ಗುರುನಂದನ್ – ತಪಸ್ವಿನಿ ಪೂಣಚ್ಛ ಅಭಿನಯದ * ‘MR ಜಾಕ್’ ಟ್ರೇಲರ್ ಅನಾವರಣ
ಮಂಡಿಮನೆ ಟಾಕೀಸ್ ಲಾಂಛನದಲ್ಲಿ ನಟ ಗುರುನಂದನ್ ಅವರು ತಮ್ಮ ಸ್ನೇಹಿತರೊಂದಿಗೆ ನಿರ್ಮಿಸಿರುವ, ಸುಮಂತ್ ನಿರ್ದೇಶನದ ‘MR ಜಾಕ್’ ಚಿತ್ರದ ಟ್ರೇಲರ್ ಇತ್ತೀಚೆಗೆ ಬೆಂಗಳೂರಿನ ಓರಾಯನ್ ಮಾಲ್ನ ಲೇಕ್ಸೈಡ್ನಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಅದ್ದೂರಿಯಾಗಿ ಅನಾವರಣಗೊಂಡಿತು.
‘ಫಸ್ಟ್ ರ್ಯಾಂಕ್ ರಾಜು’ ಖ್ಯಾತಿಯ ಗುರುನಂದನ್ ಹಾಗೂ ‘ಪ್ರೇಮದ ಊರಲಿ’ ಚಿತ್ರದ ಮೂಲಕ ಗುರುತಿಸಿಕೊಂಡಿರುವ ನಟಿ ತಪಸ್ವಿನಿ ಪೂಣಚ್ಚ ನಾಯಕ-ನಾಯಕಿಯಾಗಿ ಅಭಿನಯಿಸಿರುವ ಈ ಚಿತ್ರ ಇದೇ ಡಿಸೆಂಬರ್ 4ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.
ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಮಾಜಿ ಸಚಿವರು ಹಾಗೂ ಶಾಸಕರಾದ ಸಿ.ಟಿ. ರವಿ, ಮಲ್ಲೇಶ್ವರಂ ಕ್ಷೇತ್ರದ ಶಾಸಕ ಡಾ. ಅಶ್ವತ್ಥ್ ನಾರಾಯಣ್, ಉದ್ಯಮಿ ಪ್ರಕಾಶ್ ಶೆಟ್ಟಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವೆಂಕಟೇಶ್ ಸೇರಿದಂತೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿಶೇಷವಾಗಿ ‘ಪ್ರೇಮದ ಊರಲಿ’ ಚಿತ್ರತಂಡದ ಸದಸ್ಯರೂ ಸಮಾರಂಭದಲ್ಲಿ ಭಾಗವಹಿಸಿ ‘ಮಿಸ್ಟರ್ ಜಾಕ್’ ಚಿತ್ರತಂಡಕ್ಕೆ ಶುಭ ಹಾರೈಸಿದರು. ಗಣ್ಯರು ಟ್ರೇಲರ್ ಅನಾವರಣಗೊಳಿಸಿ ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಸುಮಂತ್, “ಮಧ್ಯಮ ವರ್ಗದ ಕುಟುಂಬದಿಂದ ಬಂದ ನನಗೆ ಸಿನಿಮಾ ನಿರ್ದೇಶನ ಮಾಡಬೇಕೆಂಬುದು ಬಹುದಿನಗಳ ಆಸೆ. ಆ ಆಸೆ ಈಗ ಈಡೇರಿದೆ. ನನ್ನ ಆಸೆಗೆ ಸಾಥ್ ನೀಡಿದ ಮಂಡಿಮನೆ ಟಾಕೀಸ್ ಹಾಗೂ ಇಡೀ ಚಿತ್ರತಂಡದ ಸಹಕಾರಕ್ಕೆ ನಾನು ಸದಾ ಚಿರಋಣಿ. ಎಲ್ಲರ ಸಹಕಾರ ಮತ್ತು ಪರಿಶ್ರಮದಿಂದ ಉತ್ತಮ ಸದಭಿರುಚಿಯ ಚಿತ್ರವೊಂದನ್ನು ರೂಪಿಸಲು ಸಾಧ್ಯವಾಗಿದೆ. ನಮ್ಮ ಚಿತ್ರ ಡಿಸೆಂಬರ್ 4ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕನ್ನಡ ಪ್ರೇಕ್ಷಕರು ನಮ್ಮ ಚಿತ್ರವನ್ನು ಪ್ರೀತಿಯಿಂದ ಸ್ವೀಕರಿಸಿ, ಪ್ರೋತ್ಸಾಹಿಸಬೇಕೆಂದು ಕೋರುತ್ತೇನೆ” ಎಂದರು.
ಚಿತ್ರದ ನಿರ್ಮಾಪಕ ಹಾಗೂ ನಾಯಕ ನಟ ಗುರುನಂದನ್ ಮಾತನಾಡಿ, “ಇಂದು ನಮ್ಮ ಚಿತ್ರಕ್ಕೆ ಶುಭ ಹಾರೈಸಲು ಆಗಮಿಸಿರುವ ಗಣ್ಯರಿಗೆ, ‘ಪ್ರೇಮದ ಊರಲಿ’ ಚಿತ್ರತಂಡದ ಆತ್ಮೀಯ ಸದಸ್ಯರಿಗೆ ಹಾಗೂ ಇಲ್ಲಿ ನೆರೆದಿರುವ ಸಾವಿರಾರು ಕನ್ನಡದ ಮನಸ್ಸುಗಳಿಗೆ ಹೃದಯಪೂರ್ವಕ ಧನ್ಯವಾದಗಳು. ಮಂಡಿಮನೆ ಟಾಕೀಸ್ ಮೂಲಕ ನನ್ನ ಸ್ನೇಹಿತರು ಸಹನಿರ್ಮಾಪಕರಾಗಿ ಕೈಜೋಡಿಸಿದ್ದಾರೆ. ನಮ್ಮ ಸ್ನೇಹಿತರ ಸಹನಿರ್ಮಾಣದಲ್ಲಿ, ವಿಶೇಷ ತಂತ್ರಜ್ಞರು ಹಾಗೂ ಕಲಾವಿದರ ಸಹಕಾರದೊಂದಿಗೆ ಉತ್ತಮ ಸದಭಿರುಚಿಯ ಕೌಟುಂಬಿಕ ಚಿತ್ರವನ್ನು ನಿರ್ಮಿಸಿದ್ದೇವೆ. ಕುಟುಂಬ ಸಮೇತ ಕುಳಿತು ನೋಡಬಹುದಾದ ಮನರಂಜನಾತ್ಮಕ ಚಿತ್ರವಿದು. ಇಂದು ಟ್ರೇಲರ್ ಬಿಡುಗಡೆಯಾಗಿದ್ದು, ಡಿಸೆಂಬರ್ 4ರಂದು ಚಿತ್ರ ನಿಮ್ಮ ಮುಂದೆ ಬರಲಿದೆ. ಎಲ್ಲರೂ ಚಿತ್ರಮಂದಿರಗಳಿಗೆ ಬಂದು ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಬೇಕು” ಎಂದರು.
ನಾಯಕಿ ತಪಸ್ವಿನಿ ಪೂಣಚ್ಚ ಮಾತನಾಡಿ, “‘ಪ್ರೇಮದ ಊರಲಿ’ ಚಿತ್ರದ ಮೂಲಕ ನಾನು ಎಲ್ಲರಿಗೂ ಪರಿಚಿತಳಾಗಿದ್ದೇನೆ. ಆ ಚಿತ್ರದ ಆತ್ಮೀಯ ಚಿತ್ರತಂಡದ ಸದಸ್ಯರು ಇಂದು ನಮ್ಮ ‘ಮಿಸ್ಟರ್ ಜಾಕ್’ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಬೆಂಬಲ ನೀಡಿರುವುದು ತುಂಬಾ ಸಂತೋಷ ತಂದಿದೆ. ಅವರ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಆಭಾರಿ. ನಮ್ಮ ಚಿತ್ರ ಡಿಸೆಂಬರ್ 4ರಂದು ಬಿಡುಗಡೆಯಾಗುತ್ತಿದ್ದು, ನಿಮ್ಮೆಲ್ಲರ ಸಹಕಾರ ಇರಲಿ” ಎಂದು ಹೇಳಿದರು. ಹಿರಿಯ ನಟ ರಂಗಾಯಣ ರಘು ಸೇರಿದಂತೆ ಹಲವು ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಶುಭ ಹಾರೈಸಿದರು.
‘MR ಜಾಕ್’ ಚಿತ್ರದಲ್ಲಿ ಅಭಿನಯಿಸಿರುವ ಧರ್ಮಣ್ಣ, ಸುಷ್ಮಿತಾ ಸೇರಿದಂತೆ ಹಲವು ಕಲಾವಿದರು, ಸಹನಿರ್ಮಾಪಕರು, ಸಂಗೀತ ನಿರ್ದೇಶಕ ಕಿರಣ್ ರವೀಂದ್ರನಾಥ್, ಛಾಯಾಗ್ರಾಹಕ ಶಿವಸೇನ, ಸಂಕಲನಕಾರ ವಿಜಯ್ ರಾಜ್, ನೃತ್ಯ ನಿರ್ದೇಶಕ ಅಭಿಷೇಕ್ ಮಠದ್ ಸೇರಿದಂತೆ ಹಲವು ತಂತ್ರಜ್ಞರು ಹಾಗೂ ಚಿತ್ರತಂಡದ ಅನೇಕ ಸದಸ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಾವಿರಾರು ಪ್ರೇಕ್ಷಕರ ಉತ್ಸಾಹ, ಗಣ್ಯರ ಶುಭಹಾರೈಕೆ ಹಾಗೂ ‘ಪ್ರೇಮದ ಊರಲಿ’ ಚಿತ್ರತಂಡದ ಆತ್ಮೀಯ ಉಪಸ್ಥಿತಿಯೊಂದಿಗೆ ನಡೆದ ಈ ಅದ್ಧೂರಿ ಟ್ರೇಲರ್ ಅನಾವರಣ ಸಮಾರಂಭ ‘ MR ಜಾಕ್’ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಡಿಸೆಂಬರ್ 4ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರನ್ನು ರಂಜಿಸಲು ‘MR ಜಾಕ್’ ಸಜ್ಜಾಗಿದ್ದಾನೆ.
