನ , ಬೆಳೆಯುತ್ತಾ ಹೋಗುತ್ತದೆ. ಅದೇ ರೀತಿ ಕುಟುಂಬಗಳಲ್ಲಿ ಭಯ , ಚರ್ಚೆ ಶುರುವಾಗುತ್ತದೆ. ಇನ್ನು ಕಿಡ್ನಾಪರ್ ಬದುಕಿನಲ್ಲಿ ಒಂದು ಮನ ಸೆಳೆಯುವ ವಿಚಾರ ಅಡಗಿರುತ್ತೆ. ಅದು ಏನು.. ಯಾವ ಕಾರಣಕ್ಕಾಗಿ ಕಿಡ್ನಾಪ್… ಪರಿಹಾರ ಸಿಗುತ್ತಾ.. ಇಲ್ವಾ.. ಎಂಬ ಎಲ್ಲಾ ಪ್ರಶ್ನೆಗೆ ಉತ್ತರ ಕ್ಲೈಮಾಕ್ಸ್ ನಲ್ಲಿ ಸಿಗುತ್ತದೆ.
ಚಿತ್ರದ ಆರಂಭದಿಂದಲೂ ಕೊನೆಯವರೆಗೂ ಕುತೂಹಲದೊಂದಿಗೆ ಅನುಮಾನ ಮೂಡಿಸುತ್ತಾ ಸಾಗುವಂತಹ ಸ್ನೇಹ , ಪ್ರೀತಿ , ಸ್ಥಿತಿಗತಿ , ಅಪ್ಪ ಮಗನ ಬಾಂಧವ್ಯದ ಕಥೆಯನ್ನು ನಿರ್ದೇಶಕ ಅಚ್ಚುಕಟ್ಟಾಗಿ ಹೇಳಲು ಪ್ರಯತ್ನಪಟ್ಟಿದ್ದಾರೆ. ವಿಭಿನ್ನ ಕಥೆ ಅಲ್ಲದಿದ್ದರೂ ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು.
ಆತಂಕ , ಕೋಪ , ಮಾತು, ಹಾಸ್ಯದೊಂದಿಗೆ ಸಾಗುವ ಕಥಾನಕದಲ್ಲಿ ಸಮಯಕ್ಕೆ ತಕ್ಕ ಸಂಭಾಷಣೆ , ಸಂಗೀತ , ಛಾಯಾಗ್ರಹಣ ಕೆಲಸ ಉತ್ತಮವಾಗಿದೆ. ಒಂದು ಕುತೂಹಲ ಮೂಡಿಸುವ ಮನರಂಜನೆಯ ಚಿತ್ರ ನೀಡಿರುವ ನಿರ್ಮಾಪಕ ಅಂಬಟಿ ಮಧುಮೋಹನ್ ಕೃಷ್ಣ ಪೊಲೀಸ್ ಅಧಿಕಾರಿಯ ಪಾತ್ರದ ಮೂಲಕ ಅಪ್ಪ ಮಗನ ಬಾಂಧವ್ಯದ ಸನ್ನಿವೇಶದಲ್ಲಿ ಗಮನ ಸೆಳೆದಿದ್ದಾರೆ.
ಇನ್ನು ಎಂದಿನಂತೆ ನಟ ಕೋಮಲ್ ಕುಮಾರ್ ತಮ್ಮ ಪಾತ್ರವನ್ನು ಸಹಜ ಅಭಿನಯದ ಮೂಲಕ ಮಿಂಚಿದ್ದು , ಹಾಸ್ಯ ಸಂದರ್ಭದ ಸಂಭಾಷಣೆ ಅದ್ಭುತವಾಗಿ ನಿಭಾಯಿಸಿದ್ದಾರೆ. ಇನ್ನು ನಟಿ ಸೋನಾಲ್ ಕೂಡ ಲೀಲಾಜಾಲವಾಗಿ ತಮ್ಮ ಪಾತ್ರವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ. ಇನ್ನು ನಟ ವಿನೋದ್ ಪ್ರಭಾಕರ್ ವಿಶೇಷವಾಗಿ ರಿಷಿ ಎಂಬ ಪ್ರಮುಖ ಪಾತ್ರದ ಮೂಲಕ ಚಿತ್ರದ ಓಟಕ್ಕೆ ತಿರುವನ್ನ ನೀಡಿದ್ದಾರೆ. ಇನ್ನುಳಿದಂತೆ ಅಚ್ಯುತ್ ಕುಮಾರ್ ಅರುಣ ಅರುಣಾ ಬಾಲರಾಜ್ ಸೇರಿದಂತೆ ಚಿತ್ರಕ್ಕೆ ಉತ್ತಮ ಸಾತ್ ನೀಡಿದ್ದು, ಮನೋರಂಜನೇಯ ದೃಷ್ಟಿಯಿಂದ ಒಮ್ಮೆ ಚಿತ್ರ ನೋಡಬಹುದು.
