ಅಂಕಿತಾ ಅಮರ್ ಅಭಿನಯದ ‘ಗೆಜ್ಜೆ’ ಅಲ್ಬಮ್ ಸಾಂಗ್ ಅನಾವರಣ

Spread the love

ಕೊಲ್ಲೂರು ಶ್ರೀಮೂಕಾಂಬಿಕಾ ದೇವಿ ಶಂಕರಾಚಾರ್ಯರ ಹಿಂದೆ ಬಂದು ಕೊಲ್ಲೂರಿನಲ್ಲಿ ನೆಲಿಸಿದ್ದಾಳೆ ಎಂಬ ಇತಿಹಾಸವಿದೆ. ಈ ವಿಷವನ್ನಿಟ್ಟುಕೊಂಡು ಮೂಡಿ ಬಂದಿರುವ ಅಲ್ಬಮ್ ಸಾಂಗ್ ‘ಗೆಜ್ಜೆ’. ಈ ಭಕ್ತಿಪ್ರಧಾನ ಗೀತೆ ನವರಾತ್ರಿಯ ಮೊದಲ ದಿನ ಹೊಂಬಾಳೆ ಮ್ಯೂಸಿಕ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡು ಬಿಡುಗಡೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು. ನಟಿ ಸುಧಾರಾಣಿ ಈ ಹಾಡನ್ನು ಅನಾವರಣ ಮಾಡಿದರು.

ಹಾಡು ಬಿಡುಗಡೆ ಮಾಡಿ ಮಾತನಾಡಿದ ನಟಿ ಸುಧಾರಾಣಿ, ಹಾಡು ತುಂಬಾ ಚೆನ್ನಾಗಿ ಬಂದಿದೆ. ಹಾಡನ್ನು ನೋಡುವಾಗ ಮೈ ರೋಮಾಂಚನ ಆಯ್ತು. ಕ್ವಾಲಿಟಿ ಕೂಡ ತುಂಬಾ ಚೆನ್ನಾಗಿದೆ. ಮುಂದೆಯೂ ನಿರ್ದೇಶಕ ಮಯೂರ ರಾಘವೇಂದ್ರ ಇನ್ನಷ್ಟು ಒಳ್ಳೆಯ ಸಿನಿಮಾ ಮಾಡಲಿ’ ಎಂದು ಹಾರೈಸಿದರು. ಮತ್ತೋರ್ವ ಅತಿಥಿ ಸಿಹಿಕಹಿ ಚಂದ್ರು ಕೂಡ ಹಾಡನ್ನು ಹಾಗೂ ತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.

“ಗೆಜ್ಜೆ” ಹಾಡನ್ನು ನಿರ್ದೇಶಕ ಮಯೂರ ರಾಘವೇಂದ್ರ ನಿರ್ದೇಶಿಸಿದ್ದಾರೆ. ಇದಕ್ಕಾಗಿ ಹತ್ತು ತಿಂಗಳ ಶ್ರಮ ಹಾಕಿದ್ದಾರೆ‌. ಈ ಭಕ್ತಿಪ್ರಧಾನ ಹಾಡು ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಮೂಡಿ ಆಗಿದೆ.

ಈ ಬಗ್ಗೆ ಮಾಹಿತಿ ನೀಡುವ ಮಯೂರ ರಾಘವೇಂದ್ರ, ’25 ವರ್ಷದಿಂದ ನಾನು ಕೊಲ್ಲೂರು ಮೂಕಾಂಬಿಕಾ ದೇವಿ ಭಕ್ತ. ಪ್ರತಿವರ್ಷ 3-4 ಬಾರಿ ಮೂಕಾಂಬಿಕಾ ದೇವಾಲಯಕ್ಕೆ ಹೋಗುತ್ತೇನೆ. ಅಲ್ಲಿಗೆ ಹೋದಾಗೆಲ್ಲ ಶಂಕರಾಚಾರ್ಯ ಹಾಗೂ ತಾಯಿ ಮೂಕಾಂಬಿಕೆಯ ಬಗ್ಗೆ ಏನಾದರೂ ಮಾಡಬೇಕು ಅನಿಸುತ್ತಿತ್ತು. ಹತ್ತು ತಿಂಗಳ ಹಿಂದೆ ದೇವಿ ದರ್ಶನಕ್ಕೆ ಹೋದಾಗ ಈ ಗೀತೆ ಮಾಡಬೇಕೆಂದು ಗುರುಗಳ ಹಾಗೂ ದೇವಿಯ ಪ್ರೇರಣೆಯಾಯಿತು.

ದೇವರ ದರ್ಶನ ಮುಗಿಸಿಕೊಂಡು ಆಚೆ ಬಂದಾಗ ಸುನೀಲ್ ಕುಮಾರ್ ರಾಮಚಂದ್ರ ಅವರಿಗೆ ಈ ಕುರಿತು ಹೇಳಿದೆ. ಆಗ ಅವರು ನಾನೇ ಇದನ್ನು ನಿರ್ಮಾಣ ಮಾಡುತ್ತೇನೆ ಎಂದರು. ಇನ್ನು, ಮ್ಯೂಸಿಕ್ ವಿಷಯಕ್ಕೆ ಬಂದಾಗ ‘ಶಾಕಾಹಾರಿ’ ನನಗೆ ಇಷ್ಟವಾದ ಚಿತ್ರ. ಹಾಗಾಗಿ ಮಯೂರ ಅವರ ಕಡೆ ಹೋದೆ. ಅವರು ಸಾಥ್ ನೀಡಿದರು. ಮತ್ತೋರ್ವ ಮಯೂರ ಇದಕ್ಕೆ ಸಾಹಿತ್ಯ ಬರೆದು ಕೊಟ್ಟರು. ‘ಕರಾವಳಿ’ ಸಿನಿಮಾ ಛಾಯಾಗ್ರಹಕ ಅಭಿಮನ್ಯು ಸದಾನಂದನ್ ಛಾಯಾಗ್ರಹಣ ಮಾಡಲು ತಂಡ ಸೇರಿದರು.

ಅದ್ಭುತವಾದ ವಸ್ತ್ರಾಲಂಕಾರವನ್ನು ಅರ್ಚನಾ ಮಾಡಿದ್ದಾರೆ. ಈ ಹಾಡು ಆಗಲು ಶ್ರೇಯಸ್ ವಸಿಷ್ಠ, ಸಮೀರ ಸಿಂಹ ಹಾಗೂ ಶೋಭನ್ ಅವರ ಸಹಕಾರ ತುಂಬಾ ಇದೆ. ಇದೆಲ್ಲಾ ಆದಮೇಲೆ ಅಂಕಿತ ಅವರು ದೇವಿ ಪಾತ್ರ ಮಾಡಿದರೆ ಹೇಗೆ? ಎಂದು ಅಂದುಕೊಂಡೆವು. ಅವರನ್ನು ಸಂಪರ್ಕಿಸಿದೆವು. ಅವರು ಕೂಡ ಒಪ್ಪಿದರು. ನಾವು ಶಂಕರಾಚಾರ್ಯರ ಪಾತ್ರಕ್ಕಾಗಿ ತುಂಬಾ ಹುಡುಕಾಟ ಮಾಡಿದ್ದೆವು. ಕೊನೆಗೆ ಚಂದಿಗಡದ ಭರತ್ ಗುಪ್ತ ಆಯ್ಕೆಯಾದರು’. ಈ ಹಾಡು ನವರಾತ್ರಿಯ ಮೊದಲ ದಿನವೇ ಹೊಂಬಾಳೆ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿರುವುದು ಬಹಳ ಸಂತೋಷವಾಗಿದೆ ಎಂದರು.

ನಂತರ ಮೂಕಾಂಬಿಕಾ ದೇವಿ ಪಾತ್ರ ಮಾಡಿರುವ ಅಂಕಿತಾ ಅಮರ್ ಮಾತನಾಡಿ, ‘ನಾನು ತಾಯಿ ಕೃಪೆಯಿಂದ ಇದನ್ನು ಮಾಡಲು ಸಾಧ್ಯವಾಯಿತು. ನನಗೆ ತಾಯಿ ಶಾರದಾಂಬೆ ಎಂದರೆ ತುಂಬಾ ಇಷ್ಟ. ಪಾತ್ರ ಮಾಡುವಾಗ ತಾಯಿ ಶಾರದಾಂಬೆ ನೆನೆದು ಅಭಿನಯ ಮಾಡಿದೆ. ವಿಡಿಯೋ ನೋಡಿ ತುಂಬಾ ಖುಷಿ ಆಯ್ತು. ಸಾಹಿತ್ಯ, ಸಂಗೀತ ಎಲ್ಲವೂ ಚನ್ನಾಗಿದೆ. ಪ್ರತಿ ಪೂಜೆಯಲ್ಲಿ ಜನ ಈ ತಾಯಿಯ ಗೀತೆ ಕೇಳುವಂತೆ ಆಗಲಿ. ಇನ್ನೂ, ನವರಾತ್ರಿಯ ಹತ್ತು ದಿನ ನಿಮ್ಮ ಮನೆಯಲ್ಲಿ ಈ ಹಾಡು ಮೊಳಗುತ್ತಿರಲಿ ಎಂದರು.
‘ಗೆಜ್ಜೆ’ ಗೀತೆಗೆ ಸಂಗೀತ ಸಂಯೋಜನೆ ಮಾಡಿರುವ ಮಯೂರ ಅಂಬೆಕಲ್ಲು, ‘ಈ ಪ್ರಾಜೆಕ್ಟ್ ನಾವು ಮಾಡಿಲ್ಲ, ಆ ತಾಯಿಯೇ ಮಾಡಿಸಿಕೊಂಡಿದ್ದಾಳೆ. ಇದಕ್ಕೆ ನಾವು ಲೈವ್ ಆಗಿ ರೆಕಾರ್ಡ್ ಮಾಡಿದ್ದೇವೆ’ ಎಂದು ಹೇಳಿದರು. ವೇದಿಕೆಯಲ್ಲಿ ಸಂಕಲನಕಾರ ರಾಹುಲ್ ವಶಿಷ್ಟ, ಛಾಯಾಗ್ರಾಹಕ ಅಭಿಮನ್ಯ ಸದಾನಂದನ್ ಹಾಜರಿದ್ದರು.

Visited 1 times, 1 visit(s) today
error: Content is protected !!