‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರದ ‘ಹೋಗೋಣ ಬಾರಾ ಮೆಕ್ಸಿಕೋ’ ಲಿರಿಕಲ್ ಸಾಂಗ್ ರಿಲೀಸ್

Spread the love

ಡಾಲಿ ಧನಂಜಯ್ ಅಭಿನಯದ ಬಹುನಿರೀಕ್ಷಿತ ‘ಅಣ್ಣ ಫ್ರಂ ಮೆಕ್ಸಿಕೋ’ ಸಿನಿಮಾ ಇದೇ ಡಿಸೆಂಬರ್ 24ರಂದು ಅದ್ಧೂರಿಯಾಗಿ ತೆರೆಗೆ ಬರಲು ಸಜ್ಜಾಗಿದ್ದು, ಚಿತ್ರತಂಡ ಪ್ರಚಾರದ ಭರಾಟೆಯನ್ನು ಜೋರಾಗಿಸಿದೆ. ಈಗಾಗಲೇ ಈ ಚಿತ್ರದ ಹಾಡುಗಳು ಸಿನಿಪ್ರಿಯರ ಮನಗೆದ್ದು ದೊಡ್ಡ ಮಟ್ಟದಲ್ಲಿ ಹಿಟ್ ಆಗಿವೆ. ವಾಸುಕಿ ವೈಭವ್ ಸಂಗೀತ ಸಂಯೋಜನೆಯಲ್ಲಿ ಈ ಹಿಂದೆ ಬಿಡುಗಡೆಯಾಗಿದ್ದ, ‘ಪುಟ್ಟಮಲ್ಲಿ’ (ಸಾಹಿತ್ಯ: ಚೇತನ್ ಕುಮಾರ್) ಮತ್ತು ‘ಮಾಸಿಗೂ ಅಣ್ಣನೇ ನಿಮ್ ಬಾಸಿಗೂ ಅಣ್ಣನೆ’ (ಸಾಹಿತ್ಯ: ನಾಗಾರ್ಜುನ ಶರ್ಮಾ) ಹಾಡುಗಳು ಕೇಳುಗರ ಫೇವರಿಟ್ ಪಟ್ಟಿಗೆ ಸೇರಿವೆ. ಇದೀಗ ಆ ಸಾಲಿಗೆ ಚಿತ್ರದ ಮೂರನೇ ಹಾಡು ಸೇರ್ಪಡೆಯಾಗಿದ್ದು, ‘ಹೋಗೋಣ ಬಾರಾ ಮೆಕ್ಸಿಕೋ’ ಎಂಬ ಕ್ಯಾಚಿ ಲಿರಿಕಲ್ ವಿಡಿಯೋ ಸಾಂಗ್ ನವೆಂಬರ್ 15ರಂದು ‘ಆನಂದ್ ಆಡಿಯೋ’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ.

ಖ್ಯಾತ ನಿರ್ದೇಶಕ ಹಾಗೂ ಗೀತರಚನೆಕಾರ ಯೋಗರಾಜ್ ಭಟ್ ಅವರ ಲೇಖನಿಯಲ್ಲಿ ಮೂಡಿಬಂದಿರುವ ಈ ಹಾಡು ತನ್ನ ವಿಶಿಷ್ಟ ಪದಬಳಕೆಯಿಂದ ಗಮನ ಸೆಳೆಯುತ್ತಿದೆ. “ಬಾರಾ ಬೇಬಿ ಬಾರಾ ಬೇಬಿ.. ಪ್ಯಾರು ಮಾಡೋಣು.. ತುಟಿಗೆ ತುಟಿ ತಾಕಿಸೋಣು.. ನೌವ್ನ್ ಆಗಿದ್ದು ಆಗೋಗ್ಲಿ.. ಬಾರಾ ಬಾಬು ಬಾರಾ ಬಾಬು ಸೇರಿ ಹಾಡೋಣು.. ಕೊಟಿಗಿ ಕತ್ಲಾಗ ಮೀಟ್ ಆಗೋಣು..” ಎಂಬ ಭಟ್ಟರ ಮಜವಾದ ಸಾಲುಗಳಿಗೆ ವಾಸುಕಿ ವೈಭವ್ ಅಷ್ಟೇ ಲವಲವಿಕೆಯ ಸಂಗೀತ ನೀಡಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಗಾಯಕ ಮಾಳು ನಿಪನಾಳ್ ಅವರ ಜೊತೆಗೆ ಮಾಧುರಿ ಶೇಷಾದ್ರಿ ಮತ್ತು ಅಭಿಷೇಕ್ ನಗರ್ಕರ್ ಈ ಹಾಡಿಗೆ ಧ್ವನಿಯಾಗಿದ್ದು, ಹಾಡಿನ ಎನರ್ಜಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಈ ಹಾಡಿನಲ್ಲಿ ನಾಯಕ ಡಾಲಿ ಧನಂಜಯ್ ಮತ್ತು ನಾಯಕಿ ರೀಷ್ಮಾ ನಾಣಯ್ಯ ಅವರ ಜೋಡಿ ಸಖತ್ ಮೋಡಿ ಮಾಡಿದೆ. ಇಬ್ಬರ ಕೆಮಿಸ್ಟ್ರಿ ಹಾಗೂ ಭರ್ಜರಿ ಡ್ಯಾನ್ಸ್ ಸ್ಟೆಪ್ಸ್ ಅಭಿಮಾನಿಗಳಿಗೆ ಹಬ್ಬದೂಟ ನೀಡುವಂತಿದ್ದು, ಲಿರಿಕಲ್ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ‘ಬಡವ ರಾಸ್ಕಲ್’ ಖ್ಯಾತಿಯ ಶಂಕರ್ ಗುರು ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ಕಮರ್ಷಿಯಲ್ ಅಂಶಗಳ ಜೊತೆಗೆ ಮನರಂಜನೆಯ ಪ್ಯಾಕೇಜ್ ನೀಡಲು ಸಜ್ಜಾಗಿದ್ದಾರೆ.

‘ಅಣ್ಣ ಫ್ರಂ ಮೆಕ್ಸಿಕೋ’ ಚಿತ್ರಕ್ಕೆ ದೊಡ್ಡ ತಾರಾಗಣವೇ ಇದ್ದು, ಡಾಲಿ ಧನಂಜಯ್ ಹಾಗೂ ರೀಷ್ಮಾ ನಾಣಯ್ಯ ಜೊತೆಗೆ ಹಿರಿಯ ನಟಿ ಉಮಾಶ್ರೀ, ರಂಗಾಯಣ ರಘು, ನಾಗಭೂಷಣ, ಸಾಧು ಕೋಕಿಲ, ಪೂರ್ಣಚಂದ್ರ ಮೈಸೂರು, ಹುಲಿ ಕಾರ್ತಿಕ್ ಸೇರಿದಂತೆ ಹಲವು ಪ್ರತಿಭಾವಂತ ಕಲಾವಿದರು ಬಣ್ಣ ಹಚ್ಚಿದ್ದಾರೆ. ನಟ ಲೂಸ್‌ ಮಾದ ಯೋಗಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐರಾ ಫಿಲಂಸ್ ಬ್ಯಾನರ್ ಅಡಿಯಲ್ಲಿ ಚನ್ನರಾಜ್ ಬಿ ಹಟ್ಟಿಹೊಳಿ ಮತ್ತು ಮೃಣಾಲ್ ಹಾಗೂ ರಾಯಲ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸತ್ಯ ರಾಯಲ ಮತ್ತು ಜಾನ್ವಿ ರಾಯಲ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಎ.ಜೆ. ಶೆಟ್ಟಿ ಮತ್ತು ಎಸ್.ಕೆ. ರಾವ್ ಅವರ ಛಾಯಾಗ್ರಹಣ ಚಿತ್ರಕ್ಕಿದ್ದು, ನಿರಂಜನ್‌ ದೇವರಮನೆ ಸಂಕಲನ ಮಾಡಿದ್ದಾರೆ. ಡಿಸೆಂಬರ್ 24ರಂದು ಈ ಸಿನಿಮಾ ಬೆಳ್ಳಿತೆರೆಯ ಮೇಲೆ ಮಿಂಚಲು ಸಿದ್ಧವಾಗಿದೆ.

Visited 1 times, 1 visit(s) today
error: Content is protected !!